7

ಶಾಲೆ ಸಮೀಪ ತ್ಯಾಜ್ಯ ವಿಲೇವಾರಿ

Published:
Updated:

ತಿ.ನರಸೀಪುರ: ಪಟ್ಟಣ ತ್ಯಾಜ್ಯವನ್ನು ತಾಲ್ಲೂಕಿನ ಕೂಡ್ಲೂರು ಗ್ರಾಮದ ಸಮೀಪ ವಿಲೇವಾರಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ತಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಪಟ್ಟಣದ ಗುರುಭವನದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಸದಸ್ಯ ಎಂ. ರಮೇಶ್ ಈ ಕುರಿತು ಪ್ರಸ್ತಾಪಿಸಿ, ಪಟ್ಟಣದಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ಕೂಡ್ಲೂರು ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಮೀಪ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಅಲ್ಲಿನ ಪರಿಸರ ಮಾಲಿನ್ಯವಾಗುತ್ತಿದ್ದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಗಮನಕ್ಕೆ ತಂದರು.

ಮುಖ್ಯಮಂತ್ರಿಗಳ ಸ್ವ–ಕ್ಷೇತ್ರದಲ್ಲೇ ಈ ಸಮಸ್ಯೆ ಇದ್ದು ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ತಾ.ಪಂ ಇಓ ರಾಜು ಹಾಗೂ ಸದಸ್ಯ ರಮೇಶ್ ಅವರ ನಡುವೆ ಮಾತಿನ ಚಕಮಕಿ ನಡೆಯಿತು.

ಬಳಿಕ ಮಾತನಾಡಿದ ಇಓ ರಾಜು ಹಾಗೂ ತಾ.ಪಂ ಅಧ್ಯಕ್ಷ ಸಿ.ಚಾಮೇಗೌಡ, ಈ ಬಗ್ಗೆ ಸಮಿತಿ ರಚಿಸಿ, ಗ್ರಾಮ ಪಂಚಾಯಿತಿಯಿಂದ ಪರಿಶೀಲಿಸಲು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ನಿರ್ವಹಣಾಧಿಕಾರಿಗೆ ಹಾಗೂ ಪ.ಪಂ ಮುಖ್ಯಾಧಿಕಾರಿಗೆ ಪತ್ರ ಬರೆಯುವ ನಿರ್ಧಾರಕ್ಕೆ ಬರಲಾಯಿತು.

ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಿಂದ ವಿದ್ಯಾರ್ಥಿ ವೇತನ ಬಾಕಿ ಉಳಿದಿದ್ದು ಅದನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ, ಅಂಗನವಾಡಿ ಕೇಂದ್ರಗಳ ಸುತ್ತ ಕಾಂಪೌಂಡ್ ನಿರ್ಮಿಸಲು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸದಸ್ಯರು ಮನವಿ ಮಾಡಿದರು.

ಭತ್ತದ ಬೆಳೆಗೆ ಕಾಡುತ್ತಿರುವ ಸೈನಿಕ ಹುಳುಗಳ ನಿಯಂತ್ರಣಕ್ಕೆ ಅಗತ್ಯ ಔಷಧ ಸಿಂಪಡಿಸುವಂತೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ರೇಷ್ಮೆ ಬೆಳೆ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

2017-18ರಲ್ಲಿ ಎಸ್ಇಪಿ ಟಿಎಸ್‌ಪಿ ಯೋಜನೆಗಳ ಕಾಮಗಾರಿಗಳಿಗೆ, ಪಂಚಾಯಿತಿ ಸಭಾಂಗಣ ನವೀಕರಣಕ್ಕೆ ಹಾಗೂ ಶುದ್ಧ ಕುಡಿಯುವ ನೀರು ಘಟಕಗಳ ಪರಿಶೀಲನೆಗಳ ಬಗ್ಗೆ ಸಭೆಯಲ್ಲಿ ಅನುಮೋದನೆ ಹಾಗೂ ಚರ್ಚೆ ನಡೆಸಲಾಯಿತು.

ಉಪಾಧ್ಯಕ್ಷರಾದ ಸುಂದರಮ್ಮ, ಇ.ಓ ಬಿ.ಎಸ್.ರಾಜು, ನರೇಗಾ ಸಹಾಯಕ ನಿರ್ದೇಶಕ ಪ್ರೇಮ್‌ಕುಮಾರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಸದಸ್ಯರಾದ ಕುಕ್ಕೂರು ಗಣೇಶ್, ಸಾಜಿದ್ ಆಹಮದ್, ರಂಗಸ್ವಾಮಿ, ಜವರಯ್ಯ, ರತ್ನರಾಜು, ಶಿವಮ್ಮ ಮಹದೇವ, ಶಿವಮ್ಮ ನಾಗಯ್ಯ, ಪಲ್ಲವಿ, ಕುಮುದಾ, ಎ.ನಾಗಮಣಿ, ಚಿಕ್ಕತಾಯಮ್ಮ, ನಂಜಮ್ಮ, ಚಂದ್ರಶೇಖರ್ ಅಧಿಕಾರಿಗಳಾದ ಜಿ.ಪಂ ಎಇಇ ಸಿದ್ದರಾಜು, ಡಾ.ಚಿನ್ನಸ್ವಾಮಿ, ಎನ್. ಕೃಷ್ಣಮೂರ್ತಿ, ಬಿಇಒ ಮರಿಸ್ವಾಮಿ, ಸಿಡಿಪಿಒ ಬಸವರಾಜು, ಟಿಓಟಿ ನಾಗರಾಜು, ಶಿವಶಂಕರಮೂರ್ತಿ, ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry