ಎಳನೀರಿನ ಹಿಮಚೆಂಡು?

7

ಎಳನೀರಿನ ಹಿಮಚೆಂಡು?

Published:
Updated:
ಎಳನೀರಿನ ಹಿಮಚೆಂಡು?

ಎಳನೀರಿನ ತಿರುಳು ನಮಗೆಲ್ಲಾ ಗೊತ್ತು. ಎಲ್ಲರಿಗೂ ಅದು ಅಚ್ಚುಮೆಚ್ಚು. ಅತ್ಯಂತ ರುಚಿ, ಅಂದರೆ ನಸುಸಿಹಿಯಿದ್ದು ಬಾಯಲ್ಲೇ ಕರಗುವ ಘಟ್ಟದಲ್ಲಿ – ಸುಮಾರು ಆರನೇ ತಿಂಗಳಲ್ಲಿ - ಅದನ್ನು ಮಾತ್ರ ಎಬ್ಬಿಸಿ ಕೊಡಲು ಸಾಧ್ಯವೇ?

ಆ ಹಂತದಲ್ಲಿ ಒಳಗೆ ನೀರಿರುತ್ತದೆ. ಸುತ್ತಲೂ ಇನ್ನೂ ಗಟ್ಟಿಯಾಗದ, ಲಘು ಜಖಂ ಆದರೂ ಹರಿಯಬಲ್ಲ ತಿರುಳಿನ ಗೋಳ; ಹಿಮಚೆಂಡು, ಎಳನೀರ ಭ್ರೂಣ! ‘ಪಂಕ್ಚರ್’ ಆಗಿ ನೀರು ಹೊರಸೂಸದಂತೆ ಈ ಹಿಮಚೆಂಡನ್ನು ಹೊರತೆಗೆಯಲು ಸಾಧ್ಯವೇ?

ಸಾಧ್ಯ ಏನು ಬಂತು? ಇದನ್ನೇ ಒಂದು ಮಾರಾಟ ಉತ್ಪನ್ನವಾಗಿಸಿದವರು ಪರದೇಶಗಳಲ್ಲಿದ್ದಾರೆ. ಗ್ರಾಹಕರ ಎದುರೇ ಈ ಮಂದಿ ಎಳನೀರನ್ನು ಚಕಚಕನೆ ಕತ್ತರಿಸಿ ನಿಪುಣ ಸರ್ಜನ್‌ರಂತೆ ಅದರ ‘ಭ್ರೂಣ’, ಎಳನೀರಿನ ಹಿಮಚೆಂಡನ್ನು ಹೊರತೆಗೆಯುತ್ತಾರೆ. ಅದು ಏನು ರುಚಿ ಅಂತೀರಾ?

ಮಲೇಷ್ಯಾ ಮತ್ತು ಇನ್ನೂ ಕೆಲವು ಪುಟ್ಟ ದೇಶಗಳಲ್ಲಿ ಇದು ಪ್ರವಾಸಿ ಆಕರ್ಷಣೆ! ಯಾವುದೇ ಯಂತ್ರ ಬಳಸದೆ, ಬರೀ ಕೈಚಳಕದಿಂದ ಈ ರೀತಿಯ ಹಿಮಚೆಂಡನ್ನು ಹೊರತೆಗೆದು ಮಾರುತ್ತಾರೆ. ಈ ಕುಶಲಕರ್ಮಿಗಳಿಗೆ ಇದೇ ವೃತ್ತಿ. ಈ ಕೆಲಸಕ್ಕೆ ಇವರು ಬಳಸುವುದು ಉದ್ದನೆ, ತೆಳ್ಳಗಿನ ಚಾಕು ಮತ್ತು ಕೆತ್ತಿದ ಮೇಲೆ ‘ಚೆಂಡನ್ನು’ ಪ್ರತ್ಯೇಕಿಸಲು ಪ್ಲಾಸ್ಟಿಕ್ಕಿನ ಪುಟ್ಟ ತುಂಡು - ಹೀಗೆ ಎರಡೇ ಎರಡು ಸರಳ ಉಪಕರಣಗಳು!

ಮೊದಲು ಎಳನೀರನ್ನು ಮರದ ತುಂಡಿನ ಮೇಲೆ ಇಟ್ಟುಕೊಳ್ಳುತ್ತಾರೆ. ಆಮೇಲೆ ಚಾಕು ಬಳಸಿ ಎಳನೀರಿನ ಹಿಂಬದಿಯನ್ನು ವಾರೆಯಾಗಿ ಕೆತ್ತುತ್ತಾ ಕೆತ್ತಿದ ಟೊಪ್ಪಿಯಂತಹ ಭಾಗವನ್ನು ಪ್ರತ್ಯೇಕಿಸುತ್ತಾರೆ. ಹೀಗೆ ಕೆತ್ತುವಾಗ ಎಳನೀರಿನ ಚಿಪ್ಪಿನ ಒಂದಷ್ಟು ಭಾಗ ಕೆತ್ತಿ ಹೋಗುತ್ತದೆ. ಒಂದಷ್ಟು ಜಾಗದಲ್ಲಿ ತಿರುಳು ಹೊರಗೆ ಕಾಣಸಿಗುತ್ತದೆ.

ತಿರುಳು ಮತ್ತು ಚಿಪ್ಪಿನ ಒಳಮೈಗಳ ನಡುವೆ ಪ್ಲಾಸ್ಟಿಕ್ಕಿನ ಉಪಕರಣ ತೂರಿಸುತ್ತಾರೆ. ಅದನ್ನು ಮೆಲ್ಲಮೆಲ್ಲನೆ ಒಂದು ಸುತ್ತು ತಿರುಗಿಸಿಬಿಟ್ಟರೆ ಸಾಕು, ಈ ಎಳೆ ಹಿಮಚೆಂಡು ಚಿಪ್ಪಿನಿಂದ ಬೇರ್ಪಡುತ್ತದೆ. ಇವರ ಕೌಶಲ ಇಲ್ಲಿಗೇ ನಿಲ್ಲುವುದಿಲ್ಲ. ಈ ಹಿಮಚೆಂಡು ಪೂರ್ತಿ ಬೇರ್ಪಟ್ಟ ಮೇಲೆ ನೋಡುತ್ತಾ ನಿಂತ ಗ್ರಾಹಕರಿಗೆ ಇವರು ಪುಕ್ಕಟೆ ಮನರಂಜನೆಯನ್ನೂ ಒದಗಿಸುತ್ತಾರೆ.

ನಿಬ್ಬೆರಗಾಗಿಸುವ ಪ್ರದರ್ಶನ: ಪ್ಲಾಸ್ಟಿಕ್ ಪೆಟ್ಟಿಗೆಗೆ ಹಿಮಚೆಂಡನ್ನು ವರ್ಗಾಯಿಸುವ ರೀತಿಯೂ ತುಂಬಾ ಕೌಶಲದ್ದೇ. ಒಂದು ಕೈಯಿಂದ ಎಳನೀರಿನಿಂದ ಗೋಳವನ್ನು ಎತ್ತರಕ್ಕೆ ಹಾರಿಸಿಬಿಡುತ್ತಾರೆ. ಅದು ಒಂದೂವರೆ ಮೀಟರ್ ಎತ್ತರಕ್ಕೆ ಹಾರಿ ಮತ್ತೆ ಕೆಳಕ್ಕೆ ಬೀಳುವಾಗ ಇವರು ಇನ್ನೊಂದು ಕೈಯಲ್ಲಿ ಹಿಡಿದು ನಿಂತ ಪ್ಲಾಸ್ಟಿಕ್ ಪೆಟ್ಟಿಗೆಯ ಬಾಯಿಯೊಳಕ್ಕೇ ಸೇರುತ್ತದೆ. ಕ್ರಿಕೆಟ್ ಚೆಂಡನ್ನು ಕ್ಯಾಚ್ ಮಾಡಿದ ಹಾಗೆ! ಈ ಆಟದ ನಡುವೆ ಹಿಮಚೆಂಡಿನ ಒಳಗೆ ಎಳನೀರಿನ ಜ್ಯೂಸ್ ಹಾಗೆಯೇ ಇರುತ್ತದೆ!

ಹಿಮಚೆಂಡನ್ನು ಪೆಟ್ಟಿಗೆಗೆ ತುಂಬಿ ಮುಚ್ಚಳ ಹಾಕಿ ಎದುರುಗಡೆಯ ಮೇಜಿನ ಮೇಲೆ ಮಾರಾಟಕ್ಕೆ ಇಡುತ್ತಾರೆ. ಅನಂತರ ಕುಶಲಕರ್ಮಿ ಇನ್ನೊಂದು ಎಳನೀರನ್ನು ಕೆತ್ತಿ ಹಿಮಚೆಂಡು ತಯಾರಿಸಹೊರಡುತ್ತಾನೆ. ನಂಬಲಾಗದಷ್ಟು ವೇಗ. ಒಂದು ಎಳನೀರಿನ ಭ್ರೂಣವೂ ಬಿಚ್ಚಿ ನೀರು ಹೊರಬರುವುದಿಲ್ಲ!

ಈ ಮಂಜುಚೆಂಡು ಎಷ್ಟು ನಾಜೂಕಾಗಿರುತ್ತದೆ ಎಂದರೆ ಇದರ ಮೇಲ್ಮೈ ಬಳುಕುತ್ತಿರುತ್ತದೆ. ಸ್ಟ್ರಾಗಿಂತ ಸ್ವಲ್ಪ ಗಟ್ಟಿ ಇರುವ ಯಾವುದೇ ವಸ್ತುವಿನಿಂದ ಚುಚ್ಚಿದರೂ ತೂತಾಗುವಷ್ಟೇ ಇರುತ್ತದೆ ತಿರುಳಿನ ಬೆಳವಣಿಗೆ. ಆದರೆ ಈ ಹಂತದಲ್ಲಿ ತಿರುಳಿನ ನಸು ಸಿಹಿರುಚಿ, ಒಳಗಿನ ಜ್ಯೂಸಿನ ರುಚಿ ಎಲ್ಲರೂ ಮೆಚ್ಚುವಂತೆ ಇರುತ್ತದೆ. ಜ್ಯೂಸ್ ಒಂದಿಷ್ಟೂ ಹುಳಿಯಾಗಿರುವುದಿಲ್ಲ.

ವಿಡಿಯೊಗಳು

ಯೂ-ಟ್ಯೂಬ್‌ನಲ್ಲಿ ಕನಿಷ್ಠ ಅರ್ಧ ಡಜನ್ ಈ ಅದ್ಭುತ ಕೈಚಳಕ ಪ್ರದರ್ಶನದ ವಿಡಿಯೊಗಳು ಸಿಗುತ್ತವೆ. ಇಂಥ ಅನುಭವಿ ಹಿಮಚೆಂಡು ಕುಶಲಕಮಿಗಳು ಒಬ್ಬಿಬ್ಬರಲ್ಲ - ಹಲವರಿದ್ದಾರೆ ಎಂಬುದು ಸ್ಪಷ್ಟ. ಈ ಎಲ್ಲಾ ಹಿಮಚೆಂಡು ತಯಾರಿ ಮಲೇಷ್ಯದಲ್ಲಿ ಮಾತ್ರವಲ್ಲದೆ ನೆರೆಕರೆಯ ಇನ್ನೂ ಕೆಲವು ರಾಷ್ಟ್ರಗಳಲ್ಲಿ ನಡೆಯುತ್ತಿರಬಹುದು.

ಬಹುತೇಕ ಒಂದೇ ಬೆಳವಣಿಗೆಯ ಎಳನೀರನ್ನು ಈ ಕೆಲಸಕ್ಕೆ ಆಯ್ಕೆ ಮಾಡುತ್ತಿರಬೇಕು. ಎಳನೀರು ಕಡಿಮೆ ಬೆಳೆದರೆ ಕೆಲಸ ಕೆಟ್ಟೀತು. ಹೆಚ್ಚು ಬೆಳೆದರೆ ರುಚಿ ಚೆನ್ನಾಗಿರದು – ಗ್ರಾಹಕರು ಬೇಗನೆ ಅದನ್ನು ಗುರುತಿಸಬಲ್ಲರು. ಬ್ರೇಕೇಜ್ ಇಲ್ಲದೆ ನಿಮಿಷಗಳಲ್ಲಿ ಕೇವಲ ಕೈಕೆಲಸದಲ್ಲಿ ಹಿಮಚೆಂಡು ಬೇರ್ಪಡಿಸುವ ಈ ಮಂದಿಯ ಅನುಭವಕ್ಕೆ ಭಲೇ ಎನ್ನಲೇಬೇಕು. ಇಂಥ ಹಿಮಚೆಂಡುಗಳನ್ನು ಬೆಂಗಳೂರಿನ ಮಾಲ್‌ಗಳಲ್ಲಿ ಅಥವಾ ನಮ್ಮ ಮಹಾನಗರಿಗಳಲ್ಲಿ ನಲವತ್ತು – ಐವತ್ತು ರೂಪಾಯಿಗೆ ಮಾರಲು ಅಡ್ಡಿಯಿಲ್ಲ. ನಾಲ್ಕು ಗಂಟೆಗಳ ಕಾಲ ಹಸಿವು ನೀಗಿಸಬಲ್ಲ ಇದೊಂದು ‘ಮಿನಿ ಮೀಲ್’ ಆಗಬಲ್ಲುದು.

ಈ ವಿಡಿಯೊ ನೋಡುವ ಅನುಕೂಲತೆ ಇರುವವರು ಒಮ್ಮೆ ಇದನ್ನು ಗಮನ ಕೊಟ್ಟು ನೋಡಿ. ಮಲೇಷಿಯನ್ನರಿಗೆ ಸಾಧ್ಯವಿರುವುದು ನಮಗೆ ಸಾಧ್ಯವಿಲ್ಲವೇ? ಏಕೆ ನಮ್ಮ ತೆಂಗು ಅಭಿವೃದ್ಧಿ ಮಂಡಳಿ ಒಂದಷ್ಟು ಎಳೆಯ ಭಾರತೀಯರನ್ನು ಮಲೇಷ್ಯಾಗೆ ಕಳಿಸಿ ಈ ಕೌಶಲದ ತರಬೇತಿ ಕೊಡಿಸಬಾರದು?

ಮಲೇಷ್ಯಾದ್ದೇ ಆದ ಎಳನೀರಿನ ಒಂದು ಬೃಹತ್ ಉದ್ದಿಮೆ ಎಮನೇಟ್ ಅಗ್ರಿಕಲ್ಚರ್ ಇಂಡಸ್ಟ್ರೀಸ್. ಈ ಕಂಪನಿ ಎಳನೀರನ್ನು ಮಿನಿಮಲ್ ಪ್ರಾಸೆಸಿಂಗಿಗೆ ಒಳಪಡಿಸಿ ‘ಕುಡಿಯಲು ಸಿದ್ಧ’ ರೂಪದಲ್ಲಿ ಮಾರುತ್ತದೆ; ರಫ್ತು ಕೂಡ ಮಾಡುತ್ತದೆ. (http://bit.ly/2zNxony)

ಎಲ್ಲಾ ಸರಿ. ನಾವು ಭಾರತೀಯರು, ವಿಶ್ವದಲ್ಲೇ ಅತಿ ಹೆಚ್ಚು ತೆಂಗು ಬೆಳೆಯುವ ದೇಶದವರು ಏಕೆ ಈ ಕಡೆ ಗಮನವೇ ಹರಿಸಿಲ್ಲ? ನಮ್ಮ ನಗರಗಳ ಜನ ಮುಕುರುವ ಸ್ಥಳಗಳಲ್ಲಿ ಇದನ್ನು ಶುಚಿಯಾಗಿ ಸರ್ವ್ ಮಾಡುವ ಕಲ್ಪನೆ ಮಾಡಿಕೊಳ್ಳಿ. ಒಂದಿಷ್ಟೂ ಕೃತಕವಿಲ್ಲದ ಈ ಚಿಕ್ಕ ಊಟ ಸವಿಯಲು ಗ್ರಾಹಕರು ಮುಗಿ ಬಿದ್ದಾರು. ನಾವೇಕೆ ಇಂಥ ವಿಚಾರಗಳಲ್ಲಿ ಹಿಂದೆ? ಅಪರೂಪಕ್ಕೊಮ್ಮೆ ಸರ್ವ್ ಮಾಡಲು, ಕನಿಷ್ಠ ಪ್ರಾತ್ಯಕ್ಷಿಕೆಗಾದರೂ ನಮಗಿದನ್ನು ಮಾಡಲು ಸಾಧ್ಯವಿಲ್ಲವೇ? ತೆಂಗಿನ ಉದ್ದಿಮೆದಾರರು, ತೆಂಗು ಮಂಡಳಿ, ನಮ್ಮ ಕೃಷಿ ಸಚಿವರುಗಳು, ಎಳನೀರುಪ್ರಿಯರು, ಉದ್ದಿಮೆದಾರರು ಈ ಕಡೆ ಗಮನ ಹರಿಸಬೇಕು.

⇒ಚಿತ್ರ : ಕೆ.ವೈ.

ಜಾಲಕೊಂಡಿಗಳು:

Naked coconut-http://bit.ly/2mEiUB9

Coconut De-Skinned- http://bit.ly/2is6CXY

Amazing Coconut Cracking Skill- http://bit.ly/2zRBOrd

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry