ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ ಉತ್ಸವಕ್ಕೆ ‘ಲುಂಬಿನಿ’ ಸಜ್ಜು

Last Updated 20 ನವೆಂಬರ್ 2017, 10:48 IST
ಅಕ್ಷರ ಗಾತ್ರ

ಯಾದಗಿರಿ: ನಗರದಲ್ಲಿ ಹಸಿರು ಹೊದ್ದ ಏಕೈಕ ಉದ್ಯಾನ ‘ಲುಂಬಿನಿ’ ನಿರ್ಮಾಣಗೊಂಡು ಎರಡು ವರ್ಷ ಪೂರೈಸಿದ್ದು,  ‘ವನ ಉತ್ಸವ’ ಆಚರಣೆಗೆ ಸಜ್ಜುಗೊಂಡಿದೆ. 2010ರಲ್ಲಿ ಯಾದಗಿರಿ ಜಿಲ್ಲೆಯಾಗಿ ಅಧಿಕೃತ ಘೋಷಣೆಗೊಂಡ ನಂತರ ನಗರದ ಒಂದೂ ಉದ್ಯಾನಗಳಲ್ಲಿ ಹಸಿರು ಇರಲಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ 250ಕ್ಕೂ ಉದ್ಯಾನಗಳಿರುವ ಬಗ್ಗೆ ದಾಖಲೆಗಳಿವೆ. ಅತಿಕ್ರಮಣಕ್ಕೆ ಬಹಳಷ್ಟು ಉದ್ಯಾನಗಳು ಕಣ್ಮರೆಯಾಗಿವೆ. ಉಳಿದಿರುವ ಉದ್ಯಾನಗಳು ಜನರು ಕುಳಿತುಕೊಳ್ಳಲೂ ಸಹ ಆಗದಷ್ಟು ಅಸಮರ್ಪಕ ನಿರ್ವಹಣೆಯಿಂದ ಸೊರಗಿವೆ. ಕೆಲ ಉದ್ಯಾನಗಳು ಹಂದಿಗಳ ತಾಣವಾಗಿ ಮಾರ್ಪಟ್ಟಿವೆ.

ಇಂಥಾ ಸ್ಥಿತಿಯಲ್ಲಿ ಹಿಂದಿನ ಜಿಲ್ಲಾಧಿ ಕಾರಿ ಜಗದೀಶ್ ಅವರು 2015ರಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ₹1 ಕೋಟಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ₹3 ಕೋಟಿ ಅನುದಾನದಲ್ಲಿ ‘ಲುಂಬಿನಿ’ ವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಒಟ್ಟು 52 ಎಕರೆಯಲ್ಲಿ ಲುಂಬಿನಿ ವನ ಹಸಿರು ಹೊದ್ದುಕೊಂಡಿತು.

ಒಂದೆಡೆ ಚಿಕ್ಕಕೆರೆ, ಅದರ ಮಧ್ಯೆ 2.16 ಎಕರೆ ವಿಸ್ತೀರ್ಣ ಹೊಂದಿರುವ ಐಲ್ಯಾಂಡ್, ಪಾಥ್ ವೇ, ವಾಕಿಂಗ್‌ ವೇ, ಅವುಗಳ ಪಕ್ಕದಲ್ಲಿ ಸಾಲುಸಾಲು ಅಲಂಕಾರಿಕ ಹೂಗಳ ರಾಶಿಯನ್ನು ಕಾಣಬಹುದು. ಮುಖ್ಯವಾಗಿ ಮಕ್ಕಳ ಆಟೋಪಕರಣಗಳು, ಸಂಗೀತ ಸಭಾಂಗ ಣವನ್ನೂ ಸಹ ಲುಂಬಿನಿ ಉದ್ಯಾನ ಒಳಗೊಂಡಿದೆ.

ಗಮನ ಸೆಳೆಯುವ ಕೆರೆ: ಇಲ್ಲಿನ ಚಿಕ್ಕಕೆರೆ ಈ ಸಲ ಆಕರ್ಷಣೀಯವಾಗಿ ಗಮನ ಸೆಳೆಯುತ್ತಿದೆ. ಕಳೆದ ವರ್ಷ ಅನಿಶ್ಚಿತ ಮಳೆಯಿಂದ ಭೀಮಾ ನದಿ ಬತ್ತುವ ಹಂತ ತಲುಪಿದಾಗ ಲುಂಬಿನಿ ಕೆರೆ ತನ್ನ ಸಹಜ ಸೌಂದರ್ಯ ಕಳೆದುಕೊಂಡಿತ್ತು. ಆದರೆ, ಈ ಸಲ ಕೆರೆ ಭರ್ತಿಯಾಗಿರುವುದು ನೋಡುಗರನ್ನು ಸೆಳೆಯುತ್ತಿದೆ. ಇದರಲ್ಲಿ ಒಟ್ಟು 32 ಪ್ರಭೇದದ ಪಕ್ಷಿಗಳು ವಲಸೆ ಬಂದು ಸಂತಾನೋತ್ಪತ್ತಿಯಲ್ಲಿ ತೊಡಗಿವೆ. ಆದರೆ, ಈ ಸಲ ಕೆರೆ ತುಂಬಾ ತಾವರೆ ಬಳ್ಳಿ ವ್ಯಾಪಿಸಿ ಪಕ್ಷಿಗಳಿಗೆ ಸ್ಥಳಾವಕಾಶ ಇಲ್ಲದಂತಾಗಿದೆ.

ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ‘ವನೋತ್ಸವ’ ಆಚರಣೆಗೆ ಸಿದ್ಧತೆ ನಡೆದಿದೆ. ಆದರೆ, ಉತ್ಸವಕ್ಕಾಗಿ ಜಿಲ್ಲಾಡಳಿತ ಹೂಡಿರುವುದು ಶೂನ್ಯ ಬಂಡವಾಳ. ಉತ್ಸವದ ಅಂಗವಾಗಿ ಮಾ ರಾಟ ಮಳಿಗೆಗಳನ್ನು ಆಹ್ವಾನಿಸ ಲಾಗಿದ್ದು, ಅವುಗಳಿಂದ ಬರುವ ಬಾಡಿಗೆ ಹಣವನ್ನು ಉತ್ಸವ ಆಚರಣೆಯ ಖರ್ಚುವೆಚ್ಚಕ್ಕೆ ವಿನಿಯೋಗಿಸ ಲಾಗುವುದು.

‘ಕಲಬುರ್ಗಿಯಿಂದ ಸುಗಮ ಸಂಗೀತಗಾರರನ್ನು, ಚಿತ್ರದುರ್ಗದಿಂದ ಗೊರವರ ಕುಣಿತ ಕಲಾವಿದರನ್ನು, ದಾವಣಗೆರೆಯಿಂದ ನಗಾರಿ ಕಲಾವಿದರನ್ನು ಆಹ್ವಾನಿಸಲಾಗಿದೆ. ಸಾಹಿತಿ, ಹಿರಿ–ಕಿರಿಯ ಕಲಾವಿದರನ್ನು ಮತ್ತು ಜಾನಪದ ವಿದ್ವಾಂಸರನ್ನು ಆಹ್ವಾನಿಸಿ ಸಾಂಸ್ಕೃತಿಕ ಲೋಕ ಸೃಷ್ಟಿಯಲು ಸಿದ್ಧತೆ ನಡೆದಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮೇಘನಾಥ ಬೆಳ್ಳಿ.

‘ಲುಂಬಿನಿ ಉದ್ಯಾನ ಈಚೆಗೆ ನಿರ್ವಹಣೆ ಕೊರತೆಯಿಂದ ಸೊರಗಿದೆ. ಕೆರೆ ಸ್ವಚ್ಛತೆ ಕಾಪಾಡಬೇಕಿದೆ. ಮಕ್ಕಳ ಆಟೋಪಕರಣ ದುರಸ್ತಿಯಾಗಬೇಕಿದೆ. ಈ ಎಲ್ಲ ಮೂಲ ಸೌಕರ್ಯ ಕಲ್ಪಿಸಿ ‘ವನ ಉತ್ಸವ’ ಆಯೋಜಿಸಿದ್ದರೆ ಸೂಕ್ತವಾಗಿರುತ್ತಿತ್ತು’ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

‘ಕೆರೆ ಏರಿ ಮೇಲೆ ಜಾಲಿ ದಟ್ಟ ವಾಗಿ ಬೆಳೆದಿದೆ. ಕೆರೆ ಹೂಳಿನಿಂದ ತುಂಬಿದೆ. ಎರಡು ವರ್ಷಗಳ ಹಿಂದೆ ಕಣ್ಸೆಳೆಯುತ್ತಿದ್ದ ಕೆರೆ ಕಳಾಹೀನ ವಾಗಿದೆ. ಜಿಲ್ಲಾಡಳಿತ ಐಲ್ಯಾಂಡ್‌ನಲ್ಲಿ ಕ್ಯಾಂಟೀನ್‌ ತೆರೆಯಬೇಕು’ ಎಂದು ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಘಟಕ ಅಧ್ಯಕ್ಷ ಉಮೇಶ್ ಮುದ್ನಾಳ ಒತ್ತಾಯಿಸಿದ್ದಾರೆ.

* * 

ಲುಂಬಿನಿ ಉದ್ಯಾನದ ಜತೆಗೆ ನಗರದಲ್ಲಿರುವ ಉದ್ಯಾನಗಳ ಪುನಶ್ಚೇತನಕ್ಕೆ ಜಿಲ್ಲಾಡಳಿತ ದಿಟ್ಟ ನಿರ್ಧಾರ ತೆಗೆದುಕೊಂಡರೆ ನಗರದ ಸೌಂದರ್ಯ ಇನ್ನಷ್ಟು ಹೆಚ್ಚಾಗಲಿದೆ.. ಸಿದ್ದಪ್ಪ ಎಸ್.ಹೊಟ್ಟಿ ‌
ಅಧ್ಯಕ್ಷ, ಜಿಲ್ಲಾ ಕಸಾಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT