ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಿಯಾಸೆಗೆ ದುಷ್ಕರ್ಮಿಗಳಿಂದ ಈಶ್ವರ ಮೂರ್ತಿ ಭಗ್ನ

Last Updated 22 ನವೆಂಬರ್ 2017, 6:18 IST
ಅಕ್ಷರ ಗಾತ್ರ

ಬಿ.ಎನ್‌. ಜಾಲಿಹಾಳ (ಬಾದಾಮಿ) : ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಸೋಮವಾರ ರಾತ್ರಿ ನಿಧಿಯಾಸೆಗಾಗಿ ದುಷ್ಕರ್ಮಿಗಳು ಪ್ರಾಚೀನ ಗುಡಿಯಲ್ಲಿನ ಈಶ್ವರ ಮೂರ್ತಿಯನ್ನು ಸಂಪೂರ್ಣವಾಗಿ ಅಗೆದು ಕಿತ್ತು ಹಾಕಿದ್ದು, ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ.

ಚಾಲುಕ್ಯರು ಹುಲಿಗೆಮ್ಮನಕೊಳ್ಳದ ದೇವಾಲಯದ ಬೆಟ್ಟದ ಮೇಲೆ 6ರಿಂದ 8 ಚಿಕ್ಕ ಚಿಕ್ಕ ಈಶ್ವರ ದೇವಾಲಯಗಳನ್ನು ರೂಪಿಸಿದ್ದು, ಬೆಟ್ಟದ ಮೇಲಿನ ಪೂರ್ವದಿಕ್ಕಿನಲ್ಲಿರುವ ಈಶ್ವರ ಮೂರ್ತಿಯನ್ನು ಅಗೆದು ನಂತರ ಕಿತ್ತು ಹಾಕಿದ್ದಾರೆ.

ಮೂರ್ತಿಯ ಕೆಳಗಿನ ಪಾಣಿಪೀಠದ ಕಲ್ಲಿನ ಸುತ್ತ ಸಂಪೂರ್ಣವಾಗಿ ಅಗೆದಿದ್ದು, ಪಾಣಿಪೀಠ ಕೀಳಲು ಬಂದಿಲ್ಲ. ಅಗೆದ ಮಣ್ಣು ಮತ್ತು ಕಲ್ಲನ್ನು ಗುಡಿಯ ಹೊರಗಿನ ಭಾಗದಲ್ಲಿ ಹಾಕಿದ್ದಾರೆ. ಕೆಲಸ ಮುಗಿದ ಮೇಲೆ ಮೂರ್ತಿಗೆ ಸುಣ್ಣ ಬಳಿಯಲು ಪಾತ್ರೆಯಲ್ಲಿ ಸುಣ್ಣವನ್ನು ಹಾಕಿ ಇಟ್ಟಿದ್ದು ಕಂಡು ಬಂದಿದೆ.

‘ಎಲ್ಲಾ ಕೆಲಸ ಮುಗದ ಮ್ಯಾಲೆ ಗುಡಿಯ್ಯಾಗ ಮೂರ್ತಿಗೆ ಸುಣ್ಣ ಹಚ್ಚಿ ಹೋಗಬೇಕಂತ ಸುಣ್ಣ ಹಾಕಿ ಇಲ್ಲಿ ಇಟ್ಟಾರ ನೋಡ್ರಿ’ ಎಂದು ದೇವಾಲಯದಲ್ಲಿದ್ದ ಮಹಿಳೆಯೊಬ್ಬರು ಸುಣ್ಣದ ಪಾತ್ರೆಯನ್ನು ತೋರಿಸಿದರು.

ರಾತ್ರಿ 11 ಗಂಟೆ ಸುಮಾರಿಗೆ ಕುರಿದಡ್ಡಿಯಿಂದ ಕುರಿಗಳು ಕಳೆದ ಕಾರಣ ಇಬ್ಬರು ಕುರಿಗಾಯಿಗಳು ಹುಲಿಗೆಮ್ಮಕೊಳ್ಳಕ್ಕೆ ರಾತ್ರಿ ಬ್ಯಾಟರಿ ಮೂಲಕ ಬಂದಿದ್ದಾರೆ. ಬೆಳಕನ್ನು ನೋಡಿದ ನಿಧಿಗಳ್ಳರು ಯಾರೋ ಬಂದಿದ್ದಾರೆ ಎಂದು ಭಾವಿಸಿ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.

ಮಧ್ಯಾಹ್ನ ಮತ್ತು ಸಂಜೆ ಸಮಯದಲ್ಲಿ ಎರಡು ಮೂರು ಬಾರಿ ಕಾರುಗಳು ಈ ರಸ್ತೆಯಲ್ಲಿ ಸಂಚರಿಸಿವೆ. ಪ್ರೇಕ್ಷಣೀಯ ಸ್ಥಳ ವೀಕ್ಷಿಸಲು ಯಾರಾದರೂ ಬಂದಿರಬಹುದು ಎಂದು ಭಾವಿಸಿದ್ದೆವು ಎಂದು ಗ್ರಾಮಸ್ಥರು ತಿಳಿಸಿದರು.

ಗುಡಿಯ ಅರ್ಚಕ ಲಕ್ಷ್ಮಣ ಪೂಜಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸಿಪಿಐ ಕೆ.ಎಸ್‌. ಹಟ್ಟಿ ಮತ್ತು ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ನಿಧಿಗಳ್ಳರ ಶೋಧ ಕಾರ್ಯ ಕೈಗೊಳ್ಳುವುದಾಗಿ ಸಿಪಿಐ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT