7

ತಾರಸಿ ಮೇಲೆ ಭತ್ತದ ಪೈರು

Published:
Updated:
ತಾರಸಿ ಮೇಲೆ ಭತ್ತದ ಪೈರು

ಒಂದೆಡೆ ತರಕಾರಿ ಸಾಲು, ಇನ್ನೊಂದೆಡೆ ಸೊಂಪಾಗಿ ಬೆಳೆದು ನಿಂತಿರುವ ಭತ್ತದ ಪೈರು. ಯಾವುದೇ ಕೃಷಿ ತೋಟಕ್ಕೂ ಕಡಿಮೆ ಇಲ್ಲದಂತೆ ಬೆಳೆದು ನಿಂತಿರುವ ಈ ಕೃಷಿ ತೋಟ ಇರೋದು ಮನೆಯ ತಾರಸಿಯಲ್ಲಿ. ಮಂಗಳೂರು ನಗರದ ಮರೋಳಿಯಲ್ಲಿ ವಾಸವಿರುವ ಕೃಷ್ಣಪ್ಪ ಗೌಡ ಪಡ್ಡಂಬೈಲು ಅವರ ಮನೆಯದು. ಕಳೆದ 17 ವರ್ಷಗಳಿಂದ ತಾರಸಿ ಕೃಷಿಯನ್ನು ಮಾಡಿಕೊಂಡು ಬಂದಿದ್ದಾರೆ.

ಮೂಲತಃ ಸುಳ್ಯ ತಾಲ್ಲೂಕಿನ ಅಜ್ಜಾವರದವರಾದ ಇವರು ಬಾಲ್ಯದಿಂದಲೂ ಕೃಷಿ ಕ್ಷೇತ್ರದಲ್ಲಿ ಆಸಕ್ತಿವುಳ್ಳವರು. ಆದರೆ ಮಂಗಳೂರಿಗೆ ಬಂದು ನೆಲೆಸಿದ ಮೇಲೆ ಇವರಿಗೆ ಅತ್ತ ಕೃಷಿ ಜೀವನವೂ ಇಲ್ಲ, ಇತ್ತ ತೋಟಗಾರಿಕೆ ನಡೆಸಲು ಭೂಮಿಯೂ ಇದ್ದಿರಲಿಲ್ಲ. ಸರಕಾರಿ ಉದ್ಯೋಗಿಯಾಗಿದ್ದರೂ ತಮ್ಮ ಕೃಷಿ ಮೇಲಿನ ಆಸಕ್ತಿಯನ್ನು ಕಡಿಮೆ ಮಾಡಿರಲಿಲ್ಲ. ಮರೋಳಿಯ ತಮ್ಮ ಮನೆ ಮುಂಭಾಗದಲ್ಲಿಯೇ ಸಣ್ಣ ಜಾಗದಲ್ಲಿ ತರಕಾರಿ ಬೆಳೆಗಳನ್ನು ಬೆಳೆಯಲು ಆರಂಭಿಸಿದರು. ಆದರೆ, ಸ್ಥಳಾವಕಾಶದ ಕೊರತೆ ಇದ್ದದ್ದನ್ನು ಮನಗಂಡ ಇವರು ತಾರಸಿ ಮೇಲೆ ಕೊಂಡುಹೋಗಿ ಗಿಡಗಳನ್ನು ಇಟ್ಟು ಬೆಳೆಯಲು ನಿರ್ಧರಿಸಿ ಪ್ರಯೋಗ ನಡೆಸಿದರು. ಹಾಗೇ ಪ್ರಯೋಗ ನಡೆಸಿ ಯಶಸ್ಸು ಕಂಡ ಅವರು ತಾರಸಿ ಕೃಷಿಯನ್ನು ಮಾಡಿಕೊಂಡು ಬಂದಿದ್ದಾರೆ.

ತಾರಸಿಯಲ್ಲಿ ತರಕಾರಿ ಬೆಳೆಯುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದ್ದರೂ ಮಹಡಿ ಮೇಲೆ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆ. 15 ವರ್ಷಗಳಿಂದ ಭತ್ತವನ್ನು ಬೆಳೆಯುತ್ತಾ ಬಂದಿರುವ ಅವರು, ತಾರಸಿಯ 1,100 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಭತ್ತದ ಬೆಳೆಗಾಗಿ ಅರ್ಧದಷ್ಟು ಭಾಗವನ್ನು ಮೀಸಲಿಟ್ಟಿದ್ದಾರೆ. ವರ್ಷವಿಡೀ ಅವರ ಮನೆಯ ತಾರಸಿ ಅನ್ನೋದು ಅಕ್ಷರಶಃ ಫಲಭರಿತ ಕೃಷಿತೋಟದಂತೆ ಇರುತ್ತದೆ. ಮಳೆಗಾಲ ಆರಂಭ ವಾಗುತ್ತಿದ್ದಂತೆಯೇ ಕೃಷ್ಣಪ್ಪ ಗೌಡರು ತಾರಸಿಯಲ್ಲಿ ಭತ್ತ ಬೆಳೆಯಲು ಆರಂಭಿಸುತ್ತಾರೆ. ಗೌಡರು ಪ್ರತಿವರ್ಷ ಸರಾಸರಿ 50 ಕೆ.ಜಿ.ಯಷ್ಟು ಭತ್ತವನ್ನು ತಮ್ಮ ತಾರಸಿ ಗದ್ದೆಯಿಂದ ಪಡೆಯುತ್ತಿರುವುದು ವಿಶೇಷ. ಎಲ್ಲಾ ಕಾರ್ಯಗಳಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳ ಸಹಾಯ ಪಡೆಯುತ್ತಿದ್ದಾರೆಯೇ ಹೊರತು ಇನ್ಯಾವುದೇ ಕೂಲಿಯಾಳುಗಳನ್ನು ಇಟ್ಟುಕೊಂಡಿಲ್ಲ. ಕೆಲಸಕ್ಕೆ ತೆರಳುವುದಕ್ಕೂ ಮುನ್ನ ಬೆಳಿಗ್ಗೆ ಬೇಗನೇ ಎದ್ದವರು ನೇರ ತಮ್ಮ ತಾರಸಿ ತೋಟಕ್ಕೆ ಹೋಗಿ ಪರಿಶೀಲನೆ ನಡೆಸಿ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುತ್ತಾರೆ.

‘ಸರ್ಕಾರ ತಾರಸಿ ಕೃಷಿ ಮಾಡುವವರಿಗೆ ಅಗತ್ಯ ಪ್ರೋತ್ಸಾಹ ನೀಡಿದ್ದಲ್ಲಿ ತಾರಸಿ ಕೃಷಿ ವಿಧಾನ ಉಳಿಯಬಹುದು’ ಎಂದು ಹೇಳುವ ಕೃಷ್ಣಪ್ಪ ಗೌಡರು, ಇದುವರೆಗೂ ಸರಕಾರದ ಯಾವುದೇ ಫಲಾಪೇಕ್ಷೆಯನ್ನು ಬಯಸಿದವರಲ್ಲ. ಆದರೂ ಕೃಷಿಕರಿಗೆ ಅನುದಾನ ನೀಡಿದರೆ ಮಾತ್ರ ಕೃಷಿ ಪದ್ಧತಿ ಉಳಿಯಬಹುದು ಎಂದು ನಂಬಿದವರು.

ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ಗೌಡರು ತಮ್ಮ ತಾರಸಿ ತೋಟದ ಕೃಷಿಗಾಗಿ ಸುಳ್ಯ ಹಾಗೂ ಇನ್ನಿತರ ಪ್ರದೇಶಗಳಿಗೆ ತೆರಳಿ ಖುದ್ದಾಗಿ ಸಸಿಗಳನ್ನು ಖರೀದಿಸಿ ತರುತ್ತಾರೆ. ಸದ್ಯ ಇವರ ತಾರಸಿಯಲ್ಲಿ ಅಲಸಂದೆ, ಬೆಂಡೆ, ಮೆಣಸಿನಕಾಯಿ, ಕುಂಬಳಕಾಯಿ, ಟೊಮೆಟೊ, ಹೀರೇಕಾಯಿ, ಅರಿಶಿಣ, ಹಾಗಲಕಾಯಿ, ಪಡುವಲಕಾಯಿ, ತೊಂಡೆ ಬೆಳೆಯಲಾಗುತ್ತಿದೆ. ಮಾವು, ಚುಕ್ಕು, ಗೇರುಬೀಜ, ಕಬ್ಬು, ಸಪೋಟಾ, ಚೆರಿ, ಅನಾನಸ್, ಹಲಸು ಮತ್ತು ಮರಗೆಣಸಿನ ಗಿಡಗಳಿವೆ. ಮಾವು, ಹಲಸಿನ ಮರಗಳನ್ನು ಕಸಿ ಮಾಡುವ ಮೂಲಕ ಅವುಗಳು ಹೆಚ್ಚು ಎತ್ತರಕ್ಕೆ ಬೆಳೆಯದಂತೆ ಗಮನಹರಿಸುತ್ತಾರೆ. ಕೇವಲ ಸಾವಯವ ಗೊಬ್ಬರ ಬಳಸಿಕೊಂಡು ಬಂದಿದ್ದಾರೆ.

ತಾರಸಿಯಲ್ಲಿ ಭತ್ತ ಬೆಳೆ ತುಸು ಕಷ್ಟ:

ಗೌಡರ ತಾರಸಿಯಲ್ಲಿ ಭತ್ತದ ಪೈರು ಸೊಂಪಾಗಿ ಬೆಳೆದು ನಿಂತಿದೆ. ಎರಡು ಅಂತಸ್ತಿನ ಮನೆ ಮೇಲಿನ ತಾರಸಿಯಲ್ಲಿ ಭತ್ತ ಕೃಷಿ ನಡೆಸೋದು ತುಸು ಕಷ್ಟ ಅಂತಾರೆ ಗೌಡರು. ಏಕೆಂದರೆ, ಎರಡನೇ ಅಂತಸ್ತಿನಲ್ಲಿರುವ ತಾರಸಿವರೆಗೆ ಮಣ್ಣು ಹೊತ್ತುಕೊಂಡು ಹೋಗಬೇಕು, ಅದನ್ನು ಪ್ಲಾಸ್ಟಿಕ್ ಗೋಣಿಚೀಲದ ಮೇಲೆ ಹರಡಿ ನಂತರ ಬಿತ್ತನೆ ಮಾಡಬೇಕು. ಚೌತಿ ಹಬ್ಬಕ್ಕೆ ಮುನ್ನವಾಗಿ ತೆನೆ ಮೊಳಕೆ ಬರುವಂತೆ ವರ್ಷದಲ್ಲಿ ಒಂದು ಬಾರಿ ಭತ್ತ ಬೆಳೆಯುತ್ತಾರೆ. ಕಳೆದ 15 ವರ್ಷಗಳಲ್ಲಿ ಇವರು ತಮ್ಮ ತಾರಸಿ ಹೊಲದಲ್ಲಿ ರಾಜಕನ್ಯೆ, ಭದ್ರ, ಗಂಗಾ ಕಾವೇರಿ, ಸಿಆರ್‍ಎಚ್ ನಂತಹ ಭತ್ತಗಳನ್ನು ಬಿತ್ತಿ ಫಸಲು ಪಡೆದಿದ್ದಾರೆ.

ಇನ್ನೊಂದು ವಿಶೇಷ ಅಂದರೆ, ಗೌಡರು ತಮ್ಮ ಮನೆಯ ದಿನದೂಟಕ್ಕೆ ಸಾಕಾಗುವಷ್ಟು ತರಕಾರಿಗಳನ್ನು ಬೆಳೆಸಿದ್ದಾರೆ. ಮಾತ್ರವಲ್ಲದೇ ಹೆಚ್ಚುವರಿ ಬೆಳೆದಿರುವ ತರಕಾರಿಯನ್ನು ಮಾರಾಟ ಮಾಡದೇ ಪರಿಚಯಸ್ಥರಿಗೋ, ನೆರೆಹೊರೆಯವರಿಗೋ ಅಥವಾ ಮನೆಗೆ ಬರುವ ಅತಿಥಿಗಳಿಗೋ ನೀಡುತ್ತಾರೆ. ಅಲ್ಲದೇ ತಾರಸಿ ಕೃಷಿ ವಿಧಾನದ ಬಗ್ಗೆ ಅದೆಷ್ಟೋ ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಗೌಡರು ಉಪನ್ಯಾಸ ನೀಡುತ್ತಾ ಬಂದಿದ್ದಾರೆ. ಇವರ ಈ ಸೇವೆಗಾಗಿ ಅದೆಷ್ಟೋ ಸಂಘಸಂಸ್ಥೆಗಳು ಇವರನ್ನು ಗೌರವಿಸಿದೆ. ಹಲವು ಪ್ರಶಸ್ತಿಗಳೂ ಇವರಿಗೆ ಸಂದಿವೆ.

57ರ ಹರೆಯದ ಕೃಷ್ಣಪ್ಪನವರಿಗೆ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಪ್ರೇರಣೆ ಸಿಕ್ಕಿದೆಯಂತೆ. ಸದಾ ಕಲಾಂ ಅವರ ನಡೆನುಡಿಗಳನ್ನು ಜ್ಞಾಪಿಸಿಕೊಳ್ಳುವ ಗೌಡರು, ಕಲಾಂ ಕನಸಿನ 2020ರ ಭಾರತ ನನಸಾಗಬೇಕಾದರೆ ಇಂದಿನ ಯುವಜನತೆ ಮೊಬೈಲ್, ಟಿ.ವಿ.ಗಳಿಂದ ಹೊರಬಂದು ಕೃಷಿ ಬಗ್ಗೆಯೂ ಗಮನಹರಿಸಬೇಕು ಅಂತಾರೆ. ಕರಾವಳಿ ಭಾಗದ ಮಂದಿ ನಗರೀಕರಣ ಬೆಳೆಯುತ್ತಿದ್ದಂತೆಯೇ ಕೃಷಿಯಿಂದ ವಿಮುಖರಾಗತೊಡಗಿದ್ದಾರೆ. ಮಾತ್ರವಲ್ಲದೇ ಒಂದಿಷ್ಟು ಮಂದಿ ಕೃಷಿಕರು ಹೊಲ, ಗದ್ದೆಗಳಿದ್ದರೂ ಉದಾಸೀನತೆ ತಾಳಿದ್ದರಿಂದ ಕೃಷಿಭೂಮಿ ಹಡೀಲು ಬೀಳುವಂತಾಗಿದೆ.

ಇವರೆಲ್ಲರ ಮಧ್ಯೆ ಗೌಡರು ಮಾದರಿ ಎನಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಮನೆಯ ಮೇಲಿನ ತಾರಸಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವುದರಿಂದ ಕರಾವಳಿಯ ತಾಪಮಾನದ ನಡುವೆಯೂ ಮನೆಯನ್ನು ತಂಪಾಗಿರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಪರ್ಕಕ್ಕೆ: 9342990975.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry