7

‘ಸರ್ಕಾರ ತಾರತಮ್ಯ ನೀತಿ ಕೈಬಿಡಲಿ’

Published:
Updated:

ಯಾದಗಿರಿ:‘ಅಭಿವೃದ್ಧಿ ವಿಷಯದಲ್ಲಿ ಸರ್ಕಾರಗಳು ಅನುಸರಿಸುತ್ತ ಬಂದಿರುವ ಪ್ರಾಂತ್ಯವಾರು ನೀತಿಯನ್ನು ತಕ್ಷಣ ಕೈ ಬಿಡಬೇಕು’ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಒತ್ತಾಯಿಸಿದರು.

ಇಲ್ಲಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತನಾರತಿ ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ‘ಕನ್ನಡ ನುಡಿ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರನ್ನ, ಪಂಪ, ರಾಘವಾಂಕ, ಹರಿಹರ, ಕುಮಾರವ್ಯಾಸ ಹಳೆಯ ಮೈಸೂರು ಅಥವಾ ಬೆಂಗಳೂರಿನವರಲ್ಲ. ದಾಸರು, ಶರಣರು ಎಲ್ಲರೂ ಉತ್ತರ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದವರು. ಆದರೆ, ಸರ್ಕಾರ ಮಾತ್ರ ಹೈದರಾಬಾದ್, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮುಂದಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇಂದಿನ ಜನಪ್ರತಿನಿಧಿಗಳು ಸಮಗ್ರ ಕರ್ನಾಟಕವನ್ನೇ ನೋಡಿಲ್ಲ. ಆದರೆ, ಶಾಸಕರು ಅಧ್ಯಯನ ನೆಪದಲ್ಲಿ ವಿದೇಶ ಸುತ್ತುತ್ತಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ಪ್ರತಿಯೊಂದೂ ಸಭೆಗೂ ಇವರು ತೆರಳಬೇಕಾದರೆ ನಮ್ಮ ಬೆವರಿನ ಪ್ರತಿಫಲವಾದ ಹಣವನ್ನು ತೆರಿಗೆ ರೂಪದಲ್ಲಿ ಇವರಿಗೆ ಭತ್ಯೆಯಾಗಿ ನೀಡಬೇಕು. ಆದರೆ, ವಿಧಾನಸೌಧದಲ್ಲಿ ಇವರು ಕೂತು ಮಾಡುವ ಘನಕಾರ್ಯ ಏನು? ಈ ಜನಪ್ರತಿನಿಧಿಗಳು ಭತ್ಯೆ ಪಡೆಯುವ ಬಹದ್ದೂರರಾಗಿದ್ದಾರೆ’ ಎಂದು ಕುಟುಕಿದರು.

ಪ್ರತಿಷ್ಠಾನದ ಅಧ್ಯಕ್ಷ ಸಿದ್ದರಾಜ ಎಸ್.ರಡ್ಡಿ  ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮರಡ್ಡೆಪ್ಪಗೌಡ ಕ್ಯಾಸಪನಳ್ಳಿ, ಹಿರಿಯ ಕಾಂಗ್ರೆಸ್ ಮುಖಂಡ ಕಿಶನರಾವ ಪಾಟೀಲ ಹೆಡಗಿಮದ್ರಿ, ಸಿ.ಎಂ.ಪಟ್ಟೇದಾರ, ಜನಸಂಘದ ಹಿರಿಯ ಧುರೀಣ ಬಿ.ಜಯಾಚಾರ್ಯ, ಚನ್ನಬಸಪ್ಪ ಜಾಕಾ, ಶಂಶು ಉಜ್ ಜೀಮಾ, ಮಲ್ಲರಡ್ಡೆಪ್ಪಗೌಡ ಕಣೆಕಲ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಶಾಣಮ್ಮ ಮ್ಯಾಗೇರಿ ಅವರನ್ನು ಸತ್ಕರಿಸಲಾಯಿತು. ಸಿದ್ದ ಸಂಪದ ಕೃತಿ ಲೋಕಾರ್ಪಣೆ ಗೊಳಿಸಲಾಯಿತು.

ಗುರುಮಠಕಲ್‌ನ ಖಾಸಾಮಠದ ಶಾಂತವೀರ ಮುರಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಚೆನ್ನಾರಡ್ಡಿ ಪಾಟೀಲ ತುನ್ನೂರ, ರಾಯಚೂರು ಕೃಷಿ ವಿದ್ಯಾಲಯದ ಕುಲಪತಿ ಡಾ.ಪಿ.ಎಂ.ಸಾಲಿಮಠ, ಸಾಹಿತಿ ಸಿದ್ದರಾಮ ಹೊನಕಲ್, ಸೋಮಶೇಖರ ಮಣ್ಣೂರ ಇದ್ದರು.

* * 

‘ದೇಶ ಭವಿಷ್ಯದ ಯುವಕರ ಮೇಲೆ ನಿಂತಿದೆ. ದೇಶದ ಅಭಿವೃದ್ಧಿ ಯುವಕರಿಂದ ಮಾತ್ರ ಸಾಧ್ಯ. ಯುವಶಕ್ತಿ ಬಳಕೆಗೆ ಸರ್ಕಾರ ಯೋಜನೆ ರೂಪಿಸಬೇಕು.

ಪಾಟೀಲ ಪುಟ್ಟಪ್ಪ

 ಹಿರಿಯ ಪತ್ರಕರ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry