ಬುಧವಾರ, ಏಪ್ರಿಲ್ 1, 2020
19 °C
ಮೌನ ಮುರಿದ ಕುಟುಂಬ

ಸೊಹ್ರಾಬುದ್ದೀನ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ನಿಗೂಢ ಸಾವಿನ ಹಿಂದಿವೆ ಹಲವು ಪ್ರಶ್ನೆಗಳು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸೊಹ್ರಾಬುದ್ದೀನ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ನಿಗೂಢ ಸಾವಿನ ಹಿಂದಿವೆ ಹಲವು ಪ್ರಶ್ನೆಗಳು

ಮುಂಬೈ: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಬ್ರಿಜ್‌ಗೋಪಾಲ್ ಹರ್‌ಕಿಶನ್ ಲೋಯಾ 2014ರಲ್ಲಿ ನಾಗಪುರದಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಅವರ ಕುಟುಂಬ ಸದಸ್ಯರು ಮೌನ ಮುರಿದಿದ್ದು ಲೋಯಾ ಸಾವಿನ ಬಗೆಗೆ ಹಲವು ಪ್ರಶ್ನೆಗಳು ಎದ್ದಿವೆ ಎಂದು ದಿ ಕಾರವಾನ್ ವರದಿ ಮಾಡಿದೆ.

2005ರಲ್ಲಿ ನಡೆದ ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿರಾಂ ಪ್ರಜಾಪತಿ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಗುಜರಾತ್‌ನ ಅಂದಿನ ಗೃಹ ಸಚಿವರಾಗಿದ್ದ ಅಮಿತ್ ಷಾ ವಿರುದ್ಧ ಸಿಬಿಐ ದೂರು ದಾಖಲಿಸಿತ್ತು. ಲೋಯಾ ಅವರ ಸಾವಿನ ವೇಳೆಗೆ ಅಮಿತ್‌ ಷಾ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷರಾಗಿದ್ದರು. ಷಾ ವಿರುದ್ಧದ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದ್ದ ಸಿಬಿಐ ವಿಶೇಷ ನ್ಯಾಯಾಲಯವು 2014ರ ಡಿಸೆಂಬರ್ 30ರಂದು ಷಾ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.

‘ಸೊಹ್ರಾಬುದ್ದೀನ್ ಎನ್‌ಕೌಂಟರ್‌ ಪ್ರಕರಣದ ವಿಚಾರಣೆಯನ್ನು ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಬೇಕು. ಒಬ್ಬರೇ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಬೇಕು’ ಎಂದು ಸುಪ್ರೀಂಕೋರ್ಟ್‌ 2012ರಲ್ಲಿ ಆದೇಶಿಸಿತ್ತು. ಆದರೆ, ಪ್ರಕರಣದ ಮೊದಲ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ.ಟಿ. ಉತ್ಪತ್‌ 2014ರ ಮಧ್ಯದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ವರ್ಗಾವಣೆಯಾಗಿದ್ದರು. ಅವರ ಸ್ಥಾನಕ್ಕೆ ಲೋಯಾ ಬಂದಿದ್ದರು.

2014ರ ಜೂನ್ 6ರಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕೆಂಬ ಅಮಿತ್‌ ಷಾ ಮನವಿಯನ್ನು ನ್ಯಾಯಾಧೀಶ ಜೆ.ಟಿ. ಉತ್ಪತ್‌ ತಳ್ಳಿಹಾಕಿದ್ದರು. ನಂತರದ ವಿಚಾರಣೆ ನಡೆದ ಜೂನ್‌ 20ರಂದು ಅಮಿತ್ ಷಾ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ನ್ಯಾಯಾಧೀಶ ಜೆ.ಟಿ. ಉತ್ಪತ್‌ ಅವರು ಮುಂದಿನ ವಿಚಾರಣೆಯನ್ನು ಜೂನ್ 26ಕ್ಕೆ ಮುಂದೂಡಿದ್ದರು. ಆದರೆ, ಉತ್ಪತ್‌ ಜೂನ್‌ 25ರಂದು ವಿಶೇಷ ನ್ಯಾಯಾಲಯದಿಂದ ವರ್ಗಾವಣೆಯಾಗಿದ್ದರು. 2014ರ ಅಕ್ಟೋಬರ್‌ 31ರಂದು ವಿಚಾರಣೆ ಕೈಗೆತ್ತಿಕೊಂಡಿದ್ದ ಲೋಯಾ ಅವರು ಅಮಿತ್‌ ಷಾ ಹಾಜರಾತಿಗೆ ವಿನಾಯಿತಿ ನೀಡಲು ಸಮ್ಮತಿಸಿದ್ದರು. ಆದರೆ, ಅದೇ ದಿನ ಷಾ ಮುಂಬೈನಲ್ಲಿದ್ದರೂ ಯಾಕೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಎಂದು ಲೋಯಾ ಪ್ರಶ್ನಿಸಿದ್ದರು. ಮುಂದಿನ ವಿಚಾರಣೆಯನ್ನು ಲೋಯಾ ಡಿಸೆಂಬರ್ 15ಕ್ಕೆ ಮುಂದೂಡಿದ್ದರು.

ಲೋಯಾ ಮೃತಪಟ್ಟಿದ್ದಾರೆ ಎಂಬ ಮಾಹಿತಿ 2014ರ ಡಿಸೆಂಬರ್‌ 1ರಂದು ಅವರ ಕುಟುಂಬ ಸದಸ್ಯರಿಗೆ ಸಿಕ್ಕಿತ್ತು. ಲೋಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ಆಗ ವರದಿ ಮಾಡಿದ್ದವು. ಮರಣೋತ್ತರ ಪರೀಕ್ಷೆಯ ವರದಿಯೂ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿತ್ತು. ಆ ಬಳಿಕ ಈ ಸಾವಿನ ಬಗ್ಗೆ ಹೆಚ್ಚು ಚರ್ಚೆ ನಡೆಯಲಿಲ್ಲ. 2016ರ ನವೆಂಬರ್‌ವರೆಗೂ ಅವರ ಕುಟುಂಬ ಸದಸ್ಯರು ಕೂಡಾ ಲೋಯಾ ಸಾವಿನ ಬಗ್ಗೆ ಇದ್ದ ಅನುಮಾನಗಳ ಬಗ್ಗೆ ಮೌನವಾಗಿಯೇ ಇದ್ದರು.

ಸಹೋದ್ಯೋಗಿಯೊಬ್ಬರ ಮಗಳ ಮದುವೆಗೆ ಹೋಗಿದ್ದ ಲೋಯಾ 2014ರ ನವೆಂಬರ್ 30ರ ರಾತ್ರಿ 11 ಗಂಟೆಗೆ ಮನೆಗೆ ಕರೆ ಮಾಡಿ ಅವರ ಪತ್ನಿ ಶರ್ಮಿಳಾ ಅವರೊಂದಿಗೆ ಮಾತನಾಡಿದ್ದರು. ನಾಗಪುರದ ರವಿ ಭವನ್ ಗಣ್ಯರ ಸರ್ಕಾರಿ ಅತಿಥಿ ಗೃಹದಲ್ಲಿ ತಮ್ಮ ಸಹೋದ್ಯೋಗಿಗಳ ಜತೆಗೆ ತಂಗಿರುವುದಾಗಿ ಅವರು ತಿಳಿಸಿದ್ದರು. ಅದೇ ಅವರು ಮನೆಗೆ ಮಾಡಿದ್ದ ಕೊನೆಯ ಕರೆಯಾಗಿತ್ತು. ಮರುದಿನ ಬೆಳಿಗ್ಗೆ ಲೋಯಾ ಅವರ ಸಾವಿನ ಸುದ್ದಿ ಬಂದಿತ್ತು.

ಆರ್‌ಎಸ್‌ಎಸ್‌ ಕಾರ್ಯಕರ್ತ ಈಶ್ವರ್‌ ಬಹೇತಿ ಎಂಬಾತ ಲೋಯಾ ಅವರ ಸಾವಿನ ಸುದ್ದಿಯನ್ನು ಅವರ ತಂದೆಯ ಮನೆಗೆ ಕರೆ ಮಾಡಿ ತಿಳಿಸಿದ್ದ. ಶವವನ್ನು ಗಾತೆಗಾವ್‌ಗೆ ತಲುಪಿಸುವ ವ್ಯವಸ್ಥೆ ಮಾಡುವುದಾಗಿಯೂ ಆತ ತಿಳಿಸಿದ್ದ. ಅಲ್ಲದೆ, ಲೋಯಾ ಸಾವಿನ ಕೆಲ ದಿನಗಳ ಬಳಿಕ ಅವರ ಮೊಬೈಲ್ ಅನ್ನು ಲೋಯಾ ಅವರ ಕುಟುಂಬ ಸದಸ್ಯರಿಗೆ ತಲುಪಿಸಿದ್ದ. ಆದರೆ, ಮೊಬೈಲ್‌ನಲ್ಲಿದ್ದ ಎಲ್ಲಾ ಮಾಹಿತಿಗಳೂ ಅಳಿಸಿಹೋಗಿದ್ದವು ಎಂದು ವರದಿ ಹೇಳಿದೆ.

‘ಲೋಯಾ ಅವರ ಆರೋಗ್ಯ ಚೆನ್ನಾಗಿತ್ತು. ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರಲಿಲ್ಲ’ ಎಂದು ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ಕುಟುಂಬದ ಆಪ್ತರನ್ನು ಉಲ್ಲೇಖಿಸಿ ವರದಿ ಮಾಡಿತ್ತು. ಈ ಅಂಶವನ್ನು ಮುಂದಿಟ್ಟುಕೊಂಡು ಲೋಯಾ ಅವರ ಸಾವಿನ ಹಿಂದಿನ ನಿಗೂಢ ಬಯಲಾಗಲು ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿ ತೃಣಮೂಲ ಕಾಂಗ್ರೆಸ್‌ ಸಂಸದರು ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಸತ್‌ನ ಹೊರಗೆ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಈ ಪ್ರಕರಣ ಹೆಚ್ಚು ಸುದ್ದಿಯಾಗಲಿಲ್ಲ.

‘ಲೋಯಾ ಸಾವಿನ ಹಿಂದಿನ ನಿಗೂಢ ಬಯಲಾಗಲು ತನಿಖಾ ಆಯೋಗ ರಚನೆಯಾಗಬೇಕು’ ಎಂದು ಲೋಯಾ ಕುಟುಂಬ ಸದಸ್ಯರು ಆಗ್ರಹಿಸಿದ್ದರು. ಆದರೆ, ಆ ಸುದ್ದಿ ಸದ್ದು ಮಾಡಲೇ ಇಲ್ಲ. ‘ಲೋಯಾ ಸಾವಿನ ಹಿಂದೆ ಹಲವು ಅನುಮಾನಗಳಿವೆ. ಲೋಯಾ ಅವರನ್ನು ಮೊದಲು ಆಸ್ಪತ್ರೆಗೆ ದಾಖಲಿಸಿದ ಸಮಯ, ಅವರನ್ನು ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋದ ಸಮಯ ಹಾಗೂ ಅವರ ಸಾವನ್ನು ವೈದ್ಯರು ಖಚಿತ ಪಡಿಸಿದ ಸಮಯಗಳಲ್ಲಿ ಗೊಂದಲ ಇದೆ. ಲೋಯಾ ಅವರು ರವಿ ಭವನ್‌ನಲ್ಲಿ ತಂಗಿದ್ದ ದಿನದಿಂದ ಮುಂದಿನ ಕೆಲವೇ ದಿನಗಳಲ್ಲಿ ನಾಗಪುರದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುವುದರಲ್ಲಿತ್ತು. ಲೋಯಾ ಅವರಿಗೆ ಎದೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಗಣ್ಯರು ಉಳಿದುಕೊಳ್ಳುವ ಸರ್ಕಾರಿ ಅತಿಥಿ ಗೃಹವಾದ ರವಿ ಭವನ್‌ನಲ್ಲಿ ಕಾರುಗಳು ಇರಲಿಲ್ಲವೇ? ನಡುರಾತ್ರಿಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಟೊ ಎಲ್ಲಿ ಸಿಕ್ಕಿತು? ಹಗಲಿನಲ್ಲೇ ಈ ಪ್ರದೇಶದಲ್ಲಿ ಆಟೊಗಳ ಓಡಾಟ ಕಡಿಮೆ. ಹೀಗಿರುವಾಗ ನಡುರಾತ್ರಿಯಲ್ಲಿ ಲೋಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಟೊ ಹೇಗೆ ಸಿಕ್ಕಿತು?’ ಎಂಬ ಪ್ರಶ್ನೆಗಳನ್ನು ‘ದಿ ಕಾರವಾನ್’ ವರದಿ ಎತ್ತಿದೆ.

‘ನಮ್ಮ ಪೋಷಕರು 85 ವರ್ಷ ಬದುಕಿದ್ದಾರೆ. ಅವರು ಈಗಲೂ ಆರೋಗ್ಯವಾಗಿದ್ದಾರೆ. ನಮ್ಮ ಕುಟುಂಬದಲ್ಲಿ ಯಾರಿಗೂ ಹೃದಯ ಸಂಬಂಧಿ ಕಾಯಿಲೆಗಳಿಲ್ಲ. 48 ವರ್ಷದ ನನ್ನ ಸೋದರ ಲೋಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದರೆ ನಂಬುವುದು ಹೇಗೆ? ಅಲ್ಲದೆ, ಲೋಯಾ ಸಣ್ಣ ಆರೋಗ್ಯ ಸಮಸ್ಯೆ ಇದ್ದರೂ ನನಗೆ ಕರೆ ಮಾಡಿ ತಿಳಿಸುತ್ತಿದ್ದರು’ ಎಂದು ವೈದ್ಯರೂ ಆಗಿರುವ ಲೋಯಾ ಸೋದರಿ ಬಿಯಾನಿ ಹೇಳಿದ್ದಾರೆ.

‘ಶವವನ್ನು ಗಾತೆಗಾವ್‌ಗೆ ತಂದಾಗ ಶವದೊಂದಿಗೆ ಲೋಯಾ ಸಹೋದ್ಯೋಗಿಗಳು ಯಾರೂ ಬಂದಿರಲಿಲ್ಲ. ಶವದೊಂದಿಗೆ ಬಂದಿದ್ದು ವಾಹನದ ಚಾಲಕ ಮಾತ್ರ. ಶವದ ಕುತ್ತಿಗೆ ಭಾಗದಲ್ಲಿ ಗಾಯದ ಗುರುತು ಹಾಗೂ ರಕ್ತದ ಕಲೆಗಳಿದ್ದವು. ಶವ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಈ ರೀತಿಯ ಗುರುತುಗಳು ಆಗುವುದಿಲ್ಲ ಎಂಬುದು ವೈದ್ಯೆಯಾಗಿ ನನಗೆ ಗೊತ್ತಿದೆ. ಅಲ್ಲದೆ ಮರಣೋತ್ತರ ಪರೀಕ್ಷೆಯ ವರದಿಯನ್ನೂ ನಮಗೆ ನೀಡಿಲ್ಲ’ ಎಂದು ಬಿಯಾನಿ ತಿಳಿಸಿದ್ದಾರೆ.

‘ಶವವನ್ನು ಹತ್ತಿರದಿಂದ ನೋಡಿದರೆ ಇದು ಹೃದಯಾಘಾತದಿಂದ ಆದ ಸಾವಲ್ಲ ಎಂಬುದು ಗೊತ್ತಾಗುತ್ತಿತ್ತು. ನಾವು ಆ ಸಂದರ್ಭದಲ್ಲಿ ತನಿಖಾ ಆಯೋಗ ರಚಿಸುವಂತೆ ಒತ್ತಾಯಿಸಿದ್ದೆವು. ಆದರೆ, ನಮ್ಮ ಬೇಡಿಕೆಗೆ ಬೆಲೆಯೇ ಸಿಗಲಿಲ್ಲ. ಈಗಲದರೂ ಈ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರ ಆದೇಶಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಸೊಹ್ರಾಬುದ್ದೀನ್ ಪ್ರಕರಣ

ಸೊಹ್ರಾಬುದ್ದೀನ್‌ ಭೂಗತ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಜತೆಗೆ ಲಷ್ಕರ್–ಎ–ತಯಬಾ (ಎಲ್‌ಇಟಿ) ಜತೆ ಸಂಪರ್ಕ ಹೊಂದಿದ್ದ ಎಂದು ಗುಜರಾತ್‌ ಪೊಲೀಸರು ಆಪಾದಿಸಿದ್ದರು. ಮಹಾರಾಷ್ಟ್ರದ ಸಾಂಗ್ಲಿಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಸೊಹ್ರಾಬುದ್ದೀನ್‌ ಹಾಗೂ ಆತನ ಪತ್ನಿ  ಕೌಸರ್ ಬಿಯನ್ನು ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ ಅಪಹರಿಸಿದ್ದರು. 2005ರ ನವೆಂಬರ್ 26ರಂದು ಗಾಂಧಿನಗರದ ಬಳಿ ಆತನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಯಿತು.

ನಕಲಿ ಎನ್‌ಕೌಂಟರ್‌ಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಸೊಹ್ರಾಬುದ್ದೀನ್‌ ಬಂಟ ತುಳಸಿರಾಮ್‌ ಪ್ರಜಾಪತಿಯನ್ನು 2006ರ ಡಿಸೆಂಬರ್‌ನಲ್ಲಿ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಛಪ್ರಿ ಗ್ರಾಮದಲ್ಲಿ ಪೊಲೀಸರು ನಕಲಿ ಎನ್‌ಕೌಂಟರ್‌ ನಡೆಸಿ ಹತ್ಯೆ ಮಾಡಿದ್ದರು.

ಕೆಲ ಪೊಲೀಸ್‌ ಅಧಿಕಾರಿಗಳ ಜತೆಗೂಡಿ ಅಮಿತ್ ಷಾ ಅವರು ನಕಲಿ ಎನ್‌ಕೌಂಟರ್‌ ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಷಾ ಅವರನ್ನು 2010ರಲ್ಲಿ ಸಿಬಿಐ ಬಂಧಿಸಿತ್ತು. ಗುಜರಾತ್‌ಗೆ ಕಾಲಿಡಬಾರದು ಎನ್ನುವ ಷರತ್ತಿನೊಂದಿಗೆ ಮೂರು ತಿಂಗಳ ಬಳಿಕ ಸುಪ್ರೀಂಕೋರ್ಟ್‌ ಅವರಿಗೆ ಜಾಮೀನು ನೀಡಿತ್ತು. ಸಿಬಿಐ ಮನವಿ ಮೇರೆಗೆ 2012ರ ಸೆಪ್ಟೆಂಬರ್‌ನಲ್ಲಿ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಲಾಗಿತ್ತು.

ಸೊಹ್ರಾಬುದ್ದೀನ್‌ ಪ್ರಕರಣ: ಘಟನಾವಳಿ

2005 ನವೆಂಬರ್‌ 22–23: ಹೈದರಾಬಾದ್‌ನಿಂದ ಅಹಮದಾಬಾದ್‌ಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸೊಹ್ರಾಬುದ್ದೀನ್‌, ಪತ್ನಿ ಕೌಸರ್‌ ಬಿ ಮತ್ತು ಅವರೊಂದಿಗಿದ್ದ ತುಳಸೀರಾಮ್‌ ಪ್ರಜಾಪತಿ ಅವರನ್ನು ಗುಜರಾತ್‌ ಪೊಲೀಸರು  ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಶಕ್ಕೆ ತೆಗೆದುಕೊಂಡದ್ದಾಗಿ ಆರೋಪ

ನ. 26: ನಕಲಿ ಎನ್‌ಕೌಂಟರ್‌ನಲ್ಲಿ ಸೊಹ್ರಾಬುದ್ದೀನ್‌ ಹತ್ಯೆ

ನ. 28: ಕೌಸರ್‌ ಬಿ ಹತ್ಯೆ

2006, ಡಿಸೆಂಬರ್‌ 28: ಗುಜರಾತಿನ ಬನಾಸ್‌ಕಾಂಟಾ ಜಿಲ್ಲೆಯ ಚಾಪ್ರಿ ಗ್ರಾಮದಲ್ಲಿ ಪ್ರಜಾಪತಿ ಹತ್ಯೆ

2010, ಜನವರಿ: 6: ಪ್ರಕರಣವನ್ನು ಸಿಬಿಐಗೆ ವಹಿಸಿದ ಸುಪ್ರೀಂಕೋರ್ಟ್‌

ಜುಲೈ 23: ಅಮಿತ್ ಷಾ ವಿರುದ್ಧ ಸಿಬಿಐ ಆರೋಪಪಟ್ಟಿ

ಜು. 25: ಸಿಬಿಐನಿಂದ ಅಮಿತ್ ಷಾ ಬಂಧನ

ಅಕ್ಟೋಬರ್‌ 29: ಅಮಿತ್ ಷಾ ಅವರಿಗೆ ಗುಜರಾತ್‌ ಹೈಕೋರ್ಟ್‌ನಿಂದ ಜಾಮೀನು

2012, ಸೆಪ್ಟೆಂಬರ್‌ 27: ಪ್ರಕರಣದ ವಿಚಾರಣೆಯನ್ನು ಗುಜರಾತ್‌ನಿಂದ ಮುಂಬೈಗೆ ವರ್ಗಾಯಿಸಿದ ಸುಪ್ರೀಂಕೋರ್ಟ್‌

2013, ಏಪ್ರಿಲ್‌ 8: ಪ್ರಜಾಪತಿ ಪ್ರಕರಣವನ್ನು ಸೊಹ್ರಾಬುದ್ದೀನ್‌ ಪ್ರಕರಣದ ಜತೆ ಸೇರಿಸಿದ ಸುಪ್ರೀಂಕೋರ್ಟ್‌

2014, ಡಿಸೆಂಬರ್‌ 30: ಷಾ ದೋಷಮುಕ್ತ ಎಂದು ತೀರ್ಪಿತ್ತ  ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ

2016 ಜುಲೈ: ವಿಚಾರಣಾ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ಬಾಂಬೆ ಹೈಕೋರ್ಟ್‌ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ

ಆಗಸ್ಟ್‌ 1: ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)