7

ಸ್ಮಾರ್ಟ್‌ ಆರೋಗ್ಯ ಪರೀಕ್ಷೆಗಳು

Published:
Updated:
ಸ್ಮಾರ್ಟ್‌ ಆರೋಗ್ಯ ಪರೀಕ್ಷೆಗಳು

ಹಣ, ಅಧಿಕಾರಕ್ಕಿಂತ ಆರೋಗ್ಯವೇ ಮನುಷ್ಯನಿಗೆ ಮುಖ್ಯ. ಹೀಗಾಗಿಯೇ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಆಗಾಗ್ಗೆ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿರುತ್ತಾರೆ. ಆದರೆ, ಎಲ್ಲ ಸಂದರ್ಭಗಳಲ್ಲೂ, ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಹೀಗಾಗಿ ಆರೋಗ್ಯ ಪರೀಕ್ಷೆಗಳಿಗ ನೆರವಾಗುವಂಥ ಕೆಲವು ಸ್ಮಾರ್ಟ್‌ ಸಾಧನಗಳು ಇವೆ.

***

ಚಿಕ್ಕ–ಪುಟ್ಟ ಪರೀಕ್ಷೆಗಳೆಲ್ಲಾ ಮನೆಯಲ್ಲೇ

ಐಎಸ್‌ಪಿ02 (Isp02) ಸಾಧನವು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಇದರ ಸಹಾಯದಿಂದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬಹುದಾದ ಹಲವು ಪರೀಕ್ಷೆಗಳನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. ಇದರ ತಂತಿಯ ಒಂದು ಬದಿ ಕ್ಲಿಪ್‌ಅನ್ನು ಬೆರಳಿಗೆ ಸಿಕ್ಕಿಸಿಕೊಂಡು, ಮತ್ತೊಂದು ತುದಿಯಲ್ಲಿರುವ ಪಿನ್‌ ಅನ್ನು ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ ಜತೆಗೆ ಜೋಡಿಸಿ ಪರೀಕ್ಷೆ ಮಾಡಬಹುದು. ಇದು ಕಾರ್ಯಪ್ರವೃತ್ತವಾದ ನಂತರ ಎಷ್ಟು ಪ್ರಮಾಣದಲ್ಲಿ ದೇಹಕ್ಕೆ ಆಮ್ಲಜನಕ ಲಭ್ಯವಾಗುತ್ತಿದೆ. ನಾಡಿ ಬಡಿತ ಹೇಗಿದೆ, ರಕ್ತದ ಒತ್ತಡ ಇತ್ಯಾದಿ ಮಾಹಿತಿಯನ್ನು ಮೊಬೈಲ್ ಪರದೆ ಮೇಲೆ ನೋಡಬಹುದು.

***

ಸ್ಮಾರ್ಟ್‌ ಥರ್ಮಾ ಮೀಟರ್

ಕಿನ್ಸಾ ಸ್ಮಾರ್ಟ್ ಥರ್ಮಾ ಮೀಟರ್ (Kinsa smart Thermometer). ಹೆಸರಿಗೆ ತಕ್ಕಂತೆ ಇದರ ಕಾರ್ಯವೈಖರಿಯೂ ತುಂಬಾ ಸ್ಮಾರ್ಟ್‌ ಆಗಿರುತ್ತದೆ. ಇದರ ಒಂದು ತುದಿಯಲ್ಲಿ ಇರುವ ಪಿನ್‌ ಅನ್ನು ಸ್ಮಾರ್ಟ್‌ಫೋನ್‌ಗೆ ಅಳವಡಿಸಿ, ಅದರ ಜತೆ ಜೋಡಿಸಿರುವ ತಂತ್ರಾಂಶದ ಸಹಾಯದಿಂದ ಪರದೆಮೇಲೆ ದೇಹದ ಉಷ್ಣಾಂಶ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಅಲ್ಲದೆ ಅನಾರೋಗ್ಯದ ಲಕ್ಷಣಗಳನ್ನೂ ಇದು ಸೂಚಿಸುತ್ತದೆ. ನಮ್ಮ ದೇಹ ಯಾವುದಾದರೂ ರೋಗಕ್ಕೆ ತುತ್ತಾಗಿದ್ದರೆ ತಿಳಿಸುತ್ತದೆ. ಅಲ್ಲದೆ, ರೋಗ ಗುಣಪಡಿಸಲು ಯಾವ ಔಷಧಿ ಬಳಸಬೇಕು? ಹೇಗೆ ಬಳಸಬೇಕು ಎಂಬ ವಿವರಗಳನ್ನೂ ನೀಡುತ್ತದೆ.

***

ಅಡಿಗಡಿಗೂ ಲೆಕ್ಕ

ಷೂ ಪೌಚ್‌ ಫಾರ್ ಫಿಟ್ನೆಸ್ ಟ್ರ್ಯಾಕರ್ (Shoe pouch for fitness tracker). ಓಡುತ್ತಾ, ನಡೆಯುತ್ತಾ ಎಷ್ಟು ದೂರ ಕ್ರಮಿಸಿದ್ದೇವೆ, ಎಷ್ಟು ಕ್ಯಾಲರಿ ಶಕ್ತಿ ಖರ್ಚಾಗಿದೆ ಎಂಬ ಮಾಹಿತಿ ತಿಳಿಯಲು ಈ ಸಾಧನ ನೆರವಾಗುತ್ತದೆ. ಇದನ್ನು ನಮ್ಮ ಷೂಗೆ ಅಳವಡಿಸಿದರೆ, ಕ್ರಮಿಸಿದ ದೂರದಲ್ಲಿ ಎಷ್ಟು ಹೆಜ್ಜೆಗಳನ್ನು ಇಟ್ಟಿದ್ದೇವೆ. ಎಷ್ಟು ವೇಗದಲ್ಲಿ ಓಡಿದ್ದೇವೆ ಎಂಬುದನ್ನು ತಿಳಿಯಬಹುದು. ಯುಎಸ್‌ಬಿ ಸಹಾಯದಿಂದ ಈ ಮಾಹಿತಿಯನ್ನು ಸ್ಮಾರ್ಟ್‌ಫೋನ್, ಕಂಪ್ಯೂಟರ್‌ಗಳಲ್ಲಿ ನೋಡಬಹುದು.

***

ವಿಥಿಂಗ್ಸ್ ಬ್ಲಡ್ ಪ್ರೆಷರ್ ಮಾನಿಟರ್ (Whithings blood pressure monitor)

ಇದು ಸ್ಮಾರ್ಟ್‌ಫೋನ್‌ ಮೂಲಕ ರಕ್ತ ಪರೀಕ್ಷೆ ತಿಳಿದುಕೊಳ್ಳಲು ನೆರವಾಗುವ ಸಾಧನ. ರಕ್ತದೊತ್ತಡ ಪರೀಕ್ಷೆ ಮಾಡುವ ಯಂತ್ರದಲ್ಲಿ ಇರುವಂತೆ ಇದರಲ್ಲೂ ಉದ್ದನೆಯ ವಸ್ತ್ರವೊಂದು ಇರುತ್ತದೆ. ಇದನ್ನು ಕೈಗೆ ಸುತ್ತಿಕೊಂಡು, ಅದರ ಜತೆಗೆ ಇರುವ ತಂತಿಯನ್ನು ಮೊಬೈಲ್‌ಫೋನ್‌ ಜತೆಗೆ ಜೋಡಿಸಬೇಕು. ಆಗ ದೇಹದಲ್ಲಿರುವ ರಕ್ತದೊತ್ತಡ ಪ್ರಮಾಣವನ್ನು ಮೊಬೈಲ್‌ ಪರದೆಯಲ್ಲಿ ನೋಡಬಹುದು.

***

ಮಕ್ಕಳಿಗೆ ಸ್ಮಾರ್ಟ್ ಆಯಾ

ಪುಟ್ಟ ಮಕ್ಕಳನ್ನು ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಮಿಮೊ ಬೇಬಿ ಮಾನಿಟರ್ (mimo baby monitor) ಪುಟ್ಟ ಮಕ್ಕಳ, ಆರೋಗ್ಯ ಪರಿಸ್ಥಿತಿ, ಚಲನವಲನಗಳನ್ನು ತಿಳಿಸುವ ಸಾಧನ. ಇದನ್ನು ಮಕ್ಕಳ ಬಟ್ಟೆ ಮೇಲೆ ಅಳವಡಿಸಿದರೆ, ಅವರ ದೇಹದ ಉಷ್ಣಾಂಶ, ಹೃದಯ ಬಡಿತದ ಬಗ್ಗೆ ಸ್ಮಾರ್ಟ್‌ಫೋನ್‌ ಮೂಲಕ ತಿಳಿಯಬಹುದು. ಜತೆಗೆ ಮಕ್ಕಳು ನಿದ್ರಿಸುತ್ತಿರುವುದು, ಅಳುತ್ತಿರುವುದನ್ನು ಇದರ ಸೆನ್ಸರ್‌ಗಳು ಸೂಚಿಸುತ್ತವೆ. ಮಗುವನ್ನು ಕೋಣೆಯಲ್ಲಿ ಮಲಗಿಸಿ, ನಿಶ್ಚಿಂತೆಯಿಂದ ನಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry