ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರವಾಗುವುದೇ ದುರ್ನಾತದ ‘ಕಂಪು’

Last Updated 20 ನವೆಂಬರ್ 2017, 9:03 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಒಟ್ಟು 9 ನಗರ ಹಾಗೂ ಪಟ್ಟಣ ಪ್ರದೇಶಗಳನ್ನು 2018ರ ಮಾರ್ಚ್‌ 31ರೊಳಗಾಗಿ ‘ಬಯಲು ಬಹಿರ್ದೆಸೆ ಮುಕ್ತ ಪ್ರದೇಶ’ಗಳಾಗಿ ರೂಪಿಸಲು ಹೆಜ್ಜೆ ಇಟ್ಟಿರುವ ಜಿಲ್ಲಾಡಳಿತವು, ಈಗಾಗಲೇ ವಿಭಿನ್ನ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತೊಡಗಿದೆ.

ಹೀಗಿದೆ ಚಿತ್ರಣ: ‘ಯಾಲಕ್ಕಿ ಕಂಪಿನ ನಗರಕ್ಕೆ ಸ್ವಾಗತ’ ಎಂಬ ಹೆಮ್ಮೆಯ ಕಮಾನಿನ ಮೂಲಕ ನಗರ ಪ್ರವೇಶಿಸಿದವರು, ಇಲ್ಲಿನ ವಾರ್ಡ್‌ಗಳಲ್ಲಿ ಸಂಚರಿಸಿದಾಗ ಮೂಗಿಗೆ ಹೊಡೆಯುವ ‘ಕಂಪು’ ಬೇರೆಯೇ!

ಎಲ್ಲೆಡೆ ಹಂದಿ, ಬೀದಿ ನಾಯಿ, ಸೊಳ್ಳೆಗಳ ಕಾಟ. ಮುಂಜಾನೆ ಹಾಗೂ ಮುಸ್ಸಂಜೆಗಳಲ್ಲಿ ರಸ್ತೆಯ ಇಕ್ಕೆಲೆಗಳು ಹಾಗೂ ಬಯಲಿನಲ್ಲಿ ಸಾಲು ಸಾಲು ಪ್ಲಾಸ್ಟಿಕ್ ಚೆಂಬು. ಪಕ್ಕದಲ್ಲೇ ಶೌಚಕ್ಕೆ ಕುಳಿತ ಮಂದಿ. ಅಲ್ಲಿ ಬಿಟ್ಟು ಹೋದ ಕುರುಹುಗಳು. ಅವುಗಳು ಒಣಗಿ ಬೀರುವ ದುರ್ನಾತದ ‘ಕಂಪು’!

ಬಹುತೇಕರಲ್ಲಿ ಒಂದೊಂದು ಸ್ಮಾರ್ಟ್‌ ಫೋನ್‌. ಅವರೆಲ್ಲ ದಿನ ಪೂರ್ತಿ ಆನ್‌ಲೈನ್. ಆದರೆ, ಮುಸ್ಸಂಜೆ ಮತ್ತು ಮುಂಜಾನೆಯಲ್ಲಿ ಮಾತ್ರ ಚೆಂಬು ಹಿಡಿದು ನಿಲ್ಲುವರು ಲೈನ್. ಇಲ್ಲವೇ, ಬಿಸ್ಲೇರಿ ಬಾಟಲಿ ಹಿಡಿದು ಗಿಡಗಂಟಿಗಳೆಡೆಗೆ ಪಯಣ. ಇದು ಪ್ರತಿನಿತ್ಯ ಕಂಡು ಬರುವ ಚಿತ್ರಣ.

ಮನವಿ: ಹೀಗಾಗಿ, ಜಿಲ್ಲೆಯ ನಗರ ಕೇಂದ್ರಗಳಲ್ಲಿ ಶೌಚಾಲಯ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಅವರ ಬಳಗವು ಆಂದೋಲನ ನಡೆಸುತ್ತಿದೆ. ಇದನ್ನು ನಗರಾಭಿವೃದ್ಧಿ ಕೋಶದ ಮೂಲಕ 2 ನಗರಸಭೆ, 5 ಪುರಸಭೆಗಳು ಹಾಗೂ 2 ಪಟ್ಟಣ ಪಂಚಾಯ್ತಿಗಳು ಜಾರಿಗೊಳಿಸುತ್ತಿವೆ.

‘ಕೈಯಲ್ಲಿ ಸ್ಮಾರ್ಟ್‌ ಫೋನ್, ಶೌಚ ಮಾತ್ರ ಹಳಿಯ ಮೇಲೆ! ಕೊರಳಲ್ಲಿ ಟೈ, ಕಾಲಲ್ಲಿ ಬೂಟು, ಶೌಚ ಮಾತ್ರ ತೆರೆದ ಜಾಗದಲ್ಲಿ! ಇಂದೆಂತಹ ಪ್ರಗತಿ?’ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಕೈ ಮುಗಿದು ನಿವೇದಿಸುವ ಫ್ಲೆಕ್ಸ್‌ಗಳನ್ನು ನಗರ ಕೇಂದ್ರದಲ್ಲಿ ಕಾಣಬಹುದು.

‘ಊರಿಗೆ ಹತ್ತಾರು ದೇವಾಲಯ, ಮನೆಗೊಂದು ಶೌಚಾಲಯ, ಚಿನ್ನಕ್ಕಿಂತ ಅನ್ನ ಲೇಸು, ಅನ್ನಕ್ಕಿಂತ ಶೌಚಾಲಯ ಲೇಸು’ ಎಂಬ ಮುಜರಾಯಿ ಸಚಿವರ ಘೋಷಣೆಯ ಭಿತ್ತಿಚಿತ್ರಗಳೂ ಗಮನ ಸೆಳೆಯುತ್ತವೆ.

ಈ ನಿಟ್ಟಿನಲ್ಲಿ ಹಾವೇರಿ ನಗರಸಭೆಯೂ ಮಿಷನ್ 100 ಗಂಟೆ, ಮನೆ ಮನೆ ಭೇಟಿ ಮತ್ತಿತರ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಡಿ.ಸಿ , ಸಚಿವರು, ಹೊಸಮಠ, ಬಣ್ಣದಮಠಗಳ ಶ್ರೀಗಳು ಸೇರಿದಂತೆ ಹಲವು ಗಣ್ಯರು ಈಗಾಗಲೇ ಬೀದಿಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಅಧಿಕಾರಿ–ಸಿಬ್ಬಂದಿಯೂ ಈಗ ಮನೆ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

‘ಶೌಚಾಲಯ ಕುರಿತು ಜಾಗೃತಿ ಮೂಡಿಸಲು ಹಾವೇರಿ ನಗರದ ಆಯ್ದ ಸ್ಥಳಗಳಲ್ಲಿ ಸುಮಾರು 3 ಸಾವಿರ ಚದರ ಅಡಿ ಗೋಡೆ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆರು ತಂಡಗಳಲ್ಲಿ ಕಲಾವಿದರು ಸ್ಥಳೀಯಾಡಳಿತ ಸಂಸ್ಥೆಗಳ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ’ ಎಂದು ಕಲಾವಿದ ರಾಜೂ ಕಾಟೇನಹಳ್ಳಿ ಹಾಗೂ ಬ್ರಹ್ಮಾನಂದ ತಿಳಿಸಿದರು.

‘ಜಾಗೃತಿ ಮತ್ತಿತರ ಕಾರ್ಯಕ್ರಮಗಳು ಪ್ರತಿನಿತ್ಯ ಜಾರಿಯಲ್ಲಿವೆ’ ಎಂದು ನಗರಾಭಿವೃದ್ಧಿ ಕೋಶದ ಅಧಿಕಾರಿ ವಾಸಣ್ಣ ತಿಳಿಸಿದರು. ‘ಸ್ವಚ್ಛತೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದೇವೆ’ ಎಂದು ಪೌರಾಯುಕ್ತ ಶಿವಕುಮಾರಯ್ಯ ಹಾಗೂ ಪರಿಸರ ಎಂಜಿನಿಯರ್ ಚಂದ್ರಕಾಂತ ಗುಡ್ನೆವರ್ ತಿಳಿಸಿದರು.

ಆಡಳಿತದ ಪ್ರಯತ್ನಕ್ಕೆ ಸಾರ್ವಜನಿಕರ ಸ್ಪಂದನೆ ಮುಖ್ಯ. ಈ ನಿಟ್ಟಿನಲ್ಲಿ ಸಂಘ–ಸಂಸ್ಥೆಗಳು, ವಿದ್ಯಾರ್ಥಿಗಳು, ಯುವಜನತೆ, ರಾಜಕೀಯ ಮುಖಂಡರು ಸೇರಿದಂತೆ ಎಲ್ಲರೂ ಕೈ ಜೋಡಿಸಬೇಕು. ಆಗ ‘ಯಾಲಕ್ಕಿ ಕಂಪು’ ಹೆಮ್ಮೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂಬುದು ಅಧಿಕಾರಿಗಳ ಮನವಿ.

ತ್ವರಿತ ಪ್ರಯತ್ನ
ಜಿಲ್ಲೆಯ ನಗರ, ಪಟ್ಟಣಗಳಲ್ಲಿ ಇನ್ನೂ 6 ಸಾವಿರಕ್ಕೂ ಹೆಚ್ಚು ಶೌಚಾಲಯಗಳು ನಿರ್ಮಾಣಗೊಳ್ಳಬೇಕಾಗಿದೆ. ಜಿಲ್ಲೆಯ ಎಲ್ಲ ನಗರ, ಪಟ್ಟಣಗಳನ್ನು ಬಯಲು ಬಹಿರ್ದೆಸೆ ಮುಕ್ತ ಪ್ರದೇಶ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ವಿವಿಧ ಹೆಜ್ಜೆಗಳನ್ನು ಇಟ್ಟಿದ್ದೇವೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ.

‘ಪೂರ್ವ ನಿರ್ಮಿತ ಶೌಚಾಲಯಗಳು (prefabricated toilets)ಗಳನ್ನು ಟೆಂಡರ್ ಕರೆಯುವ ಮೂಲಕ ಅನುಷ್ಠಾನಗೊಳಿಸುತ್ತೇವೆ. ಅಧಿಕಾರಿ, ಸಿಬ್ಬಂದಿಗೆ ವಿವಿಧ ವಾರ್ಡ್‌ಗಳ ಜವಾಬ್ದಾರಿ ನೀಡಲಾಗಿದೆ. ಶೌಚಾಲಯ ರಹಿತರ ಮನೆಗಳಿಗೆ ತೆರಳಿ ಅರಿವು ಮೂಡಿಸಲಾಗುತ್ತಿದೆ. ಶೌಚಾಲಯ ಬಳಕೆ ಕುರಿತೂ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT