7

ಠೇವಣಿ ಉಳಿಸಿಕೊಂಡರೆ ರಾಜಕೀಯ ನಿವೃತ್ತಿ

Published:
Updated:

ಕೋಲಾರ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ‘ನಮ್ಮ ಕಾಂಗ್ರೆಸ್’ ಪಕ್ಷದ ಅಭ್ಯರ್ಥಿಗಳು ಠೇವಣಿ ಉಳಿಸಿಕೊಂಡರೆ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ (ಡಿಸಿಸಿ) ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಶಾಸಕ ವರ್ತೂರು ಪ್ರಕಾಶ್‌ಗೆ ಸವಾಲು ಹಾಕಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ಗೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಮುಖಂಡರ ವಿರುದ್ಧ ಹೇಳಿಕೆ ನೀಡಲು ನೈತಿಕತೆ ಇಲ್ಲ. ಮುಖ್ಯಮಂತ್ರಿಯ ಕೈಕಾಲು ಹಿಡಿದು ಅಭಿವೃದ್ಧಿಯ ಸೋಗಿನಲ್ಲಿ ಅನುದಾನ ತಂದಿದ್ದ ಶಾಸಕರು ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ಶಾಸಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ನಮ್ಮ ಕಾಂಗ್ರೆಸ್ ಸ್ಥಾಪನೆ ಮಾಡಿದ್ದಾರೆ. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಮಾತನಾಡುವುದಕ್ಕೆ ವರ್ತೂರು ಪ್ರಕಾಶ್‌ ಯಾರು. ಕಾಂಗ್ರೆಸ್‌ನಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ನಾರಾಯಣಸ್ವಾಮಿ ಅವರನ್ನು ನಮ್ಮ ಕಾಂಗ್ರೆಸ್‌ ಪಕ್ಷಕ್ಕೆ ಕರೆಯುವುದಕ್ಕೆ ಅವರಿಗೆ ಯಾವ ನೈತಿಕತೆಯಿದೆ. ಕ್ಷೇತ್ರದಲ್ಲಿ ಅವರ ಆಟ ಇನ್ನು ಮುಂದೆ ನಡೆಯಲ್ಲ ಎಂದರು.

ನಿನ್ನೆ ಮೊನ್ನೆವರೆಗೂ ಸಿದ್ದರಾಮಯ್ಯರನ್ನು ಹೊಗಳುತ್ತಿದ್ದ ವರ್ತೂರು ಪ್ರಕಾಶ್‌ ಈಗ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಶಾಸಕರ ದುರಾಹಂಕಾರದ ನಡೆಯನ್ನು ಜನರು ಗಮನಿಸುತ್ತಿದ್ದಾರೆ ಎಂದು ಹೇಳಿದರು.

ನೋಟಿಸ್ ಜಾರಿ: ನಮ್ಮ ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿರುವ ಪಕ್ಷದ ಮುಖಂಡರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಬಿ ಫಾರಂ ಪಡೆದು ಆಯ್ಕೆಯಾಗಿರುವವರು ಮತ್ತು ನಾಮ ನಿರ್ದೇಶಿತಗೊಂಡಿರುವವರು ಪಕ್ಷದಲ್ಲೇ ಉಳಿದುಕೊಳ್ಳಬೇಕು. ನಮ್ಮ ಕಾಂಗ್ರೆಸ್ ಹಿಂದೆ ಹೋದರೆ ಪಕ್ಷದಿಂದ ಉಚ್ಚಾಟಿಸುತ್ತೇವೆ ಎಂದು ಎಚ್ಚರಿಸಿದರು.

ಶಾಸಕರು ದೇವರಾ?: ‘ವರ್ತೂರು ಪ್ರಕಾಶ್‌ ಹಿಂದೆ ಕುರುಬ ಸಮುದಾಯದವರಿದ್ದರೆ ನನ್ನ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಸಮುದಾಯದವರಿದ್ದಾರೆ. ಮುಂದಿನ ಚುನಾವಣೆಯಲ್ಲಿ ನನ್ನನ್ನು ಮೂರನೇ ಸ್ಥಾನಕ್ಕೆ ಇಳಿಸಲು ವರ್ತೂರು ಪ್ರಕಾಶ್‌ ದೇವರಾ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಪ್ರಶ್ನಿಸಿದರು.

ದುಸ್ಥಿತಿ ಬರುತ್ತದೆ: ’ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಪಕ್ಷ ರಚಿಸಬಹುದು. ಈ ಹಿಂದೆ ಹೊಸ ಪಕ್ಷ ಸ್ಥಾಪಿಸಿದವರಿಗೆಲ್ಲಾ ಏನು ಗತಿ ಬಂದಿದೆ ಎಂಬುದು ವರ್ತೂರು ಪ್ರಕಾಶ್‌ಗೆ ಗೊತ್ತಿದೆ. ಅದೇ ದುಸ್ಥಿತಿ ಅವರಿಗೂ ಬರುತ್ತದೆ’ ಎಂದು ಮುಖಂಡ ವಿ.ಆರ್.ಸುದರ್ಶನ್

ಹೇಳಿದರು.

ಮಾಜಿ ಸಚಿವ ನಿಸಾರ್‌ ಅಹಮ್ಮದ್, ಎಂಎಸ್‌ಐಎಲ್ ಮಾಜಿ ಅಧ್ಯಕ್ಷ ಎಂ.ಎಲ್.ಅನಿಲ್‌ಕುಮಾರ್, ಜಿಲ್ಲಾ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ವೈ.ಶಿವಕುಮಾರ್ ಹಾಜರಿದ್ದರು.

ಚಿಲ್ಲರೆ ರಾಜಕಾರಣ ಮಾಡಿಲ್ಲ

ಭವ್ಯ ಇತಿಹಾಸ ಇರುವ ಕಾಂಗ್ರೆಸ್‌ನಿಂದ ತಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ವರ್ತೂರು ಪ್ರಕಾಶ್‌ ಅವರಂತೆ ಚಿಲ್ಲರೆ ರಾಜಕಾರಣ ಮಾಡಿಕೊಂಡು ಬಂದಿಲ್ಲ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಸಹಾಯ ಮಾಡಿದವರಿಗೆ ಮೋಸ ಮಾಡಿಲ್ಲ. ವಿಧಾನಸೌಧದಲ್ಲಿ ಮುಖ್ಯಮಂತ್ರಿಯ ಕೈ ಕಾಲು ಹಿಡಿಯುವ ಅವರು ಹೊರಗೆ ಬಂದು ತೇಜೋವಧೆ ಮಾಡುತ್ತಾರೆ. ಅವರ ಹಾಗೆ ನಾನು ಅವಕಾಶವಾದಿಯಲ್ಲ. ಶಾಸಕರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್ ನಾಯಕರ ವಿರುದ್ಧ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಲಿ ಎಂದು ತಾಕೀತು ಮಾಡಿದರು.

* *

ಬಿಜೆಪಿ ಮುಖಂಡರು ಹತಾಷೆಯಿಂದ ಕಾಂಗ್ರೆಸ್ ನಾಯಕರ ವಿರುದ್ಧ ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಬಿಜೆಪಿಯವರು ಸಂಸ್ಕೃತಿಯ ಪಾಠ ಹೇಳುವ ಆರ್‌ಎಸ್‌ಎಸ್‌ನಿಂದ ಮಾರ್ಗದರ್ಶನ ಪಡೆಯಲಿ

ವಿ.ಆರ್.ಸುದರ್ಶನ್, ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry