7

ತಂತ್ರಜ್ಞಾನ ಬಳಸಿ ಗುಣಮಟ್ಟದ ಅರಿಸಿನ ಬೆಳೆಯಿರಿ

Published:
Updated:
ತಂತ್ರಜ್ಞಾನ ಬಳಸಿ ಗುಣಮಟ್ಟದ ಅರಿಸಿನ ಬೆಳೆಯಿರಿ

ಚಾಮರಾಜನಗರ: ‘ರೈತರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಗುಣಮಟ್ಟದ ಅರಿಸಿನ ಬೆಳೆಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು’ ಎಂದು ಸಂಸದ ಆರ್. ಧ್ರುವನಾರಾಯಣ ಸಲಹೆ ನೀಡಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸೋಮವಾರ ರಾಜ್ಯ ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಮೈಸೂರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಡೆದ ಅರಿಸಿನ ಕೊಯ್ಲು ಪೂರ್ವ, ಕೊಯ್ಲು ನಂತರದ ತಂತ್ರಜ್ಞಾನ ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅರಿಸಿನ ವಾಣಿಜ್ಯ ಬೆಳೆಯಾಗಿದ್ದು, ನೀರಾವರಿ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಆದರೆ, ಈ ಬೆಳೆಗೆ ಸರ್ಕಾರದಿಂದ ಯಾವುದೇ ಬೆಂಬಲ ಬೆಲೆ ದೊರೆಯುತ್ತಿಲ್ಲ ಎಂದರು.

ಜಿಲ್ಲೆಯಲ್ಲಿ ಅರಿಸಿನವನ್ನು ಹೆಚ್ಚು ಬೆಳೆಯಲಾಗುತ್ತದೆ. ರೈತರು ಸ್ಪ್ರಿಂಕ್ಲರ್‌, ಡ್ರಿಪ್‌ ಬಳಸಿಕೊಂಡು ಉತ್ತಮ ಇಳುವರಿ ಪಡೆಯಬೇಕು. ಇದಕ್ಕಾಗಿ ಕೃಷಿ ಇಲಾಖೆಯಿಂದ ಶೇ 90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ಅಗತ್ಯಕ್ಕೆ ತಕ್ಕಷ್ಟು ನೀರು ಬಳಸಬೇಕು ಎಂದು ಸಲಹೆ ನೀಡಿದರು.

ಕೃಷಿ ಕ್ಷೇತ್ರದಲ್ಲಿ ಶೇ 53ರಷ್ಟು ಜನರು ಉದ್ಯೋಗ ಪಡೆದಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಕುಸಿತ ಹಾಗೂ ಮಳೆಯ ಕೊರತೆಯಿಂದ ಎಲ್ಲರೂ ಕೃಷಿ ಬಿಟ್ಟು ಉದ್ಯೋಗ ಹುಡುಕಿ ಪಟ್ಟಣ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ಹಾಗಾಗಿ, ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ಮಹಾರಾಷ್ಟ್ರದ ಸಾಂಗ್ಲಿ, ತಮಿಳುನಾಡಿನ ಈರೋಡ್‌ ಮತ್ತು ಚಾಮರಾಜನಗರದಲ್ಲಿ ಅರಿಸಿನ ಮಾರುಕಟ್ಟೆಯಿದೆ. ಜಿಲ್ಲೆಯಲ್ಲಿ ಒಟ್ಟು 8,970 ಹೆಕ್ಟೇರ್‌ ಪ್ರದೇಶದಲ್ಲಿ ಅರಿಸಿನ ಬೆಳೆಯಲಾಗುತ್ತದೆ ಎಂದರು.

ರೈತರು ಅರಿಸಿನ ಬಿತ್ತನೆ ಮಾಡಿ ಅದನ್ನು ಬೆಳೆದು ಮಾರುಕಟ್ಟೆಗೆ ತರುವವರೆಗೂ ಹಲವು ಸಮಸ್ಯೆಗಳು ಎದುರಾಗುತ್ತವೆ. ಇವುಗಳ ನಿರ್ವಹಣೆಗೆ ಬಗ್ಗೆ ರೈತರಿಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಬಳಿಕ, ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಶ್ರೀನಿವಾಸ ಶೆಟ್ಟಿ, ಕೃಷಿ ವಿಜ್ಞಾನ ಕೇಂದ್ರದ ಡಾ.ಎಸ್.ಎಸ್. ನಾವಿ ಹಾಗೂ ಪ್ರಗತಿಪರ ರೈತ ನಸೀರ್‌ ಅಹ್ಮದ್‌ ಅವರು ಅರಿಸಿನ ಬೇಸಾಯದ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಸದಸ್ಯ ಕೆ.ಪಿ. ಸದಾಶಿವಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ವಿ. ಚಂದ್ರು, ರಾಜು, ಎಪಿಎಂಸಿ ಉಪಾಧ್ಯಕ್ಷ ಮಾದೇವಸ್ವಾಮಿ, ಕಾರ್ಯದರ್ಶಿ ಎಂ.ಆರ್. ರವಿಶಂಕರ್‌, ರಾಜ್ಯ ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಪ್ರಧಾನ ವ್ಯವಸ್ಥಾಪಕಿ ಡಾ. ರತ್ನಮ್ಮ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry