ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒತ್ತಡ ಎನ್ನುವುದು ಸಾರ್ವಕಾಲಿಕ’

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಯಾರೋ ಒಬ್ಬರು ನಮಗೆ ಒಂದು ಒಳ್ಳೆಯ ಚಿತ್ರ ಬಿಡಿಸಿ ಕಳುಹಿಸಿ ಎಂದು ಹೇಳುತ್ತಾರೆ. ನಾವು ಸಂತೋಷದಿಂದ ಚಿತ್ರ ಬಿಡಿಸಲು ಶುರು ಮಾಡುತ್ತೇವೆ. ಆದರೆ ಪೆನ್ಸಿಲ್, ಪೇಪರ್ ಹಿಡಿದ ಮರುಕ್ಷಣವೇ ಚಿತ್ರ ಬಿಡಿಸಲು ಹೇಳಿದ ವ್ಯಕ್ತಿ ಕರೆ ಮಾಡಿ ‘ನಿಮ್ಮ ಚಿತ್ರದಲ್ಲಿ ಆ ಬಣ್ಣ ಇರಬಾರದು, ಚಿತ್ರ ಹಾಗೆ ಇರಬಾರದು, ಹೀಗೆ ಇರಬಾರದು’ ಎಂಬ ನಿರ್ಬಂಧಗಳನ್ನು ಹೇರುತ್ತಾರೆ. ಆಗ ಅವರು ನಮ್ಮ ಕಲ್ಪನೆಗೆ ಒತ್ತಡ ಹೇರಿದಂತೆ. ಅದು ನಮಗೆ ಅತ್ಯಂತ ನೋವು ನೀಡುವ ಸಂಗತಿ ಕೂಡ ಹೌದು. ಆ ನೋವೇ ಒತ್ತಡವಾಗಿ ಕಾಡುತ್ತದೆ.

ಒಬ್ಬ ಮನುಷ್ಯನಿಗೆ ಜೀವನದಲ್ಲಿ ಇದನ್ನೆಲ್ಲಾ ನೀವು ಕಲ್ಪನೆ ಮಾಡಿಕೊಳ್ಳಬಾರದು ಎಂದರೆ ಹೇಗೆ? ಯಾರು ಬೇಕಾದರೂ ಹೇಗೆ ಬೇಕಾದರೂ ಏನನ್ನಾದರೂ ಕಲ್ಪನೆ ಮಾಡಿಕೊಳ್ಳಬಹುದು. ಕಲ್ಪನೆಯನ್ನು ಮೊಟಕುಗೊಳಿಸುವುದು ಎಂದರೆ ಶಿಕ್ಷಣವನ್ನು ಮೊಟಕುಗೊಳಿಸಿದಂತೆ. ಶಿಕ್ಷಣ ನೀಡುವಾಗ ಪ್ರತಿ ಹಂತವನ್ನೂ ಕಲಿಸಬೇಕು. ಆದರೆ ನಮ್ಮ ಕಲಿಕೆಯನ್ನು ಇಷ್ಟಕ್ಕೆ – ಎಂದು ಸೀಮಿತಗೊಳಿಸಿಕೊಳ್ಳುವುದೇ ನಾವು ಎದುರಿಸಬೇಕಾದ ಅತಿ ದೊಡ್ಡ ಒತ್ತಡ.

ಸಂಗೀತ ಹಾಗೂ ಕಲೆಗಳು ಮನುಷ್ಯನಲ್ಲಿ ಇನ್ನೂ ಹೆಚ್ಚಿನ ಮನುಷ್ಯತನ ಬರಲಿ ಎಂದು ಮಾಡಿರುವುದು; ಮನುಷ್ಯರಿಗೂ ಪ್ರಾಣಿಗಳಿಗೂ ಇರುವ ಮುಖ್ಯ ವ್ಯತ್ಯಾಸ ಎಂದರೆ ಮನುಷ್ಯರಿಗೆ ಕಲೆಯನ್ನು ಆಸ್ವಾದಿಸುವ ಗುಣ ಇದೆ, ಆದರೆ ಪ್ರಾಣಿಗಳಿಗೆ ಅದು ಇಲ್ಲ . ಈ ವಿಷಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ನಾನು ಶಾಸ್ತ್ರೀಯ ಸಂಗೀತವನ್ನು ಆಧಾರವಾಗಿಟ್ಟುಕೊಂಡೇ ಎಲ್ಲಾ ತರಹದ ಪ್ರಯೋಗಗಳನ್ನು ಮಾಡಿದ್ದೇನೆ. ಅದು ಜನರಿಗೆ ಮುಟ್ಟಿದೆ. ಜನರ ಹೊಗಳಿಕೆ, ಪ್ರೋತ್ಸಾಹದಿಂದ ಜನ ಅದನ್ನು ಮೆಚ್ಚಿದ್ದಾರೆ ಎಂದು ತಿಳಿಯುತ್ತದೆ. ಅದು ಕಲಾವಿದರಿಗೆ ಮುಖ್ಯ.

ಯಾರಾದರೂ ನಾವು ಮಾಡುವ ಕೆಲಸವನ್ನು ನಿರ್ಲಕ್ಷ್ಯ ಮಾಡುವುದರಿಂದಲೋ ಅಥವಾ ವಿರೋಧ ಮಾಡುವುದರಿಂದಲೋ ಒತ್ತಡ ಎನ್ನಿಸುತ್ತದೆ. ಯಾವ ಮನುಷ್ಯನಿಗೆ ನಾವು ಹೇಳಿದ್ದು ಕೇಳಿಸಿಕೊಂಡು ಅರ್ಥ ಮಾಡಿಕೊಳ್ಳುವ ಮನಃಸ್ಥಿತಿ ಇರುತ್ತದೋ ಅಂತಹವರಿಂದ ಸಮಸ್ಯೆ ಬರುವುದಿಲ್ಲ. ಆದರೆ ಸಮಸ್ಯೆ ಕಾಣಿಸುವುದು ‘ನಾನು ಅರ್ಥ ಮಾಡಿಕೊಳ್ಳುವುದಿಲ್ಲ, ಏನಾದರೂ ಸರಿ ನಾನು ಇದನ್ನು ಒಪ್ಪುವುದಿಲ್ಲ’ ಎನ್ನುವಂತಹ ಮನಃಸ್ಥಿತಿ ಇರುವವರಲ್ಲಿ. ಅವರಿಗೆ ವಿಷಯ ಹೀಗೆ ಎಂದು ವಿವರಿಸಿದರೂ ಪ್ರಯೋಜನವಾಗುವುದಿಲ್ಲ. ಹಾಗಾಗಿ ಅಂತಹವರನ್ನು ಸುಮ್ಮನೆ ಇರಲು ಬಿಡಬೇಕು; ನಾವು ಏನು ಮಾಡುತ್ತಿದ್ದೇವೋ ಅದನ್ನು ಮುಂದುವರೆಸಿಕೊಂಡು ಹೋಗಬೇಕು. ಒಂದಲ್ಲ ಒಂದು ದಿನ ಅವರೇ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ.

ಸಂಗೀತಕ್ಷೇತ್ರದಲ್ಲಿ ಏನಾಗುತ್ತಿದೆ ಎಂದರೆ ಯಾರಿಗೆ ಸಂಗೀತ ಇಷ್ಟವಿಲ್ಲವೋ ಅವರಿಗಾಗಿ ನಾವು ಚಿಂತೆ ಮಾಡುತ್ತೇವೆ; ಯಾರಿಗೆ ನಿಜವಾಗಿಯೂ ಸಂಗೀತ ಇಷ್ಟವಿದೆಯೋ ಅವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರು ಸಂಗೀತ ಕೇಳಲು ಇಷ್ಟಪಟ್ಟು ಬರುತ್ತಾರೋ ಅವರ ಬಗ್ಗೆ ನಾವು ಯೋಚಿಸಬೇಕು; ಅವರು ಕಡಿಮೆ ಸಂಖ್ಯೆಯಲ್ಲಿ ಇದ್ದರೂ ತೊಂದರೆಯಲ್ಲ, ಅವರಿಗೆ ಪ್ರಾಶಸ್ತ್ಯ ನೀಡಬೇಕು. ಅದು ಬಿಟ್ಟು ಆಸಕ್ತಿ ಇಲ್ಲದಿದ್ದರೂ ತೊಂದರೆಯಿಲ್ಲ ತುಂಬಾ ಜನ ಇರಬೇಕು ಎಂದುಕೊಳ್ಳುವುದು ಮೂರ್ಖತನ. ಯಾರಿಗೆ ಸಂಗೀತ ಇಷ್ಟವಿಲ್ಲವೋ ಅವನು ಸಭೆಯಲ್ಲಿ ಕೇವಲ ಚಟ್ನಿಯ ಬಗ್ಗೆ ಚರ್ಚೆ ಮಾಡಲು ಬಂದಿರುತ್ತಾನೆ. ಹಾಗಾಗಿ ನಾವ್ಯಾಕೆ ಅವನ ಬಗ್ಗೆ ಯೋಚಿಸಿ, ಸಭೆಯನ್ನು ಮತ್ತೂ ಕೆಡಿಸಬೇಕು. ಆಗ ಇಷ್ಟಪಟ್ಟು ಸಂಗೀತ ಕೇಳಲು ಬಂದವರು ‘ಹಾಂ ಸರ್‌! ಬಂದಿದ್ವಿ ನಿಮ್ಮ ಕಾರ್ಯಕ್ರಮಕ್ಕೆ, ಆದರೆ ಆ ಗಲಾಟೆಯಲ್ಲಿ ಏನೂ ಕೇಳಿಸ್ತಾ ಇರ್ಲಿಲ್ಲಾ, ಅದಕ್ಕೆ ವಾಪಾಸ್ಸು ಮನೆಗೆ ಬಂದ್ವಿ’ ಎನ್ನುತ್ತಾರೆ. ಈ ತರಹ ಯಾರೋ ಒಬ್ಬನನ್ನು ಸಮಾಧಾನ ಮಾಡಲು ಹೋಗಿ ಇಷ್ಟ ಇರುವವರನ್ನು ಕಳೆದುಕೊಳ್ಳುತ್ತೇವೆ.

ನಾನು ಸೋಲಿಗೆ ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ. ಕಛೇರಿ ಸೋಲಲು ನಾನು ಬಿಡುತ್ತಿರಲಿಲ್ಲ. ಸೋಲುತ್ತದೆ ಎಂದು ಅನ್ನಿಸಿದಾಗ ಅದನ್ನು ಗೆಲ್ಲಿಸಲು ಏನು ಮಾಡಬೇಕೋ ಅದನ್ನು ಮಾಡೇ ಮಾಡುತ್ತಿದ್ದೆ. ಎಂದಿಗೂ ಸಭಿಕರ ಮೇಲೆ ನಿರ್ಲ್ಯಕ್ಷ್ಯ ತೋರುವುದು, ದರ್ಪ ತೋರುವುದು ಮಾಡಿಲ್ಲ. ಜನರನ್ನು ಸೆಳೆಯಲು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೆ.

ನಿಮ್ಮಲ್ಲಿರುವ ತಿಳಿವಳಿಕೆ ಮತ್ತು ಆತ್ಮವಿಶ್ವಾಸದಿಂದ ನೀವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೀರಿ ಎಂದು ನಿಮಗೆ ಅನ್ನಿಸಿದರೆ ಒತ್ತಡ ನಿಮ್ಮತ್ತ ಸುಳಿಯುವುದಿಲ್ಲ. ಆದರೆ ಎಲ್ಲವನ್ನು ತಾಳ್ಮೆಯಿಂದ ಕಾಯಬೇಕು. ‘ನನ್ನ ಪರಿಕಲ್ಪನೆ ಹೀಗಿದೆ, ನನ್ನ ರೀತಿ ಇದು, ದಯವಿಟ್ಟು ಇದನ್ನು ನೀವು ಅರ್ಥಮಾಡಿಕೊಳ್ಳಿ’ ಎಂದು ನೀವು ಹೇಳುತ್ತಾ ಇರಬೇಕು. ಇಂದಲ್ಲ ನಾಳೆ ಜನಕ್ಕೆ ಅರ್ಥ ಆಗುತ್ತೆ. ಎಲ್ಲಿ ತನಕ ಅರ್ಥ ಆಗುವುದಿಲ್ಲವೋ ಅಲ್ಲಿಯವರೆಗೆ ನಾವು ಕಾಯಬೇಕು. ಆಗ ನಿಧಾನಕ್ಕೆ ಒತ್ತಡ ಕಡಿಮೆ ಆಗುತ್ತದೆ.

ನನಗೆ ಯಾವತ್ತೂ ಒತ್ತಡ ಅನ್ನಿಸಿದ್ದೇ ಇಲ್ಲ. ಯಾಕೆಂದರೆ ನನಗೆ ನನ್ನ ವಿಷಯದ ಬಗ್ಗೆ ಅನಮಾನವಿಲ್ಲ. ನಾವು ಆಯ್ಕೆ ಮಾಡಿಕೊಂಡ ವಿಷಯದ ಮೇಲೆ ನಮಗೆ ಅನುಮಾನಗಳಿದ್ದರೆ ಒತ್ತಡ ಜಾಸ್ತಿ ಆಗುತ್ತದೆ. ನನಗೆ ಈ ವಿಷಯ ತಿಳಿಯಲು ಎಂಟು ವರ್ಷ ಬೇಕಾಗಿತ್ತು. ಯಾರಿಗೆ ಈ ವಿಷಯ ಗೊತ್ತಿಲ್ಲವೋ ಅವರಿಗೆ ಇದನ್ನು ತಿಳಿಯಲು 12 ವರ್ಷ ಬೇಕಾಗಬಹುದು ಎಂದು ನಾವು ಅರ್ಥ ಮಾಡಿಕೊಂಡರೆ ನಮಗೆ ಬೇಸರ, ಒತ್ತಡ ಎನ್ನಿಸುವುದಿಲ್ಲ.

ಒತ್ತಡ ಎನ್ನುವುದು ಸಾರ್ವಕಾಲಿಕ, ಎಂದು ನಾನೂ ಪರಿಪೂರ್ಣನಾಗಬೇಕು ಎಂಬ ಆಸೆ ಮನಸ್ಸಿನಲ್ಲಿ ಮೂಡುತ್ತದೋ ಆಗ ಒತ್ತಡ ಹುಟ್ಟಿಕೊಳ್ಳುತ್ತದೆ. ಒತ್ತಡ ಎಲ್ಲಾ ಕಾಲದಲ್ಲೂ ಇತ್ತು. ಆದರೆ ಅದರ ರೀತಿ ಮಾತ್ರ ಬೇರೆಯಾಗಿತ್ತು. ಒಂದು ಕಾಲದಲ್ಲಿ ಕೆಲಸದ ಅವಧಿಯಲ್ಲಿ ಯಾವ ರೀತಿ ಕೆಲಸ ಮಾಡಿದರೆ ‘ಜಾಬ್ ಪ್ರಮೋಶನ್‌’ ಸಿಗುತ್ತೆ ಅಂತ ಇತ್ತು. ಅದರಲ್ಲಿ ಕೆಲವರು ನಾವು ಕೆಲಸದ ಗುಣಮಟ್ಟ ಸುಧಾರಿಸಿಕೊಂಡು ಹೋಗೋಣ ಎಂದು ಆತುರಪಟ್ಟರು,; ಇನ್ನೂ ಕೆಲವರು ರಾಜಕೀಯ ಮಾಡಿದರು. ರಾಜಕೀಯ ಮಾಡಿದವರೆಲ್ಲಾ ಮೇಲೆ ಬಂದರು. ಅವರಿಗೆ ಹಾರ್ಡ್‌ವರ್ಕ್ ಎಂದರೆ ಏನು ಎಂದು ತಿಳಿಯಲಿಲ್ಲ. ಹಾರ್ಡ್‌ವರ್ಕ್ ಮಾಡಿದವರು ಹಾಗೇ ಹಿಂದೆ ಉಳಿದು ಬಿಟ್ಟರು. ಅವರಿಗೆ ತಾವು ಮಾಡಿದ ಕೆಲಸವನ್ನು ಹೈಲೈಟ್ ಮಾಡುವುದು ಹೇಗೆ ಎಂದು ತಿಳಿಯಲಿಲ್ಲ. ಆಗ ಒತ್ತಡ ಅವರನ್ನು ಕಾಡುತ್ತದೆ. ಹೀಗೆ ಒತ್ತಡ ಎಲ್ಲಾ ಕಡೆ ಇದೆ. ಆದರೆ ಅದರ ಸ್ವರೂಪ ಮಾತ್ರ ಬೇರೆ ಬೇರೆ ರೀತಿಯದ್ದಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT