ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮ್ಯೂಸಿಯಂ’ ನಿರ್ಮಾಣಕ್ಕೆ ಅನುದಾನದ ಕೊರತೆ

Last Updated 20 ನವೆಂಬರ್ 2017, 9:26 IST
ಅಕ್ಷರ ಗಾತ್ರ

ಮಡಿಕೇರಿ: ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರ ‘ಸನ್ನಿಸೈಡ್‌ ನಿವಾಸ’ವನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ಯುವಕರಿಗೆ ಅವರ ಸಾಧನೆಗಳನ್ನು ಪರಿಚಯಿಸಬೇಕೆಂಬ ಉದ್ದೇಶವು ಸದ್ಯಕ್ಕೆ ಈಡೇರುವಂತೆ ಕಾಣಿಸುತ್ತಿಲ್ಲ. ಅನುದಾನ– ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಸ್ಮಾರಕ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಜಿಲ್ಲೆಯ ನಿವೃತ್ತ ಸೈನಿಕರ ಹೋರಾಟ, ಸೇವಾ ನಿರತರ ಆಗ್ರಹ ಹಾಗೂ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ – ಜನರಲ್‌ ತಿಮ್ಮಯ್ಯ ಫೋರಂ ಪದಾಧಿಕಾರಿಗಳ ಮನವಿಗೆ ಸ್ಪಂದಿಸಿದ್ದ ಸರ್ಕಾರ, ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಅಸ್ತು ಎಂದಿತ್ತು. ಸರ್ಕಾರ ಒಪ್ಪಿಗೆ ಸೂಚಿಸಿದ್ದರೂ ಅನುದಾನದಲ್ಲಿ ಬಿಡುಗಡೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದೆ. ಹೀಗಾಗಿ, ಕೆಲವು ದಿನಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಎರಡು ತಿಂಗಳ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಅವರು ‘ಸನ್ನಿಸೈಡ್‌’ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದರು. ಉಳಿಕೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಅನುದಾನ ಮಾತ್ರ ಜಿಲ್ಲಾಡಳಿತದ ಖಜಾನೆಗೆ ಬಂದಿಲ್ಲ.

‘ಸನ್ನಿಸೈಡ್’ನಲ್ಲಿ ಈ ಹಿಂದೆ ಆರ್‌ಟಿಒ ಕಚೇರಿ ನಡೆಯುತ್ತಿತ್ತು. ಅಬ್ಬಿ ಫಾಲ್ಸ್‌ ರಸ್ತೆಯಲ್ಲಿರುವ ನೂತನ ಕಟ್ಟಡಕ್ಕೆ ಆರ್‌ಟಿಒ ಕಚೇರಿ ಸ್ಥಳಾಂತರವಾದ ಬಳಿಕ ಈ ನಿವಾಸಕ್ಕೆ ಬೀಗ ಹಾಕಲಾಗಿತ್ತು. ಸುತ್ತಮುತ್ತ ಆರ್‌ಟಿಒ ಸಿಬ್ಬಂದಿಯ ವಸತಿಗೃಹಗಳಿದ್ದವು. ಆರ್‌ಟಿಒ ಕಚೇರಿಗೆ ಸೇರಿದ್ದ ಜಾಗವನ್ನೂ ಬಳಸಿಕೊಂಡು ಮಾದರಿ ಮ್ಯೂಸಿಯಂ ನಿರ್ಮಿಸಲು ಯೋಜನೆ ರೂಪಿಸಿದ್ದರೂ ಕಾಮಗಾರಿ ಮಾತ್ರ ಮುಗಿದಿಲ್ಲ.

ಸರ್ಕಾರವು ಸ್ಮಾರಕ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದ ಬಳಿಕ ಕೊಡಗು ಜಿಲ್ಲಾಡಳಿತ ₹ 5.5 ಕೋಟಿ ಅನುದಾನ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಿತ್ತು. 2013-14ನೇ ಸಾಲಿನ ಬಜೆಟ್‌ನಲ್ಲಿ ಮೊದಲ ಕಂತಾಗಿ ₹ 45 ಲಕ್ಷ ಬಿಡುಗಡೆ ಮಾಡಲಾಗಿತ್ತು. ಬಳಿಕ ‘ಇಷ್ಟೊಂದು ಅನುದಾನದ ಅಗತ್ಯವಿಲ್ಲ’ ಎಂದು ಜಿಲ್ಲಾಡಳಿತ ₹ 3.70 ಕೋಟಿಯ ಪರಿಷ್ಕೃತ ಪ್ರಸ್ತಾವ ಸಲ್ಲಿಸಿತ್ತು.

‘ಇದುವರೆಗೂ ₨ 1.45 ಕೋಟಿ ಬಿಡುಗಡೆಯಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನಷ್ಟು ಅನುದಾನದ ಅಗತ್ಯವಿದೆ’ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಮನೆಯ ಮೂಲ ಮಾದರಿಯನ್ನು ಉಳಿಸಿಕೊಂಡು ನಿರ್ಮಿತಿ ಕೇಂದ್ರವು ಕಾಮಗಾರಿ ನಡೆಸಿದೆ. ಗಾರ್ಡನ್, ಸೇನೆಯ ಯುದ್ಧ ಟ್ಯಾಂಕರ್‌, ಯುದ್ಧ ವಿಮಾನದ ಮಾದರಿ ಹಾಗೂ ತಿಮ್ಮಯ್ಯ ಅವರು ಸೇನೆಯಲ್ಲಿದ್ದಾಗ ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಲು ಯೋಜನೆ ತಯಾರಿಸಲಾಗಿದೆ.

ಈಚೆಗೆ ಗೋಣಿಕೊಪ್ಪಲಿಗೆ ಭೇಟಿ ನೀಡಿದ್ದ ಭೂಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು ವಸ್ತು ಸಂಗ್ರಹಾಲಯಕ್ಕೆ ₹ 10 ಲಕ್ಷ ಘೋಷಿಸಿದ್ದರು. ಆ ಅನುದಾನ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಫೋರಂನ ಪದಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT