7

ಪರಿಹಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ

Published:
Updated:
ಪರಿಹಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ

ವಿಜಯಪುರ: ಪ್ರಸಕ್ತ ಸಾಲಿನ ಮುಂಗಾರು–ಹಿಂಗಾರು ಮಳೆಯ ಅಬ್ಬರಕ್ಕೆ ಜಿಲ್ಲೆಯ ವ್ಯಾಪ್ತಿಯಲ್ಲಿ ಉಂಟಾದ ವಿವಿಧ ಹಾನಿಗೆ ಪರಿಹಾರ ವಿತರಣೆಗಾಗಿ ಹಾಗೂ ಕುಡಿಯುವ ನೀರು ಪೂರೈಸಿದ ಟ್ಯಾಂಕರ್‌ಗಳಿಗೆ ಬಾಕಿ ಪಾವತಿಸುವುದು ಸೇರಿದಂತೆ ಇನ್ನಿತರೆ ವೆಚ್ಚ ನಿರ್ವಹಣೆಗಾಗಿ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ₹ 6 ಕೋಟಿ ಅನುದಾನ ಬಿಡುಗಡೆಗಾಗಿ ಅ 19ರಂದು ಪ್ರಸ್ತಾವ ಸಲ್ಲಿಸಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಆಗಸ್ಟ್‌, ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಸತತವಾಗಿ ಸುರಿದ ಮಳೆಗೆ ನೆನೆದ ಮನೆಯ ಗೋಡೆ, ಮೇಲ್ಛಾವಣಿ ಕುಸಿದು ಬಿದ್ದು 10 ಜನರು ಮೃತಪಟ್ಟಿದ್ದಾರೆ.

ಆಗಸ್ಟ್‌ 28ರಂದು ವಿಜಯಪುರದ ಮಠಪತಿಗಲ್ಲಿಯಲ್ಲಿ ಮನೆಯ ಚಾವಣಿ ಕುಸಿದು ಬಿದ್ದು ದಂಪತಿ, ಮಗು ಸೇರಿ ಮೂವರು, ಇಂಡಿ ತಾಲ್ಲೂಕಿನ ಹಳಗುಣಕಿ, ಜೇವೂರ ಗ್ರಾಮದಲ್ಲಿ ಸೆ 8ರಂದು ವೃದ್ಧ ದಂಪತಿಯ ಎರಡು ಜೋಡಿ ಗೋಡೆ ಕುಸಿದು ಬಿದ್ದು, ಅ 11ರಂದು ಬಸವನಬಾಗೇವಾಡಿ ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ತಾಯಿ–ಮಗಳು, 17ರಂದು ಸಿಂದಗಿ ತಾಲ್ಲೂಕಿನ ಹಡಗಲಿ ಗ್ರಾಮದಲ್ಲಿ ಗೋಡೆ ಕುಸಿದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಸಿಡಿಲು ಬಡಿದು, ಹಳ್ಳ ದಾಟುವ ಸಂದರ್ಭ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಪ್ರಕರಣಗಳು ಸೇರಿದಂತೆ ಇದುವರೆಗೂ ಜಿಲ್ಲೆಯ ವ್ಯಾಪ್ತಿಯಲ್ಲಿ ಮಳೆ ಅನಾಹುತಕ್ಕೆ ಸಂಬಂಧಿಸಿದಂತೆ 20 ಜನರು ಮೃತಪಟ್ಟಿದ್ದು, ಇವರ ಕುಟುಂಬ ವರ್ಗಕ್ಕೆ ಈಗಾಗಲೇ ತಲಾ ₹ 4 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಭಾಗಶಃ ಹಾನಿ: ಸತತ ಮಳೆಗೆ ಜಿಲ್ಲೆಯ ವಿವಿಧೆಡೆ 952 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸಂಪೂರ್ಣ ಹಾನಿಯಾದ ಯಾವೊಂದು ವರದಿಯೂ ದಾಖಲಾಗಿಲ್ಲ. ಭಾಗಶಃ ಹಾನಿಗೀಡಾದ ಮನೆಗಳಿಗೆ ಪರಿಹಾರ ವಿತರಿಸಲು ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮುದ್ದೇಬಿಹಾಳ ತಾಲ್ಲೂಕಿನ ವಿವಿಧೆಡೆ ಅತಿವೃಷ್ಟಿಯಿಂದ 1744 ಹೆಕ್ಟೇರ್‌ನಲ್ಲಿನ ಹೆಸರು, ಉದ್ದು ಬೆಳೆ ನಷ್ಟಕ್ಕೀಡಾಗಿದ್ದು, ರೈತರಿಗೆ ಪರಿಹಾರ ಒದಗಿಸುವಂತೆಯೂ ಪ್ರಸ್ತಾವನೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಮಳೆಯ ಅಬ್ಬರಕ್ಕೆ 27 ಜಾನುವಾರು ಸಹ ಸಿಲುಕಿ ಮೃತಪಟ್ಟಿದ್ದು, ಆಯಾ ತಾಲ್ಲೂಕಿನ ತಹಶೀಲ್ದಾರ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರ ವರದಿ ಆಧರಿಸಿ, ಮೃತ ಜಾನುವಾರು ಮಾಲೀಕರಿಗೆ ಪರಿಹಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

* * 

ಟ್ಯಾಂಕರ್‌ ಬಿಲ್‌, ಮಳೆಯಿಂದ ಹಾನಿಗೀಡಾದ ರಸ್ತೆ ದುರಸ್ತಿಗಾಗಿ, ಬೆಳೆ ನಷ್ಟ ಪರಿಹಾರ ವಿತರಿಸಲು ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ

ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry