‘ಫಂಡ್ಸ್‌ ಇಂಡಿಯಾ’ದ ಹೂಡಿಕೆ ಸೇವೆ

7

‘ಫಂಡ್ಸ್‌ ಇಂಡಿಯಾ’ದ ಹೂಡಿಕೆ ಸೇವೆ

Published:
Updated:
‘ಫಂಡ್ಸ್‌ ಇಂಡಿಯಾ’ದ ಹೂಡಿಕೆ ಸೇವೆ

ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹಣ ಹೂಡಿಕೆಗೆ ನೆರವಾಗುವ ಸಂಸ್ಥೆಗಳಲ್ಲಿ ಹಣಕಾಸು ತಂತ್ರಜ್ಞಾನ ಸಂಸ್ಥೆ ಫಂಡ್ಸ್ ಇಂಡಿಯಾ ಕೂಡ ಒಂದು. ಹಣ ಹೂಡಿಕೆಯ ಹಲವಾರು ಮಾರ್ಗೋಪಾಯಗಳ ಪೈಕಿ ಫಂಡ್ಸ್‌ ಇಂಡಿಯಾ ಕೇವಲ ಮ್ಯೂಚುವಲ್ ಫಂಡ್ಸ್‌ಗಳಲ್ಲಿ ಹೂಡಿಕೆಯ ಸಲಹೆ ನೀಡುವ ಮತ್ತು ಹೂಡಿಕೆ ಕಾರ್ಯಗತಗೊಳಿಸುವ ವಿಶಿಷ್ಟ ವೇದಿಕೆಯಾಗಿದೆ.

ಹೂಡಿಕೆದಾರರು, ಸಣ್ಣ ಉಳಿತಾಯ ಯೋಜನೆ, ಸ್ಥಿರ ಠೇವಣಿ, ಬಾಂಡ್‌, ಷೇರುಗಳಲ್ಲಿ ಹಣ ತೊಡಗಿಸಲು ಮುಂದೆ ಬಂದಾಗ, ಮ್ಯೂಚುವಲ್‌ ಫಂಡ್ಸ್‌ಗಳು ಅವರ ಕೊನೆಯ ಆದ್ಯತೆ ಆಗಿರುತ್ತದೆ. ಇದು ದೀರ್ಘಾವಧಿಯಲ್ಲಿ ಲಾಭ ತಂದುಕೊಡುವುದೇ ಇದಕ್ಕೆ ಮುಖ್ಯ ಕಾರಣ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಯುವ ವೃತ್ತಿಪರರಲ್ಲಿ ಈ ಪ್ರವೃತ್ತಿ ಬದಲಾಗುತ್ತಿದೆ. ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹಣ ಹೂಡಿಕೆ ದಿನೇ ದಿನೇ ಜನಪ್ರಿಯವಾಗುತ್ತಿದೆ. ಸ್ನೇಹಿತರು, ಬಂಧುಗಳ ಸಲಹೆ ಮೇರೆಗೆ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಫಂಡ್ಸ್‌ಇಂಡಿಯಾ ಕೂಡ ಈ ಪ್ರವೃತ್ತಿಗೆ ನೀರೆರೆಯುತ್ತಿದೆ.

ಹೈದರಾಬಾದ್‌ನಲ್ಲಿ ಕಾಲೇಜ್‌ ಸಹಪಾಠಿಗಳಾಗಿದ್ದ ಆರ್‌. ಚಂದ್ರಶೇಖರ್‌ ಮತ್ತು ಶ್ರೀಕಾಂತ್‌ ಮೀನಾಕ್ಷಿ ಜತೆಯಾಗಿ ಈ ಹಣಕಾಸು ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಿದ್ದಾರೆ.

ಇಬ್ಬರೂ ಅಮೆರಿಕದಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಮಾಸ್ಟರ್‌ ಪದವಿ ಪಡೆದು ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡಿದ್ದರು. ನಂತರ ಇಬ್ಬರೂ ಭಾರತಕ್ಕೆ ಮರಳಿ ಬಂದಿದ್ದರು. ಸ್ವದೇಶಕ್ಕೆ ಮರಳಿದ ನಂತರ ಚಂದ್ರಶೇಖರ್‌ ಅವರು ಪಿಂಚಣಿ ಸೇವಾ ವಲಯ ಮತ್ತು ವಿಶ್ವನಾಥ್‌ ಅವರು ಬ್ರೋಕರೇಸ್‌ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಹಣಕಾಸು ಸೇವೆ ಉದ್ದಿಮೆಯಲ್ಲಿನ ಎರಡು ದಶಕಗಳ ಅನುಭವವು ಈ ಸಂಸ್ಥೆ ಕಟ್ಟಿ ಬೆಳೆಸಲು ಇವರ ನೆರವಿಗೆ ಬಂದಿದೆ. ಇದೇ ಕಾರಣಕ್ಕೆ ಮ್ಯೂಚುವಲ್‌ ಫಂಡ್‌ ವಹಿವಾಟಿನಲ್ಲಿ ಹೊಸ ಮತ್ತು ವಿನೂತನ ಆಲೋಚನೆ ಮತ್ತು ಉತ್ಪನ್ನಗಳನ್ನು ಪರಿಚಯಿಸಲು ಸಾಧ್ಯವಾಗಿದೆ. ಹೂಡಿಕೆದಾರರಿಗೆ ಹಣಕಾಸು ಭವಿಷ್ಯ ಸುರಕ್ಷಿತಗೊಳಿಸುವ ಉದ್ದೇಶದ ವಹಿವಾಟು ಆರಂಭಿಸಲು ಇವರಿಬ್ಬರೂ 2008ರಲ್ಲಿ ಫಂಡ್ಸ್‌ಇಂಡಿಯಾ ವೆಲ್ತ್‌ ಇಂಡಿಯಾ ಫೈನಾನ್ಶಿಯಲ್‌ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌ ಆರಂಭಿಸಿದ್ದರು.

‘ಹೂಡಿಕೆದಾರರಿಗೆ ಪೂರ್ಣ ಪ್ರಮಾಣದ ಸೇವೆ ನೀಡುವುದು ಇದರ ಇ‌ನ್ನೊಂದು ವೈಶಿಷ್ಟ್ಯವಾಗಿದೆ. ಇಲ್ಲಿ ಬರೀ ಮಾರಾಟ – ಖರೀದಿ ಇರುವುದಿಲ್ಲ. ಜತೆಗೆ ಸಲಹೆ, ಸಂಶೋಧನೆ ಮತ್ತು ಸಂಪೂರ್ಣ ಖಾತೆ ನಿರ್ವಹಣೆಯ ಸೇವೆಯೂ ಲಭ್ಯ ಇರಲಿದೆ. ಒಮ್ಮೆ ಇಲ್ಲಿಗೆ ಬಂದವರು ಮತ್ತೆ ಬೇರೆಡೆ ಹೋಗುವ ಅಗತ್ಯ ಇಲ್ಲ. ಇದು ನಮ್ಮ ವಹಿವಾಟಿನ ಸ್ವರೂಪ. ಇದು ಸರಳ ಮತ್ತು ಸಶಕ್ತವೂ ಆಗಿದೆ’ ಎಂದು ಶ್ರೀಕಾಂತ್‌ ಮೀನಾಕ್ಷಿ ಹೇಳುತ್ತಾರೆ.

ಹೂಡಿಕೆದಾರರು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಪ್ರತ್ಯೇಕ ಖಾತೆ ತೆರೆಯುವ ಅಗತ್ಯವೂ ಇಲ್ಲಿ ಇಲ್ಲ. ಕುಟುಂಬದ ಮುಖ್ಯಸ್ಥರು ಒಂದು ಖಾತೆ ತೆರೆದು ಅಲ್ಲಿ ಕುಟುಂಬದ ಇತರ ಸದಸ್ಯರ ಒಂದಕ್ಕಿಂತ ಹೆಚ್ಚು ಖಾತೆಗಳನ್ನೂ ಸುಲಭವಾಗಿ ನಿರ್ವಹಿಸಬಹುದು. ವ್ಯವಸ್ಥಿತ ಹೂಡಿಕೆ ಯೋಜನೆಯಡಿ (ಎಸ್‌ಐಪಿ) ಕನಿಷ್ಠ ಹೂಡಿಕೆ ₹ 1,000 ಆಗಿದೆ.

ಸಂಸ್ಥೆಯು ವೈವಿಧ್ಯಮಯ ಹಣಕಾಸು ಸೇವೆಗಳನ್ನು ತನ್ನ ಆನ್‌ಲೈನ್‌ ತಾಣದಲ್ಲಿ ಒದಗಿಸುತ್ತಿದೆ. ಮೊಬೈಲ್‌ ಆ್ಯಪ್‌ ಮೂಲಕವೂ ಇಲ್ಲಿ ಹಣ ಹೂಡಿಕೆ ಮಾಡಬಹುದು.

ಹೂಡಿಕೆದಾರರ ಈ ತಾಣದ ಮೂಲಕ ಮ್ಯೂಚುವಲ್ ಫಂಡ್ಸ್‌, ಕಾರ್ಪೊರೇಟ್‌ ಠೇವಣಿ ಮತ್ತು ಇತರ ಹೂಡಿಕೆ ಉತ್ಪನ್ನಗಳಲ್ಲಿ ಹಣ ತೊಡಗಿಸಬಹುದು. ಇದಕ್ಕೆ ಯಾವುದೇ ಶುಲ್ಕ ಪಾವತಿಸಬೇಕಾದ ಅಗತ್ಯ ಇಲ್ಲ. ಷೇರು ಹೂಡಿಕೆ ವಹಿವಾಟಿಗೆ ಮಾತ್ರ ಕನಿಷ್ಠ ಮಟ್ಟದ ಶುಲ್ಕ ವಿಧಿಸಲಾಗುತ್ತಿದೆ.

ಹೂಡಿಕೆದಾರರ ಹಣಕಾಸಿನ ಭವಿಷ್ಯ ಸುರಕ್ಷಿತಗೊಳಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಹೂಡಿಕೆದಾರರನ್ನು ಹಣಕಾಸು ಸಾಕ್ಷರರನ್ನಾಗಿಸಿ ಸಶಕ್ತಗೊಳಿಸಿ ತಮ್ಮ ಹೂಡಿಕೆಯನ್ನು ಹೆಚ್ಚು ಲಾಭದಾಯಕ ಮಾಡಿಕೊಳ್ಳುವಂತೆ ಮಾಡುವ ಉದ್ದೇಶ ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಪ್ರತಿಯೊಬ್ಬ ಭಾರತೀಯ ಹೂಡಿಕೆದಾರನು ತುಂಬ ಯೋಜಿತ ಹಣಕಾಸು ಭವಿಷ್ಯ ಹೊಂದಿರುವಂತೆ ಮಾಡುವುದು ಫಂಡ್ಸ್‌ ಇಂಡಿಯಾದ ಮುಖ್ಯ ಧ್ಯೇಯವಾಗಿದೆ.

ಹೊಸಬರಲ್ಲಿ ಶೇ 30 ಆ್ಯಪ್‌ ಮತ್ತು ಶೇ 70ರಷ್ಟು ಗ್ರಾಹಕರು ಅಂತರ್ಜಾಲದ ಮೂಲಕ ಸೇರ್ಪಡೆಯಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚಿನ ಸಂಖ್ಯೆಯ ಗ್ರಾಹಕರು ಇದ್ದಾರೆ. ನಂತರದ ಸ್ಥಾನದಲ್ಲಿ ಮುಂಬೈ, ಎನ್‌ಸಿಆರ್‌, ಹೈದರಾಬಾದ್‌, ಚೆನ್ನೈ ನಗರಗಳು ಇವೆ.

ಬರೀ ಸಲಹೆ ನೀಡಿದರೆ ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ಗೊಂದಲವು ಹೂಡಿಕೆದಾರರನ್ನು ಕಾಡುತ್ತದೆ. ಇಲ್ಲಿ ಸಲಹೆ ಮತ್ತು ಹೂಡಿಕೆ ಅವಕಾಶವೂ ಇದೆ. ಉತ್ತಮ ಸಲಹೆ ಇರುವೆಡೆ ಮಾತ್ರ ಜನರು ಹಣ ಹೂಡಿಕೆ ಮಾಡಲು ಮುಂದಾಗುತ್ತಾರೆ. ಫಂಡ್ಸ್‌ಇಂಡಿಯಾ ಅಂತಹ ಸೌಲಭ್ಯ ಒದಗಿಸುವ ವಿಶಿಷ್ಟ ತಾಣವಾಗಿದೆ. 2011ರಿಂದ ಸಲಹೆ ನೀಡುವ ಸೇವೆಗೆ ಚಾಲನೆ ನೀಡಲಾಗಿದೆ. ಇದಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಹೂಡಿಕೆದಾರರ ವಯಸ್ಸು, ವರಮಾನ, ಹೂಡಿಕೆ ಆಯ್ಕೆ ಆಧರಿಸಿ ಸ್ವಯಂಚಾಲಿತ ಸಲಹೆ ನೀಡುವ ಸೌಲಭ್ಯ ಇಲ್ಲಿ ಇದೆ. ಹೂಡಿಕೆದಾರರ ಪೈಕಿ ಶೇ 8ರಷ್ಟು ಅನಿವಾಸಿ ಭಾರತೀಯ ಗ್ರಾಹಕರೂ ಇದ್ದಾರೆ.

‘ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ವ್ಯವಸ್ಥಿತ ಹೂಡಿಕೆ (ಎಸ್‌ಐಪಿ) ಮಾಡುವುದರಿಂದ ಗರಿಷ್ಠ (ಶೇ 13ರವರೆಗೆ) ವಾರ್ಷಿಕ ವರಮಾನ ಬರುತ್ತದೆ. ಈ ಪ್ರಮಾಣದ ಲಾಭ ಎಲ್ಲಿಯೂ ಬರುವುದಿಲ್ಲ ಇತ್ತೀಚಿನ ವರ್ಷಗಳಲ್ಲಿ ಹಣ ಕಳೆದುಕೊಂಡ ನಿದರ್ಶನಗಳು ಇಲ್ಲ’ ಎಂದೂ ಅವರು ಹೇಳುತ್ತಾರೆ.

ಶ್ರೀಕಾಂತ್‌ ಮೀನಾಕ್ಷಿ ಫಂಡ್ಸ್‌ ಇಂಡಿಯಾದ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿರುವ ಶ್ರೀಕಾಂತ್ ಮೀನಾಕ್ಷಿ, ಅಮೆರಿಕದಲ್ಲಿ ಐಬಿಎಂ ಗ್ಲೋಬಲ್‌ ಸರ್ವಿಸಸ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ತಮ್ಮ ವೃತ್ತಿ ಬದುಕು ಆರಂಭಿಸಿದ್ದರು. ಆನಂತರ ಆನ್‌ಲೈನ್‌ ದಳ್ಳಾಳಿ ಸಂಸ್ಥೆ ಫೋಲಿಯೊಎಫ್‌ಎನ್‌ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇಲ್ಲಿ ಇವರು ವೈಯಕ್ತಿಕ ಹಣಕಾಸು ಕ್ಷೇತ್ರದಲ್ಲಿ ಹಲವಾರು ಹೊಸ ಪರಿಕಲ್ಪನೆಗಳನ್ನು ಪರಿಚಯಿಸಿದ್ದರು. 2008ರಲ್ಲಿ ಭಾರತಕ್ಕೆ ಮರಳಿದ ಇವರು ಫಂಡ್ಸ್‌ಇಂಡಿಯಾ ಸ್ಥಾಪಿಸಿದ್ದರು.

***

ಮ್ಯೂಚುವಲ್‌ ಫಂಡ್‌

ಮ್ಯೂಚುವಲ್‌ ಫಂಡ್‌ ಎನ್ನುವುದು ವೃತ್ತಿಪರತೆಯಿಂದ ನಿರ್ವಹಿಸುವ ಹೂಡಿಕೆ ಯೋಜನೆಯಾಗಿದೆ. ಸಂಪತ್ತು ನಿರ್ವಹಣಾ ಸಂಸ್ಥೆಗಳು ಈ ಯೋಜನೆಗಳನ್ನು ನಿರ್ವಹಿಸುತ್ತವೆ. ಹೂಡಿಕೆದಾರರ ಹಣವನ್ನು ಷೇರು, ಬಾಂಡ್‌ ಮತ್ತು ಇತರ ಸಾಲ ಪತ್ರಗಳಲ್ಲಿ ತೊಡಗಿಸುತ್ತವೆ.

ಹೂಡಿಕೆದಾರರು ಮ್ಯೂಚುವಲ್ ಫಂಡ್ಸ್‌ಗಳ ’ಯುನಿಟ್ಸ್‌’ಗಳನ್ನು ಖರೀದಿಸಬಹುದು. ಇದು ಮ್ಯೂಚುವಲ್‌ ಫಂಡ್‌ನ ನಿರ್ದಿಷ್ಟ ಯೋಜನೆಯಲ್ಲಿನ ಹೂಡಿಕೆದಾರರ ಪಾಲನ್ನು ಪ್ರತಿನಿಧಿಸುತ್ತದೆ. ಈ ಯುನಿಟ್ಸ್‌ಗಳನ್ನು ಖರೀದಿಸಬಹುದು ಅಥವಾ ಫಂಡ್ಸ್‌ಗೆ ಮರಳಿಸಲೂ ಅವಕಾಶ ಇರುತ್ತದೆ. ಷೇರುಗಳಲ್ಲಿ ಹಣ ಹೂಡಿಕೆ ಮಾಡುವುದು ಎಂದರೆ, ಕಂಪನಿಯೊಂದರ ಷೇರುಗಳನ್ನು ಖರೀದಿಸುವುದು ಎಂದರ್ಥ. ಕಂಪನಿಯ ಲಾಭ – ನಷ್ಟ ಆಧರಿಸಿ ಈ ಹೂಡಿಕೆಯು ಲಾಭ ನಷ್ಟ ಒಳಗೊಂಡಿರುತ್ತದೆ. ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಿದ ಹಣವನ್ನು ಷೇರುಗಳ ಸಮೂಹ, ಬಾಂಡ್ಸ್ ಮತ್ತು ಸಾಲಪತ್ರಗಳಲ್ಲಿ ತೊಡಗಿಸಲಾಗಿರುತ್ತದೆ. ಒಂದು ಷೇರು ನಷ್ಟ ಉಂಟು ಮಾಡಿದರೆ ಇತರ ಷೇರುಗಳಲ್ಲಿನ ಲಾಭವು ನಷ್ಟ ಭರ್ತಿ ಮಾಡಿಕೊಡುತ್ತದೆ. ಲಾಭವನ್ನೂ ತಂದುಕೊಡಬಹುದು.

ಕೆಲವರು ಭೂಮಿ, ಕಟ್ಟಡ, ಚಿನ್ನದಂತಹ ಭೌತಿಕ ಸ್ವರೂಪದ ಸ್ಥಿರ ಸಂಪತ್ತಿನಲ್ಲಿ (tangible asset ) ಹಣ ತೊಡಗಿಸುತ್ತಾರೆ. ಇವುಗಳಿಂದ ಸ್ಥಿರ ವರಮಾನ ಬರುತ್ತದೆ. ಷೇರುಗಳಲ್ಲಿನ ಹೂಡಿಕೆ ಸ್ಥಿರ ಸಂಪತ್ತು ಆಗಿರುವುದಿಲ್ಲ. ಏರಿಳಿತ ಇರುತ್ತದೆ. ವರಮಾನವೂ ಸ್ಥಿರವಾಗಿರುವುದಿಲ್ಲ. ಟ್ರೆಸರಿ ಬಿಲ್‌, ಸರ್ಕಾರಿ ಸಾಲಪತ್ರಗಳಲ್ಲಿ ಅಲ್ಪಾವಧಿಯಲ್ಲಿ ತೊಡಗಿಸುವುದರಲ್ಲಿ (Liquid funds) ನಷ್ಟದ ಸಾಧ್ಯತೆ ತುಂಬ ಕಡಿಮೆ ಇರುತ್ತದೆ. ಪರಿಪಕ್ವ ಅವಧಿ 91 ದಿನಗಳಿಗಿಂತ ಕಡಿಮೆ ಇರುತ್ತದೆ. ಆದರೆ, ಮ್ಯೂಚುವಲ್‌ ಫಂಡ್‌ ಇವೆಲ್ಲವುಗಳಿಗಿಂತ ಭಿನ್ನವಾಗಿರುತ್ತದೆ. ಇದೊಂದು ದೀರ್ಘಾವಧಿಯ, ಕನಿಷ್ಠ 3 ರಿಂದ 5 ವರ್ಷಗಳವರೆಗಿನ ಹೂಡಿಕೆಯಾಗಿರುತ್ತದೆ.

***

ವಿದ್ಯಾ ಬಾಲನ್‌: ಮ್ಯೂಚುವಲ್‌ ಫಂಡ್‌ಗಳ ಕಾರ್ಯನಿರ್ವಹಣೆ ಮತ್ತು ಮಾರುಕಟ್ಟೆ ತಜ್ಞೆಯಾಗಿರುವ ವಿದ್ಯಾ ಬಾಲನ್‌ ಅವರು ದೀರ್ಘಾವಧಿಯಲ್ಲಿ ಸಂಪತ್ತು ವೃದ್ಧಿ ಮಾಡುವ ವಿಷಯದಲ್ಲಿ ಪರಿಣತರಾಗಿದ್ದಾರೆ. ಹೂಡಿಕೆ ನಿರ್ವಹಣೆ ಮತ್ತು ಮ್ಯೂಚುವಲ್‌ ಫಂಡ್ಸ್‌ ಸಂಶೋಧನೆಯಲ್ಲಿಯೂ ಇವರು ಪರಿಣತಿ ಸಾಧಿಸಿದ್ದಾರೆ. ಪಂಡ್ಸ್‌ ಇಂಡಿಯಾದ ಪೂರ್ಣ ಪ್ರಮಾಣದ ಸಂಶೋಧನಾ ತಂಡದ ಮುಖ್ಯಸ್ಥರಾಗಿ. ವಿದ್ಯಾ ಬಾಲಾ ಕಾರ್ಯನಿರ್ವಹಿಸುತ್ತಿದ್ದಾರೆ.

***

₹ 2,400 - ಕೋಟಿಗೂ ಹೆಚ್ಚು ಸಂಸ್ಥೆಯ ನಿರ್ವಹಣೆಯಲ್ಲಿ ಇರುವ (ಎಯುಎಂ) ಸಂಪತ್ತು

8 ಲಕ್ಷ - ರಿಟೇಲ್‌ ಗ್ರಾಹಕರು

10% - ಅನಿವಾಸಿ ಭಾರತೀಯರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry