7

ಜನಮನ ಸೆಳೆದ ಸ್ಥಬ್ದಚಿತ್ರಗಳ ಮೆರವಣಿಗೆ

Published:
Updated:
ಜನಮನ ಸೆಳೆದ ಸ್ಥಬ್ದಚಿತ್ರಗಳ ಮೆರವಣಿಗೆ

ಚಿಂತಾಮಣಿ: ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಭಾನುವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ನಾಯಕ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಸ್ಥಬ್ದಚಿತ್ರಗಳ ಮೆರವಣಿಗೆ ಜಾನಪದ ಲೋಕದ ಕಲರವ ಮೂಡಿಸಿತ್ತು. ಮೆರವಣಿಗೆಗೆ ಶಾಸಕ ಎಂ.ಕೃಷ್ಣಾರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ಶ್ರೀನಿವಾಸ್‌ ಚಾಲನೆ ನೀಡಿದರು.

ಮಂಗಳವಾದ್ಯಗಳು, ಕಳಸಹೊತ್ತ ಮಹಿಳೆಯರು, ಕೋಲು ಕುಣಿತ, ವೀರಗಾಸೆ ಕುಣಿತ, ಗಾರಡಿ ಬೊಂಬೆಗಳು, ಅಲಂಕೃತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌, ತಮಟೆ ವಾದ್ಯಗಳು, ವಾಲ್ಮೀಕಿ ಭಾವಚಿತ್ರಗಳನ್ನು ಹೊತ್ತ ಬೆಳ್ಳಿ ಕುದುರೆ ಸಾರೋಟುಗಳು ಮೆರವಣಿಗೆಗೆ ಸಾಥ್‌ ನೀಡಿದ್ದವು. ನೂರಾರು ಜನ ಯುವಕರು ಕುಣಿದು ಕುಪ್ಪಳಿಸುತ್ತಿದ್ದರು. ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ವಾಲ್ಮೀಕಿ ಪಲ್ಲಕ್ಕಿಗಳು ಸಾಲು ಸಾಲಾಗಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.

ಮಹರ್ಷಿ ವಾಲ್ಮೀಕಿ ವೇಷ ಧರಿಸಿದ್ದ ವ್ಯಕ್ತಿಗಳು ಹಾಗೂ ವಾಲ್ಮೀಕಿ ಭಾವಚಿತ್ರಗಳು ರಥಗಳಲ್ಲಿ ರಾರಾಜಿಸುತ್ತಿದ್ದವು. ಸಾವಿರಾರು ಜನ ಸಾರ್ವಜನಿಕರು, ವಿದ್ಯಾರ್ಥಿಗಳು, ವಿವಿಧ ತಂಡಗದ ಮೆರವಣಿಗೆ ಪ್ರವಾಸಿ ಮಂದಿರದಿಂದ ಬೆಂಗಳೂರು ವೃತ್ತ, ಕೆನರಾಬ್ಯಾಂಕ್‌ ರಸ್ತೆ, ಗಜಾನನ ವೃತ್ತ, ಎಂ.ಜಿ.ರಸ್ತೆ, ಚೇಳೂರು ವೃತ್ತ, ಸರ್ಕಾರಿ ಬಸ್‌ನಿಲ್ದಾಣದ ಮೂಲಕ ಕಾರ್ಯಕ್ರಮದ ಸ್ಥಳವಾದ ಗುರುಭವನಕ್ಕೆ ತಲುಪಿತು.

ನಗರದ ಪ್ರಮಖ ವೃತ್ತಗಳಲ್ಲಿ ತಮಟೆ ವಾದ್ಯಗಳ ತಂಡ, ಗಾರುಡಿ ಗೊಂಬೆಗಳ ತಂಡಗಳು ತಮ್ಮ ಕಲಾಪ್ರದರ್ಶನವನ್ನು ಮೆರೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry