ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷ ಕಳೆದರೂ ಸಿಗದ ವೇತನ ಭಾಗ್ಯ

Last Updated 21 ನವೆಂಬರ್ 2017, 8:49 IST
ಅಕ್ಷರ ಗಾತ್ರ

ಡಂಬಳ: ಮಕ್ಕಳಿಗೆ ಹೊಸ ಬಟ್ಟೆ ಸಡಗರವಿಲ್ಲ. ಹಬ್ಬ ಹರಿದಿನಗಳು ಬಂದರೆ ಕುಟುಂಬದಲ್ಲಿ ಸಂತೋಷವಿಲ್ಲ. ಇಡೀ ಊರನ್ನೇ ಸ್ವಚ್ಛ ಮಾಡಿದ ಇವರಿಗೆ ಕಳೆದೊಂದು ವರ್ಷದಿಂದ ಸಂಬಳ ಇಲ್ಲ. ಇಲ್ಲಿನ ಗ್ರಾಮ ಪಂಚಾಯ್ತಿಯಲ್ಲಿ ಕರ ವಸೂಲಿಗಾರ, ಸಿಪಾಯಿ, ವಾಟರ್‌ಮನ್‌, ಸ್ಚಚ್ಛತಾ ಸಿಬ್ಬಂದಿ ಸೇರಿ ಒಟ್ಟು 16 ಮಂದಿ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆದರೆ, ಇವರಿಗೆ ಸಕಾಲಕ್ಕೆ ವೇತನ ಸಿಗದೆ, ಕುಟುಂಬ ನಿರ್ವಹಣೆಗಾಗಿ ಪರದಾಡುತ್ತಿದ್ದಾರೆ.

‘ನಮಗೂ ಹೆಂಡತಿ ಮಕ್ಕಳು ಇದ್ದಾರೆ. ಒಂದು ವರ್ಷದಿಂದ ಸಂಬಳವನ್ನೇ ಕೊಟ್ಟಿಲ್ಲ. ಕೇಳಿದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ’ ಎಂದು ಬಸವಂತಪ್ಪ ಹರಿಜನ ಹಾಗೂ ಸಿದ್ದಮ್ಮ ಚಲವಾದಿ ನೋವು ತೋಡಿಕೊಂಡರು.

‘ಊರು ಸಚ್ಚವಾಗಿರಲು ನಾವು ಬೇಕು. ಆದರೆ, ನಾವು ನಮ್ಮ ಕುಟುಂಬ ಚೆನ್ನಾಗಿರುವುದು ಯಾರಿಗೂ ಬೇಡವಾಗಿದೆ. ಮಕ್ಕಳಿಗೆ ಐದು ರೂಪಾಯಿ ಕೊಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಕಳೆದ ವರ್ಷ ಸರಿಯಾಗಿ ಸಂಬಳ ಲಭಿಸಿದೆ, ಮನೆಗಳಿಂದ ಒಂದಿಷ್ಟು ರೊಟ್ಟಿ, ಅನ್ನ ಪಡೆದು ಜೀವನ ಸಾಗಿಸಿದ್ದೇವೆ. ನಾವೂ ಮನುಷ್ಯರೇ’ ಎಂದು ಕಾರ್ಮಿಕರಾದ ಮೈಲೆಪ್ಪ ಹರಿಜನ, ನಿಂಗವ್ವ ಮಾದರ ಅಳಲು ತೋಡಿಕೊಂಡರು.

ಮನವಿ ಸಲ್ಲಿಸಿದರೂ ಪ್ರಯೋನವಾಗಿಲ್ಲ: ‘ಕಳೆದ ವರ್ಷ ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಪಗಾರ ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಚ್,ಕೆ ಪಾಟೀಲ ಹಾಗೂ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಅಥವಾ ಶುಭ ಕಾರ್ಯ ಬಂದರೆ ನಾವು ಕೈಯಲ್ಲಿ ಹಣ ಇಲ್ಲದೆ ಪರದಾಡುತ್ತೇವೆ. ಅಂಗಡಿಯಲ್ಲಿ ಉದ್ರಿ ನೀಡುತ್ತಿಲ್ಲ, ಕೈ ಸಾಲವೂ ಸಿಗುತ್ತಿಲ್ಲ. ಹೊಟ್ಟೆ ತುಂಬಾ ಊಟ ಮಾಡಿ ತಿಂಗಳುಗಳೇ ಕಳೆದವು. ನಮ್ಮ ಕಷ್ಟ ಯಾರಿಗೆ ಹೇಳಬೇಕು ಸ್ವಾಮಿ’ ಎಂದು ಲಕ್ಷ್ಮವ್ವ ಹರಿಜನ ಹಾಗೂ ಪ್ರೇಮವ್ವ ಬೇವಿನಮರದ ಬೇಸರ ವ್ಯಕ್ತಪಡಿಸಿದರು.

‘ಮೂವರು ಮಕ್ಕಳಿದ್ದಾರೆ. ಶಾಲೆಗೆ ಹೋಗುವಾಗ ಅಥವಾ ₨5 ಕೇಳಿದರೆ ಕೊಡಲು ಆಗದಂತಹ ಸ್ಥಿತಿಯಿದೆ. ಯಾವಗ ಕೇಳಿದರೂ ಸಂಬಳ ಆಗಿಲ್ಲ, ಎನ್ನುತ್ತೀಯಲ್ಲ ಅಪ್ಪಾ, ನಿನ್ನಪಗಾರ ಯಾವಾಗ ಬರುತ್ತೆ’ ಎಂದು ಮಕ್ಕಳು ಪ್ರಶ್ನಿಸುತ್ತಿದ್ದಾರೆ. ಅವರಿಗೆ ಎಷ್ಟಂತ ಸುಳ್ಳು ಹೇಳಬೇಕು’ ಎಂದು ದೇವಪ್ಪ ಹರಿಜನ ಅಳಲು ತೋಡಿಕೊಂಡರು.

ಸುಮಾರು 20 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಕಳೆದ ಒಂದು ವರ್ಷದಲ್ಲಿ ಗ್ರಾಮ ಪಂಚಾಯತಿಗೆ ಕರ ವಸೂಲಿಯಿಂದ ಸಂಗ್ರಹವಾದ ಹಣ ಯಾವ ಉದ್ದೇಶಗಳಿಗೆ ಬಳಕೆಯಾಗಿದೆ. ಸರ್ಕಾರದಿಂದ ಬರುವ ಅನುದಾನ ಎಲ್ಲಿಗೆ ಹೋಗುತ್ತಿದೆ’ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಕ್ರಮ ಕೈಗೊಳ್ಳುವೆ: ಜಿ.ಪಂ. ಸಿಇಒ
‘ಡಂಬಳ ಗ್ರಾಮ ಪಂಚಾಯ್ತಿ ಕಾರ್ಮಿಕರಿಗೆ ವೇತನ ಪಾವತಿ ವಿಳಂಬ ಆಗಿರುವುದರ ಕುರಿತು, ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಪಂಚಾಯ್ತಿ ಕರ ವಸೂಲಿಯಲ್ಲೇ ಸಿಬ್ಬಂದಿಗೆ ವೇತನ ನೀಡಬೇಕು. ಕಳೆದ ಒಂದು ವರ್ಷದಿಂದ ಏನಾಗಿದೆ ಎನ್ನುವುದನ್ನು ಪರಿಶೀಲಿಸುತ್ತೇನೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT