7

ರಾಂಪುರದಲ್ಲಿ ಮರಿ ನವಿಲುಗಳ ಚಿನ್ನಾಟ

Published:
Updated:
ರಾಂಪುರದಲ್ಲಿ ಮರಿ ನವಿಲುಗಳ ಚಿನ್ನಾಟ

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದಲ್ಲೀಗ ಮರಿ ನವಿಲುಗಳೆರಡು ಆಕರ್ಷಣೆಯ ಕೇಂದ್ರವಾಗಿವೆ. ಸುತ್ತ ಮುತ್ತ ಓಡಾಡಿಕೊಂಡು ಎಲ್ಲರನ್ನೂ ರಂಜಿಸುತ್ತಿವೆ.

ನಾಲ್ಕು ತಿಂಗಳ ಪ್ರಾಯದ ಈ ಪುಟ್ಟ ಮರಿಗಳು ಜೀವ ಪಡೆದುಕೊಂಡ ಬಗೆಯೇ ಅಚ್ಚರಿ. ನಾಲ್ಕು ತಿಂಗಳ ಹಿಂದೆ ಜೋಳದ ಹೊಲವೊಂದರಲ್ಲಿ ನವಿಲೊಂದು ಮೊಟ್ಟೆಗಳನ್ನು ಇಟ್ಟು ಹೊರಟುಹೋಗಿತ್ತು. ಇಂದಲ್ಲ ನಾಳೆ ಆ ನವಿಲು ಬರಬಹುದು ಎಂದು ಗ್ರಾಮಸ್ಥರು ಕಾದರು. ವಾರ ಕಳೆದರೂ ಬರದೇ ಹೋದಾಗ ಅನಿವಾರ್ಯವಾಗಿ ಅಲ್ಲಿದ್ದ ಮೊಟ್ಟೆಗಳನ್ನು ಎತ್ತಿಕೊಂಡು ಬಂದರು.

ಊರಿನ ಮನೆಯೊಂದರಲ್ಲಿ ಇದ್ದ ನಾಟಿ ಕೋಳಿಯು ಈ ಮೊಟ್ಟೆಗಳಿಗೆ ಕಾವು ಕೊಡಲಾರಂಭಿಸಿತು. ಅದಾದ ಕೆಲವೇ ದಿನಗಳಲ್ಲಿ ಮರಿಗಳು ಹೊರ ಬಂದವು. ವಾರಗಟ್ಟಲೆ ಬಿಸಿಲಿನಲ್ಲಿ ಕಾದದ್ದಕ್ಕೋ ಏನೋ ನಾಲ್ಕರಲ್ಲಿ ಎರಡು ಮೊಟ್ಟೆಗಳು ಹಾಳಾಗಿ, ಎರಡಷ್ಟೇ ಮರಿಯಾದವು.

ಹೀಗೆ ಕಾವು ಕೊಟ್ಟ ಕೋಳಿಯೇ ಆಗಿನಿಂದ ಈ ನವಿಲು ಮರಿಗಳನ್ನು ಪೋಷಿಸುತ್ತಾ ಬಂದಿದೆ. ಕೋಳಿ ಹೋದಲೆಲ್ಲ ನವಿಲುಗಳು ಹೆಜ್ಜೆ ಹಾಕುತ್ತಿವೆ. ಈ ಮರಿಗಳನ್ನು ಕೂಡಿ ಹಾಕದೇ ಹಾಗೆಯೇ ಬಿಡಲಾಗಿದೆ. ಆದರೂ ಅವು ಇನ್ನೂ ಕಾಡಿಗೆ ಹೋಗುವ ಮನಸ್ಸು ಮಾಡಿಲ್ಲ.

‘ಈ ಭಾಗದಲ್ಲಿ ನವಿಲುಗಳ ಸಂತತಿ ಹೆಚ್ಚಾಗಿದೆ. ಅವುಗಳು ಆಗಾಗ್ಗೆ ಹೊಲಗಳಲ್ಲಿ ಮೊಟ್ಟೆಗಳನ್ನು ಇಟ್ಟು ಹೋಗುತ್ತಿರುತ್ತವೆ. ಮೊಟ್ಟೆ ಇಡುವ ವೇಳೆ ಬಹಳ ಸಂದರ್ಭಗಳಲ್ಲಿ ಅವು ಅನ್ಯ ಪ್ರಾಣಿಗಳಿಗೆ ಬೇಟೆಯಾಗುವುದೇ ಹೆಚ್ಚು. ಹೀಗಾಗಿ ಅನಾಥ ಮೊಟ್ಟೆಗಳು ದೊರಕುತ್ತಲೇ ಇರುತ್ತವೆ. ಹಿಂದೆ ಒಮ್ಮೆ ಹೀಗೆಯೇ ನವಿಲು ಬಿಟ್ಟು ಹೋದ ಮೊಟ್ಟೆಗಳನ್ನು ತಂದು ಕಾವು ಕೊಡಿಸಿ, ಮರಿ ಮಾಡಿದ್ದೆವು. ಕೆಲವು ತಿಂಗಳ ಕಾಲ ಅವುಗಳು ಇಲ್ಲಿನ ಜನರ ಜೀವನದ ಭಾಗವೇ ಆಗಿಹೋಗಿದ್ದವು. ಕಡೆಗೊಮ್ಮೆ ತಮ್ಮ ಸಂಗಾತಿಗಳ ಕರೆಗೆ ಓಗೊಟ್ಟು ಕಾಡಿಗೆ ಹೋದವು’ ಎಂದು ರಾಂಪುರ ಗ್ರಾಮಸ್ಥರು ವಿವರಿಸುತ್ತಾರೆ.

‘ನವಿಲುಗಳು ಕೋಳಿಗಳಂತೆಯೇ ಪಳಗಿದರೂ ಅವು ಜನರ ಜೊತೆ ಇರುವ ಸಾಧ್ಯತೆಗಳು ಕಡಿಮೆ. ಸುತ್ತಮುತ್ತಲಿನ ನವಿಲುಗಳು ಕೂಗಿಕೊಂಡಾಗ ಅವುಗಳ ಧ್ವನಿಗೆ ಆಕರ್ಷಿತವಾಗಿ ಇಲ್ಲಿಂದ ಕಾಲ್ಕೀಳುತ್ತವೆ. ಇದೀಗ ಈ ಮರಿ ನವಿಲುಗಳು ದೊಡ್ಡದಾಗತೊಡಗಿದ್ದು, ಅವುಗಳು ಇಲ್ಲಿ ಹೆಚ್ಚು ದಿನ ಇರಲಾರವು. ಆದರೆ ಇದ್ದಷ್ಟು ದಿನ ನಮಗಂತೂ ಕಣ್ಣಿಗೆ ಹಬ್ಬ. ನಮ್ಮ ಹಿತ್ತಲುಗಳಲ್ಲಿ, ಮನೆಯ ಗೋಡೆಗಳ ಮೇಲೆ ಇವುಗಳನ್ನು ಕಾಣುವುದೇ ಚೆನ್ನ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry