3

2030ಕ್ಕೆ ಮರುಭೂಮಿಯಾಗುವ ತುಮಕೂರು

Published:
Updated:
2030ಕ್ಕೆ ಮರುಭೂಮಿಯಾಗುವ ತುಮಕೂರು

ತುಮಕೂರು: ‘ಅಧ್ಯಯನಗಳ ಪ್ರಕಾರ ಹಿರಿಯೂರು ಮತ್ತು ತುಮಕೂರಿನ ಕೆಲ ಭಾಗಗಳು 2030ರ ವೇಳೆಗೆ ಮರು ಭೂಮಿಯಾಗಿ ಬದಲಾಗಲಿದ್ದು, ಕೃಷಿಯನ್ನೇ ನಂಬಿರುವ ಈ ಭಾಗದ ರೈತರು ಗುಳೆ ಹೊರಡುವುದು ಅನಿವಾರ್ಯವಾಗಬಹುದು’ ಎಂದು ನೈಸರ್ಗಿಕ ಪರಿಸರ ತಜ್ಞ ಮಂಜುನಾಥ್‌ ಹೇಳಿದರು.

ನಗರದ ವಿಜ್ಞಾನ ಕೇಂದ್ರದಲ್ಲಿ ನಡೆದ ಗ್ರಾಮ ವಿಕಾಸ ಅಭಿಯಾನ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ‘ಒಣ ಭೂಮಿಯಲ್ಲಿ ವ್ಯವಸಾಯ ಮಾಡುವ ಕೃಷಿಕರು ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪ್ರಾಮುಖ್ಯ ನೀಡಬೇಕು. ಹೊದಿಕೆಯಂತಹ ಕ್ರಮಗಳನ್ನು ಅನುಸರಿಸುವುದರಿಂದ ಭೂಮಿಯಲ್ಲಿನ ನೀರಿನಾಂಶ ಆವಿಯಾಗದಂತೆ ತಡೆಗಟ್ಟಬಹುದು’ ಎಂದರು.

‘ಜೈವಿಕ ಹೊದಿಕೆ ಮತ್ತು ಅಜೈವಿಕ ಹೊದಿಕೆಯ ಮೂಲಕ ನೀರಿನಾಂಶವನ್ನು ಭೂಮಿಯಲ್ಲಿ ಹಿಡಿದಿಟ್ಟುಕೊಳ್ಳಬಹುದಾಗಿದೆ. ಜೈವಿಕ ಹೊದಿಕೆ ಎಂದರೆ ಬೆಳೆಯ ಅಕ್ಕಪಕ್ಕ ತರಕಾರಿ ಬೆಳೆಗಳನ್ನು ಹಾಕುವುದು. ಆಮೇಲೆ ವ್ಯರ್ಥ ಪದಾರ್ಥಗಳನ್ನು ಸಾಲುಗಳ ಮಧ್ಯೆ ಹಾಕುವುದು ಎರಡನೇ ಹೊದಿಕೆ. ವ್ಯರ್ಥ ಪದಾರ್ಥಗಳು ಸಾಲಿನ ಮಧ್ಯೆ ತೇವಾಂಶವನ್ನು ಹಿಡಿದಿಡುತ್ತವೆ. ತರಕಾರಿ ಸಸಿಗಳು ಪೋಷಕಾಂಶದ ಸಮತೋಲನ ಕಾಪಾಡುತ್ತವೆ’ ಎಂದರು.

ಭರ್ಜರಿ ನೀರಾವರಿ ಹೊಂದಿದ ಗದ್ದೆಯಲ್ಲೂ ಇಳುವರಿ ಕಡಿಮೆಯಾಗಲು ಕಾರಣ ಆರ್ದ್ರತೆಯಲ್ಲಿನ ವ್ಯತ್ಯಾಸ. ಅತಿಯಾದ ನೀರು ಬಳಕೆ ಕೂಡ ಬೆಳೆಗೆ ಹಾನಿ ಮಾಡುತ್ತದೆ. ನೈಸರ್ಗಿಕ ಕೃಷಿ ಮಾದರಿ ಕೇವಲ ತೇವಾಂಶವನ್ನು ಮಾತ್ರ ಅವಲಂಬಿಸಿದೆ. ವರ್ಷಕ್ಕೆ ನಾಲ್ಕು ಸಣ್ಣ ಮಳೆಯಾದರೂ ಸಾಕು. ಹೊದಿಕೆಯು ತೇವಾಂಶ ಹಿಡಿದಿಟ್ಟುಕೊಂಡು ವರ್ಷವಿಡೀ ಬೆಳೆಗೆ ನೀಡುತ್ತದೆ ಎಂದರು.

ಬೀಜಾಮೃತ ಮತ್ತು ಜೀವಾಮೃತ ಪದ್ಧತಿಯನ್ನು ಬಳಸಿಕೊಂಡು ನಾಟಿ ಮಾಡುವುದರಿಂದ ಉತ್ತಮ ಬೆಳೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು. ಕೃಷಿಹೊಂಡಗಳನ್ನು ಕೇವಲ ಸಬ್ಸಿಡಿ ಪಡೆಯುವ ಸಲುವಾಗಿ ನಿರ್ಮಿಸದೇ ಅದನ್ನು ವೈಜ್ಞಾನಿಕವಾಗಿ ನಿರ್ಮಿಸಿಕೊಳ್ಳಬೇಕು.

ಇದನ್ನು ಅವೈಜ್ಞಾನಿಕವಾಗಿ ನಿರ್ಮಿಸಿದರೆ ಭೂಮಿಯಲ್ಲಿರುವ ನೀರು ಇದರಲ್ಲಿ ಇಂಗುವುದರಿಂದ ಇರುವ ತೇವಾಂಶವನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗೆಯೇ ಇದಕ್ಕೆ ಸರಿಯಾಗಿ ನೆರಳುಪರದೆಯನ್ನು ಅಳವಡಿಸದೇ ಇದ್ದರೆ ಹೊಂಡದಲ್ಲಿ ಪಾಚಿಗಳು ಬೆಳೆಯುತ್ತವೆ. ಹೊಂಡದ ಪಾಚಿಕಟ್ಟಿದ ನೀರನ್ನು ತುಂತುರು ನೀರಾವರಿಗೆ ಬಳಸುವುದರಿಂದ ಅವುಗಳಲ್ಲಿ ಪಾಚಿ ಕಟ್ಟಿಕೊಂಡು ಕೆಟ್ಟುಹೋಗಬಹುದಾದ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು.

ಹೊಂಡಗಳಿಗೆ ನೆರಳು ಪರದೆ ಅಳವಡಿಸದಿದ್ದರೆ ಇಲ್ಲಿ ಶೇಖರಿಸಿರುವ ನೀರು ಆವಿಯಾಗುತ್ತದೆ. ಹೀಗಾಗಿ ಕೃಷಿ ಹೊಂಡವನ್ನು ನಿರ್ಮಿಸುವಾಗ ಬಹಳ ಎಚ್ಚರಿಕೆಯಿಂದ ನಿರ್ಮಿಸುವುದರ ಜತೆಗೆ ವೈಜ್ಞಾನಿಕವಾಗಿಯೂ ನಿರ್ಮಿಸಿಕೊಳ್ಳಬೇಕಾಗಿರುವುದು ಅವಶ್ಯ ಎಂದು ಸಲಹೆ ನೀಡಿದರು.

‘ನಿಂಬೆ ಹಣ್ಣಿನ ಬೆಳೆ  ಜಿಲ್ಲೆಯ ಕೆಲ ಭಾಗಗಳಿಗೆ ಹೇಳಿ ಮಾಡಿಸಿದಂತಿದೆ.  ಮಲೆನಾಡಿಗಿಂತ ಒಣ ಭೂಮಿಯಲ್ಲಿ ಹೆಚ್ಚು ಹುಳಿ ಇರುವುದರಿಂದ ಇಲ್ಲಿಯ ನಿಂಬೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದರು. ಸ್ವರಾಜ್‌ ಅಭಿಯಾನದ ಸಿ.ಯತಿರಾಜು, ಬಿ.ಉಮೇಶ್‌, ರಾಮಕೃಷ್ಣಪ್ಪ, ಇಂದಿರಮ್ಮ, ಸಾದೂರು ಕೆಂಚಪ್ಪ, ಮಲ್ಲಿಕಾರ್ಜುನ, ಸುಬ್ರಹ್ಮಣ್ಯ ಅಡಿಗ, ಕಿಶೋರ್‌ ಇದ್ದರು.

ಡ್ರ್ಯಾಗನ್‌ ಫ್ರೂಟ್‌ ಬೆಳೆಸಿ

ಒಣ ಭೂಮಿಗೆ ಹೇಳಿ ಮಾಡಿಸಿರುವ ಡ್ರ್ಯಾಗನ್‌ ಫ್ರೂಟ್‌ಗಳನ್ನು ನಿಯಮಿತವಾಗಿ ಬೆಳೆಯುವುದರಿಂದ ಒಳ್ಳೆಯ ಲಾಭವನ್ನು ಗಳಿಸಬಹುದು ಎಂದು ಮಂಜುನಾಥ್‌ ಹೇಳಿದರು. ಡ್ರ್ಯಾಗನ್‌ ಫ್ರೂಟ್‌ ಬಗ್ಗೆ ಜನರಿಗೆ ಹೆಚ್ಚು ಮಾಹಿತಿ ಇಲ್ಲದಿರುವುದರಿಂದ ಇದರ ಪೂರೈಕೆ ಕಡಿಮೆ ಇದೆ.

ಹೀಗಾಗಿ ಇದಕ್ಕೆ ಬೇಡಿಕೆ ಕೂಡ ಇದ್ದು, ಜನರು ಇದನ್ನು ಬೆಳೆಯುವ ಕಡೆಗೆ ಗಮನಹರಿಸಬೇಕು. ಇದು ಬಹಳ ಗಟ್ಟಿ ಜಾತಿಯ ಹಣ್ಣಿನ ತಳಿಯಾಗಿದ್ದು, ಇದಕ್ಕೆ ಯಾವುದೇ ರೋಗಗಳು ಬರುವುದಿಲ್ಲ. ಹೀಗಾಗಿ ರೈತರು ಇಂತಹ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಬೆಳೆಯಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry