ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಕೊರತೆ; ಗ್ರಾಮಸ್ಥರ ಪರದಾಟ

Last Updated 21 ನವೆಂಬರ್ 2017, 6:54 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಅಂಬೆಸಾಂಗವಿ ಗ್ರಾಮ ಪಂಚಾಯಿತಿಗೆ ಒಳಪಡುವ ವಳಸಂಗ ಗ್ರಾಮ ಮೂಲಸೌಕರ್ಯಗಳ ಕೊರತೆಯಿಂದ ಸಮಸ್ಯೆಗಳ ಆಗರವಾಗಿದೆ. ಈ ಗ್ರಾಮ ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ದೂರದಲ್ಲಿದೆ. ಸುಮಾರು ನಾಲ್ಕು ಸಾವಿರ ಜನಸಂಖ್ಯೆ ಹೊಂದಿದೆ.

ಗ್ರಾಮದ ಹಲವೆಡೆ ನಿರ್ಮಿಸಿರುವ ಚರಂಡಿಗಳಲ್ಲಿ ಕೆಲವನ್ನು ಪ್ರಭಾವಿಗಳು ತಮ್ಮ ಮನೆ ಮುಂದೆ ಹೊಲಸು ನೀರು ಹರಿಯಬಾರದು ಎಂದು ಮುಚ್ಚಿದ್ದಾರೆ. ಕೆಲವು ಕಡೆ ಹೊಲಸು ತುಂಬಿ ನೀರು ಮುಂದಕ್ಕೆ ಹರಿಯದೆ ದುರ್ನಾತ ಬೀರುತ್ತಿವೆ. ಕೆಲವೆಡೆ ಉತ್ತಮವಾಗಿರುವ ಚರಂಡಿ ನೀರು ಗ್ರಾಮದ ಹೊರವಲಯದ ಮನೆಗಳ ಅಕ್ಕಪಕ್ಕ ಸಂಗ್ರಹಗೊಳ್ಳುತ್ತದೆ. ಈ ಸ್ಥಳ ಸೊಳ್ಳೆಗಳ ಉಗಮ ಸ್ಥಾನವಾಗಿ ಮಾರ್ಪಟ್ಟಿದೆ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಕಾಲ ಕಳೆಯುತ್ತಿದ್ದೇವೆ ಎಂದು ಅನಿಲ್‌, ಸಂಜು ವಾಘ್ಮಾರೆ, ರಾಹುಲ್‌ ರಾಘ್ಮಾರೆ ಆಕ್ರೋಶ ಹೊರ ಹಾಕುತ್ತಾರೆ.

ಗ್ರಾಮದ ಶಿವಾಜಿ ಚೌಕ್‌ ಸಮೀಪ ಮನೆಗಳ ಹೊಲಸು ನೀರು ರಸ್ತೆ ಮಧ್ಯೆ ಸಂಗ್ರಹಗೊಂಡಿದ್ದು, ದುರ್ವಾಸನೆ ಬೀರುತ್ತಿದೆ. ಮೂರು ಅಂಗನವಾಡಿ ಕೇಂದ್ರಗಳಲ್ಲಿ ಒಂದಕ್ಕೆ ಮಾತ್ರ ಸ್ವಂತ ಕಟ್ಟಡವಿದೆ. ಉಳಿದ ಎರಡು ಕೇಂದ್ರಗಳಲ್ಲಿ ಒಂದನ್ನು ಎನ್‌ಎಂಐ ಉಪ ಕೇಂದ್ರದಲ್ಲಿ ನಡೆಸಲಾಗುತ್ತಿದೆ. ಇದಕ್ಕೆ ಪ್ರತ್ಯೇಕ ಶೌಚಾಲಯ, ಅಡುಗೆ ಕೋಣೆ ಇಲ್ಲ. ಕಟ್ಟಡದ ಸುತ್ತಮುತ್ತ ತುಂಬಾ ಹೊಲಸು ಇದೆ. ಮುಂಭಾಗದಲ್ಲಿಯೇ ಜನರು ಮಲಮೂತ್ರ ವಿಸರ್ಜನೆ ಮಾಡುತ್ತಾರೆ.

ತಿಪ್ಪೆಗುಂಡಿಗಳು ಇವೆ. ಈ ವಾತಾವರಣ ಮಕ್ಕಳ ಬೆಳವಣಿಗೆಗೆ ಮಾರಕವಾಗಿದೆ. ದೈಹಿಕ ಬೆಳವಣಿಗೆಗೆ ಪೂರಕವಾದ ಆಟಗಳನ್ನು ಆಡಲು ಸ್ಥಳವೇ ಇಲ್ಲ. ಇದರ ಪಕ್ಕದಲ್ಲಿಯೇ ಇದ್ದ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಶಿಥಿಲ ಕಟ್ಟಡ ನೆಲಸಮಗೊಳಿಸಿಲ್ಲ. ಇದು ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಿದೆ. ಜನರು ಈ ಕಟ್ಟಡವನ್ನು ಶೌಚಾಲಯವಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

ಬಹುತೇಕ ಗ್ರಾಮಸ್ಥರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೆ, ಪ್ರಜ್ಞೆಯ ಕೊರತೆಯಿಂದ ಕೆಲವರು ಅವುಗಳನ್ನು ಸ್ನಾನ ಮಾಡಲು, ವಸ್ತುಗಳನ್ನು ಸಂಗ್ರಹಿಸಿಡಲು ಮೀಸಲಿಟ್ಟಿದ್ದಾರೆ. ಹಾಗಾಗಿ, ರಸ್ತೆ ಅಕ್ಕಪಕ್ಕದ ಸ್ಥಳಗಳು ಶೌಚಾಲಯಗಳಾಗಿ ಮಾರ್ಪಟ್ಟಿವೆ ಎಂದು ಸಾರ್ವಜನಿಕರು ತಿಳಿಸುತ್ತಾರೆ.

ಶೀಘ್ರದಲ್ಲಿ ಜನಪ್ರತಿನಿಧಿ, ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಗ್ರಾಮಕ್ಕೆ ಅಗತ್ಯ ಎಲ್ಲ ಮೂಲಸವಲತ್ತುಗಳನ್ನು ಒದಗಿಸಿ ಕೊಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಸ್ತೆಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸುತ್ತಾರೆ ಸಾರ್ವಜನಿಕರು.

* * 

ಸಮಸ್ಯೆಗಳಿಂದ ಜನರಿಗೆ ತುಂಬಾ ಸಂಕಷ್ಟವಾಗುತ್ತಿದೆ. ಸಂಬಂಧಪಟ್ಟವರು ಸಮಸ್ಯೆ ಪರಿಹಾರಕ್ಕೆ ಮುಂದಾಗಿ ಗ್ರಾಮದಲ್ಲಿ ಹಿತಕರ ವಾತಾವರಣ ನಿರ್ಮಿಸಬೇಕು.
ಅಶೋಕ ಫುಲೆ,
ಗ್ರಾಮ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT