7

ಅಜ್ಜಂಪುರ:ವೈದ್ಯರು ರಜೆ, ರೋಗಿಗಳು ಕಂಗಾಲು

Published:
Updated:
ಅಜ್ಜಂಪುರ:ವೈದ್ಯರು ರಜೆ, ರೋಗಿಗಳು ಕಂಗಾಲು

ಅಜ್ಜಂಪುರ: ಸ್ವಚ್ಛತೆ ಕಾಪಾಡದ ಸ್ಥಳೀಯ ಆಡಳಿತದಿಂದಾಗಿ ಗ್ರಾಮದಲ್ಲಿ ಜ್ವರ ಪೀಡಿತರ ಸಂಖ್ಯೆ ಉಲ್ಭಣವಾಗಿದ್ದರೆ, ಮತ್ತೊಂದೆಡೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ತಜ್ಞ ವೈದ್ಯರು ಮತ್ತು ಆಡಳಿತ ವೈದ್ಯಾಧಿಕಾರಿಗಳು ಸಾಂದರ್ಭಿಕ ರಜೆ ಮೇಲೆ ತೆರಳಿದ್ದರಿಂದ ಉತ್ತಮ ಸೇವೆ ಲಭ್ಯವಾಗದೇ ಸೋಮವಾರ ರೋಗಿಗಳು ಪರದಾಡಿದರು.

ಸ್ವಚ್ಛತೆ ಮರೆಯಾಗಿದೆ. ಎಲ್ಲಡೆ ಸಂಗ್ರಹವಾಗಿರುವ ಕಸದ ತ್ಯಾಜ್ಯ ತೆರವುಗೊಳ್ಳದೇ ದುರ್ನಾತ ಬೀರುತ್ತಿದೆ. ರೋಗಕಾರಕ ಕ್ರಿಮಿ-ಕೀಟಗಳ ಹಾವಳಿ ಹೆಚ್ಚಾಗಿದೆ. ಹಲವು ರಸ್ತೆಗಳ ಅನೇಕ ನಿವಾಸಿಗಳು ಜ್ವರ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಷ್ಟಾದರೂ ಸ್ಥಳೀಯ ಆಡಳಿತ ಸ್ವಚ್ಛತೆ ಕಡೆಗೆ ಗಮನ ಮಾತ್ರ ಹರಿಸಿಲ್ಲ ಎಂದು ಚಂದ್ರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕ್ರಮಕೈಗೊಳ್ಳದ ಅಧಿಕಾರಿ-ಆಡಳಿತ: ಪಟ್ಟಣದ ಸಿದ್ಧರಾಮೇಶ್ವರ ರಸ್ತೆಯಲ್ಲಿ ಕಳೆದ ಅನೇಕ ದಿನಗಳಿಂದಲೂ ಸಂಗ್ರಹಗೊಂಡಿರುವ ಕಸ ತೆರವುಗೊಂಡಿಲ್ಲ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದರೂ ಕ್ರಮಕೈಗೊಂಡಿಲ್ಲ. ಇನ್ನು ನೈರ್ಮಲ್ಯತೆ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪತ್ರಿಕೆಗಳ ಮೂಲಕ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ನಿವಾಸಿ ರೇಣುಕ ಬೇಸರ ವ್ಯಕ್ತಪಡಿಸಿದ್ದಾರೆ.

ಚಿಕನ್‌ ಗುನ್ಯಾ ಶಂಕೆ: ಸಿದ್ಧರಾಮೇಶ್ವರ ರಸ್ತೆಯೊಂದರಲ್ಲೇ ಕಳೆದ ಹದಿನೈದು ದಿನಗಳಲ್ಲಿ ಕನಿಷ್ಠ 10-15 ನಿವಾಸಿಗಳಿಗೆ ಚಳಿ-ಜ್ವರ, ಕೈ-ಕಾಲು ಸೆಳೆತ-ಮಂಡಿನೋವು-ತಲೆನೋವು ಬಾಧಿಸುತ್ತಿದೆ. ಅದರಲ್ಲೂ ಒಂದೇ ಮನೆಯ ಹಲವರಿಗೆ ಜ್ವರ ಹರಡುತ್ತಿರುವ ಪ್ರಕರಣಗಳೂ ಪತ್ತೆಯಾಗಿವೆ. ಕೆಲವರಿಗೆ ಚಿಕನ್‌ ಗುನ್ಯ ಕಾಯಿಲೆಯ ಎಲ್ಲಾ ಲಕ್ಷಣಗಳೂ ಕಾಣಿಸಿಕೊಂಡಿದ್ದು, ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸೋಮವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 150-200 ರೋಗಿಗಳು ತಪಾಸಣೆ-ಚಿಕಿತ್ಸೆಗಾಗಿ ಬಂದಿದ್ದರು. ಒಬ್ಬ ದಂತ ವೈದ್ಯೆ, ಮತ್ತೋರ್ವ ಹೆರಿಗೆ ತಜ್ಞೆ, ಇನ್ನೋರ್ವ ವೈದ್ಯರು ಹಾಜರಿದ್ದರು. ಆದರೆ ಹೆಚ್ಚಿನವರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಮಕ್ಕಳ ವೈದ್ಯರ ಬಳಿ ಚಿಕಿತ್ಸೆ ಬಯಸಿ ಬಂದಿದ್ದರು. ಅವರಿಬ್ಬರೂ ರಜೆ ಮೇಲಿದ್ದರಿಂದ ರೋಗಿಗಳು ಬೇಸರ ವ್ಯಕ್ತಪಡಿಸಿದರು. ದೊರೆಯದ ಚಿಕಿತ್ಸೆ, ಚಿಂತಾಜನಕ ಸ್ಥಿತಿಗೆ ಜಾರಿದ ಮಗು: ‘ಭಾನುವಾರ ರಾತ್ರಿ 6 ವರ್ಷದ ಮಗ ಗಣೇಶ್‌ಗೆ ಜ್ವರ ಕಾಣಿಸಿಕೊಂಡಿತ್ತು.

ಸೋಮವಾರ ಬೆಳಗ್ಗೆ 10 ರ ವೇಳೆಗೆ ಪರೀಕ್ಷಿಸಿದ ಆರೋಗ್ಯ ಕೇಂದ್ರದ ವೈದ್ಯರು ಕೇವಲ ಮಾತ್ರೆಕೊಟ್ಟು ಕಳುಹಿಸಿದ್ದರು. ಮನೆಗೆ ತೆರಳುತ್ತಿದ್ದಂತೆ ಜ್ವರ ಹೆಚ್ಚಾಗಿ-ಪ್ರಜ್ಞೆ ಕಳೆದುಕೊಂಡ. ಪುನಃ ಆಸ್ಪತ್ರೆಗೆ ಕರೆದೊಯ್ದರೂ, ಮಕ್ಕಳ ವೈದ್ಯರಿಲ್ಲದ ಕಾರಣ ಸೂಕ್ತ ಚಿಕಿತ್ಸೆ ಲಭ್ಯವಾಗದೇ ಮಗ ಮತ್ತಷ್ಟು ಚಿಂತಾಜನಕ ಸ್ಥಿತಿಗೆ ಜಾರಿದ. ಕೂಡಲೇ ಆಂಬುಲೆನ್ಸ್ ಮೂಲಕ ಶಿವಮೊಗ್ಗಗೆ ತರೆಳಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಈಗ ಮಗ ತುರ್ತು ನಿಗಾ ಘಟಕದಲ್ಲಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಚಿಕಿತ್ಸೆಗೆ ಹಣ ಹೊಂದಿಸುವುದೂ ನಮಗೆ ಕಷ್ಟವಾಗಿದೆ’ ಎಂದು ಸಿದ್ಧರಾಮೇಶ್ವರ ರಸ್ತೆ ನಿವಾಸಿ ಮಗುವಿನ ತಾಯಿ ಪ್ರೇಮತೀರ್ಥಾಚಾರ್ ‘ಪ್ರಜಾವಾಣಿ’ ಜೊತೆ ಮಾತನಾಡುತ್ತ ಬೇಸರ ವ್ಯಕ್ತಪಡಿಸಿದರು.

‘ ಆರೋಗ್ಯ ಕೇಂದ್ರದ ಲೋಪ-ದೋಶಗಳನ್ನು ಸರಿಪಡಿಸಿ, ಉತ್ತಮ ಸೇವೆ ನೀಡಲು ತಾಲ್ಲೂಕು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳು ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ಅನಿವಾರ್ಯ’ ಎಂದು ಅಜ್ಜಂಪುರದ ಕರಾವೇ ಯುವ ಸೇನೆ ಎಚ್ಚರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry