ಸಮಗ್ರ ಕೃಷಿಯಲ್ಲಿ ನಷ್ಟದ ಮಾತೆಲ್ಲಿ?

7

ಸಮಗ್ರ ಕೃಷಿಯಲ್ಲಿ ನಷ್ಟದ ಮಾತೆಲ್ಲಿ?

Published:
Updated:
ಸಮಗ್ರ ಕೃಷಿಯಲ್ಲಿ ನಷ್ಟದ ಮಾತೆಲ್ಲಿ?

‘ನಾನು ಕೃಷಿಯಿಂದ ಕೈಸುಟ್ಟುಕೊಂಡ ಪ್ರಸಂಗವೇ ಇಲ್ಲ; ಸಾಲಕ್ಕಾಗಿ ಬ್ಯಾಂಕುಗಳು ಮತ್ತು ಲೇವಾದೇವಿದಾರರ ಮುಂದೆ ತಲೆಬಗ್ಗಿಸಿ ನಿಂತೂ ಇಲ್ಲ; ಸಮಗ್ರ ಕೃಷಿಯಿಂದ ಗಳಿಸುತ್ತಿರುವ ಆದಾಯ ನಾನು ಯಾರ ಮುಂದೆಯೂ ಕೈಯೊಡ್ಡದಂತೆ ಮಾಡಿದೆ..’

ಚನ್ನಪಟ್ಟಣ ತಾಲ್ಲೂಕಿನ ಸೀಬನಹಳ್ಳಿಯ ಯುವ ರೈತ ಎಂ.ಆರ್‌.ಶಶಿ ಅವರ ಆತ್ಮವಿಶ್ವಾಸದ ನುಡಿಗಳಿವು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಪ್ರಗತಿಪರ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ ಅವರು.

ಶಶಿ ಅವರಿಗೆ ಒಂಬತ್ತು ಎಕರೆ ಭೂಮಿ ಇದೆ. ಈ ವರ್ಷ ಮೂರು ಎಕರೆಯಲ್ಲಿ ತಿಪಟೂರು ತಳಿ ಶೇಂಗಾ (ಗುಚ್ಚಿ) ಬೆಳೆದಿದ್ದು, 50 ಕ್ವಿಂಟಲ್‌ ಇಳುವರಿ ಪಡೆದಿದ್ದಾರೆ. ಖರ್ಚು ಕಳೆದು, ₹1 ಲಕ್ಷ ಆದಾಯ ಗಳಿಸಿದ್ದಾರೆ. ಶೇಂಗಾ ಜತೆಗೆ 8:1 ಅನುಪಾತದಲ್ಲಿ ಅಂತರ ಬೆಳೆಯಾಗಿ ಬೆಳೆದಿದ್ದ ತೊಗರಿಯಿಂದ ₹80,000 ಆದಾಯದ ನಿರೀಕ್ಷೆಯಲ್ಲಿದ್ದಾರೆ. ಎರಡು ಎಕರೆಯಲ್ಲಿ ಹಿಪ್ಪುನೇರಳೆ ಬೆಳೆದಿದ್ದು, ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ.

ಎರಡು ಎಕರೆಯಲ್ಲಿ ರಾಗಿ ಪೈರು ಬೆಳೆದುನಿಂತಿದೆ. ಈ ಬಾರಿ ಸುರಿದ ಭಾರಿ ಮಳೆಯಿಂದ ಆಗಿರುವ ಹಾನಿಯ ಹೊರತಾಗಿಯೂ ಎಕರೆಗೆ 10 ಕ್ವಿಂಟಲ್‌ ಇಳುವರಿ ಪಡೆಯುವ ವಿಶ್ವಾಸ ದಲ್ಲಿದ್ದಾರೆ ಅವರು. ‘ಫಸಲು ನೀಡುವ 100 ತೆಂಗಿನ ಮರಗಳಿದ್ದು, ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ತರಕಾರಿ ಬೆಳೆಯುತ್ತಿದ್ದೇವೆ. ಖುಷ್ಕಿ ಭೂಮಿಯಲ್ಲಿ ಮಾವು, ಸೀತಾಫಲ, ಹಲಸು, ಹುಣಸೆ ಮತ್ತು ಗೋಡಂಬಿ ಬೆಳೆ ಇದೆ. ಇದರಿಂದ ನಿರಂತರ ಆದಾಯ ಸಿಗುತ್ತಿದೆ. ಜತೆಗೆ ನಾಟಿ ಕೋಳಿ, ಕುರಿ ಸಾಕಣೆ ಹಾಗೂ ಹೈನುಗಾರಿಕೆಯಿಂದಲೂ ನಿಶ್ಚಿತ ಆದಾಯ ಲಭಿಸುತ್ತಿದೆ. 2,000 ಮೀನುಗಳನ್ನು ಸಾಕುತ್ತಿದ್ದೇವೆ’ ಎನ್ನುತ್ತಾರೆ ಅವರು.

‘ಮಳೆ ಆಶ್ರಯಿಸಿಯೇ ಕೃಷಿ ಮಾಡುತ್ತಿದ್ದೇವೆ. ಆದರೆ, ಒಂದೇ ಬೆಳೆ ನೆಚ್ಚಿಕೊಂಡು ಕೃಷಿ ಮಾಡಲಿಲ್ಲ. ಬಹುವಿಧದ ಬೆಳೆಗಳನ್ನು ಬೆಳೆದು ‘ಕೃಷಿ ಎಂದರೆ ಮಾನ್ಸೂನ್‌ ಜತೆಗಿನ ಜೂಜಾಟ’ ಎನ್ನುವ ಮಾತನ್ನು ಸುಳ್ಳು ಮಾಡಿದ್ದೇವೆ’ ಎನ್ನುವುದು ಅವರ ಹೆಮ್ಮೆಯ ನುಡಿ.

‘ಹದ ನೋಡಿ ಭೂಮಿ ಉತ್ತಿ, ಸಮಯಕ್ಕೆ ಸರಿಯಾಗಿ ಬೀಜೋಪಚಾರ ಮತ್ತು ಬಿತ್ತನೆ ಮಾಡುತ್ತೇವೆ. ಸಕಾಲಕ್ಕೆ ಗೊಬ್ಬರ ಕೊಟ್ಟು, ಕಳೆ ನಿಯಂತ್ರಿಸುತ್ತೇವೆ. ಇಳುವರಿ ಹೆಚ್ಚಿಸಲು ಮತ್ತು ಕೀಟಬಾಧೆ ನಿಯಂತ್ರಿಸಲು ಕಾಲಕಾಲಕ್ಕೆ ಕೃಷಿ, ತೋಟಗಾರಿಕೆ ಇಲಾಖೆ ತಜ್ಞರ ಮಾರ್ಗದರ್ಶನ ಪಡೆಯುತ್ತೇವೆ’ ಎಂದು ಅವರು ಯಶಸ್ಸಿನ ಗುಟ್ಟು ತೆರೆದಿಡುತ್ತಾರೆ.

‘ಯಂತ್ರೋಪಕರಣ ಬಳಕೆ ಹೆಚ್ಚಿಸಿ, ಕಾರ್ಮಿಕರ ಕೊರತೆಗೆ ಪರಿಹಾರ ಕಂಡುಕೊಂಡಿ ದ್ದೇವೆ. ಕೃಷಿ ಕೆಲಸವನ್ನು ಕುಟುಂಬದ ಸದಸ್ಯರೇ ನಿರ್ವಹಿಸುತ್ತೇವೆ. ಇದರಿಂದ ಕೃಷಿ ವೆಚ್ಚವೂ ತಗ್ಗಿದೆ’ ಎನ್ನುತ್ತಾರೆ. ಸಂಪರ್ಕ: 8861155985.

***

ನಂಬಿದವರನ್ನು ಕೃಷಿ ಕೈಬಿಡಲ್ಲ!

‘ನಂಬಿದವರನ್ನು ಕೃಷಿ ಎಂದಿಗೂ ಕೈಬಿಡುವುದಿಲ್ಲ. ಒಂದು ವರ್ಷ ನಷ್ಟವಾದರೆ, ಇನ್ನೊಂದು ವರ್ಷ ಖಂಡಿತಾ ಲಾಭ ಸಿಗುತ್ತದೆ. ಆದರೆ, ನಾವೆಂತಹ ಬೆಳೆ ಬೆಳೆಯಬೇಕು, ಯಾವ ಪದ್ಧತಿಯ ಕೃಷಿ ಮಾಡಬೇಕೆನ್ನುವ ಸಾಮಾನ್ಯ ತಿಳಿವಳಿಕೆ ಇರಬೇಕು’

– ಇದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ರೈತ ಮಹಿಳೆ ಪ್ರಶಸ್ತಿಗೆ ಭಾಜನರಾಗಿರುವ ರಾಮನಗರ ಜಿಲ್ಲೆಯ ಕನ್ನಸಂದ್ರ ಗ್ರಾಮದ ಚಂದ್ರಪ್ರಭಾ ಅವರ ಅನಿಸಿಕೆ. ಇವರಿಗೆ ಏಳು ಎಕರೆ ಜಮೀನು ಇದೆ. ಮೂರು ಎಕರೆಗೆ ಸಮಗ್ರ ಕೃಷಿ ಅಳವಡಿಸಿಕೊಂಡಿದ್ದಾರೆ. ಉಳಿದ ಭೂಮಿಯಲ್ಲಿ ಸಾವಯವ ಕೃಷಿ ಪದ್ಧತಿ ಅನುಸರಿಸಿದ್ದಾರೆ. ವಾರ್ಷಿಕ ₹5 ಲಕ್ಷದಿಂದ ₹6 ಲಕ್ಷದವರೆಗೂ ಕೃಷಿಯಲ್ಲಿ ಆದಾಯ ಸಂಪಾದಿಸುತ್ತಿರುವುದಾಗಿ ಹೇಳುತ್ತಾರೆ ಅವರು.

‘ತೆಂಗು, ಭತ್ತ, ರಾಗಿ, ಮಾವು, ಕಾಕಡ ಬೆಳೆಗಳನ್ನು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಬೆಳೆಯುತ್ತಿದ್ದೇವೆ. 50 ಬನ್ನೂರು ತಳಿ ಕುರಿ, 20 ನಾಟಿ ಮೇಕೆ ಸಾಕಣೆಯಿಂದಲೂ ಪ್ರತಿ ವರ್ಷ ₹2 ಲಕ್ಷ ಆದಾಯ ಸಿಗುತ್ತಿದೆ. ಜೇನು ಸಾಕಣೆ, ನಾಟಿ ಕೋಳಿ ಸಾಕಣೆ, ಹೈನುಗಾರಿಕೆಯಿಂದಲೂ ಸುಸ್ಥಿರ ಲಾಭ ಸಿಗುತ್ತಿದೆ’ ಎನ್ನುತ್ತಾರೆ ಅವರು.

 

ಬರಹ ಇಷ್ಟವಾಯಿತೆ?

 • 23

  Happy
 • 3

  Amused
 • 0

  Sad
 • 0

  Frustrated
 • 1

  Angry