7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಪಕ್ಷಾತೀತ ಹೋರಾಟ ಸಂಘಟಿಸಲು ನಿರ್ಧಾರ

Published:
Updated:
ಪಕ್ಷಾತೀತ ಹೋರಾಟ ಸಂಘಟಿಸಲು ನಿರ್ಧಾರ

ಕೂಡಲಸಂಗಮ (ಬಾಗಲಕೋಟೆ): ‘ಪ್ರತಿ ಚುನಾವಣೆಯಲ್ಲಿ ಶೇ 95ರಷ್ಟು ಮತ ಹಾಕುವ ಸಮುದಾಯ ನಮ್ಮದು. ಚುನಾವಣೆಯಲ್ಲಿ ನಮ್ಮನ್ನು ಬಳಸಿಕೊಂಡು ಗೆಲ್ಲುವ ರಾಜಕೀಯ ಪಕ್ಷಗಳು ನಂತರ ಬಿಸಾಡುತ್ತವೆ’ ಎಂದು ಮಾದಿಗ ದಂಡೋರ ಸಮಿತಿ ಮುಖಂಡ ವಿ.ಆರ್.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಕೂಡಲಸಂಗಮದಿಂದ ಬೆಂಗಳೂರಿಗೆ ಆಯೋಜಿಸಿರುವ ಪಾದಯಾತ್ರೆಗೆ ಚಾಲನೆ ನೀಡಲು ಸೋಮವಾರ ಇಲ್ಲಿನ ಬಸವಣ್ಣನ ಐಕ್ಯಮಂಟಪದ ಎದುರು ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಂವಿಧಾನಬದ್ಧವಾಗಿ ನೇಮಕ ವಾದ ನ್ಯಾಯಾಧೀಶರೊಬ್ಬರು ನೀಡಿದ ವರದಿ ಅನುಷ್ಠಾನಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇದಕ್ಕಾಗಿ ಮಾದಿಗ ದಂಡೋರ ಸಮಿತಿ 22 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಈ ಬಾರಿ ನಮ್ಮದು ನಿರ್ಣಾಯಕ ಸಮರ’ ಎಂದು ಹೇಳಿದರು.

ಕಾಂಗ್ರೆಸ್, ಜೆಡಿಎಸ್‌, ಬಿಜೆಪಿ ಎನ್ನದೇ ಎಲ್ಲರೂ ನಮಗೆ ಮೋಸ ಮಾಡುತ್ತಾ ಬಂದಿದ್ದಾರೆ. ಈ ಬಾರಿ ಪಕ್ಷಾತೀತವಾಗಿ ಸಂಘಟನೆ ಮಾಡಿಕೊಂಡಿದ್ದೇವೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಯಾರು ಪ್ರಾಮಾಣಿಕವಾಗಿ ಪ್ರಯತ್ನಿಸು ವವರಿಗೆ ನಮ್ಮ ಬೆಂಬಲ ಎಂದು ಘೋಷಿಸಿದರು.

ರಾಜಕೀಯಕ್ಕೆ ತೋಳ್ಬಲ ಹಾಗೂ ಹಣಬಲದ ಜೊತೆಗೆ ಸಂವಿಧಾನದತ್ತ ಅವಕಾಶಗಳೂ ಬೇಕಾಗುತ್ತವೆ. ಅವುಗಳನ್ನು ಪಡೆಯಲು ಹೋರಾಟ ಸಂಘಟಿಸೋಣ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ‘ಇಂದಿರಾಗಾಂಧಿ ಪ್ರಧಾನಿಯಾಗಿದ್ದ ವೇಳೆಯಿಂದಲೂ ಕಾಂಗ್ರೆಸ್ ಪಕ್ಷ ಮಾದಿಗ ಸಮುದಾಯದ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಕ್ಷ ದೀನ–ದಲಿತರ ದನಿ ಎತ್ತಿ ಹಿಡಿದಿದೆ’ ಎಂದರು.

‘ಸರ್ಕಾರದ ಕಾಲಾವಧಿ ಇನ್ನೂ ಆರು ತಿಂಗಳು ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರದಲ್ಲಿ ಖಂಡಿತವಾಗಿಯೂ ಉತ್ತಮ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ವೀಣಾ ಭರವಸೆ ನೀಡಿದರು. ಸಮಾರಂಭದಲ್ಲಿ ಸಮಿತಿಯ ರಾಜ್ಯಮಟ್ಟದ ಮುಖಂಡರಾದ ಎನ್.ಮೂರ್ತಿ, ಕೊಲ್ಲ ವೆಂಕಟೇಶ, ಎಚ್.ಹನುಮಂತಪ್ಪ, ಎಂ.ಬಿ.ಮೂಗನೂರ ಮಾತನಾಡಿದರು.

ಮುಖಂಡರಾದ ಉಮೇಶ ಕಾರಜೋಳ, ಮುತ್ತಣ್ಣ ಬೆನ್ನೂರ, ಅಂಬಣ್ಣ ಅರೋಲಿಕರ, ಸಿದ್ದರಾಜು, ಪರಮೇಶ್ವರ ಮೇಗಳಮನಿ, ಲಕ್ಷ್ಮಣ ಚಂದರಗಿ, ಪೀರಪ್ಪ ಮ್ಯಾಗೇರಿ, ವೈ.ವೈ.ತಿಮ್ಮಾಪುರ, ರಾಜೇಂದ್ರ ಐಹೊಳೆ, ಶಂಕರ ಮಾದರ ಪಾಲ್ಗೊಂಡಿದ್ದರು.

ದೇವರು ಕೂಡ ಕ್ಷಮಿಸಲ್ಲ..

‘ಮಾದಿಗರಿಗೆ ಮೋಸ ಮಾಡಿದರೆ ದೇವರು ಕೂಡ ಕ್ಷಮಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ‘ವಿಧಾನಮಂಡಲದ ಕಲಾಪದ ವೇಳೆ ಈ ಬಗ್ಗೆ ದನಿ ಎತ್ತುವಂತೆ ಶಾಸಕ ವಿಜಯಾನಂದ ಕಾಶಪ್ಪನವರ ಮೇಲೆ ಒತ್ತಡ ತರಲು’ ಸಭೆಗೆ ಬಂದಿದ್ದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರಿಗೆ ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ವೀಣಾ, ಪತಿಯೊಂದಿಗೆ ಮಾತನಾಡಿ ಆ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡುವಂತೆ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry