7

‘ಜ್ಞಾನ’ಚಾಲಿತ ವಸಾಹತೀಕರಣದ ಹೊಸ ಆವೃತ್ತಿ

Published:
Updated:
‘ಜ್ಞಾನ’ಚಾಲಿತ ವಸಾಹತೀಕರಣದ ಹೊಸ ಆವೃತ್ತಿ

‘ಜ್ಞಾನದ ಭಾಷೆಯಾಗಿ ಬೆಳೆಯಬೇಕಿದೆ ಕನ್ನಡ’ ಎಂಬ ಶೀರ್ಷಿಕೆಯ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಬಿ. ಶೆಟ್ಟಿ ಅವರ ಲೇಖನ (ಪ್ರ.ವಾ., ನ. 13) ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತಾ, ಕೊನೆಗೆ ಅಪಾಯಕಾರಿ ತೀರ್ಮಾನಗಳಿಗೆ ಬರುತ್ತದೆ ಎಂದೇ ನನಗನ್ನಿಸುತ್ತಿದೆ.

ಕನ್ನಡ ಜ್ಞಾನದ ಭಾಷೆಯಾಗಿ ಬೆಳೆಯಬೇಕು ಎಂಬ ಕರೆ ಕನ್ನಡಿಗರಿಗೆ ಹೊಸದೇನಲ್ಲ. ಅದು, ಕನ್ನಡ ಅನ್ನದ ಭಾಷೆಯಾಗಿ ಬೆಳೆಯಬೇಕು ಎಂಬ ಕರೆಯಷ್ಟೇ ಹಳೆಯದು. ಆದರೆ ಈ ಕರೆಗಳಲ್ಲಿರುವ ಜ್ಞಾನ ಮತ್ತು ಅನ್ನ ಎಂಬ ಶಬ್ದಗಳ ಅರ್ಥವೇನು ಎಂಬುದು ಮಾತ್ರ ಸಾಕಷ್ಟು ಚರ್ಚೆಯಾಗಿಲ್ಲ.

ಭೌತಶಾಸ್ತ್ರದ ಅಧ್ಯಾಪಕರಾಗಿದ್ದ ಬೆಳ್ಳಾವೆ ನಾರಾಯಣಪ್ಪ ನವರ ಪ್ರಯತ್ನದಿಂದ ಆರಂಭವಾದಂತೆ ಈ ಅರವತ್ತು-ಎಪ್ಪತ್ತು ವರ್ಷಗಳಲ್ಲಿ ವಿಜ್ಞಾನದ ಹೊಸ ಹೊಸ ಪರಿಕಲ್ಪನೆಗಳ ಜೊತೆಗೆ ಕಲೆ, ಮಾನವಿಕ ಹಾಗೂ ವಾಣಿಜ್ಯ ಕ್ಷೇತ್ರಗಳ ಹೊಸ ಹೊಸ ಪರಿಕಲ್ಪನೆಗಳನ್ನು ಕನ್ನಡದಲ್ಲಿ ವಿವರಿಸುವ ಮತ್ತು ಚರ್ಚೆಗಳಿಗೆ ಅನುವು ಮಾಡಿಕೊಡುವ ಪ್ರಯತ್ನಗಳು ಕುವೆಂಪು ಕಾಲಕ್ಕೆ ಮೈಸೂರು ವಿಶ್ವವಿದ್ಯಾಲಯದಲ್ಲಿ ವ್ಯಾಪಕವಾಗಿ ನಡೆದವು.

ಶಿವರಾಮ ಕಾರಂತರ ‘ವಿಜ್ಞಾನ ಪ್ರಪಂಚ’ ಈ ದಿಕ್ಕಿನ ಪ್ರಯತ್ನಗಳ ಉತ್ತುಂಗ ಉದಾಹರಣೆ. ಆದರೆ ಕನ್ನಡದಲ್ಲಿ ಹೊಸ ಜ್ಞಾನ ಮತ್ತು ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ ಪ್ರಯತ್ನಗಳು, ಮುಖ್ಯವಾಗಿ ಸರ್ಕಾರದ ದೃಢವಲ್ಲದ ಭಾಷಾ ನೀತಿಯಿಂದಾಗಿ, ನಂತರದ ದಿನಗಳಲ್ಲಿ ನಿಂತೇ ಹೋದುದರಿಂದ ಈ ಪ್ರಯತ್ನಗಳೂ ಸ್ಥಗಿತಗೊಂಡವು. ಆದುದರಿಂದ ಕನ್ನಡವನ್ನು ಜ್ಞಾನದ ಭಾಷೆಯಾಗಿ ಬೆಳೆಸಬೇಕಾಗಿದೆ ಎಂದು ಇದ್ದಕ್ಕಿದ್ದಂತೆ ಈಗ ಹೇಳುವುದರ ಉದ್ದೇಶ, ವಿಶೇಷವಾಗಿ ಅದು ಈ ಕೆಲಸವನ್ನು ಏಕೆ ಮತ್ತು ಹೇಗೆ ಮಾಡಬೇಕಿದೆ ಎಂದು ವಿವರಿಸುವ ಧಾಟಿಯಿಂದಾಗಿ ಅನುಮಾನಾಸ್ಪದವೆನಿಸುತ್ತದೆ.

ಈ ಲೇಖಕರ ಇಡೀ ಲೇಖನ ಓದಿದಾಗ ಅವರು ಕನ್ನಡವನ್ನು ಹೊಸದಾಗಿ ಯಾವುದಕ್ಕಾಗಿ ಸಜ್ಜುಗೊಳಿಸಬೇಕೆಂದು ಹೇಳುತ್ತಿರು ವರೋ ಆ ಜ್ಞಾನದ ಪರಿಚಯ ಮತ್ತು ಅದನ್ನು ಕುರಿತ ಚರ್ಚೆಗಳು ಇವರು ಆ ಜ್ಞಾನವನ್ನು ಯಾವ ಭಾಷೆಯಲ್ಲಿ ಕಲಿತರೋ ಆ (ಪರ)ಭಾಷೆಯ ಅಭಿವ್ಯಕ್ತಿ ಕ್ರಮದಲ್ಲೇ, ಅಂದರೆ ಆ ವಾಕ್ಯ ರಚನಾ ಕ್ರಮಗಳ, ನುಡಿಗಟ್ಟುಗಳ ಅನುವಾದಿತ ರೂಪಗಳಲ್ಲೇ ಇದ್ದರೆ ಮಾತ್ರ ಜ್ಞಾನದ ನಿಜವಾದ ಸಂವಹನ ಸಾಧ್ಯವಾಗುತ್ತದೆ ಎಂದು ನಂಬಿದಂತಿದೆ.

ಇದು ಪರೋಕ್ಷವಾಗಿ ಈ ಹಿಂದಿನ ಇಂತಹ ಪ್ರಯತ್ನಗಳು ವಿಫಲವಾದದ್ದರ ಬಗ್ಗೆ ಒಂದು ಟೀಕೆಯಂತೆಯೂ ಕಾಣುತ್ತದೆ. ಅಲ್ಲದೆ ಇದು ನಮ್ಮ ಭಾಷೆಯ ಹೊರಗಿಂದ ಪಡೆದ ಜ್ಞಾನವನ್ನು ನಮ್ಮ (ಭಾಷಾ) ಸಂಸ್ಕೃತಿಯ ಎರಕದ ಅಗ್ನಿದಿವ್ಯಕ್ಕೊಳಪಡಿಸದೆ ತದ್ವತ್ ಹಾಗೇ ನಮ್ಮ ಬದುಕಿನ–ಶಿಕ್ಷಣದ ಆವರಣದೊಳಕ್ಕೆ ರಫ್ತು ಮಾಡಿಕೊಳ್ಳುವ ವ್ಯಾಪಾರಾನುಸಂಧಾನದಂತೆ ನನಗೆ ಕಾಣುತ್ತದೆ.

ಇದು ಇನ್ನೊಂದು ಅರ್ಥದಲ್ಲಿ ಕಳೆದ ಕೆಲವು ಶತಮಾನಗಳಲ್ಲಿ ಅಜ್ಞಾತ ರೂಪಗಳಲ್ಲಿ ಸಂಭವಿಸಿದ ‘ಜ್ಞಾನ’ ಚಾಲಿತ ವಸಾಹತೀಕರಣದ ಪ್ರಜ್ಞಾಪೂರ್ವಕ ಹೊಸ ಆವೃತ್ತಿಯಂತೆಯೂ ನನಗೆ ಕಾಣುತ್ತದೆ. ಇಡೀ ಲೇಖನದಲ್ಲಿ ವಾದಿಸಿರುವ ರೀತಿ ನೋಡಿದರೆ, ಈವರೆಗೆ ಹೊಸ ಅಥವಾ ಆಧುನಿಕ ಜ್ಞಾನವಾವುದೂ ಕನ್ನಡದಲ್ಲಿ ಸಮರ್ಪಕವಾಗಿ ಘನೀಭವಿಸಿಲ್ಲವೇನೋ ಎಂಬಂತಿದೆ! ಅದಕ್ಕೆ ಕಾರಣ, ಈ ಲೇಖಕರಿಗೆ ಅವರು ಕಲಿತ ಜ್ಞಾನ ಎಂತಹ ಬೌದ್ಧಿಕ ಮಂಕು ಹಿಡಿಸಿದೆ ಎಂದರೆ, ಅವರಿಗೆ ತಾವು ಜನರ ಮಧ್ಯೆ ಕಲಿತ ಕನ್ನಡವೇ ಬಡವಾಗಿ–ಜಡವಾಗಿ ಕಾಣತೊಡಗಿದಂತಿದೆ ಮತ್ತು ಅದು ನಿಜವಾದ ಜ್ಞಾನದ ಭಾಷೆಯಾಗಲು ತಮ್ಮಿಂದ ಪುನರುಜ್ಜೀವನಗೊಳ್ಳಬೇಕಿದೆ ಎಂಬ ಒತ್ತಾಯವನ್ನು ಅವರಲ್ಲಿ ಹುಟ್ಟಿಸಿದೆ!

ಯಾವುದೇ ಜ್ಞಾನ ನಿಜವಾಗಿ ನಮಗೆ ಜ್ಞಾನವಾಗಿ ತಾಕುವುದು ಅದರ ಸಂವಹನಶೀಲತೆಯ ಮೂಲಕ. ಅದು ಸಿದ್ಧಿಸುವುದು ಇಲ್ಲಿನ ಜನರ ‘ಭಾಷೆ’ಯಲ್ಲಿ ಸಂವಹನಗೊಳ್ಳಬಲ್ಲ ಅದರ ಸಾಮರ್ಥ್ಯದ ಮೂಲಕ. ಇಲ್ಲದಿದ್ದರೆ ಅದು ನಮಗೆ ಜ್ಞಾನವೇ ಅಲ್ಲ; ಅಂದರೆ ಅದು ನಮ್ಮ ಅರಿವನ್ನಾಗಲೀ, ಬದುಕನ್ನಾಗಲೀ ವಿಸ್ತರಿಸುವುದಿಲ್ಲ. ಬದಲಾಗಿ ಅದನ್ನು ಬಲವಂತವಾಗಿ ಅದು ಅವತರಿಸಿದ ಭಾಷಾ ವಿನ್ಯಾಸ ಮತ್ತು ಕ್ರಮಗಳಲ್ಲೇ ಪಾರಿಭಾಷಿಕವಾಗಿ ಅನುವಾದಿಸಿಕೊಂಡು ಆಮದು ಮಾಡಿಕೊಳ್ಳುವುದು ಮನಸ್ಸಿನ ವಸಾಹತೀಕರಣದ ಪ್ರಯತ್ನ ಮಾತ್ರವೆನಿಸಿಕೊಳ್ಳುತ್ತದೆ.

ನಮ್ಮ ವಿ.ವಿ.ಗಳಲ್ಲಿ ಉನ್ನತ ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವುದು ಬಹುತೇಕ ಇದೇ ದಂಧೆ. ಕನ್ನಡ ಅನ್ನದ ಭಾಷೆಯಾಗ ಬೇಕು ಎಂಬ ಮೇಲ್ನೋಟಕ್ಕೆ ಸದುದ್ದೇಶಿತವಾಗಿ ಕಾಣುವ ಕೂಗಿನ ಹಿಂದಿನ ದುರುದ್ದೇಶದ ಮೂಲವೂ ಇಲ್ಲಿಯೇ ಇದೆ.

ಈ ಲೇಖಕರೇ ನೀಡಿರುವ ಎರಡು ಉದಾಹರಣೆಗಳನ್ನೇ ನೋಡೋಣ. ಇವರು ‘ಪೇಟ್ರಿಯಾಟಿಸಂ’ಗೆ ದೇಶಭಕ್ತಿಗಿಂತ ಮಲಯಾಳದ ‘ದೇಶಸ್ನೇಹ’ ಎಂಬ ಶಬ್ದ ಹೆಚ್ಚು ಸೂಕ್ತ ಎನ್ನುತ್ತಾರೆ. ಯಾಕೆ ಹೆಚ್ಚು ಸೂಕ್ತ? ಮೊದಲಿಗೆ ಪೇಟ್ರಿಯಾಟಿಸಂ ಎಂಬ ಪಶ್ಚಿಮದ ಶಬ್ದವನ್ನು ಇವರು ಅರ್ಥಮಾಡಿಕೊಂಡಿರುವ ಹಿನ್ನೆಲೆ, ರೀತಿ ಸರಿ ಎನ್ನಲು ಏನು ಆಧಾರ? ಜೊತೆಗೆ ಆ ಪೇಟ್ರಿಯಾಟಿಸಮ್ಮೇ ಇಲ್ಲಿನ ದೇಶಭಕ್ತಿ ಏಕಾಗಬೇಕು? ಹಾಗೇ ದೇಶಭಕ್ತಿ ಶಬ್ದ ಕುರಿತ ಇವರ ಅತೃಪ್ತಿಗೆ ಅದರಲ್ಲಿರುವ ಭಕ್ತಿ ಎಂಬ ಶಬ್ದವೇ ಕಾರಣವಾಗಿದ್ದಲ್ಲಿ, ಕನ್ನಡಿಗರು ದೇಶಭಕ್ತಿ ಎಂಬ ಶಬ್ದವನ್ನು ಬಳಸುವಾಗ ಭಕ್ತಿ ಎಂಬ ಶಬ್ದಕ್ಕೆ ಇರುವ ವಿಸ್ತಾರಮಯ ಅರ್ಥಗಳು ಅವರ ಗಮನದಲ್ಲಿರುವುದಿಲ್ಲ ಎಂದು ಹೇಗೆ ಹೇಳುವಿರಿ?

ಪ್ರತಿಯೊಂದು ಶಬ್ದವೂ ಒಂದು ಭಾಷೆಯಲ್ಲಿ ಚಲಾವಣೆಗೆ ಬಂದಾಗ ಅದಕ್ಕೊಂದು ಚಾರಿತ್ರಿಕ ಸಂದರ್ಭದ ಅರ್ಥವೂ ಇರುತ್ತದೆ ಎಂಬುದೇಕೆ ಇವರ ಗಮನಕ್ಕೆ ಬರುವುದಿಲ್ಲ? ಪೇಟ್ರಿಯಾಟಿಸಂ ಕುರಿತ ಇವರ ವಿದ್ವತ್ ಚರ್ಚೆಗಳಿಗೆ ಒಂದು ಪಾರಿಭಾಷಿಕ ಶಬ್ದವಾಗಿ ಒದಗುವುದಿಲ್ಲವೆಂದು ದೇಶಭಕ್ತಿ ಎಂಬ ಈ ಶಬ್ದದ ‘ಚರಿತ್ರೆ’ ಯನ್ನೇ ಅನುಮಾನಾಸ್ಪದಗೊಳಿಸುವ ಪ್ರಯತ್ನವೇಕೆ?

ನಮ್ಮ ಜನ ದೇಶಭಕ್ತಿಗೆ ಪರ್ಯಾಯವಾಗಿ ದೇಶಪ್ರೇಮ ಎಂಬ ಶಬ್ದವನ್ನೂ ಬಳಸುತ್ತಿದ್ದಾರೆ ಮತ್ತು ಅದನ್ನು ಅವರು ದೇಶಭಕ್ತಿ ಎಂಬ ಶಬ್ದದ ಬಗ್ಗೆ ತಕರಾರೇನನ್ನೂ ದಾಖಲಿಸಿದೆ ಬಳಸುತ್ತಿದ್ದಾರೆ ಎಂಬುದೇಕೆ ಈ ಲೇಖಕರ ಗಮನಕ್ಕೆ ಬರುವುದಿಲ್ಲ? ಇಂದು ಏನಾದರೂ ಭ್ರಷ್ಟವಾಗಿದ್ದರೆ ದೇಶಭಕ್ತಿ ಎಂಬ ಶಬ್ದವಲ್ಲ; ಅದರ ಅರ್ಥ ನಿರೂಪಣೆ. ಅದನ್ನು ಬೇಕಾದರೆ ಹೇಳಲಿ. ಭಾಷೆಯ ಭವಿಷ್ಯವನ್ನು ಕಟ್ಟಬಯಸುವವರಿಗೆ ಅದರ ಚರಿತ್ರೆಯ ಬಗೆಗೂ ಗೌರವವಿದ್ದರೆ ಮಾತ್ರ ಆ ಭವಿಷ್ಯ ಭವಿಷ್ಯವಾಗುಳಿಯುತ್ತದೆ; ಇಲ್ಲದಿದ್ದರೆ ಬಹುಬೇಗ ಭೂತದ ಭಾಗವಾಗುತ್ತದೆ.

ಇನ್ನು ಸೆಕ್ಯುಲರ್‌ವಾದ ಕುರಿತ ಪರ್ಯಾಯ ಪದದ ಬಗೆಗಿನ ಈ ಲೇಖಕರ ಮಾತುಗಳನ್ನು ನೋಡೋಣ. ಕನ್ನಡದಲ್ಲಾಗಲೀ, ಇತರ ಭಾರತೀಯ ಭಾಷೆಗಳಲ್ಲಾಗಲೀ, ಇದಕ್ಕೆ ಸಮಾನಾರ್ಥಕ ಪದ ಇಷ್ಟು ವರ್ಷಗಳ ನಂತರವೂ ಟಂಕಿತವಾಗಿಲ್ಲ ಎಂದರೆ, ಆ ಸೆಕ್ಯುಲರ್‌ವಾದ ಎಂಬುದು ನಮ್ಮ ಬದುಕಿನಲ್ಲಿನ್ನೂ ಅದರ ಪೂರ್ಣಾರ್ಥದಲ್ಲಿ ಸ್ವೀಕೃತವಾಗಿಲ್ಲ ಎಂದೇ ಅರ್ಥವಲ್ಲವೆ?

ಅದು ಏಕೆ ಸ್ವೀಕೃತವಾಗಿಲ್ಲ ಎಂಬುದನ್ನು ತಿಳಿಯಲು ಪ್ರಯತ್ನಿಸದೆ ತಾವು ಹೊರ ಭಾಷೆಯ ಮೂಲಕ ಕಲಿತ ಇಂತಹ ಪರಿಕಲ್ಪನೆಗಳನ್ನು ಕುರಿತ ವಿದ್ವತ್ ಚರ್ಚೆಗೆ ಅನುಕೂಲವಾಗುವಂತೆ ಜನರ ಬದುಕಿನ ಭಾಷಾ ಕ್ರಮವನ್ನೇ, ಜಾಯಮಾನವನ್ನೇ ಬದಲಾಯಿಸಬೇಕಾಗಿದೆ ಎಂದು ಕರೆ ಕೊಡುವುದು ನಮ್ಮ ಬುದ್ಧಿಜೀವಿ ವರ್ಗದ ಲಾಗಾಯ್ತಿನ ಲಕ್ಷಣವೇ ಆಗಿದೆ.

ನಮಗೆ ಹೊಸ ಜ್ಞಾನ ಬೇಕು. ಆದರೆ ಅದು ಅಸಹಜ ಕಸರತ್ತು ಗಳ ಮೂಲಕ ಕನ್ನಡದ ಕನ್ನಡಿಯಲ್ಲಿ ಮೂಡಬಲ್ಲ ಪ್ರತಿಬಿಂಬವಾಗಿ ಅಲ್ಲ. ನಿಜವಾದ ಕನ್ನಡದಲ್ಲೇ; ಅದರ ಉಸಿರಾಟದ ಲಯದಲ್ಲೇ; ಅದು ಹೀರಿಕೊಂಡಷ್ಟೇ. ಲೇಖಕರು ಲೋಹಿಯಾರ ‘ಭಾಷೆಗಳ ಪ್ರಜಾತಾಂತ್ರಿಕ ಪುನರುಜ್ಜೀವನ’ದ ಮಾತನ್ನು ಪ್ರಸ್ತಾಪಿಸಿದಾಗ ಅವರು ‘ಪ್ರಜಾತಾಂತ್ರಿಕ’ ಎಂಬ ಶಬ್ದದಲ್ಲಿನ ‘ಪ್ರಜಾ’ ಎನ್ನುವುದನ್ನೇ ಮರೆತಂತಿದೆ. ಅವರು ಕನ್ನಡವನ್ನು ವಿಶ್ವಭಾಷೆಯಾಗಿ ಮಾಡುವ ಮಾತಾಡಿದ್ದಾರೆ.

ಕವಿರಾಜ ಮಾರ್ಗದ ಈ ಮಾತನ್ನು ಅವರಿಗೆ ನೆನಪಿಸುವ ಅಗತ್ಯವಿಲ್ಲವೆಂದು ಭಾವಿಸುವೆ. ಕನ್ನಡವು ವಿಶ್ವದಲ್ಲಿರುವಂತೆ ಕನ್ನಡದಲ್ಲಿ ವಿಶ್ವವಿದೆ. ವಿಶ್ವ ಎಂದರೆ ನಿಜವಾಗಿ ಏನೆಂದು ಈ ಲೇಖಕರು ಅರ್ಥ ಮಾಡಿಕೊಳ್ಳಲು ಈ ಮಾತು ಸಾಕಾದೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry