3

ಪ್ರಶ್ನೋತ್ತರ

Published:
Updated:

ನಿತಿನ್,  ಆಸ್ಟ್ರೇಲಿಯಾ (ಮೂಲತಃ ತುಮಕೂರು)

ನಾನು ಬಿ.ಕಾಂ. ಮಾಡಿ ಆಸ್ಟ್ರೇಲಿಯಾದಲ್ಲಿ ಎಂ.ಬಿ.ಎ. ಮುಗಿಸಿರುತ್ತೇನೆ. ಕೆನರಾ ಬ್ಯಾಂಕಿನವರು ವಿದ್ಯಾಸಾಗರ ಯೋಜನೆಯಲ್ಲಿ ನನಗೆ ₹ 30 ಲಕ್ಷ ಸಾಲ ಕೊಟ್ಟಿರುತ್ತಾರೆ. ನಾನು ಎಂ.ಬಿ.ಎ. ಓದುವ ವೇಳೆ ಬಿಡುವಿನ ವೇಳೆ ಹಾಗೂ ರಾತ್ರಿಪಾಳಿಯಲ್ಲಿ ಕೆಲಸ ಮಾಡಿ ಹಣ ಉಳಿಸಿದ್ದೇನೆ. ನನ್ನ ಸಂಬಳದಲ್ಲಿ ಆಸ್ಟ್ರೇಲಿಯಾ ಸರ್ಕಾರ ತೆರಿಗೆ ಮುರಿದಿರುತ್ತಾರೆ. ನಾನು ನನ್ನ ತಂದೆಯವರ ಖಾತೆಗೆ ಹಣ ಕಳಿಸಿ ಸಾಲವನ್ನು ತೀರಿಸಬಹುದೇ, ಹಣವನ್ನು ಒಂದೇ ಸಾರಿ ಬ್ಯಾಂಕಿಗೆ ಹಾಕಿದರೆ ಭಾರತ ಸರ್ಕಾರವು ತೆರಿಗೆ ವಿಧಿಸುತ್ತದೆಯೇ ತಿಳಿಸಿ. ನನ್ನ ತಂದೆ ಕೃಷಿಕರು ಹಾಗೂ ತೆರಿಗೆಗೆ ಒಳಗಾಗುವುದಿಲ್ಲ?

ಉತ್ತರ: ಪ್ರಥಮವಾಗಿ ನಿಮ್ಮ ಸಾಧನೆಗೆ ಅಭಿನಂದಿಸುತ್ತೇನೆ. ಆಸ್ಟ್ರೇಲಿಯಾದಲ್ಲಿ ಓದುವಾಗ ಬಿಡುವಿನ ವೇಳೆಯಲ್ಲಿ ದುಡಿದು ಹಣ ಸಂಪಾದಿಸುವುದರ ಜೊತೆಗೆ, ಶಿಕ್ಷಣ ಸಾಲ ಕೊಟ್ಟ ಕೆನರಾ ಬ್ಯಾಂಕಿಗೆ ಒಂದೇ ಗಂಟಿನಿಂದ ಸಾಲ ತೀರಿಸುವ ನಿಮ್ಮ ಮನೋಸಂಕಲ್ಪ ನಮ್ಮ ಯುವ ವಿದ್ಯಾರ್ಥಿಗಳಿಗೆ ದಾರಿ ದೀಪದಂತಿದೆ. ಕರೆನ್ಸಿ ನೋಟಿನ ಅಪಮೌಲ್ಯ ಆದನಂತರ ಬಹಳಷ್ಟು ಜನರು ತೆರಿಗೆ ಭಯದಿಂದ ಬಳಲುತ್ತಿರುವುದು ಕಂಡು ಬರುತ್ತದೆ.

ನೀವು ಕಷ್ಟಪಟ್ಟು ದುಡಿದು, ಆಸ್ಟ್ರೇಲಿಯಾ ಸರ್ಕಾರಕ್ಕೆ ತೆರಿಗೆ ತುಂಬಿ, ಉಳಿಸಿದ ಹಣ, ನಿಮ್ಮ ಶಿಕ್ಷಣ ಸಾಲಕ್ಕೆ ನಿಮ್ಮ ತಂದೆಯವರ ಖಾತೆಗೆ ಹಣ ಕಳಿಸಿ, ಈ ಮುಖಾಂತರ ಸಾಲ ತೀರಿಸುವುದರಿಂದ ನಿಮಗಾಗಲೀ, ನಿಮ್ಮ ತಂದೆಯವರಿಗಾಗಲೀ ಯಾವುದೇ ತರಹದ ತೆರಿಗೆ ಬರುವುದಿಲ್ಲ. ನಿಮ್ಮ ಕಷ್ಟ ಕಾಲದಲ್ಲಿ ಕೈಹಿಡಿದು ₹ 30 ಲಕ್ಷ ಶಿಕ್ಷಣ ಸಾಲ ಕೊಟ್ಟು, ನಿಮ್ಮನ್ನು ಪ್ರೋತ್ಸಾಹಿಸಿದ ಕೆನರಾ ಬ್ಯಾಂಕ್ ಹಾಗೂ ಸ್ಥಳೀಯ ಶಾಖಾ ಪ್ರಬಂಧಕರನ್ನು ಎಂದಿಗೂ ಮರೆಯಬೇಡಿ. ಜೊತೆಗೆ ಕೆನರಾ ಬ್ಯಾಂಕ್ ಬಹು ಭದ್ರ ಹಾಗೂ ಹೆಸರಾಂತ ರಾಷ್ಟ್ರೀಕೃತ ಬ್ಯಾಂಕ್ ಆಗಿದ್ದು, ನಿಮ್ಮ ಮುಂದಿನ ಉಳಿತಾಯ ಇದೇ ಬ್ಯಾಂಕಿನ ತುಮಕೂರು ಶಾಖೆಯಲ್ಲಿಯೇ ಮಾಡಿರಿ.

ನೀವು ಬಯಸಿದಲ್ಲಿ ಈ ಬ್ಯಾಂಕಿನಲ್ಲಿ ಬೇರೆ ದೇಶದ ಕರೆನ್ಸಿಯಲ್ಲಿಯೂ (FCNR) ಅವಧಿ ಠೇವಣಿ ಸೌಲತ್ತು ಇದೆ. ನೀವು ಸುಲಭವಾಗಿ ಆನ್‌ಲೈನ್‌ನಲ್ಲಿ ಅಲ್ಲಿಗೆ ಹಣ ಕಳಿಸಬಹುದು. ನೀವು ಭಾರತಕ್ಕೆ ಬಂದು ನೆಲೆಸುವವರೆಗೂ ನಿಮ್ಮ ಠೇವಣಿ ಮೇಲಿನ ಬಡ್ಡಿಗೆ ಭಾರತದಲ್ಲಿ ಆದಾಯ ತೆರಿಗೆ ಕೊಡುವ ಅವಶ್ಯವಿಲ್ಲ. FCNR ಠೇವಣಿ ಮಾಡುವುದರಿಂದ ನಿಮಗೂ, ದೇಶಕ್ಕೂ ಹಿತಕರ. ಈ ಠೇವಣಿಗೆ ವಿದೇಶಿ ಕರೆನ್ಸಿಯಲ್ಲಿಯೇ ಬಡ್ಡಿ ಕೊಡಲಾಗುತ್ತಿದೆ.

ನವೀನ್ ಕುಮಾರ್.ಎಚ್.ಎಸ್., ದೊಡ್ಡಬಳ್ಳಾಪುರ

ನಾನು ದ್ವಿತೀಯ ವರ್ಷ ಬಿ.ಕಾಂ. ಓದುತ್ತಿದ್ದೇನೆ. ಮುಂದೆ ಸಿ.ಎ. ಮಾಡಬೇಕೆಂಬ ಆಸೆ ಇದೆ. ಸಿ.ಎ. ಮಾಡಲು ಕನಿಷ್ಠ ₹ 80,000 ಅವಶ್ಯ ಇದೆ ಎಂದು ಕೇಳಿದ್ದೇನೆ. ನಮ್ಮದು ಬಡ ಕುಟುಂಬ. ಈಗ ನನಗೆ ವಾರ್ಷಿಕ ₹ 20,000 ವಿದ್ಯಾರ್ಥಿ ವೇತನ ಬರುತ್ತದೆ. ಇದರಲ್ಲಿ ₹ 8000–10,000 ಮಾತ್ರ ಖರ್ಚು ಮಾಡಿ ಉಳಿದ ಹಣ ನನ್ನ ಮುಂದಿನ ಸಿ.ಎ. ಓದಲು ಉತ್ತಮ ಹೂಡಿಕೆ ಮಾಡಬೇಕಾಗಿದೆ. ಹೂಡಿಕೆ ಮಾಡಲು ಹಾಗೂ ಸಿ.ಎ. ಓದಲು ಶೈಕ್ಷಣಿಕ ಸಾಲ ದೊರೆಯುತ್ತದೆಯೇ?

ಉತ್ತರ: ಪ್ರತಿಯೋರ್ವ ವ್ಯಕ್ತಿಗೂ ಜೀವನದಲ್ಲಿ ಒಂದು ಸರಿಯಾದ ಗುರಿ ಇರಬೇಕು. ದ್ವಿತೀಯ ಬಿ.ಕಾಂ. ನಲ್ಲಿರುವಾಗಲೇ ಸಿ.ಎ. ಮಾಡುವ ನಿಮ್ಮ ನಿರ್ಧಾರ ಶ್ಲಾಘನೀಯ. ಇದೇ ವೇಳೆ ಪ್ರತಿಭಾವಂತರಾಗಿ ಪಡೆಯುವ ವಿದ್ಯಾರ್ಥಿ ವೇತನದಲ್ಲಿ ಖರ್ಚಿಗೆ ತಕ್ಕಷ್ಟು ಬಳಸಿ ಉಳಿದ ಹಣ ಮುಂದಿನ ವಿದ್ಯಾಭ್ಯಾಸಕ್ಕೆ ಕೂಡಿಡುವ ಮನೋಭಾವನೆ ಇತರ ವಿದ್ಯಾರ್ಥಿಗಳು ನಿಮ್ಮಿಂದ ನಕಲು ಮಾಡುವಂತಿದೆ. ನಿಮ್ಮ ಛಲಕ್ಕೆ ಅಭಿನಂದನೆಗಳು.

ನೀವು ಉಳಿಸಬಹುದಾದ ಹಣ ಎರಡು ವರ್ಷಗಳ ಅವಧಿಗೆ ಒಮ್ಮೆಲೇ ಬಡ್ಡಿ ಬರುವ ಮರುಠೇವಣಿಯಲ್ಲಿ ಹೂಡಿರಿ. ಸಿ.ಎ. ಒಂದು ವೃತ್ತಿ ಪರ ಶಿಕ್ಷಣವಾದ್ದರಿಂದ ನಿಮಗೆ ಬ್ಯಾಂಕಿನಲ್ಲಿ ಶಿಕ್ಷಣ ಸಾಲ ದೊರೆಯುತ್ತದೆ. ಸಿ.ಎ., ಬಿ.ಇ., ಎಂ.ಬಿ.ಬಿ.ಎಸ್., ಎಂಬಿಎ ಹಾಗೆ ಕಾಲೇಜಿಗೆ ಹೋಗಿ ಓದುವ ಶಿಕ್ಷಣವಲ್ಲ. ಈಗಲೇ ವೃತ್ತಿ ಪರತೆಯಲ್ಲಿರುವ ಸಿ.ಎ. ಅಡಿಯಲ್ಲಿ ದುಡಿದು, ಪರೀಕ್ಷೆಗೆ ಕುಳಿತುಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀವು ಕೆಲಸ ಮಾಡುವ ಸಂಸ್ಥೆ ಅಲ್ಪಸ್ವಲ್ಪ ಸಂಬಳ ಕೊಡುತ್ತದೆ. ಈ ಹಣ ಜೀವನಾಧಾರಕ್ಕೆ ಸಾಕಾದೀತು.

ಬಸವರಾಜ ಮಠಪತಿ, ತುಮಕೂರು

ನಾನು ನಿವೃತ್ತ ನೌಕರ. ತಿಂಗಳ ಪಿಂಚಣಿ ₹ 17,710. ನಿವೃತ್ತಿ ನಂತರ ನನ್ನ ವೈಯಕ್ತಿಕ ಉಪಯೋಗಕ್ಕಾಗಿ ಒಂದು ಚಿಕ್ಕ ಜೆರಾಕ್ಸ್ ಯಂತ್ರ ₹ 12,000 ಕೊಟ್ಟು ಕೊಂಡಿದ್ದೆ. ಅಕ್ಕಪಕ್ಕದವರು ಬಂದು 10–15 ಜೆರಾಕ್ಸ್ ಪಡೆದು ₹ 10–15 ದಿವಸಕ್ಕೆ ಇದರಿಂದ ಬರುತ್ತದೆ. ನಾನು ಹೀಗೆ ಮಾಡುವುದಕ್ಕೆ ಯಾರ ಪರವಾನಿಗೆ ಪಡೆಯಬೇಕು?

ಉತ್ತರ: ಇಂದಿನ ಟಿ.ವಿ. ಹಾಗೂ ವೃತ್ತ ಪತ್ರಿಕೆಗಳಲ್ಲಿ ತೆರಿಗೆ ವಿಚಾರದಲ್ಲಿ ಹಾಗೂ ಇನ್ನಿತರ ವಿಚಾರಗಳಲ್ಲಿ ಬರುವ ಸುದ್ಧಿ ಸಮಾಚಾರಗಳನ್ನು ಗಮನಿಸಿ, ನೀವು ಸ್ವಲ್ಪ ಭಯ ಪಟ್ಟಂತಿದೆ. ದಿವಸಕ್ಕೆ ಮನೆಗೆ ಬಂದು 10–15 ಜೆರಾಕ್ಸ್ ಮಾಡಿಸಿ ಕೊಂಡು ಹೋಗುವ ಕ್ಷುಲ್ಲಕ ವಿಚಾರಕ್ಕೆ ಯಾರ ಅನುಮತಿಯೂ ಬೇಡ ಹಾಗೂ ಯಾರಿಗೂ ತಿಳಿಸುವ ಅವಶ್ಯವಿಲ್ಲ. ನಿಮ್ಮ ವಾರ್ಷಿಕ ಪಿಂಚಣಿ ಆದಾಯ ₹ 2,12,530 ಇದ್ದು ಜೆರಾಕ್ಸ್ ಗರಿಷ್ಠ ವಾರ್ಷಿಕ ಆದಾಯ ₹ 5,000 ಇರುವುದರಿಂದ ನಿಮಗೆ ತೆರಿಗೆ ಭಯವೂ ಇಲ್ಲ. ನೀವು ಎಲ್ಲವನ್ನೂ ಮರೆತು ನಿಶ್ಚಿಂತೆಯಿಂದ ಬಾಳಿರಿ.

ಸಾದಿಕ್ ಭಾಷಾ.ಎ.ಎಸ್., ಊರು ಬೇಡ

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ನನ್ನ ತಂದೆ ಖಾಲಿ ಚೀಲ ವ್ಯಾಪಾರ ಮಾಡಿಕೊಂಡು ಬೇರೆ ಊರಿನಲ್ಲಿ ವಾಸಿಸುತ್ತಾರೆ. ತಂದೆಯವರಿಗೆ ಸ್ವಂತಕ್ಕೆ ಮನೆ ಹಾಗೂ ನಿವೇಶನ ಇದ್ದು, ನಿವೇಶನ ₹ 28 ಲಕ್ಷಕ್ಕೆ ಮಾರಾಟ ಮಾಡಲು ₹ 5 ಲಕ್ಷ ಮುಂಗಡ ಪಡೆದು ಒಪ್ಪಂದ ಮಾಡಿಕೊಂಡಿರುತ್ತಾರೆ. ನಂತರ ನಮ್ಮ ತಂದೆಯವರು ನಾನು ಇರುವ ಊರಿನಲ್ಲಿ ₹ 35 ಲಕ್ಷಕ್ಕೆ ಹಂಚಿನ ಮನೆಯನ್ನು ತೆಗೆದುಕೊಳ್ಳುವ ಸಲುವಾಗಿ ₹ 1 ಲಕ್ಷ ಕೊಟ್ಟು ಒಪ್ಪಂದ ಮಾಡಿಕೊಂಡಿದ್ದಾರೆ. ತಂದೆಯವರು ತಮ್ಮ ಸಾಲದ ಬಾಪ್ತು ₹ 5 ಲಕ್ಷ ವಿನಿಯೋಗಿಸಿರುತ್ತಾರೆ. ರಿಜಿಸ್ಟ್ರೇಶನ್ ಸಮಯದಲ್ಲಿ ಉಳಿದ ₹ 23 ಲಕ್ಷ ಬರಲಿದ್ದು ಸದರಿ ಹಣವನ್ನು ತಂದೆ

ಯವರು ಯಾವ ರೀತಿ ಪಡೆಯಬೇಕು ಹಾಗೂ ₹ 35 ಲಕ್ಷಕ್ಕೆ ಖರೀದಿಸುತ್ತಿರುವ ಮನೆ ಮಾಲೀಕರಿಗೆ ಯಾವ ರೀತಿ ಹಣ ನೀಡಬೇಕು. ಒಪ್ಪಂದ ಪತ್ರ ತಂದೆ ಹೆಸರಿನಲ್ಲಿದ್ದು, ರಿಜಿಸ್ಟ್ರೇಶನ್‌ ನನ್ನ ಹೆಸರಿಗೆ ಮಾಡಿಸುವುದಾಗಿ ತಿಳಿಸಿದ್ದಾರೆ. ಬ್ಯಾಂಕಿನಲ್ಲಿ ₹ 12 ಲಕ್ಷ ಸಾಲ ಮಾಡಲು ನಿರ್ಧರಿಸಿದ್ದೇನೆ. ಒಟ್ಟು ವೇತನ

₹ 23,640 ಹಾಗೂ ಕಡಿತದ ನಂತರ ಕೈಗೆ ₹ 16,620 ಬರುತ್ತದೆ. ನಾನು ಯಾವ ರೀತಿಯಲ್ಲಿ ಬ್ಯಾಂಕಿನಲ್ಲಿ ಸಾಲ ಪಡೆಯಬಹುದು. ಪ್ರಧಾನ ಮಂತ್ರಿಗಳ ಅಥವಾ ಇನ್ನಿತರ ಯಾವುದಾದರೂ ಯೋಜನೆಗಳಿದ್ದರೆ ತಿಳಿಸಿ?

ಉತ್ತರ: ನಿಮ್ಮ ತಂದೆ ಮಾರಾಟ ಮಾಡುವ ನಿವೇಶನದಿಂದ ಬರುವ ಹಣದಲ್ಲಿ ಈಗಾಗಲೇ ₹ 5 ಲಕ್ಷ ಮುಂಗಡವಾಗಿ ಪಡೆದಿದ್ದರಿಂದ ಉಳಿದ ₹ 23 ಲಕ್ಷ, ಡಿ.ಡಿ. ಅಥವಾ ಪೇಆರ್ಡರ್ (ಬ್ಯಾಂಕರ್ಸ್ ಚೆಕ್) ಮುಖಾಂತರವೇ ಪಡೆಯಿರಿ. ನಗದು ರೂಪದಲ್ಲಿ ಎಂದಿಗೂ ಪಡೆಯಬೇಡಿರಿ. ಖರೀದಿಸುವವರು ಚೆಕ್ ಕೊಟ್ಟರೂ ತೆಗೆದುಕೊಳ್ಳಬಾರದು.

ಚೆಕ್ ನೀವು ಬ್ಯಾಂಕಿಗೆ ಕೊಟ್ಟಾಗ, ಚೆಕ್ ಕೊಟ್ಟವರ ಖಾತೆಯಲ್ಲಿ ಹಣವಿರದಿರುವಲ್ಲಿ, ಚೆಕ್ ವಾಪಸ್‌ ಬರುವ ಸಾಧ್ಯತೆ ಇದೆ. ನೀವು ಕೂಡಾ ಮನೆಕೊಳ್ಳುವಾಗ ಡಿ.ಡಿ. ಅಥವಾ ಪೇ ಆರ್ಡರ್ ಮುಖಾಂತರವೇ ಹಣ ಸಂದಾಯ ಮಾಡಿರಿ. ಮನೆ ಕೊಳ್ಳುವಾಗ ನಿವೇಶನದಿಂದ ಬರುವ ಹಣ ಸಾಕಾಗದಿರುವುದರಿಂದ ₹ 12 ಲಕ್ಷ ಸಾಲವನ್ನು ನಿಮ್ಮ ಸಂಬಳ ಬರುವ ಬ್ಯಾಂಕಿನಲ್ಲಿ ಪಡೆಯಿರಿ. ಈ ಸಾಲ 20 ವರ್ಷಗಳ ಮಾಸಿಕ ಸಮಾನ ಕಂತಿನಲ್ಲಿ (ಇ.ಎಂ.ಐ.) ತೀರಿಸಿರಿ. ಇ.ಎಂ.ಐ. ₹ 12,000 ತಿಂಗಳಿಗೆ ಬರುತ್ತದೆ. ನೀವು ಕೊಳ್ಳುವ ಮನೆ ಯಾವ ಊರಿನಲ್ಲಿ ಇದೆ ಎನ್ನುವುದು ತಿಳಿಯಲಿಲ್ಲ. ಮನೆ ಪಟ್ಟಣದಲ್ಲಿರುವುದಾದರೆ ಪ್ರಧಾನ ಮಂತ್ರಿ ಆವಾಜ್ ಯೋಜನೆ (PMAY) ಯಲ್ಲಿ ಸಾಲ ಪಡೆಯಬಹುದು. ₹ 12 ಲಕ್ಷ ವಾರ್ಷಿಕ ಆದಾಯದೊಳಗಿರುವವರು ₹ 9 ಲಕ್ಷ ಗೃಹ ಸಾಲದ ತನಕ ಶೇಕಡಾ 4ರ ಬಡ್ಡಿ ಅನುದಾನಿತ (Interest subsidy) ಈ ಯೋಜನೆಯಿಂದ ಪಡೆಯಬಹುದು.

ಎನ್‌.ಎನ್‌. ಜಗದೀಶ್‌, ತುಮಕೂರು

ನಾನು ಶಿಕ್ಷಕ, ನನ್ನ ಮಗ ತುಮಕೂರಿನಲ್ಲಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿದ್ದಾನೆ. ನನಗೆ ನಾನು ಸಂಬಳ ಪಡೆಯುವ ಬ್ಯಾಂಕಿನಲ್ಲಿ ಶಿಕ್ಷಣ ಸಾಲ ಸಿಗಬಹುದೇ ಹಾಗೂ ಏನೆಲ್ಲಾ ಕಾಗದ ಪತ್ರ ಒದಗಿಸಬೇಕು?

ಉತ್ತರ: ವೃತ್ತಿ ಪರ ಶಿಕ್ಷಣ ಪಡೆಯುವಾಗ, ಎಲ್ಲಾ ಬ್ಯಾಂಕುಗಳು ಶಿಕ್ಷಣ ಸಾಲ ಕೊಡುತ್ತವೆ. ಹೆತ್ತವರ ಆದಾಯ ವಾರ್ಷಿಕವಾಗಿ ₹ 4.50 ಲಕ್ಷ ದೊಳಗಿರುವಲ್ಲಿ, ಬಡ್ಡಿ ಅನುದಾನಿತ ಶಿಕ್ಷಣ ಸಾಲ ಕೂಡಾ ಪಡೆಯಬಹುದು. ಇಂತಹ ಸಂದರ್ಭದಲ್ಲಿ, ತಹಸೀಲ್ದಾರರಿಂದ ವಾರ್ಷಿಕ ಆದಾಯ ₹ 4.50 ಲಕ್ಷ ದೊಳಗಿದೆ ಎಂಬುದಾಗಿ ಸರ್ಟಿಫಿಕೇಟ್‌ ಪಡೆದು, ಸಾಲಕ್ಕೆ ಅರ್ಜಿ ಸಲ್ಲಿಸುವಾಗಲೇ ಬ್ಯಾಂಕಿಗೆ ಕೊಡಬೇಕಾಗುತ್ತದೆ. ಎಲ್ಲಾ ಶಿಕ್ಷಣ ಸಾಲ ಪಡೆಯುವಾಗ, ವಿದ್ಯಾರ್ಥಿ ಉತ್ತೀರ್ಣನಾದ ಪರೀಕ್ಷೆ ಸರ್ಟಿಫಿಕೇಟ್‌, ಕಾಲೇಜಿನಲ್ಲಿ ಸೀಟು ದೊರಕಿರುವ ಬಗ್ಗೆ ಕಾಲೇಜಿನಿಂದ ಪತ್ರ, ಓದಿದ ಕಾಲೇಜಿನಿಂದ ಗುಣನಡತೆ ಸರ್ಟಿಫಿಕೇಟ್‌ ಇಷ್ಟು ಕಾಗದ ಪತ್ರ ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ.

ವಿಶ್ವನಾಥ, ಬೆಂಗಳೂರು

ನಾನು ನನ್ನ ಭಾವ ಇಬ್ಬರೂ ಕೂಡಿ 2006 ರಲ್ಲಿ ₹ 22 ಲಕ್ಷಕ್ಕೆ 30’ X 40’ ಅಳತೆಯ ನಿವೇಶನದಲ್ಲಿರುವ ಶೀಟಿನ ಮನೆ ಖರೀದಿಸಿದ್ದೆವು. 2013 ರಲ್ಲಿ ಈ ಶೀಟಿನ ಮನೆ ಕೆಡವಿ, 3 ಅಂತಸ್ತಿನ ಆರ್‌.ಸಿ.ಸಿ. ಮನೆ ಕಟ್ಟಿಸಿದೆವು. 2017 ಮೇ ತಿಂಗಳಲ್ಲಿ ಈ ಆಸ್ತಿಯನ್ನು ₹ 1 ಕೋಟಿ 60 ಲಕ್ಷಕ್ಕೆ ಮಾರಾಟ ಮಾಡಿದೆವು. ನನಗೆ ಹಾಗೂ ಭಾವನಿಗೆ ತಲಾ ₹ 80 ಲಕ್ಷ ಬಂದಿದೆ. ಅದರಲ್ಲಿ ಪ್ರತಿಯೊಬ್ಬರೂ ₹ 80 ಲಕ್ಷಕ್ಕೆ ಟಿ.ಡಿ.ಎಸ್‌. ಕಟ್ಟಿದೆವು. ನನ್ನ ಭಾವ ಈ ಹಣ ಅವರ ಸಾಲಕ್ಕೆ ಉಪಯೋಗಿಸಿದ್ದಾರೆ. ನಾನು ₹ 35 ಲಕ್ಷ ಮಡದಿಯ ಹೆಸರಿನಲ್ಲಿ, ₹ 39 ಲಕ್ಷ ತಾಯಿಯ ಹೆಸರಿನಲ್ಲಿ ಠೇವಣಿ ಮಾಡಿದ್ದೇನೆ. ನನಗೆ, ನನ್ನ ತಾಯಿಗೆ, ಮಡದಿಗೆ ಹಾಗೂ ಭಾವನಿಗೆ ತೆರಿಗೆ ಕಟ್ಟುವ ಅವಶ್ಯಕತೆ ಇದೆಯೇ?

ಉತ್ತರ: 2006 ರಲ್ಲಿ ನೀವು ಆಸ್ತಿಕೊಂಡು ಕೊಂಡಿರುವುದು ನೀವು ಹಾಗೂ ನಿಮ್ಮ ಭಾವನ ಹೆಸರಿನಲ್ಲಿ ನೋಂದಣಿಯಾಗಿದ್ದರೆ, ತಲಾ ₹ 80 ಲಕ್ಷ ಬಂದಿರುವುದರಲ್ಲಿ ಕೊಂಡುಕೊಳ್ಳುವಾಗ ಕೊಟ್ಟ ಹಣ, 2006 ರಿಂದ 2017 ರವರೆಗಿನ Cost of Inflation ಹಣ ಹಾಗೂ 3 ಅಂತಸ್ತಿನ ಮನೆಗೆ ಬಿದ್ದಿರುವ ಖರ್ಚು ಈ ಮೂರು ಸೇರಿಸಿ, ಶೇ 50ರಂತೆ ಇಬ್ಬರಲ್ಲಿ ವಿನಿಮಯಮಾಡಿ, ಬಂದಿರುವ ₹ 80 ಲಕ್ಷದಲ್ಲಿ ಕಳೆದು ಉಳಿಯುವ ಹಣಕ್ಕೆ ಕ್ಯಾಪಿಟಲ್ ಗೇನ್‌ ಟ್ಯಾಕ್ಸ್‌ ಕೊಡಕಾಗುತ್ತದೆ. ನೀವು ನಿಮ್ಮ ಮಡದಿ ಹಾಗೂ ತಾಯಿ ಹೆಸರಿನಲ್ಲಿ ಡಿಪಾಸಿಟ್‌ ಮಾಡಿರುವುದಕ್ಕೆ ತೆರಿಗೆ ಬರುವುದಿಲ್ಲ. ₹ 80 ಲಕ್ಷಕ್ಕೆ ಟಿ.ಡಿ.ಎಸ್‌. ಇರಲಿಕ್ಕಿಲ್ಲ. ₹ 50 ಲಕ್ಷಕ್ಕೂ ಮೀರಿದ ಸಂದರ್ಭದಲ್ಲಿ ಶೇ 1 ರಷ್ಟು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.

ಶ್ರೀಧರ್‌, ತುಮಕೂರು

ನಾನು ಗುತ್ತಿಗೆ ಕಾರ್ಮಿಕ. ನನಗೆ ₹ 7 ಲಕ್ಷ ಗೃಹ ಸಾಲ ಬೇಕಾಗಿದೆ. ನನ್ನ ಸಂಬಳ ₹ 10,000. ಬಡ್ಡಿ–ಅಸಲು ಎಷ್ಟು ಕಟ್ಟಬೇಕು. ಯಾವ ಬ್ಯಾಂಕಿನಲ್ಲಿ ಸಾಲ ಪಡೆಯಬಹುದು?

ಉತ್ತರ: ಬ್ಯಾಂಕಿನಲ್ಲಿ ಗೃಹ ಸಾಲ ಪಡೆಯುವಾಗ, ಸಾಲ ಮರು ಪಾವತಿಸುವ ಸಾಮರ್ಥ್ಯ ಲೆಕ್ಕ ಹಾಕುತ್ತಾರೆ. ₹ 7 ಲಕ್ಷ ಗೃಹ ಸಾಲಕ್ಕೆ ₹ 7,000 ತಿಂಗಳ ಕಂತು (ಬಡ್ಡಿ ಅಸಲು ಸೇರಿ ಇಎಂಐ) ಕಟ್ಟಬೇಕಾಗುತ್ತದೆ. ಇದೇ ವೇಳೆ ನೀವು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಗೃಹ ಸಾಲ ದೀರ್ಘಾವಧಿ ಸಾಲವಾದ್ದರಿಂದ ನಿಮಗೆ ಸಾಲ ದೊರೆಯುವುದಿಲ್ಲ.

***

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001.

ಇ–ಮೇಲ್‌: businessdesk@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry