ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರವಾಸಿಗಳಿಗಿಲ್ಲ ಶುದ್ಧ ನೀರಿನ ಭಾಗ್ಯ

Last Updated 20 ನವೆಂಬರ್ 2017, 9:35 IST
ಅಕ್ಷರ ಗಾತ್ರ

ಕೋಲಾರ: ವರುಣದೇವ ದಶಕದ ನಂತರ ಕೃಪೆ ತೋರಿದ್ದರೂ ನಗರವಾಸಿಗಳಿಗೆ ಶುದ್ಧ ನೀರಿನ ಭಾಗ್ಯವಿಲ್ಲ. ನಗರದ ಪ್ರಮುಖ ನೀರಿನ ಮೂಲವಾಗಿರುವ ಅಮ್ಮೇರಹಳ್ಳಿ ಕೆರೆಯಿಂದ ನೀರು ಸರಬರಾಜು ಮಾಡುವ ಶುದ್ಧೀಕರಣ ಘಟಕದಲ್ಲಿನ ಯಂತ್ರೋಪಕರಣಗಳು ಕೆಟ್ಟಿದ್ದು, ನಗರಕ್ಕೆ ಕಚ್ಚಾ ನೀರು ಪೂರೈಸಲಾಗುತ್ತಿದೆ.

ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ 35 ವಾರ್ಡ್‌ಗಳಿದ್ದು, ಜನಸಂಖ್ಯೆ 2 ಲಕ್ಷದ ಗಡಿ ದಾಟಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದೆ. ಅದಕ್ಕೆ ಅನುಗುಣವಾಗಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ನಗರದಲ್ಲಿ 11 ಸಾವಿರ ನಲ್ಲಿ ಸಂಪರ್ಕಗಳಿದ್ದು, ಈಗೀನ ಜನಸಂಖ್ಯೆಗೆ ಹೋಲಿಸಿದರೆ ಪ್ರತಿನಿತ್ಯ ಸುಮಾರು 70 ಲಕ್ಷ ಲೀಟರ್‌ ನೀರಿನ ಅಗತ್ಯವಿದೆ.

ನಗರದ ಸುತ್ತಮುತ್ತ ನದಿ, ನಾಲೆಯಂತಹ ಮೇಲ್ಮೈ ನೀರಿನ ಮೂಲಗಳಿಲ್ಲ. ನೀರಿನ ಸೌಲಭ್ಯಕ್ಕೆ ಹಿಂದಿನಿಂದಲೂ ಕೋಲಾರಮ್ಮ ಕೆರೆ, ಅಮ್ಮೇರಹಳ್ಳಿ ಕೆರೆ, ಕೋಡಿಕಣ್ಣೂರು ಕೆರೆಯನ್ನು ಆಶ್ರಯಿಸಲಾಗಿದೆ. ಅಮ್ಮೇರಹಳ್ಳಿ ಕೆರೆ ಬಳಿ ಸ್ಥಾಪಿಸಲಾಗಿರುವ ನೀರು ಶುದ್ಧೀಕರಣ ಘಟಕದಿಂದ ಕೊಳವೆ ಮಾರ್ಗದ (ಪೈಪ್‌ಲೈನ್‌) ಮೂಲಕ ಶೇ 50ರಷ್ಟು ಬಡಾವಣೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ದರ್ಗಾ ಮೊಹಲ್ಲಾ, ಕೆ.ಜಿ.ಮೊಹಲ್ಲಾ, ಕಠಾರಿಪಾಳ್ಯ, ಗೌರಿಪೇಟೆ, ಅಮ್ಮವಾರಿಪೇಟೆ, ಕೀಲುಕೋಟೆ, ಎನ್‌.ಬಿ.ನಗರ, ಕುರುಬರಪೇಟೆ, ಕೋಟೆ, ಮುನೇಶ್ವರನಗರ ಸೇರಿದಂತೆ ಬಹುತೇಕ ಹಳೆ ಬಡಾವಣೆಗಳಿಗೆ ಈ ಕೆರೆಯಿಂದಲೇ ನೀರು ಪೂರೈಕೆಯಾಗುತ್ತಿದೆ.

10 ವರ್ಷ ಕಳೆದಿದೆ: ಘಟಕದಲ್ಲಿನ ನೀರು ಶುದ್ಧೀಕರಣ ಯಂತ್ರೋಪಕರಣಗಳು ಕೆಟ್ಟು 10 ವರ್ಷ ಕಳೆದಿದೆ. ಇದರಿಂದಾಗಿ ಕೆರೆಯಿಂದ ಪೈಪ್‌ ಮೂಲಕ ಘಟಕದ ಆವರಣದಲ್ಲಿನ ದೊಡ್ಡ ತೊಟ್ಟಿಗೆ (ಸಂಪ್‌) ನೀರು ಹರಿಸಿ, ಸಂಗ್ರಹಣೆ ಮಾಡಲಾಗುತ್ತಿದೆ. ಅಲ್ಲಿ ನೀರನ್ನು ಶುದ್ಧೀಕರಿಸದೆ ಪಂಪ್‌ ಮತ್ತು ಮೋಟರ್‌ನ ಸಹಾಯದಿಂದ ನೇರವಾಗಿ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ.

ಮಣ್ಣು, ಕಸ ಕಡ್ಡಿ ಮಿಶ್ರಿತವಾದ ಈ ಕಚ್ಚಾ ನೀರು ಗೃಹ ಬಳಕೆಗೆ ಯೋಗ್ಯವಾಗಿಲ್ಲ. ಆದರೂ ನಗರವಾಸಿಗಳು ಅನಿವಾರ್ಯವಾಗಿ ಈ ನೀರನ್ನೇ ಬಳಸುತ್ತಿದ್ದಾರೆ. ಬಟ್ಟೆ ಮತ್ತು ಪಾತ್ರೆ ತೊಳೆಯಲು, ಮನೆಯ ಸ್ವಚ್ಛತಾ ಕಾರ್ಯಕ್ಕೆ, ಸ್ನಾನದ ಉದ್ದೇಶಕ್ಕೆ ಉಪಯೋಗಿಸಲಾಗುತ್ತಿದೆ. ಮತ್ತೆ ಕೆಲ ಮನೆಗಳಲ್ಲಿ ನೀರನ್ನು ಶುದ್ಧೀಕರಿಸಿ ಅಡುಗೆಗೆ ಹಾಗೂ ಕುಡಿಯುವುದಕ್ಕೆ ಬಳಸಲಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ.

ಮುಳುಗಿದ ಕೊಳವೆ ಬಾವಿಗಳು: ಜಿಲ್ಲೆಯಲ್ಲಿ ಒಂದೂವರೆ ದಶಕದಿಂದ ಸತತ ಬರ ಪರಿಸ್ಥಿತಿ ಇದ್ದ ಕಾರಣ ಕೆರೆಗಳೆಲ್ಲಾ ಬರಿದಾಗಿದ್ದವು. ನಗರದೊಳಗಿನ ಕೊಳವೆ ಬಾವಿಗಳಲ್ಲೂ ಜೀವಸೆಲೆ ಬತ್ತಿತ್ತು. ಹೀಗಾಗಿ ಕೆರೆಗಳ ಅಂಗಳದಲ್ಲಿ ಕೊಳವೆ ಬಾವಿ ಕೊರೆಸಿ ನಗರಕ್ಕೆ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಕೆರೆ ಕಟ್ಟೆಗಳು ತುಂಬಿವೆ.

ಕೆರೆಗಳ ಅಂಗಳದಲ್ಲಿದ್ದ ಕೊಳವೆ ಬಾವಿಗಳು ಮತ್ತು ಪಂಪ್‌ ಮೋಟರ್‌ಗಳು ನೀರಿನಲ್ಲಿ ಮುಳುಗಿದ್ದು, ನೀರು ಪಡೆಯಲು ಸಾಧ್ಯವಾಗುತ್ತಿಲ್ಲ. ಪೈಪ್‌ಲೈನ್‌ ವ್ಯವಸ್ಥೆ ಇಲ್ಲದ ಬಡಾವಣೆಗಳಿಗೆ ನಗರಸಭೆ ವತಿಯಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೆ, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಒಂದು ವಾರದಿಂದ ಟ್ಯಾಂಕರ್ ನೀರು ಸ್ಥಗಿತಗೊಳಿಸಲಾಗಿದೆ. ಇದರಿಂದ ಆ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ.

ನಗರಸಭೆ ಆಡಳಿತ ಯಂತ್ರವು ಮನೆ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸಿ ಪೈಪ್‌ಲೈನ್‌ ಮೂಲಕ ನೀರು ಕೊಡುವುದಾಗಿ ಹೇಳುತ್ತಲೇ ಕಾಲ ಕಳೆಯುತ್ತಿದೆ. ನೀರು ಲಭ್ಯವಿದ್ದರೂ ಅದನ್ನು ಬಳಕೆ ಮಾಡಿಕೊಳ್ಳುವಲ್ಲಿ ಆಡಳಿತ ಯಂತ್ರ ವಿಫಲವಾಗಿದ್ದು, ನೀರಿನ ಬವಣೆ ಮುಂದುವರಿದಿದೆ. 

* * 

ನೀರು ಶುದ್ಧೀಕರಣ ಘಟಕಕ್ಕೆ ಹೊಸ ಯಂತ್ರೋಪಕರಣ ಅಳವಡಿಸಲು ₹ 32 ಲಕ್ಷ ವೆಚ್ಚವಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಸದ್ಯದಲ್ಲೇ ಅಳವಡಿಸಲಾಗುತ್ತದೆ.
ಎಸ್‌.ಎ.ರಾಮ್‌ಪ್ರಕಾಶ್‌, ಆಯುಕ್ತ

* * 

ಗರದಲ್ಲಿ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿದ್ದರೂ ನೀರಿನ ಬವಣೆ ತಪ್ಪಿಲ್ಲ. ಮನೆಯ ನಲ್ಲಿಯಲ್ಲಿ ನೀರು ಬಂದು ಏಳೆಂಟು ತಿಂಗಳಾಗಿದೆ.
ವಾಸುದೇವ ಆಚಾರಿ,
ಪಿ.ಸಿ.ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT