7

ಭತ್ತದ ತೆನೆ ತಿನ್ನುವ ಸೈನಿಕ ಹುಳು ಬಾಧೆ

Published:
Updated:
ಭತ್ತದ ತೆನೆ ತಿನ್ನುವ ಸೈನಿಕ ಹುಳು ಬಾಧೆ

ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು, ಬಣಕಲ್‌, ಕಸಬಾ ಹೋಬಳಿಗಳಲ್ಲಿ ಭತ್ತದ ಬೆಳೆಗೆ ಸೈನಿಕ ಹುಳುಬಾಧೆ ಹೆಚ್ಚಳಗೊಂಡಿದ್ದು, ರೈತರು ಪರಿತಪಿಸುವಂತಾಗಿದೆ. ಹಸಿರು ಬಣ್ಣದಿಂದ ಕೂಡಿರುವ ಸೈನಿಕ ಹುಳು ಸುಮಾರು ಒಂದುವರೆ ಇಂಚು ಉದ್ದವಿದ್ದು, ಮೈಮೇಲೆ ಅಡ್ಡಗೆರೆಗಳನ್ನು ಹೊಂದಿರುತ್ತದೆ. ತಂಪಾದ ವಾತಾವರಣದಲ್ಲಿ ಇದರ ಹಾವಳಿ ಹೆಚ್ಚಳವಾಗಿದ್ದು, ಒಂದು ಕೀಟವು 800 ರಿಂದ 1000 ಮೊಟ್ಟೆಗಳನ್ನಿಡುವುದು ಇದರ ಸಂತಾನೋತ್ಪತ್ತಿಯ ವಿಶೇಷವಾಗಿದೆ.

ಒಂದು ಭತ್ತದ ಗದ್ದೆಯಲ್ಲಿ ಸೈನಿಕ ಹುಳು ಕಾಣಿಸಿಕೊಂಡರೆ, ಕೆಲವೇ ದಿನಗಳಲ್ಲಿ ಸಂತಾನೋತ್ಪತ್ತಿ ಹೆಚ್ಚಳವಾಗಿ, ಇಡೀ ಪ್ರದೇಶವನ್ನೇ ನಾಶ ಪಡಿಸುತ್ತಿದೆ. ಈಗಾಗಲೇ ಗೋಣಿಬೀಡು ಹೋಬಳಿಯ ದಾರದಹಳ್ಳಿ, ಕೆಸವಳಲು ಪ್ರದೇಶದಲ್ಲಿ ಸೈನಿಕ ಹುಳುವಿನ ಬಾಧೆ ಹೆಚ್ಚಳವಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಭತ್ತದ ಎಲೆಗಳಲ್ಲಿ ಅಥವಾ ಬುಡದಲ್ಲಿ ಜೀವಿಸುವ ಈ ಸೈನಿಕ ಹುಳುವು, ರಾತ್ರಿ ಸಮಯದಲ್ಲಿ ಅಥವಾ ತಂಪಾದ ವಾತಾವರಣದಲ್ಲಿ ಭತ್ತದ ಗರಿಗಳು ಹಾಗೂ ತೆನೆಗಳನ್ನು ತಿಂದು ನಾಶಗೊಳಿಸುತ್ತದೆ. ಈಗಾಗಲೇ ಭತ್ತದ ಗದ್ದೆಗಳಲ್ಲಿ ತೆನೆ ಬಲಿಯ ತೊಡಗಿದ್ದು, ಈ ವೇಳೆ ಗರಿಗಳನ್ನು ನಾಶಗೊಳಿಸಿದರೆ ಭತ್ತಕ್ಕೆ ಹಾನಿಯಾಗುತ್ತದೆ. ಅಲ್ಲದೇ ತೆನೆಯನ್ನು ತಿನ್ನುವುದರಿಂದ ಇಳುವರಿ ಕೂಡ ನಶಿಸುತ್ತದೆ ಎಂಬುದು ರೈತರ ಅಳಲು.

ತಾಲ್ಲೂಕಿನಲ್ಲಿ ಸೈನಿಕ ಹುಳುವಿನ ಬಾಧೆ ಪ್ರದೇಶಕ್ಕೆ ಈಗಾಗಲೇ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಕುಮುದಾ ನೇತೃತ್ವದಲ್ಲಿ ತಜ್ಞರ ತಂಡವು ಎಲ್ಲಾ ಹೋಬಳಿಗಳ ಭತ್ತದ ಗದ್ದೆಗಳಿಗೆ ಭೇಟಿ ನೀಡುತ್ತಿದ್ದು, ಸೈನಿಕ ಹುಳು ಹಾವಳಿ ಪ್ರದೇಶದಲ್ಲಿ ಈ ಕೀಟದ ನಿಯಂತ್ರಣಕ್ಕೆ ಔಷಧಿಯನ್ನು ತಯಾರಿಸಿ ಸಿಂಪಡಿಸುವ ಕಾರ್ಯನಡೆಸಲಾಗುತ್ತಿದೆ.

‘ವೈಜ್ಞಾನಿಕವಾಗಿ ‘ಮೈಥಿಮ್ನ ಸಪರೇಟ’ ಎಂದು ಕರೆಯುವ ಸೈನಿಕ ಹುಳುವಿನ ಬಾಧೆಯನ್ನು ನಿಯಂತ್ರಿಸಲು ಸಾಧ್ಯವಿದ್ದು, ಭತ್ತ ಬೆಳೆದಿರುವ ರೈತರು ಮುಂಜಾಗ್ರತಾ ಕ್ರಮ ವಹಿಸಿದರೆ ಸುಲಭವಾಗಿ ಈ ಕೀಟವನ್ನು ನಿಯಂತ್ರಿಸಬಹುದು.

ಭತ್ತದ ತೌಡು, ಬೆಲ್ಲ, ಮೋನೋಕ್ರೋಟೊಪಾಸ್‌ ಹಾಗೂ ಡಿಡಿವಿಪಿಯನ್ನು ನಿಗದಿತ ಪ್ರಮಾಣದಲ್ಲಿ ನೀರಿನಲ್ಲಿ ಮಿಶ್ರಣ ಮಾಡಿ, ಒಂದು ರಾತ್ರಿ ಮಿಶ್ರಣವು ಕರಗಲು ಬಿಟ್ಟು, ಮರುದಿನದಂದು ಬೆಳೆಗಳಿಗೆ ಎರಚುವ ಮೂಲಕ ಈ ಸೈನಿಕ ಹುಳುವನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ. ಸೈನಿಕ ಹುಳು ಬಾಧೆ ಅನುಭವಿಸುತ್ತಿರುವ ರೈತರು, ಕೃಷಿ ಇಲಾಖೆ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿದರೆ, ಔಷಧಿ ತಯಾರಿ ವಿಧಾನ ಹಾಗೂ ಕೀಟ ನಿಯಂತ್ರಣ ವಿಧಾನಗಳ ಕುರಿತು ಮಾಹಿತಿ ನೀಡಲಾಗುವುದು’ ಎಂದು ಕೃಷಿ ಸಹಾಯಕ ನಿರ್ದೇಶಕಿ ಕುಮುದಾ ತಿಳಿಸಿದರು.

ಒಂದು ಪ್ರದೇಶದ ರೈತರು ಒಗ್ಗೂಡಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸುವುದರಿಂದ ಸೈನಿಕ ಹುಳು ಬಾಧೆಯನ್ನು ನಿಯಂತ್ರಿಸಬಹುದಾಗಿದ್ದು, ಕೀಟ ಹಾವಳಿ ನಡೆಸಿ ಹಾನಿ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವ ಬದಲು, ಕೀಟ ಹಾವಳಿ ನಡೆಸದಂತೆ ಮುನ್ನೆಚ್ಚರಿಕೆ ಕ್ರಮ ಅಗತ್ಯ ಎನ್ನುತ್ತಾರೆ ಕೃಷಿ ತಜ್ಞರು.

* * 

ಮುನ್ನೆಚ್ಚರಿಕೆ ಕ್ರಮದಿಂದ ಸೈನಿಕ ಹುಳು ಬಾಧೆಯನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು’

ಕುಮುದಾ

ಸಹಾಯಕ ಕೃಷಿ ನಿರ್ದೇಶಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry