6

ಕೊರಡು ಅರಳಿ ಹೂವಾಗಿ...

Published:
Updated:
ಕೊರಡು ಅರಳಿ ಹೂವಾಗಿ...

ಮಟಾ–ತಡಸ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಸಾಲು ಸಾಲಾದ ಹಂಚಿನ ಮನೆಗಳ ನಡುವೆ ಅಲ್ಲಲ್ಲಿ ತಟ್ಟಿ ಗುಡಿಸಲುಗಳು ಇರುವ ಊರು ಶಿಂಗನಳ್ಳಿ. ಮನೆ ಎದುರಿನ ರಸ್ತೆಯಲ್ಲಿ ರೊಂಯ್ಯನೆ ಸಾಗುವ ಬಸ್‌ಗಳನ್ನು ನೋಡುವುದೇ ಇಲ್ಲಿನ ಮಕ್ಕಳಿಗೆ ಸಿಗುವ ದೊಡ್ಡ ಮನರಂಜನೆ. ಊರ ಬಾಗಿಲಲ್ಲಿರುವ ಎರಡು ಗೂಡಂಗಡಿಗಳೇ ದೊಡ್ಡವರಿಗೆ ಖುಷಿ ನೀಡುವ ತಾಣಗಳು. ಆಧುನಿಕತೆಯ ಸೋಂಕಿಲ್ಲದ ಅಪ್ಪಟ ಗ್ರಾಮ್ಯದ ಕಂಪು ಪಸರಿಸಿರುವ ಈ ಪುಟ್ಟ ಹಳ್ಳಿಯ ಒಂದು ತಿಂಗಳ ಆರ್ಥಿಕ ವಹಿವಾಟು ಸುಮಾರು ಒಂದೂವರೆ ಲಕ್ಷ ರೂಪಾಯಿ!

ಬಡತನದಿಂದ ಬಾಲ್ಯದಲ್ಲಿ ಶಾಲೆಯ ಮೆಟ್ಟಿಲು ಹತ್ತದೇ, ಬರೀ ಅನುಭವದ ಮೂಸೆಯಲ್ಲಿ ಪಳಗಿದ ಮಹಿಳೆಯರು ಈ ವಹಿವಾಟಿನ ರೂವಾರಿಗಳು. ಇಲ್ಲಿನ ಎಲ್ಲ ಮನೆಗಳಲ್ಲೂ ಮಹಿಳೆಯರೇ ತಿಜೋರಿಯ ಒಡತಿಯರು. ಅಡುಗೆಮನೆಯ ಬೇಳೆಕಾಳು, ಮಕ್ಕಳ ಬಟ್ಟೆಬರೆ, ಮನೆಯ ರಿಪೇರಿ, ಮದುವೆಯ ವೆಚ್ಚಗಳಿಗೆ ಪುರುಷರಿಗೆ ಸಾಥಿಯಾಗುವವರು ಅವರೇ. ಈ ಮಹಿಳೆಯರಲ್ಲಿ ಸ್ವಾಭಿಮಾನ, ಸ್ವಾವಲಂಬನೆಯ ಕಿಚ್ಚು ಹೊತ್ತಿಸಿದವರು ಊರಿನ ದಂಡನಾಯಕಿ ಶಾಂತವ್ವ ತಳವಾರ.

ತಣ್ಣಗೆ ನಡೆದ ಉದ್ಯೋಗ ಕ್ರಾಂತಿ; ಶಿಂಗನಳ್ಳಿಯಲ್ಲಿ ಗಾಡಿ ಇಳಿಯುತ್ತಿದ್ದಂತೆ ಎದುರಾದ ನೀಳ ಕಾಯದ, ಗಂಭೀರ ನೋಟದ ಮಹಿಳೆಯೊಬ್ಬರು, ‘ಯಾಕ್ ಬಂದೀರಿ ನೀವು, ಏನ್ ಬೇಕಿತ್ತು’ ಎಂದು ಕೇಳಿದರು. ‘ಊರ ಹೆಂಗಸರಿಗೆಲ್ಲ ಉದ್ಯೋಗದಾತೆಯಾಗಿರುವ ಶಾಂತವ್ವ ಅವರನ್ನು ಕಾಣಬೇಕಿತ್ತು’ ಎಂದೆ. ‘ನಾನೇ ಶಾಂತವ್ವ, ನನ್ ಬಗ್ಗೆ ಬರಿಬ್ಯಾಡ್ರಿ, ಬರ್ದು ಏನ್ ಆಗೋದ್ ಅದ, ನಾನೆಷ್ಟು ಕಷ್ಟಪಟ್ಟೀನಿ ನಂಗೇ ಗೊತ್ತು’ ಅನ್ನುತ್ತ ನಡೆದೇ ಬಿಟ್ಟರು ಮನೆಯೊಳಗೆ. ಒಂದು ಕ್ಷಣ ದಿಗಿಲಾದರೂ ಅಲ್ಲಿಯೇ ನಿಂತುಕೊಂಡೆ. ತುಸು ಹೊತ್ತಿಗೆ ಹೊರಬಂದು ಪಡಿಮಾಡಿನ ಕಟ್ಟೆಯ ಮೇಲೆ ಕುಳಿತು ಮಾತಿಗಿಳಿದರು ಹೂ ಮನದ ಶಾಂತವ್ವ.

‘ನಮ್ಮೂರಾಗ 250 ಮನಿ ಅದಾವ್ರಿ. ಅದ್ರಾಗ 200 ಮನಿ ಹೆಂಗಸ್ರು ಹಾರ ಮಾಡಿ ದಿನಕ್ಕ 100 ರಿಂದ 200 ರೂಪಾಯಿ ದುಡಿತಾರ್‍ರಿ. ಒಂದೊಂದ್ ಮನ್ಯಾಗ್ ಮೂರ್ನಾಲ್ಕು ಹೆಂಗಸ್ರು ಇದೇ ಕೆಲ್ಸ ಮಾಡ್ತಾರಿ. ಒಬ್ರ ಕೈಗೂ ಬಿಡುವಿಲ್ರಿ. ಮಕ್ಳು ಸಾಲಿಗ್ ಹೋಗಿ ಬಂದ್‌ ಮ್ಯಾಲ ಒಂದ್ ಹತ್ತ್ ಸರ ಮಾಡ್ತಾವ್ರಿ’ ಎನ್ನುತ್ತ ಕೈಯಲ್ಲಿ ಮೊಗ್ಗಿನ ಮಾಲೆಯ ಗೊಂಚಲನ್ನು ತೋರಿಸಿದರು.

ಮೂರು ದಶಕಗಳ ಹಿಂದೆ ಪಕ್ಕದ ಮನೆಯವರೊಬ್ಬರು ಗಂಧದ ಹಾರವನ್ನು ಮಾಡಿ ಶಿರಸಿ ಪೇಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದನ್ನು ಕಂಡು ಪ್ರೇರಿತರಾದ ಶಾಂತವ್ವ, ಗಂಧದ ಕಟ್ಟಿಗೆ ತಂದು –ಸಭೆ, ಸಮಾರಂಭಗಳಲ್ಲಿ ಅತಿಥಿಗಳಿಗೆ ಹಾಕುವ– ಹಾರ ತಯಾರಿಸಲು ಪ್ರಾರಂಭಿಸಿದರು. ಸರ್ಕಾರದ ನಿಯಮ, ವ್ಯವಸ್ಥೆಯ ಅರಿವಿಲ್ಲದೇ ತುತ್ತು ಅನ್ನಕ್ಕಾಗಿ ಹಾರ ಕಟ್ಟುತ್ತಿದ್ದ ಅವರಿಗೆ, ಒಮ್ಮೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ಪ್ರಶ್ನಿಸಿದಾಗಲೇ ಶ್ರೀಗಂಧದ ಟೊಂಗೆ ಕಡಿದರೆ ಅದು ಅಪರಾಧ ಎಂದು ಗೊತ್ತಾದದ್ದು.

ಗಂಧದ ಟೊಂಗೆಯನ್ನು ಕತ್ತರಿಸಿ ತರುವುದನ್ನು ಕೈಬಿಟ್ಟ ಮೇಲೆ ಹೆದ್ದೆ ಕಟ್ಟಿಗೆಯಿಂದ ಸುಂದರವಾದ ಹಾರಗಳು ರೂಪುಗೊಳ್ಳಲು ಆರಂಭಿಸಿದವು. ಇದಕ್ಕೂ ಮೊದಲಿನ ಕಂಟಕವೇ ಎದುರಾಯಿತು. ಈ ನಡುವೆ ಸಾಕಷ್ಟು ಸಂಕಟ, ಅಧಿಕಾರಿಗಳ ಕಿರುಕುಳ ಅನುಭವಿಸಿದ ಅವರು ಇದಕ್ಕೊಂದು ಪರ್ಯಾಯ ಹುಡುಕುವ ಹಟ ತೊಟ್ಟರು.

ಆಗ ಅವರಿಗೆ ಥಟ್ಟನೆ ಕಂಡಿದ್ದು ಮನೆ ಎದುರಿನ ಬೇಲಿಗೆ ಸೊಂಪಾಗಿ ಬೆಳೆದಿದ್ದ ಗೊಬ್ಬರ ಸೊಪ್ಪಿನ (gliricidia) ಮರಗಳು. ಗೊಬ್ಬರ ಮರದ ಕಟ್ಟಿಗೆಯಿಂದ ಹಾರ ಸಿದ್ಧಪಡಿಸುವ ಕಲೆ ಕರಗತ ಮಾಡಿಕೊಂಡ ಅವರು ಅಕ್ಕಪಕ್ಕದ ಮನೆಗಳ ಮಹಿಳೆಯರಿಗೆ ಕಲಿಸತೊಡಗಿದರು. ಅಮ್ಮ, ಅಕ್ಕಂದಿರು ಹಾರ ಮಾಡುವುದನ್ನು ನೋಡಿ ಮಕ್ಕಳು ಕಲಿತುಕೊಂಡರು. ಈಗ ಇಲ್ಲಿನ ಮಹಿಳೆಯರಿಗೆ ಬಿಡುವಿಲ್ಲದ ಕೆಲಸ, ನಸುಕಿನಲ್ಲಿ ಎದ್ದು ಮನೆವಾರ್ತೆ ಮುಗಿಸಿ ಕಾಲ ಮೇಲೆ ಬಿಳಿಯಾದ ಎಳೆಗಳು ತುಂಬಿದ ಬುಟ್ಟಿ ಇಟ್ಟುಕೊಂಡು ಸರಸರನೆ ಸುರುಳಿ ಸುತ್ತಿ ಮೊಗ್ಗಿನ ಉಂಡೆ ಪೋಣಿಸುತ್ತ ಹಾರ ಅಣಿಗೊಳಿಸುತ್ತಾರೆ. ಪ್ರತಿ ಮನೆಯ ಹೊಸ್ತಿಲ ಬಳಿಯೂ ತೈಲವರ್ಣದ ಚಿತ್ರ ಬಳಿದಂತೆ ಕಾಣುವ ಒಂದೇ ರೀತಿ ಭಂಗಿಯಲ್ಲಿ ಕುಳಿತು ಮಾಲೆ ಪೋಣಿಸುವ ಮಹಿಳೆಯರು ಕಾಣುತ್ತಾರೆ.

ಶಿಂಗನಳ್ಳಿಯ ಶಾಂತವ್ವ ಅವರ ಗರಡಿಯಲ್ಲಿ ಪಳಗಿದ ಮಹಿಳೆಯರು ಸೃಜನಶೀಲತೆಯಲ್ಲಿ ಬದುಕು ಅರಳಿಸಿಕೊಂಡಿದ್ದಾರೆ. ಕಾಲೇಜಿಗೆ ಹೋಗುವ ತರುಣಿಯರು ಮೊಗ್ಗು ಜೋಡಿಸುತ್ತ ಕಣ್ತುಂಬ ಕನಸು ಹೆಣೆಯುತ್ತಾರೆ. ಊರಿನ ಶೇ 90ರಷ್ಟು ಜನರಿಗೆ ಮಾಲೆಯ ಆದಾಯವೇ ಜೀವನಾಧಾರ.

‘ಹೆಣ್ಣು ಮಕ್ಕಳಿಗೆ ಗದ್ದೆ ಕೆಲಸ ಮಾಡುವುದು ಕಷ್ಟ. ನಾವು ಕಾಲೇಜಿಗೆ ಹೋಗಿ ಬಂದು ಸಂಜೆ ವೇಳೆ ಮಾಲೆ ಮಾಡುತ್ತೇವೆ. ದಿನಕ್ಕೆ ಏನಿಲ್ಲವೆಂದರೂ ₹ 100 ದುಡಿಯಬಹುದು. ಅಪ್ಪ–ಅಮ್ಮನ ಸಂತೆ ಖರ್ಚಿಗೆ ನಮ್ಮ ದುಡಿಮೆ ಆಸರೆಯಾಗಿದೆ’ ಎಂದು ಖುಷಿಯಿಂದ ಹೇಳಿದವರು ವಿದ್ಯಾರ್ಥಿನಿ ಅನಿತಾ ಪಾಟೀಲ.

‘ಶಾಲೆಗೆ ಹೋಗಿ ಬಂದ ಮಕ್ಕಳು ದಿನಕ್ಕೆ 5–10 ಮಾಲೆ ಮಾಡುತ್ತಾರೆ. ಒಂದು ಡಜನ್‌ಗೆ 38ರಿಂದ 40 ರೂಪಾಯಿ ದರ ಸಿಗುತ್ತದೆ. ನಮ್ಮ ಊರಿನಲ್ಲಿ 12 ಸ್ವ–ಸಹಾಯ ಸಂಘಗಳಿವೆ. ಹೆಂಗಸರ ಗಳಿಕೆ ಎಲ್ಲ ಸಂಘಗಳೂ ಲಾಭದಲ್ಲಿ ಮುನ್ನಡೆಯಲು ಕಾರಣವಾಗಿದೆ’ ಎಂದರು ರೇಖಾ ಪಾಟೀಲ.

ಸರ್ಟಿಫಿಕೇಟ್ ಇಲ್ಲದ ಶಿಕ್ಷಕಿ: ಶಾಂತವ್ವ ಅವರ ಮನೆ ಫಲಕವಿಲ್ಲದ ತರಬೇತಿ ಶಾಲೆ. 30 ವರ್ಷಗಳಲ್ಲಿ ಅವರು 500 ಜನರಿಗೆ ಹಾರದ ಕಾಯಕ ಕಲಿಸಿದ್ದಾರೆ. ಹತ್ತು ಎಮ್ಮೆಗಳನ್ನು ಕಟ್ಟಿಕೊಂಡು ಹೈನುಗಾರಿಕೆ ನಡೆಸಿ ಮಕ್ಕಳನ್ನು ಬೆಳೆಸಿದ ಅವರು, ನಂತರ ಮಾಲೆಯ ಉದ್ಯೋಗ ಪ್ರಾರಂಭಿಸಿ ಮೂರು ಹೆಣ್ಣು ಮಕ್ಕಳ ಮದುವೆ ಮಾಡಿದರು. ಒಬ್ಬ ಮಗನನ್ನು ಮಿಲಿಟರಿಗೆ ಸೇರಿಸಿದರು. ಒಬ್ಬ ಮಗ ನೌಕರಿಗೆ ಹೋದರೆ, ಇನ್ನೊಬ್ಬ ಮಗ ಅವರ ಉದ್ದಿಮೆಗೆ ನೆರವಾಗಿದ್ದಾನೆ.

ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲ್ಲೂಕಿನ ಈ ಸಣ್ಣ ಹಳ್ಳಿಯ ಪರಿಶ್ರಮದ ಕಲೆ ಮಹಾನಗರಗಳನ್ನು ತಲುಪಿದೆ. ಅವರ್‍ಯಾರೂ ಮಹಾನಗರಗಳನ್ನು ನೋಡಿಲ್ಲ, ಆದರೆ ಅವರು ತಯಾರಿಸಿದ ಹಾರಗಳು ಮಹಾನಗರದ ಜನರ ಕೊರಳನ್ನು ಅಲಂಕರಿಸಿವೆ. ನಾಮಫಲಕವಿಲ್ಲದ ಕೌಶಲ ಕೇಂದ್ರವಾಗಿದೆ ‘ಶಿಂಗನಳ್ಳಿ’.

***

ಗೊಬ್ಬರದ ಗಿಡವಾಯ್ತು ಅಂದದ ಹಾರ

ನಿರುಪಯುಕ್ತ ಗೊಬ್ಬರ ಮರದ ಕಟ್ಟಿಗೆ ಸುಂದರ ಹಾರಕ್ಕೆ ಬಳಕೆಯಾಗಬಹುದು ಎಂಬುದನ್ನು ಮೊದಲು ಪ್ರಯೋಗ ಮಾಡಿದವರು ಶಾಂತವ್ವ. ಮರದ ಚಕ್ಕೆಯ ತೆಳುವಾದ ಎಳೆಯೊಳಗೆ ಭತ್ತ ಬಡಿದ ಮೇಲೆ ಉಳಿಯುವ ಹೊಟ್ಟನ್ನು ತುಂಬಿ ಅವರು ಅಷ್ಟಕೋನಾಕೃತಿಯ ಉಂಡೆ ಕಟ್ಟುವುದನ್ನು ನೋಡುವುದೇ ಒಂದು ಸೊಬಗು.

‘ಗದ್ದೆ ಕೊಯ್ಲು ಮುಗಿದ ಮೇಲೆ ಭತ್ತದ ಹೊಟ್ಟನ್ನು ಮಳೆ ನೀರಿಗೆ ತಾಗದಂತೆ ಚೀಲದಲ್ಲಿ ತುಂಬಿಟ್ಟುಕೊಂಡು ಜತನದಿಂದ ಕಾಪಾಡಿಕೊಳ್ಳುತ್ತೇವೆ. ಕೆಲವರು ಮೆಕ್ಕೆಜೋಳದ ಹೊಟ್ಟನ್ನು ಸಹ ಬಳಸುತ್ತಾರೆ. ಹೊಟ್ಟೆಯೊಳಗೆ ಹೊಟ್ಟು ತುಂಬದಿದ್ದರೆ ಮಾಲೆಯ ಮೊಗ್ಗು ಪೂರ್ಣವಾಗದು. ಬೆಳಿಗ್ಗೆ ಕೆಲಸಕ್ಕೆ ಹೋಗುವ ಗಂಡಸರು ಚಕ್ಕೆ ಉಜ್ಜಿಟ್ಟು ಹೋದರೆ, ನಾವು ಬಿಡುವಾದಾಗ, ಟಿ.ವಿ ನೋಡುವಾಗ ಕುಳಿತು ಹಾರ ಕಟ್ಟುತ್ತೇವೆ. ದಿನಕ್ಕೆ ಏನಿಲ್ಲವೆಂದರೂ 40–50 ಹಾರ ಮಾಡಬಹುದು’ ಎಂದರು ಸುರತಿ ಮೇಲಿನಮನಿ.

‘ನಮ್ಮ ಊರಿನಲ್ಲಿ ಭತ್ತ ಉಳುಮೆ ಮಾಡುವ ತುಂಡು ಭೂಮಿಯ ಕೃಷಿಕರೇ ಅಧಿಕ. ಗಂಡಸರೊಂದಿಗೆ ಹೆಂಗಸರೂ ಹೊಲದಲ್ಲಿ ದುಡಿಯುತ್ತಾರೆ. ಹೀಗಾಗಿ ಕೃಷಿ ಹಂಗಾಮಿನಲ್ಲಿ ಹಾರಕ್ಕಿಂತ ಕೃಷಿ ಕಾಯಕಕ್ಕೆ ಹೆಚ್ಚು ಒತ್ತು. ಇತ್ತೀಚಿನ ವರ್ಷಗಳಲ್ಲಿ ಮಳೆಯ ಕೊರತೆಯಿಂದ ಭತ್ತದ ಇಳುವರಿ ಕುಸಿದಿದೆ. ಹೊಲದಲ್ಲಿ ಬೆಳೆಯುವ ಅಕ್ಕಿ ಊಟಕ್ಕೂ ಸಾಲದು. ಇಂತಹ ಕಷ್ಟಕೋಟಲೆಗಳ ನಡುವೆ ವಿಶ್ವಾಸದ ಬದುಕು ಕಟ್ಟಿಕೊಳ್ಳಲು ನೆರವಾದದ್ದು ಶಾಂತವ್ವ ನೀಡಿರುವ ಕೈತುಂಬ ಕೆಲಸ’ ಎಂದು ಊರ ಯುವಕ ಪಾಂಡುರಂಗ ಪಾಟೀಲ ಹೇಳಿದರು.

‘ಹವಾಮಾನ ವೈಪರೀತ್ಯದಿಂದ ಕೃಷಿ ಕೈಗೆ ಗಿಟ್ಟುತ್ತಿಲ್ಲ. ಕಂಗಾಲಾಗಿದ್ದ ರೈತರಲ್ಲಿ ಹಾರ ಕಟ್ಟುವ ಕಾಯಕ ಆತ್ಮವಿಶ್ವಾಸ ಮೂಡಿಸಿದೆ. ಇಲ್ಲಿ ತಯಾರಾಗುವ ಮಾಲೆಗಳು ಬೆಂಗಳೂರು, ಮುಂಬೈ, ಅಹಮದಾಬಾದ್, ದೆಹಲಿಯಂತಹ ದೊಡ್ಡ ನಗರಗಳಿಗೆ ಹೋಗುತ್ತವೆ’ ಎಂದು ವಿವರಿಸಿದರು ಪ್ರಗತಿಪರ ಕೃಷಿಕ ರಮೇಶ ಜಿಗಳೇರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry