7

‘ವಿಶ್ವ ಯುವ ಸಮ್ಮೇಳನ’ಕ್ಕೆ ಅದ್ಧೂರಿ ಚಾಲನೆ

Published:
Updated:

ಚಿಕ್ಕಬಳ್ಳಾಪುರ: ‘ಭಗವಾನ್ ಸತ್ಯ ಸಾಯಿಬಾಬಾ ಅವರ 92ನೇ ಜನ್ಮದಿನದ ಅಂಗವಾಗಿ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ 5 ದಿನ ನಡೆಯಲಿರುವ ‘ವಿಶ್ವಯುವ ಸಮ್ಮೇಳನ’ ಮತ್ತು ‘ಜಾಗತಿಕ ಸಂಗೀತೋತ್ಸವ’ ಕಾರ್ಯಕ್ರಮಕ್ಕೆ ಭಾನು

ವಾರ ಚಾಲನೆ ದೊರೆಯಿತು.

ಭಾರತ, ಲಂಡನ್. ಚೀನಾ,ಇಟಲಿ, ಗ್ರೀಕ್ ಆಸ್ಟ್ರೆಲೀಯಾ, ಜರ್ಮನಿ, ಜಪಾನ್ ಸೇರಿದಂತೆ ಒಟ್ಟು 35 ರಾಷ್ಟ್ರಗಳ ಪ್ರತಿನಿಧಿಗಳು ತಮ್ಮ ದೇಶದ ರಾಷ್ಟ್ರಧ್ವಜದೊಂದಿಗೆ ವೇದಿಕೆಯ ಮುಂಭಾಗಕ್ಕೆ ಬರುವ ಮೂಲಕ ಇಡೀ ವಿಶ್ವವೇ ಒಂದು ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದರು. ಜತೆಗೆ ಕಾರ್ಯಕ್ರಮದ ಉದ್ಘಾಟನೆ ವೇಳೆ ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನರು, ಬೌದ್ಧ‌ ಸೇರಿದಂತೆ ಒಟ್ಟು 9 ಧರ್ಮಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಸಮ್ಮೇಳನಕ್ಕೆ ಚಾಲನೆ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ‘ಆರ್ಯರು, ಮೊಘಲರು ಸೇರಿದಂತೆ ಅನೇಕ ರಾಜಮನೆತನದವರ ಸಂಸ್ಕೃತಿಯನ್ನು ದೇಶ ಒಡಲಿನಲ್ಲಿ ಇಟ್ಟುಕೊಂಡಿದೆ. ಇಂತಹ ಸಾಂಸ್ಕೃತಿಕ ಶ್ರೀಮಂತ ರಾಷ್ಟ್ರ ಇಂದು ಆತಂಕ ಎದುರಿಸುತ್ತಿದೆ’ ಎಂದರು.

‘ಪ್ರಪಂಚಕ್ಕೆ ನಾಗರಿಕತೆಯ ಕಲ್ಪನೆ ನೀಡಿದವರು ಭಾರತೀಯರು. ಆದರೇ ಅದನ್ನು ಯುವಕರು ಮರೆಯುತ್ತಿದ್ದಾರೆ’ ಎಂದು ವಿಷಾದಿಸಿದರು. ‘ಬಾಬಾ ಅವರು ತಮ್ಮ ಜೀವಿತದ ಅವಧಿಯಲ್ಲಿ ಅನೇಕ ಯುವಕರನ್ನು ಸನ್ಮಾರ್ಗಕ್ಕೆ ತಂದಿದ್ದಾರೆ. ಇಡೀ ವಿಶ್ವವೇ ಒಂದು ಹಳ್ಳಿ ಎಂಬ ಭಾವನೆ  ಬರಬೇಕು. ದೇಶದ ಸಂಸ್ಕೃತಿಯನ್ನು ವಿಶ್ವದಲ್ಲಿ ಸ್ಥಾಪನೆ ಮಾಡಲು ಯುವಕರು ಪಣ ತೊಡಬೇಕು. ಸಂಸ್ಕಾರದಿಂದ ಇಡೀ ಜಗತ್ತನ್ನು ಗೆಲ್ಲಬೇಕು’ ಎಂದು ತಿಳಿಸಿದರು.

ಸಂಸದ ಕೆ.ಎಚ್ ಮುನಿಯಪ್ಪ ಮಾತನಾಡಿ, ‘ಎಲ್ಲ ಧರ್ಮಗಳ ಬಗ್ಗೆ ಪ್ರೀತಿ, ವಾತ್ಸಲ್ಯ ತೋರಬೇಕು. ಜಗತ್ತು ಒಂದೇ ಎಂಬ ಪರಿಕಲ್ಪನೆ ಮೂಡಿಸಿಕೊಳ್ಳಬೇಕು. ಮಕ್ಕಳಲ್ಲಿ ಸಂಸ್ಕಾರಯುತ ಬೆಳವಣಿಗೆಯಾದರೆ ದೇಶ ಅಭಿವೃದ್ಧಿಯಾಗುತ್ತದೆ’ ಎಂದು ತಿಳಿಸಿದರು.

‘ಇಂದಿನ ಯುವಕರು ನಾಳಿನ ಭವಿಷ್ಯದ ನೇತಾರರು. ಇದಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಆಯೋಜಿಸಿರುವ ವಿಶ್ವಯುವ ಸಮ್ಮೇಳನದ ಅರಿವು ಎಲ್ಲ ಕಡೆ ಪಸರಿಸಬೇಕು’ ಎಂದರು.

ಲೋಕ ಶಿಕ್ಷಣ ಸೇವಾ ಸಂಸ್ಥೆ ಮುಖ್ಯಸ್ಥ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ‘ಜಾತಿ, ಮತ, ಪಂಥಗಳ ಹೆಸರಿನಲ್ಲಿ ದೇಶ ವಿಭಜನೆಗೊಳ್ಳುತ್ತಿದೆ. ಪ್ರಪಂಚವೇ ನಾಶಕ್ಕೆ ತುತ್ತಾಗುವ ಭೀತಿ ಎದುರಾಗಿದೆ. ಸುಖ, ಶಾಂತಿ, ನೆಮ್ಮದಿಯ ಜಗತ್ತು ನೆಲೆಸಲು ಯುವಕರು  ಸಂಘಟನೆಗೊಳ್ಳಬೇಕು’ ಎಂದು ತಿಳಿಸಿದರು.

ಸತ್ಯ ಸಾಯಿಬಾಬಾ ಅವರ ಸಂದೇಶ ವಾಹಕ ಮಧುಸೂದನ ನಾಯ್ಡು ಅವರು, ‘ಮನುಷ್ಯ ಜೀವನವನ್ನು ಸಂತೋಷದಿಂದ ಕಳೆಯಬೇಕಾದರೆ ಪಂಚೇಂದ್ರಿಯಗಳನ್ನು ನಿಗ್ರಹಿಸುವುದು ಅಗತ್ಯ. ಸಂಕುಚಿತ ಭಾವನೆಗಳನ್ನು ಬಿಟ್ಟು, ನಿಸ್ವಾರ್ಥ ಜೀವನ ನಡೆಸಿದಾಗ ಆತ್ಮಸಂತೋಷ ದೊರೆಯುತ್ತದೆ’ ಎಂದರು. ಸತ್ಯಸಾಯಿ ಲೋಕಶಿಕ್ಷಣ ಸಂಸ್ಥೆ ಪದಾಧಿಕಾರಿ ನಾರಾಯಣ ರಾವ್, ಸಂಜೀವ್‌ ಶೆಟ್ಟಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry