7

ಕಂಟಕವಾಗುತ್ತಿವೆ ನದಿ, ಕೆರೆ ಕಟ್ಟೆಗಳು

Published:
Updated:
ಕಂಟಕವಾಗುತ್ತಿವೆ ನದಿ, ಕೆರೆ ಕಟ್ಟೆಗಳು

ರಾಮನಗರ: ಜಿಲ್ಲೆಯಾದ್ಯಂತ ಈ ವರ್ಷ ಉತ್ತಮ ಮಳೆ ಆಗಿದೆ. ನದಿಗಳಿಗೆ ಜೀವ ಬಂದಿದ್ದು, ಕೆರೆ–ಕಟ್ಟೆಗಳು ತುಂಬಿವೆ. ಇದರೊಟ್ಟಿಗೆ, ನೀರಿಗೆ ಆಕಸ್ಮಿಕವಾಗಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಆಘಾತಕಾರಿ ಸಂಗತಿ ಆಗಿದೆ.

ತಾಲ್ಲೂಕಿನ ಕೈಲಾಂಚ ಹೋಬಳಿಯ ಹುಲಿಕೆರೆ ಗ್ರಾಮದ ಬಳಿ ಅರ್ಕಾವತಿ ನದಿ ದಾಟಲು ಹೋಗಿ ಸೋಮವಾರ ಇಬ್ಬರು ಯುವಕರು ದಾರುಣ ಸಾವು ಕಂಡಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರದ ರಾಮಯ್ಯನ ಕೆರೆಯಲ್ಲಿ ಬಟ್ಟೆ ಒಗೆಯಲು ಹೋಗಿ ನಾಲ್ವರು ಮಹಿಳೆಯರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿರುವುದು ಆತಂಕ ಹೆಚ್ಚಿಸಿದೆ.

ಇದೇ ಹುಲಿಕೆರೆಯ ಬಳಿ ತಿಂಗಳ ಹಿಂದಷ್ಟೇ ವೃದ್ಧರೊಬ್ಬರು ಅರ್ಕಾವತಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ತಿಂಗಳುಗಳ ಹಿಂದೆ ಕನಕಪುರ ತಾಲ್ಲೂಕಿನಲ್ಲಿ ಇಬ್ಬರು ಮಳೆ ನೀರಿನ ಪ್ರವಾಹಕ್ಕೆ ಬಲಿಯಾಗಿದ್ದರು. ರಾಮನಗರ ತಾಲ್ಲೂಕಿನ ಮೆಳೆಹಳ್ಳಿ ಬಳಿ ನಂದೀಶ್‌ ಎಂಬಾತ ಹಳ್ಳಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಬಿಡದಿಯ ನೆಲ್ಲಿಗುಡ್ಡ ಕೆರೆಯಲ್ಲಿ ಇಬ್ಬರು ಮೀನುಗಾರರು ಮುಳುಗಿ ಮೃತಪಟ್ಟಿದ್ದರು.

ಜಿಲ್ಲೆಯಲ್ಲಿ ಈ ವರ್ಷ ಸುಮಾರು 50ಕ್ಕೂ ಹೆಚ್ಚು ಮಂದಿ ಹೀಗೆ ಕೆರೆ, ನದಿ, ಕೃಷಿ ಹೊಂಡಗಳಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂಕಿ–ಅಂಶಗಳೇ ಹೇಳುತ್ತಿವೆ. ದಶಕಗಳ ನಂತರ ಅರ್ಕಾವತಿ ನದಿಯು ಮತ್ತೆ ಮೈದುಂಬಿ ಹರಿಯುತ್ತಿದೆ. ಅತ್ತ ವೃಷಭಾವತಿ ಮಳೆಯ ಪ್ರವಾಹದಿಂದ ಬೋರ್ಗರೆಯುತ್ತಲೇ ಇದೆ. ಬಹುತೇಕ ಕೆರೆ–ಕಟ್ಟೆಗಳು ಭರ್ತಿ ಆಗಿವೆ. ಅವುಗಳ ಆಳ–ಅಗಲದ ಅರಿವಿಲ್ಲದವರು ಮುನ್ನಚ್ಚರಿಕೆ ವಹಿಸದೇ ಪ್ರಾಣ ಕಳೆದುಕೊಳ್ಳತೊಡಗಿದ್ದಾರೆ.

ಸಾಕಷ್ಟು ಕೆರೆಗಳ ಹೂಳನ್ನು ಎತ್ತಿದ್ದು, ಕೆಲವೆಡೆ 40–50 ಅಡಿವರೆಗೂ ಆಳವಿದೆ. ಅಕ್ರಮ ಮರಳು ದಂಧೆಯಿಂದಾಗಿ ಅಲ್ಲಲ್ಲಿ ದೊಡ್ಡ ದೊಡ್ಡ ಕಂದಕಗಳೇ ಸೃಷ್ಟಿಯಾಗಿವೆ. ಇಲ್ಲೆಲ್ಲ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದೆ. ಇಂತಹ ಕಡೆ ಬಟ್ಟೆ ತೊಳೆಯಲು, ಈಜಲು, ಜಾನುವಾರುಗಳಿಗೆ ನೀರು ಕುಡಿಸಲು... ಕಡೆಗೆ ಕುತೂಹಲಕ್ಕೆಂದು ನೋಡಲು ಹೋದವರೂ ಜೀವ ಕಳೆದುಕೊಳ್ಳತೊಡಗಿದ್ದಾರೆ.

ಕೃಷಿ ಹೊಂಡಕ್ಕೂ ಬಲಿ: ಬರಗಾಲದಲ್ಲಿ ರೈತರಿಗೆ ಸಂಜೀವಿನಿ ಆಗುವ ಸಲುವಾಗಿ ಸರ್ಕಾರವು ಕೃಷಿ ಹೊಂಡಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ. ಆದರೆ ಈ ಹೊಂಡಗಳೇ ರೈತರ ಪಾಲಿಗೆ ಮೃತ್ಯುಕೂಪಗಳೂ ಆಗುತ್ತಿವೆ. ಈಚೆಗೆ ರಾಮನಗರ ತಾಲ್ಲೂಕಿನಲ್ಲಿ ನಿವೃತ್ತ ಶಿಕ್ಷಕರೊಬ್ಬರು ಕೃಷಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು.

ಹೊಂಡಗಳ ತಳಕ್ಕೆ ಹೊದಿಸಿರುವ ಪ್ಲಾಸ್ಟಿಕ್‌ ಜಾರುತ್ತಿದ್ದು, ಒಳಗೆ ಬಿದ್ದವರು ಮೇಲೆದ್ದು ಬರಲು ಆಗದಂತೆ ಆಗಿದೆ. ನೆಲದ ಮಟ್ಟದಲ್ಲಿಯೇ ಇದ್ದು, ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿರುವುದರಿಂದ ಹೆಚ್ಚು ಅಪಾಯಕಾರಿಯಾಗಿದೆ ಎಂದು ರೈತರು ಆರೋಪಿಸುತ್ತಾರೆ.

ಎಚ್ಚರ ಅಗತ್ಯ: ‘ನದಿ. ಕೆರೆಯ ಅಂಗಳಗಳಲ್ಲಿ ಓಡಾಡುವಾಗ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು. ಜಾರುವ ಕಡೆಗಳಲ್ಲಿ ನಡೆದಾಡುವ, ವಾಹನ ಚಲಾಯಿಸುವ ಸಾಹಸ ಮಾಡಬಾರದು. ಕೆರೆಗಳಿಂದ ನೀರು ತುಂಬಿಕೊಂಡು ಪಕ್ಕದಲ್ಲಿ ಬಟ್ಟೆ ಒಗೆಯಬೇಕು. ಕೃಷಿ ಹೊಂಡಗಳಿಗೆ ತುಸು ದೂರವೇ ನಿಲ್ಲಬೇಕು. ಆಗ ಮಾತ್ರ ಅಮಾಯಕರು ಪ್ರಾಣ ಕಳೆದುಕೊಳ್ಳುವುದು ತಪ್ಪುತ್ತದೆ’ ಎನ್ನುತ್ತಾರೆ ಕೂಟಗಲ್‌ ನಿವಾಸಿ ಶಿವಮೂರ್ತಿ.

ಒಬ್ಬನ ಶವ ಪತ್ತೆ

ತಾಲ್ಲೂಕಿನ ಕೈಲಾಂಚ ಹೋಬಳಿಯ ಹುಲಿಕೆರೆ ಬಳಿ ಸೋಮವಾರ ಮಧ್ಯಾಹ್ನ ಬೈಕ್‌ನಲ್ಲಿ ಅರ್ಕಾವತಿ ನದಿ ದಾಟಲು ಹೋಗಿ ಕೊಚ್ಚಿಹೋದ ಇಬ್ಬರು ಯುವಕರ ಪೈಕಿ, ಸಂಜೆ ವೇಳೆಗೆ ಒಬ್ಬನ ಶವ ಪತ್ತೆಯಾಯಿತು.

ಸಂಜೆ 7ರ ಸುಮಾರಿಗೆ ಜುಲ್ಫಿಕರ್ (20) ಶವ ದೊರೆತಿದ್ದು, ಮತೀನ್‌ (22) ಶವ ಇನ್ನಷ್ಟೇ ಸಿಗಬೇಕಿದೆ. ಕತ್ತಲಾದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಿಲ್ಲಿಸಿದ್ದು, ಮಂಗಳವಾರ ಬೆಳಿಗ್ಗೆ ಮುಂದುವರಿಸುವುದಾಗಿ ತಿಳಿಸಿದರು.

ಅರ್ಕಾವತಿಯು ದಶಕಗಳಿಂದ ಬತ್ತಿದ್ದ ಹಿನ್ನೆಲೆಯಲ್ಲಿ ಜನರು ಅಲ್ಲಿಲ್ಲಿ ನದಿಯ ಮಧ್ಯೆಯೇ ಕಾಲು ದಾರಿಗಳನ್ನು ನಿರ್ಮಿಸಿಕೊಂಡು ಸಂಚರಿಸುತ್ತಿದ್ದಾರೆ. ಇದೀಗ ನದಿಯಲ್ಲಿ ನೀರು ಹರಿಯುತ್ತಿದ್ದು, ಹಳೆಯ ಕಾಲುದಾರಿಯ ಮೇಲೆಯೇ ಈ ಇಬ್ಬರು ಬೈಕ್‌ ಚಲಾಯಿಸುವ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡರು.

ಬೈಕ್‌ ಮಾತ್ರ ನದಿಯ ಮಧ್ಯಭಾಗದಲ್ಲಿಯೇ ಇದ್ದು, ಇಬ್ಬರು ಮುಳುಗುತ್ತಿರುವುದನ್ನು ಗಮನಿಸಿ ಸ್ಥಳೀಯರು ರಕ್ಷಣೆಗೆ ಧಾವಿಸಿದರಾದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಘಟನೆ ನಡೆದ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ವೀಕ್ಷಿಸಿದರು.

* * 

ನರು ನದಿ, ಕೆರೆ, ಕೃಷಿ ಹೊಂಡಗಳ ಆಸುಪಾಸಿನಲ್ಲಿ ಓಡಾಡುವಾಗ ಎಚ್ಚರ ವಹಿಸಬೇಕು. ಆಗ ಮಾತ್ರ ಸಾವು–ನೋವು ಸಂಭವಿಸದಿರಲು ಸಾಧ್ಯ

ಬಿ. ರಮೇಶ್‌

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry