6

ಡೀಮ್ಡ್‌ ಅರಣ್ಯ ಸಂಪತ್ತು ನಾಶ ಮಾಡುವುದು ಸಲ್ಲದು

Published:
Updated:
ಡೀಮ್ಡ್‌ ಅರಣ್ಯ ಸಂಪತ್ತು ನಾಶ ಮಾಡುವುದು ಸಲ್ಲದು

ಸಾಗರ ತಾಲ್ಲೂಕಿನ ಕೊಪ್ಪ, ನಾರಗೋಡ, ಹೂವುಹರನಕೊಪ್ಪದ ಬಳಿ ಇರುವ ಸುಮಾರು 125 ಎಕರೆ ಪರಿಭಾವಿತ (ಡೀಮ್ಡ್) ಅರಣ್ಯದಲ್ಲಿದ್ದ ಅಮೂಲ್ಯ ಮರಗಳನ್ನು ಮನಬಂದಂತೆ ಕಡಿದು ಹಾಕಿರುವುದು ಅಕ್ಷಮ್ಯ. ಕಂದಾಯ ಇಲಾಖೆಯ ದಾಖಲೆಗಳಲ್ಲಿ ನಾರಗೋಡ ಗ್ರಾಮದ ’ಕಾನು’ ಎಂದೇ ದಾಖಲಾದ ಪ್ರದೇಶದಲ್ಲಿ ಕೆಲ ಬಲಾಢ್ಯರು ತಮ್ಮ ಹೆಸರಿನಲ್ಲಿ ಖಾತೆ ಆಗಿದೆ ಎಂದು ಹೇಳಿಕೊಂಡು ಮರಗಳನ್ನು ಉರುಳಿಸುತ್ತಿದ್ದಾರೆ. ಈ ಕೆಲಸಕ್ಕೆ ಕಾರ್ಮಿಕರು, ಜೆಸಿಬಿ ಹಾಗೂ ಗರಗಸವನ್ನು ಬಳಸಲಾಗಿದೆ. ಕಬಳಿಸಿದ ಜಾಗದ ಸುತ್ತ ತಂತಿ ಬೇಲಿ ಹಾಕಿದ್ದಾರೆ. ಇದರಲ್ಲಿ ಕೆರೆ ಸಹ ಸೇರಿದೆ. ತ್ಯಾಗರ್ತಿ, ಕೊಪ್ಪ, ಹೆಗ್ಗೋಡು ಸುತ್ತಮುತ್ತಲ ಗ್ರಾಮಸ್ಥರು ಈ ಕೃತ್ಯವನ್ನು ಖಂಡಿಸಿ ಘಟನೆ ನಡೆದ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಅರಣ್ಯದಲ್ಲಿ ಬೆಲೆಬಾಳುವ ಮತ್ತಿ, ನಂದಿ, ಬೀಟೆ, ಹೊನ್ನೆ, ಶ್ರೀಗಂಧ, ನೇರಳೆ, ಮುತ್ತಗ, ಕಾಡುಮಾವು ಜೊತೆಗೆ ಪಾರಂಪರಿಕ ಔಷಧದಲ್ಲಿ ಬಳಸುವ ಅಮೃತಬಳ್ಳಿ, ಅಮೃತಾಂಜನ ಬಳ್ಳಿ, ಚಂದ್ರಪಾಲ ಬಳ್ಳಿ ಸೇರಿದಂತೆ ಅನೇಕ ಔಷಧೀಯ ಸಸ್ಯಗಳಿವೆ. ಇವುಗಳ ಜೊತೆ ಪ್ರಾಣಿ ಪಕ್ಷಿಗಳಿವೆ. ಅರಣ್ಯ ನಾಶ ಹಾಡಹಗಲೇ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಪರಿಭಾವಿತ ಅರಣ್ಯ ಎಂದರೆ ಭೂಮಿಯಲ್ಲಿ ಇಂತಿಷ್ಟೇ ಮರ ಇರಬೇಕು, ಇದನ್ನು ಜಿಲ್ಲಾಡಳಿತ ಅರಣ್ಯ ಇಲಾಖೆಯ ಸಹಾಯದಿಂದ ಗುರುತಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್ 2001ರಲ್ಲೇ ಆದೇಶ ನೀಡಿದೆ. ಇದರ ಅನ್ವಯ ಪರಿಭಾವಿತ ಅರಣ್ಯವನ್ನು ಗುರುತಿಸುವ ಕೆಲಸವೂ ಪೂರ್ಣವಾಗಿದೆ. ಇದರ ಪಟ್ಟಿಯನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಸಲ್ಲಿಸಿದೆ. ಇಂತಹ ಪ್ರದೇಶಕ್ಕೆ ಅರಣ್ಯದ ಮಾನ್ಯತೆ ದೊರಕಿದೆ. ಈ ಅರಣ್ಯದಲ್ಲಿ ಅರಣ್ಯೇತರ ಚಟುವಟಿಕೆಗಳು ನಡೆಯುವಂತಿಲ್ಲ. ಮರ ಕಡಿಯುವ ಮಾತು ಸಹ ಆಡುವಂತಿಲ್ಲ. ಆದರೆ ಶಿವಮೊಗ್ಗ, ಚಿಕ್ಕಮಗಳೂರಿನಂತಹ ಮಲೆನಾಡು ಜಿಲ್ಲೆಗಳಲ್ಲಿ ಅರಣ್ಯೇತರ ಚಟುವಟಿಕೆಗೆ ಅರಣ್ಯ ಭೂಮಿಯನ್ನು ಬಳಸಬೇಕು ಎನ್ನುವ ಒತ್ತಡ ಹೆಚ್ಚಾಗುತ್ತಿದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರೇ ಇದಕ್ಕೆ ಅನೇಕ ಸಲ ಬಹಿರಂಗ ಬೆಂಬಲ ನೀಡಿದ್ದಾರೆ. ಅರಣ್ಯ ನಾಶಕ್ಕೆ ಸಚಿವರೇ ಕುಮ್ಮಕ್ಕು ನೀಡಿದರೆ ಯಾವ ರೀತಿಯ ಘಟನೆಗಳು ನಡೆಯುತ್ತವೆ ಎನ್ನುವುದಕ್ಕೆ ಈ ಅರಣ್ಯ ನಾಶವೇ ಸ್ಪಷ್ಟ ಉದಾಹರಣೆ. ಸರಾಸರಿ ಅರಣ್ಯ ಪ್ರಮಾಣ ಕರ್ನಾಟಕದಲ್ಲಿ ಕಡಿಮೆ ಇದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಅರಣ್ಯ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗುತ್ತದೆ, ನದಿ ಮೂಲ ನಾಶವಾಗುತ್ತದೆ ಎಂದೇ ಅರ್ಥ. ಇದರ ಪರಿಣಾಮ ಈಗಾಗಲೇ ಆಗುತ್ತಿದೆ. ಅರಣ್ಯ ಉಳಿಸುವ ಬದ್ಧತೆ ಅಧಿಕಾರಿಗಳಿಗೆ ಇದ್ದರೆ ಕಾಡಿನ ಮರ ಕಡಿದವರ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆಯ ಅಡಿಯಲ್ಲಿ ಮೊಕದ್ದಮೆ ಹೂಡಿ ಜೈಲಿಗೆ ಕಳುಹಿಸಬೇಕು. ಒಂದು ವೇಳೆ ಇದಕ್ಕೆ ಸಚಿವರೇ ಕುಮ್ಮಕ್ಕು ನೀಡಿದ್ದರೂ ಹೆದರದೆ ಕ್ರಮ ತೆಗೆದುಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry