ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆ ಬೆಳೆ ಗುಣಮಟ್ಟದ ನಿರ್ವಹಣೆಯಿಂದ ಇಳುವರಿ ಹೆಚ್ಚು

Last Updated 21 ನವೆಂಬರ್ 2017, 9:01 IST
ಅಕ್ಷರ ಗಾತ್ರ

ಶಿಗ್ಗಾವಿ: ಕಡಲೆ ಬೆಳೆಯು ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿದ್ದು, ಈಗಾಗಲೆ ಬಿತ್ತನೆ ಕಾರ್ಯ ಮುಗಿದಿದ್ದು, ಕಡಲೆ ಬೆಳೆ ಉತ್ತಮ ಇಳುವರಿ ಪಡೆಯಬೇಕಾದರೆ. ಅದರ ಗುಣಮಟ್ಟದ ನಿರ್ವಹಣೆ ಅವಶ್ಯವಾಗಿದೆ. ಈ ಕುರಿತು ಮಾಹಿತಿ ಪಡೆಯುವುದು ಅಗತ್ಯವಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಡಾ.ಆರ್‌.ನಾಗನಗೌಡ್ರ ರೆಡ್ಡಿ ಹೇಳಿದರು.

ತಾಲ್ಲೂಕಿನ ಹಿರೇಮಣಕಟ್ಟಿ ಗ್ರಾಮದ ಕಡಲೆ ಹೊಲವೊಂದರಲ್ಲಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿ, ಸೆಪ್ಟೆಂಬರ್‌ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಮಳೆ ಹಿಂಗಾರು ಬಿತ್ತನೆಯಾದ ಕಡಲೆ, ಗೋಧಿ,ಕುಸಬಿ ಸೇರಿದಂತೆ ಕೆಲವು ಬೆಳೆಗಳಿಗೆ ಉತ್ತಮವಾಗಿದೆ. ಈಗಾಗಲೆ ತಾಲ್ಲೂಕಿನಲ್ಲಿ ಸುಮಾರು ಒಂದು ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ ಎಂದರು. ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು ಶೇ 30ರಷ್ಟು ಕಡಲೆ ಬಿತ್ತನೆ ವಿಸ್ತೀರ್ಣ ಹೆಚ್ಚಾಗಿದೆ. ಬೆಳವಣಿಗೆ ಪ್ರಥಮ ಹಂತದಲ್ಲಿದ್ದು, ಅದರ ನಿರ್ವಹಣೆ ಪ್ರಮುಖವಾಗಿದೆ ಎಂದರು.

ಕಡಲೆ ಬೆಳೆ ಹೂವಾಡುವ ಪ್ರಾರಂಭಿಕ ಹಂತದಲ್ಲಿ ಶೇ 2ರಷ್ಟು ಯೂರಿಯಾ ದ್ರಾವಣವನ್ನು ಸಿಂಪರಣೆ ಮಾಡಬೇಕು. (ಅಂದರೆ ಪ್ರತಿ ಲೀಟರ್‌ ನೀರಿಗೆ 20 ಗ್ರಾಂ ಯೂರಿಯಾ ಬೆರಸಬೇಕು). ಪ್ರತಿ ಎಕರೆಗೆ 150ರಿಂದ 300 ಲೀಟರ್ ನೀರು ಸಿಂಪರಣೆ ಅವಶ್ಯವಿದೆ. ಲಘು ಪೋಷಕಾಂಶಗಳಾದ ಇಡಿಟಿಎ ರೂಪದ ಶೇ 0.5 ಸತುವಿನ ಸಲ್ಫೇಟ್ ಮತ್ತು ಶೇ. 0.5 ಕಬ್ಬಿಣದ ಸಲ್ಫೇಟ್‌, ಶೇ 0.2 ಬೋರಾಕ್ಸ್ ಹಾಗೂ ಶೇ 0.1 ಅಮೋನಿಯಂ ಮಾಲಿಬ್ಡೇಟ್‌ನ ಮಿಶ್ರಣವನ್ನು ಹೂವಾಡುವ ಹಂತದಲ್ಲಿ ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪರಣೆ ಕೈಗೊಳ್ಳಬೇಕು ಎಂದರು.

ಕಡಲೆ ಬಿತ್ತಿದ 35 ದಿನಗಳ ನಂತರ 20 ಪಿಪಿಎಮ್ ನ್ಯಾಫ್ಯಾಲಿಕ್‌ ಆಸಿಟಿಕ್ ಅಸಿಡ್ ಸಿಂಪಡಿಸಬೇಕು. (100 ಲೀಟರ್‌ ನೀರಿನಲ್ಲಿ 2 ಮಿ.ಲೀ. ಎನ್‌ಎಎ ಬೆರೆಸುವುದು) ಹಾಗೂ 1.0 ಮಿಲೀ ನೈಟ್ರೋಬೆಂಜೀನ್ ಸಸ್ಯವರ್ಧಕಗಳನ್ನು ಸಿಂಪರಣೆ ಮಾಡುವುದರಿಂದ ಹೂವು ಉದುರುವುದು ಕಡಿಮೆಯಾಗಿ, ಕಾಯಿಗಳ ಸಂಖೈ ಹೆಚ್ಚುವುದಲ್ಲದೇ, ಗುಣಮಟ್ಟದ ಫಸಲು ಬರುವುದು. ಅಲ್ಲದೆ ಬೆಳೆಯ ಕುಡಿ ಚಿವುಟುವುದು ಅವಶ್ಯವಾಗಿದೆ ಎಂದರು.

ಕಡಲೆ ಬೆಳೆಯಲ್ಲಿ ಜಮೀನಿನ ಬದಿಯಲ್ಲಿ ಬಿಳಿಜೋಳ, ಕುಸಬಿ ಸೇರಿದಂತೆ ಮಿಶ್ರ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಕೃಷಿ ಅಧಿಕಾರಿಗಳಾದ ಡಾ. ಬಸವನಗೌಡ ಪಾಟೀಲ, ಸಹಾಯಕ ಕೃಷಿ ಅಧಿಕಾರಿ ಶಿವಾನಂದ ದಾವಣಗೇರಿ, ಹಿರೆಮಣಕಟ್ಟಿ ರೈತರಾದ ಮುತ್ತಣ್ಣ ನಾಗಪ್ಪ ಅಂಗಡಿ, ಸಿದ್ದಣ್ಣ ಬಸವಣ್ಣೆಪ್ಪ ಕಮಡೋಳ್ಳಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT