ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಭಿಮಾನಕ್ಕೆ ಇನ್ನೊಂದು ಹೆಸರು ಟಿಪ್ಪು

Last Updated 21 ನವೆಂಬರ್ 2017, 9:31 IST
ಅಕ್ಷರ ಗಾತ್ರ

ಕೊಪ್ಪಳ: ‘ಸ್ವಾಭಿಮಾನಕ್ಕೆ ಇನ್ನೊಂದು ಹೆಸರು ಟಿಪ್ಪು ಸುಲ್ತಾನ್‌' ಎಂದು ಶಾಸಕ ರಾಘವೇಂದ್ರ ಹಿಟ್ನಾಳ್‌ ಹೇಳಿದರು.\ ನಗರದ ಸಾಹಿತ್ಯಭವನದಲ್ಲಿ ಸೋಮವಾರ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಟಿಪ್ಪು ದೇಶಕ್ಕಾಗಿ ತನ್ನ ಮಕ್ಕಳನ್ನು ಒತ್ತೆ ಇಟ್ಟಿದ್ದಾರೆ. ಹೀಗಾಗಿ ಇವರು ಅಪರೂಪದ ಕ್ರಾಂತಿವೀರ. ಮರಾಠರು ಶೃಂಗೇರಿಯ ದೇವಾಲಯದ ಖನಿಜ ಸಂಪತ್ತನ್ನು ಕೊಳ್ಳೆಹೊಡೆಯುತ್ತಿರುವಾಗ ಆ ದೇವಾಲಯ ರಕ್ಷಿಸಿದ ಕೀರ್ತಿ ಟಿಪ್ಪುವಿಗೆ ಸಲ್ಲುತ್ತದೆ. ಉಳುವವನೆ ಭೂಮಿಯ ಒಡೆಯ ಎನ್ನುವ ಯೋಜನೆಯಿಂದ ಟಿಪ್ಪು ಬಡವರಿಗೆ ಭೂಮಿಯನ್ನು ನೀಡಿದನು. ನಂತರ ಇಡೀ ದೇಶದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಆ ಯೋಜನೆಯನ್ನು ಜಾರಿಮಾಡಿದರು. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ್‌ ಅರಸು ಅವರು ಅನುಷ್ಠಾನಗೊಳಿಸಿದರು' ಎಂದರು.

ಮೈಸೂರಿನ ಮಹಾರಾಣಿ ಕಲಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ನಯೀಮ್‌–ಉರ್‌–ರಹೆಮಾನ್‌ ಉಪನ್ಯಾಸ ನೀಡಿ, "ಟಿಪ್ಪು ಸುಲ್ತಾನ್ ಜನಾನುರಾಗಿ ಆಗಿದ್ದಾರೆ. ರಾಜ್ಯದ ಜನತೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲದೆ ಜನರ ಹಿತ ಕಾಪಡುವಲ್ಲಿ ಶ್ರಮಿಸಿದ್ದಾರೆ. ಆದರೆ ಇಂದು ಅವರ ಜಯಂತಿ ವಿವಾದ, ಸಂಘರ್ಷಗಳ ನಡುವೆ ಆಚರಿಸುತ್ತಿರುವುದು ಬೇಸರ ಮೂಡಿಸಿದೆ. ಟಿಪ್ಪು ಮಹಾನ್‌ ಪರಾಕ್ರಮಿ ಆಗಿದ್ದಾನೆ. ಹಾಗಾಗಿ ಇತನೊಡನೆ ಯುದ್ಧ ಮಾಡಲು ದೇಶ–ವಿದೇಶದವರು ಹೆದರುತ್ತಿದ್ದರು. ಟಿಪ್ಪು ಹಾಗೂ ಹೈದರಾಲಿ ಸೈನಿಕ ಕುಟುಂಬಕ್ಕೆ ಸೇರಿದವರು. ಅಲ್ಲದೇ ಬ್ರಿಟಿಷರ ವಿರುದ್ಧ ಸತತ 17 ವರ್ಷ ಹೋರಾಡಿದ ಏಕೈಕ ಕುಟುಂಬ ಇವರದಾಗಿದೆ’ ಎಂದರು.

‘ಟಿಪ್ಪು ಹಿಂದೂಗಳ ಮೇಲೆ ಮಾತ್ರ ಯುದ್ಧ ಮಾಡಲಿಲ್ಲ. ನಿಜಾಮರು, ನವಾಬರು ಹಾಗೂ ಬ್ರಿಟಿಷರ ಪಕ್ಷಪಾತಿಗಳಾಗಿದ್ದ ಮುಸ್ಲಿಮರ ಮೇಲೆಯೂ ಯುದ್ಧ ಮಾಡಿದ್ದಾನೆ. ಅಲ್ಲದೇ ಆತನ ಆಸ್ಥಾನದಲ್ಲಿ ಹಲವಾರು ಹಿಂದೂಗಳು ಕೆಲವು ಇಲಾಖೆಗಳನ್ನು ನೋಡಿಕೊಳ್ಳುತ್ತಿದ್ದರು. ಹಾಗಾಗಿ ಸಮುದಾಯದ ವಿರುದ್ಧ ಹೋರಾಟ ಮಾಡಲಿಲ್ಲ. 150ಕ್ಕೂ ಹೆಚ್ಚು ಹಿಂದೂ ದೇವಾಲಯಗಳಿಗೆ ದಾನ, ದೇಣಿಗೆಗಳನ್ನು ನೀಡಿ ಅಭಿವೃದ್ಧಿ ಪಡಿಸಿದ್ದಾನೆ. ಅಲ್ಲದೆ ಇತ ಭಾರತೀಯ ಸೈನ್ಯ ಕಟ್ಟಲು ಬಹಳ ಪ್ರಯತ್ನ ಮಾಡಿದ್ದಾನೆ’ ಎಂದು
ಹೇಳಿದರು.

ನಗರಸಭೆ ಆಧ್ಯಕ್ಷ ಮಹೇಂದ್ರ ಛೋಪ್ರಾ ಉದ್ಘಾಟಿಸಿದರು. ಯೂಸುಫಿಯಾ ಮಸೀದಿಯ ಮೌಲಾನಾ ಮುಫ್ತಿ ಮಹಮ್ಮದ್‌ ನಜೀರ್‌ ಅಹ್ಮದ್‌ ಸಾನ್ನಿಧ್ಯ ವಹಿಸಿದ್ದರು.

ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಮೌಲಾಹುಸೇನ್‌ ಜಮೇದಾರ, ಸದಸ್ಯರಾದ ಅಮ್ಜದ್‌ ಪಟೇಲ್‌, ಮುತ್ತುರಾಜ್‌ ಕುಷ್ಟಗಿ, ಖಾಜಾವಲಿ ಬನ್ನಿಕೊಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅನೂಪ್‌ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ, ಸಹಾಯಕ ಆಯುಕ್ತ ಗುರುದತ್‌ ಹೆಗ್ಡೆ, ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಅಂಜುಮನ್‌ ಕಮಿಟಿಯ ಅಧ್ಯಕ್ಷ ಕಾಟನ್‌ ಪಾಷಾ, ಮುಖಂಡ ಮಾನ್ವಿ ಪಾಷಾ ಇದ್ದರು.

* * 

ಟಿಪ್ಪು ಸುಲ್ತಾನ್‌ನನ್ನು ಪಟ್ಟಭದ್ರರು ಸಮುದಾಯಕ್ಕೆ ಸೀಮಿತಗೊಳಿಸುತ್ತಿದ್ದಾರೆ. ಟಿಪ್ಪು ಜಯಂತಿ ವಿರೋಧಿಸುವವರು ಇತಿಹಾಸ ತಿಳಿದುಕೊಳ್ಳಬೇಕು
ರಾಘವೇಂದ್ರ ಹಿಟ್ನಾಳ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT