7

ಕೃಷಿಗೂ ಹ್ಯಾಕಿಂಗ್ ಸಮಸ್ಯೆ?

Published:
Updated:
ಕೃಷಿಗೂ ಹ್ಯಾಕಿಂಗ್ ಸಮಸ್ಯೆ?

ವ್ಯವಸಾಯಕ್ಕೂ, ಹ್ಯಾಕಿಂಗ್‌ಗೂ ಏನು ಸಂಬಂಧ? ಎಂದು ಹಲವರಿಗೆ ಅನಿಸಬಹುದು. ಆದರೆ ಕೃಷಿಕ್ಷೇತ್ರದ ಮೇಲೂ ಕನ್ನಹಾಕುವವರ ಕಣ್ಣು ಬೀಳಬಹುದು. ಇಂತಹ ಸಾಧ್ಯತೆಗಳು ಇವೆ ಎಂದು ತಂತ್ರಜ್ಞಾನ ತಜ್ಞರು ಎಚ್ಚರಿಸುತ್ತಿದ್ದಾರೆ

ಕೃಷಿ ಕ್ಷೇತ್ರದ ಬಗ್ಗೆ ಎಚ್ಚರ ವಹಿಸದಿದ್ದರೆ, ಅಪಾರ ನಷ್ಟ ಅನುಭವಿಸಬೇಕಾಗುತ್ತದೆ ಎಂದು ತಂತ್ರಜ್ಞರು ಹೇಳುತ್ತಿದ್ದಾರೆ. ಇಷ್ಟಕ್ಕೂ ಕೃಷಿ ಕ್ಷೇತ್ರದ ಮೇಲೆ ಹ್ಯಾಕಿಂಗ್ ಹೇಗೆ ಆಗಬಹುದು ಎಂದರೆ..

ಪ್ರಸ್ತುತ ಬಹುತೇಕ ಕ್ಷೇತ್ರಗಳಿಗೆ ಕಂಪ್ಯೂಟರ್‌ ಲಗ್ಗೆ ಇಟ್ಟಿದೆ. ಕೃಷಿಗೆ ಸಂಬಂಧಿಸಿದ ಹಲವು ವಹಿವಾಟುಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಮುಖ್ಯವಾಗಿ ಹಲವು ದೇಶಗಳಲ್ಲಿ, ಭೂಸಾರ, ಮಣ್ಣಿನ ಫಲವತ್ತತೆ ಇತ್ಯಾದಿ ಕೃಷಿಗೆ ಸಂಬಂಧಿಸಿದ ಸಂಶೋಧನೆಗಳು, ಪರೀಕ್ಷೆಗಳ ವಿವರಗಳನ್ನು ಅಂತರ್ಜಾಲ ಆಧಾರಿತ ಸರ್ವರ್‌ಗಳಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ. ಯಾವ ಬೆಳೆಗೆ ಎಷ್ಟು ಪ್ರಮಾಣದಲ್ಲಿ ನೀರು ಗೊಬ್ಬರ ಹಾಕಬೇಕು? ಹುಳುಗಳಿಂದ ಬೆಳೆಗಳನ್ನು ರಕ್ಷಿಸಲು, ಹೊಸ ಕೀಟ ಬಾಧೆಗಳನ್ನು ಎದುರಿಸಲು ಯಾವ ಔಷಧಿಗಳನ್ನು ಸಿಂಪಡಿಸಬೇಕು? ಇತ್ಯಾದಿ ಹಲವು ಸಲಹೆ, ಸೂಚನೆಗಳನ್ನು ಡೇಟಾಬೇಸ್‌ಗಳಲ್ಲಿ (ದತ್ತಾಂಶ ಕೇಂದ್ರಗಳು) ಸಂಗ್ರಹಿಸಲಾಗುತ್ತಿದೆ.

ಇಂತಹ ಸರ್ವರ್‌ಗಳ ಮೇಲೆ ಕನ್ನಹಾಕುವವರ ಕಣ್ಣು ಬಿದ್ದರೆ? ಅದರಲ್ಲಿರುವ ಅಮೂಲ್ಯವಾದ ಮಾಹಿತಿಯನ್ನು ಕದ್ದರೆ? ಅಥವಾ ಬದಲಾಯಿಸಿದರೆ? ಹಲವು ಸಮಸ್ಯೆಗಳು ಎದುರಾಗುತ್ತವೆ.

ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನಕಲಿ ಮಾಹಿತಿ ಆಧರಿಸಿ ಕೃಷಿ ಮಾಡುವ ರೈತರು ಕೈಸುಟ್ಟುಕೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಮುಖ್ಯವಾಗಿ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ಭಾರತದಂತಹ ರಾಷ್ಟ್ರಗಳಲ್ಲಿರುವ ಹಲವು ರೈತರ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಇದರಿಂದ ದೇಶದ ಅರ್ಥವ್ಯವಸ್ಥೆಯೂ ಕುಸಿಯುತ್ತದೆ.

ರಿಮೋಟ್‌ ತಂತ್ರಜ್ಞಾನ

ಮನೆಯಿಂದಲೇ ಕಂಪ್ಯೂಟರ್ ಅಥವಾ ಮೊಬೈಲ್ ಸಹಾಯದಿಂದ ಹೊಲಕ್ಕೆ ನೀರು ಹರಿಸಬಹುದಾದ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಮೊಬೈಲ್‌ ಕರೆ ಮಾಡಿದರೆ ಸಾಕು, ಯಾರ ಸಹಾಯವೂ ಇಲ್ಲದೆ ಬೆಳೆಗಳಿಗೆ ನೀರು ಉಣಿಸಬಹುದು. ಇಂತಹ ತಂತ್ರಜ್ಞಾನವನ್ನು ಈಗಾಗಲೇ ಹಲವು ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದೇ ರೀತಿಯಲ್ಲೇ, ಯಾವ ಬೆಳೆಗೆ ಎಷ್ಟು ಗಂಟೆಗಳಿಗೊಮ್ಮೆ ನೀರು ಹರಿಸಬೇಕು ಎಂಬುದನ್ನು ಪ್ರೊಗ್ರಾಮಿಂಗ್ ಮಾಡಿಕೊಳ್ಳಬಹುದಾದ ವ್ಯವಸ್ಥೆಯೂ ಬಂದಿದೆ.

ಈ ರೀತಿ ಕೃಷಿ ಕ್ಷೇತ್ರದ ಕೆಲಸಗಳನ್ನು ಸರಳಗೊಳಿಸಲು ಅಭಿವೃದ್ಧಿಯಾಗಿರುವ ತಂತ್ರಜ್ಞಾನಗಳ ಮೇಲೆ ಹ್ಯಾಕರ್‌ಗಳ ವಕ್ರದೃಷ್ಠಿ ಬಿದ್ದರೆ ಅಪಾಯ ತಪ್ಪಿದ್ದಲ್ಲ.

ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು, ಗೊಬ್ಬರ ಹೋಗಿ ಬೆಳೆ ನಾಶ ಆಗಬಹುದು. ಅಥವಾ ಸಮಯಕ್ಕೆ ಸರಿಯಾಗಿ ನೀರು ಹರಿಯದೇ ಬೆಳೆನಷ್ಟ ಉಂಟಾಗಬಹುದು.

ಈ ಎಲ್ಲ ಕಾರಣಗಳಿಂದ ಕೃಷಿ ಕ್ಷೇತ್ರದ ಸಂಶೋಧನೆ, ಮಾಹಿತಿ ಇತ್ಯಾದಿಗಳಿಗೆ ಸಂಬಂಧಿಸಿದ ಕಂಪ್ಯೂಟರ್, ಸರ್ವರ್‌ ವ್ಯವಸ್ಥೆಯ ಭದ್ರತೆ, ಸುರಕ್ಷತೆ ವಿಷಯದಲ್ಲಿ ಎಚ್ಚರವಹಿಸದಿದ್ದರೆ ಇಂತಹ ಅಪಾಯಗಳು ತಪ್ಪಿದ್ದಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry