7

ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನ

Published:
Updated:
ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನ

ಗುರುಮಠಕಲ್: ಗ್ರಾಮದೆಲ್ಲೆಡೆ ತಿಪ್ಪೆಗುಂಡಿಯಂತಹ ವಾತಾವರಣ. ಎಲ್ಲೆಂದರಲ್ಲಿ ನಿಲ್ಲುವ ಚರಂಡಿ ನೀರು. ಸದಾ ರೋಗರುಜಿನಿಗಳ ಭಯದಲ್ಲಿಯೇ ಜೀವಿಸುವ ಪರಿಸ್ಥಿತಿಯಿಂದಾಗಿ ಇಲ್ಲಿಗೆ ಸಮೀಪದ ರಾಂಪುರ (ಜಿ) ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ.

‘ಗಾಜರಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ(ಜಿ) ಗ್ರಾಮದಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ತಿಪ್ಪೆಗುಂಡಿಯಂತಹ ವಾತಾವರಣದಲ್ಲಿಯೇ ಬದುಕುತ್ತಿದ್ದೇವೆ. ಕನಿಷ್ಠ ಸೌಕರ್ಯಗಳಿಗೂ ಪ್ರತಿನಿತ್ಯ ಪರದಾಡುವಂತಾಗಿದೆ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

‘ಚುನಾವಣೆಯ ಸಂದರ್ಭದಲ್ಲಿ ನಮ್ಮೂರಿಗೆ ಬರುವ ನಾಯಕರು ನಂತರ ಮಾಯವಾಗುತ್ತಾರೆ. ಪಂಚಾಯಿತಿ ಕೇಂದ್ರದ ನಂತರ ನಮ್ಮ ಗ್ರಾಮವೇ ದೊಡ್ಡದು. ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರೂ ಒಂದೂ ಕೆಲಸ ಆಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಮಲ್ಲಪ್ಪ, ದ್ಯಾವಣ್ಣ ಹಾಗೂ ಹಣಮಂತು.

‘ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸದಾ ಕಾದಾಡಬೇಕು. ನೀರು ತರುವುದೇ ಸಾಹಸದ ಕೆಲಸವಾಗಿದೆ. ಕೆಲವೊಮ್ಮೆ ರಾತ್ರಿಯಲ್ಲಿ ಅಥವಾ ಹೊಲಗಳಿಗೆ ಹೋದ ಮೇಲೆ ನೀರು ಸರಬರಾಜು ಮಾಡಲಾಗುತ್ತದೆ. ಅಂತಹ ಸಮಯದಲ್ಲಿ ನೀರು ಪಡೆಯದಿದ್ದರೆ ಮತ್ತೆ ನೀರಿಗಾಗಿ ಪರದಾಡಬೇಕು. ಇನ್ನು ಮಕ್ಕಳನ್ನು ಹೊರಗಡೆ ಆಟವಾಡಲು ಬಿಡುವುದಕ್ಕೂ ಭಯವಾಗುತ್ತದೆ. ಸದಾ ಒಂದಿಲ್ಲೊಂದು ರೋಗಗಳು ಬರುತ್ತಲೇ ಇವೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಗ್ರಾಮದ ಮಹಾದೇವಮ್ಮ ಮತ್ತು ಯಲ್ಲಮ್ಮ ವಡ್ಡರ್.

‘ವಿದ್ಯುತ್ ಸಮಸ್ಯೆ ಅಧಿಕವಾಗಿದೆ. ಒಂದೇ ವಿದ್ಯುತ್ ಪರಿವರ್ತಕ ಇದ್ದು, ಅದಕ್ಕೆ ಪಂಪ್‌ಸೆಟ್‌ ಹಾಗೂ ಗ್ರಾಮಕ್ಕೂ ಸಂಪರ್ಕ ಇರುವುದರಿಂದ ಹೊರೆಯಾಗಿ ಪದೇ ಪದೇ ಸಮಸ್ಯೆಯಾಗುತ್ತಿದೆ’ ಎಂದು ಗ್ರಾಮಸ್ಥರು ದೂರುತ್ತಾರೆ.

ಬೀದಿನಾಯಿಗಳ ಕಾಟ: ‘ಗ್ರಾಮದಲ್ಲಿ ಬೀದಿನಾಯಿಗಳ ಕಾಟವೂ ಹೆಚ್ಚಿದೆ. ಮಕ್ಕಳನ್ನು ಕಚ್ಚುತ್ತಿವೆ. ಅನಾರೋಗ್ಯ ತುರ್ತು ಪರಿಸ್ಥಿತಿ ಇದ್ದರೆ ವೈದ್ಯಕೀಯ ಸೌಲಭ್ಯವೂ ಇಲ್ಲ. ಮೂರು ಕಿ.ಮೀ ದೂರದ ಗಾಜರಕೋಟಕ್ಕೆ ಹೋಗಬೇಕು’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

‘ನೀರಿನ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು. ಉಳಿದಂತೆ ಚರಂಡಿ, ರಸ್ತೆ ಸಮಸ್ಯೆಗಳ ಕುರಿತು 14ನೇ ಹಣಕಾಸು ಯೋಜನೆಯಲ್ಲಿ ಕ್ರಿಯಾಯೋಜನೆ ತಯಾರಿಸಿದ್ದು, ಅನುಮತಿ ಸಿಕ್ಕ ತಕ್ಷಣ ಕಾಮಗಾರಿಗಳನ್ನು ಆರಂಭಿಸಲಾಗುವುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಗಾರೆಡ್ಡಿ ಪ್ರತಿಕ್ರಿಯಿಸಿದರು.

* * 

ನೀರು, ರಸ್ತೆ, ವಿದ್ಯುತ್, ಆರೋಗ್ಯ, ನೈರ್ಮಲ್ಯ ಎಲ್ಲದರಲ್ಲೂ ಗ್ರಾಮ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ಗ್ರಾಮಕ್ಕೆ ಬರುತ್ತಾರೆ.

ಗಂಗಪ್ಪ, ಗ್ರಾಮಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry