7

‘ಪದ್ಮಾವತಿ’ ವಿರೋಧ‌ ರಾಜಕಾರಣ ಸಲ್ಲದು

Published:
Updated:
‘ಪದ್ಮಾವತಿ’ ವಿರೋಧ‌ ರಾಜಕಾರಣ ಸಲ್ಲದು

‘ಪದ್ಮಾವತಿ’ ಚಿತ್ರದ ನಿರ್ದೇಶಕ ಸಂಜಯ್‍ ಲೀಲಾ ಬನ್ಸಾಲಿ ಹಾಗೂ ಪದ್ಮಾವತಿ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಅವರ ಶಿರಚ್ಛೇದ ಮಾಡಿದವರಿಗೆ ₹10 ಕೋಟಿ ಬಹುಮಾನ ನೀಡುವುದಾಗಿ ಹರಿಯಾಣದ ಬಿಜೆಪಿ ಮುಖಂಡ ಸೂರಜ್ ಪಾಲ್ ಘೋಷಿಸಿದ್ದಾರೆ.

ಚಿತ್ರದಲ್ಲಿ ಅಲ್ಲಾವುದ್ದೀನ್‍ ಖಿಲ್ಜಿ ಪಾತ್ರದಲ್ಲಿ ನಟಿಸಿರುವ ನಟ ರಣವೀರ್‍ ಸಿಂಗ್ ಅವರು ಬನ್ಸಾಲಿ ಅವರನ್ನು ಬೆಂಬಲಿಸಿ ನೀಡಿರುವ ಹೇಳಿಕೆಯನ್ನು ವಾಪಸ್‍ ಪಡೆಯದಿದ್ದರೆ ಕೈ ಕಾಲು ಕತ್ತರಿಸುವುದಾಗಿಯೂ ಸೂರಜ್‍ ಹೇಳಿದ್ದಾರೆ. ಇದಕ್ಕೆ ಮುನ್ನ ಮೀರಠ್‌ನ ಕ್ಷತ್ರಿಯ ಸಮುದಾಯದ ಅಭಿಷೇಕ್ ಠಾಕೂರ್‍, ಇವರಿಬ್ಬರ ತಲೆಗೆ ₹5 ಕೋಟಿ ಇನಾಮು ಪ್ರಕಟಿಸಿದ್ದರು.

ನಾಗರಿಕ ಸಮಾಜದಲ್ಲಿ ಆತಂಕ ಉಂಟು ಮಾಡುವಂತಹ ಇಂಥ ಬೆದರಿಕೆಗಳು, ಅನಾಗರಿಕವೂ ಕಾನೂನುಬಾಹಿರವೂ ಹೌದು.

‘ಪದ್ಮಾವತಿ’ ಚಿತ್ರಕ್ಕೆ ವ್ಯಕ್ತವಾಗಿರುವ ವಿರೋಧಗಳ ಹಿಂದಿರುವ ರಾಜಕಾರಣವನ್ನು ಸ್ಪಷ್ಟವಾಗಿಯೇ ಗುರ್ತಿಸಬಹುದು. ರಾಜಸ್ಥಾನ ಮೂಲದ ‘ಶ್ರೀ ರಜಪೂತ್ ಕರ್ಣಿ ಸೇನಾ’ ಸಂಘಟನೆ, ‘ಪದ್ಮಾವತಿ’ ಚಿತ್ರದ ವಿರೋಧದ ಕೇಂದ್ರದಲ್ಲಿದೆ. ಇದೇ ಸಂಘಟನೆ ‘ಜೋಧಾ ಅಕ್ಬರ್’ ಬಿಡುಗಡೆ ಸಂದರ್ಭದಲ್ಲೂ ತನ್ನ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರತಿರೋಧದ ನಡುವೆಯೂ ತೆರೆಕಂಡ ‘ಜೋಧಾ ಅಕ್ಬರ್’ ದೊಡ್ಡ ಗೆಲುವು ಕಂಡಿತ್ತು. ಈಗ ಸಂಘಟನೆ ವ್ಯಕ್ತಪಡಿಸಿರುವ ವಿರೋಧಕ್ಕೆ ರಾಜಕಾರಣಿಗಳ ಬೆಂಬಲ ದೊರೆತಿದೆ.

‘ಶೂರ್ಪನಖಿಗೆ ಲಕ್ಷ್ಮಣ ಮಾಡಿದ್ದನ್ನೇ ನಾವು ದೀಪಿಕಾಗೂ ಮಾಡಲು ಹೇಸುವುದಿಲ್ಲ’ ಎಂದು ಸಂಘಟನೆ ಹೇಳಿರುವುದನ್ನು ಸಂಸ್ಕೃತಿ ರಕ್ಷಣೆಯ ಬಗ್ಗೆ ಉತ್ಸಾಹದ ಮಾತುಗಳನ್ನಾಡುವ ವಕ್ತಾರರು ಮೌನವಾಗಿಯೇ ಒಪ್ಪಿಕೊಂಡಂತಿದೆ. ಚಿತ್ರದಲ್ಲಿನ ಆಕ್ಷೇಪಾರ್ಹ ಭಾಗಗಳನ್ನು ತೆಗೆದುಹಾಕದಿದ್ದರೆ ‘ಪದ್ಮಾವತಿ’ ತೆರೆಕಾಣಲು ಅವಕಾಶ ನೀಡುವುದಿಲ್ಲವೆಂದು ಉತ್ತರಪ್ರದೇಶ ಸರ್ಕಾರ ಹೇಳಿದೆ.

ಮಧ್ಯಪ್ರದೇಶ ಸರ್ಕಾರ ಚಿತ್ರದ ಪ್ರದರ್ಶನಕ್ಕೆ ನಿಷೇಧ ಹೇರಿದ್ದರೆ, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಬಿಡುಗಡೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದಾರೆ. ಬನ್ಸಾಲಿ ಅವರನ್ನು ಬೂಟಿನಲ್ಲಿ ಹೊಡೆದವರಿಗೆ ₹10 ಸಾವಿರ ಬಹುಮಾನ ನೀಡುವುದಾಗಿ ಮಧ್ಯಪ್ರದೇಶ ಬಿಜೆಪಿಯ ಅಖಿಲೇಶ್ ಖಾಂಡೇಲ್ವಾಲ್ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು.

ಇವೆಲ್ಲ ಪ್ರಕರಣಗಳು ಸಿನಿಮಾ ವಿವಾದದ ಹಿನ್ನೆಲೆಯಲ್ಲಿರುವ ರಾಜಕಾರಣದ ವಾಸನೆಯನ್ನು ಸ್ಪಷ್ಟವಾಗಿ ಹೇಳುವಂತಿವೆ. ಚಲನಚಿತ್ರವೊಂದರಲ್ಲಿ ಏನಿರಬೇಕು ಏನಿರಬಾರದು ಎನ್ನುವುದನ್ನು ರಾಜಕಾರಣಿಗಳು ಹಾಗೂ ವ್ಯಕ್ತಿಗಳು ನಿರ್ಣಯಿಸಲು ಮುಂದಾದಾಗ ಉಂಟಾಗುವ ಪರಿಣಾಮಗಳನ್ನು ಈ ಪ್ರಕರಣದಲ್ಲಿ ನೋಡಬಹುದು.

ರಜಪೂತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಸಿನಿಮಾ ಧಕ್ಕೆ ತರುವಂತಿದೆ ಹಾಗೂ ಇತಿಹಾಸವನ್ನು ತಿರುಚಲಾಗಿದೆ ಎನ್ನುವುದು ‘ಪದ್ಮಾವತಿ’ ವಿರೋಧಕ್ಕೆ ನೀಡಲಾಗುತ್ತಿರುವ ಕಾರಣಗಳು. ಯಾವುದೇ ಒಂದು ಕಲಾಕೃತಿಯನ್ನು ವಿರೋಧಿಸುವ ಸ್ವಾತಂತ್ರ್ಯ ಮುಕ್ತವಾಗಿದೆ. ಆದರೆ, ಈ ವಿರೋಧ ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿರಬೇಕು. ಸಿನಿಮಾ ಮಾಧ್ಯಮದ ಸಂದರ್ಭದಲ್ಲಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಮಾಣಪತ್ರಗಳನ್ನು ನೀಡುವ ಕೆಲಸ ನಿರ್ವಹಿಸುತ್ತದೆ.

ಸಮಾಜದ ಹಿತಕ್ಕೆ ಧಕ್ಕೆ ತರುವ ದೃಶ್ಯಗಳು ಇದ್ದಾಗ ಅವುಗಳಿಗೆ ಈ ಮಂಡಳಿ ಆಕ್ಷೇಪ ವ್ಯಕ್ತಪಡಿಸಬಹುದು. ಆದರೆ ‘ಪದ್ಮಾವತಿ’ ಸಿನಿಮಾ ಸಂದರ್ಭದಲ್ಲಿ ಚಲನಚಿತ್ರ ಪ್ರಮಾಣೀಕರಣ ಮಂಡಳಿ  ಮಾಡಬೇಕಿದ್ದ ಕೆಲಸವನ್ನು ರಾಜಕಾರಣಿಗಳೇ ಮಾಡಲು ಹೊರಟಿದ್ದಾರೆ. ಮಂಡಳಿ ಸದಸ್ಯ ಅರ್ಜುನ್‍ ಗುಪ್ತಾ ‘ಬನ್ಸಾಲಿ ದೇಶ ದ್ರೋಹದ ಕೆಲಸ ಮಾಡಿದ್ದಾರೆ, ಅವರನ್ನು ವಿಚಾರಣೆಗೆ ಒಳಪಡಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಪ್ರಮಾಣಪತ್ರ ನೀಡಬೇಕಾದ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸದಸ್ಯರು, ಗೂಢಚಾರರ ಅಥವಾ ತನಿಖಾಧಿಕಾರಿಗಳ ಪಾತ್ರ ನಿರ್ವಹಿಸುವಲ್ಲಿನ ಹಿತಾಸಕ್ತಿಯನ್ನು ಗುರ್ತಿಸಬಹುದು. ಚಿತ್ರೀಕರಣ ದಿನದಿಂದಲೂ ‘ಪದ್ಮಾವತಿ’ ಚಿತ್ರ ವಿರೋಧಗಳನ್ನು ಎದುರಿಸುತ್ತಲೇ ಬಂದಿದೆ. ಸೆಟ್‌ಗೆ ಬೆಂಕಿ ಹಚ್ಚಲಾಗಿತ್ತು. ಚಿತ್ರೀಕರಣಕ್ಕೆ ಬಳಸುತ್ತಿದ್ದ ಪರಿಕರಗಳನ್ನು ನಾಶಗೊಳಿಸಲಾಗಿತ್ತು.

ಈಗ ಬಿಡುಗಡೆಯ ಸಂದರ್ಭದಲ್ಲಿ ಚಿತ್ರತಂಡದ ಪ್ರಮುಖರನ್ನು ಕೊಲೆ ಮಾಡುವ ಬೆದರಿಕೆಯ ಮಟ್ಟಕ್ಕೆ ಹೋಗಿದೆ. ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಪ್ರಯತ್ನಗಳನ್ನು ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಂಥ ಚಟುವಟಿಕೆಗಳಲ್ಲಿ ತೊಡಗಿರುವವರು ಯಾವ ಪಕ್ಷದವರಾದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.

‘ಯಾರೀ ಜನ, ಈ ದುಷ್ಕೃತ್ಯಗಳಿಗೆ ಯಾರು ಹೊಣೆ, ಇದೆಲ್ಲವನ್ನೂ ಎಷ್ಟು ದಿನ ಸಹಿಸಿಕೊಳ್ಳಬೇಕು’ ಎನ್ನುವ ದೀಪಿಕಾ ಪಡುಕೋಣೆ ಪ್ರಶ್ನೆಗಳು ಹಾಗೂ ಅವರ ಆತಂಕಕ್ಕೆ ಉತ್ತರ ಕೊಡುವ ಜವಾಬ್ದಾರಿ ಸರ್ಕಾರದ್ದಾಗಿದೆ.

ಸಿನಿಮಾಕ್ಕೆ ಸಂಬಂಧಿಸಿದ ತಕರಾರುಗಳು ಚಿತ್ರತಂಡ ಹಾಗೂ ಸಿಬಿಎಫ್‌ಸಿ ವ್ಯಾಪ್ತಿಗೆ ಕೊನೆಗೊಳ್ಳಬೇಕು. ಅಂತಿಮವಾಗಿ ಒಂದು ಸಿನಿಮಾದ ಒಳಿತು ಕೆಡುಕು ಹಾಗೂ ಸೋಲು ಗೆಲುವನ್ನು ಪ್ರೇಕ್ಷಕರು ನಿರ್ಧರಿಸಬೇಕೇ ಹೊರತು ಸ್ವಘೋಷಿತ ಚರಿತ್ರಕಾರರಲ್ಲ, ಕಾನೂನಿನ ಬಗ್ಗೆ ಗೌರವವಿಲ್ಲದ ರಾಜಕಾರಣಿಗಳಂತೂ ಮೊದಲೇ ಅಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry