7

ಡಿಸೆಂಬರ್‌ 1ರಿಂದ ಕೃಷಿ ಉತ್ಸವ

Published:
Updated:

ಕೊಪ್ಪ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣ ಹೊರವಲಯದ ಬಾಳಗಡಿಯಲ್ಲಿ ಡಿಸೆಂಬರ್ 1ರಿಂದ 3ರವರೆಗೆ ನಡೆಯುವ ಜಿಲ್ಲಾ ಮಟ್ಟದ ಕೃಷಿ ಉತ್ಸವದ ಸಿದ್ಧತಾ ಕಾರ್ಯಗಳಿಗೆ ಸೋಮವಾರ ವಿದ್ಯುಕ್ತ ಚಾಲನೆ ನೀಡಲಾಯಿತು.

ಇಲ್ಲಿನ ಸರ್ಕಾರಿ ಪ್ರಧಮದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ಬೆಳಿಗ್ಗೆ ನಡೆದ ಚಪ್ಪರ ಪೂಜೆ ಬಳಿಕ ಕೃಷಿ ಉತ್ಸವದ ಬೃಹತ್ ವೇದಿಕೆ ನಿರ್ಮಾಣ ಕಾಮಗಾರಿಗೆ ಯೋಜನೆಯ ಪ್ರಾದೇಶಿಕ ನಿದೇಶಕ ಮಹಾವೀರ ಅಜ್ರಿ ಗುದ್ದಲಿ ಪೂಜೆ ನೆರವೇರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿ.ವೀರೇಂದ್ರ ಹೆಗ್ಗಡೆಯವರು ಗ್ರಾಮೋದ್ಧಾರದ ಕನಸಿನಲ್ಲಿ ಆರಂಭಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರತೀ ವರ್ಷ ರಾಜ್ಯದ ವಿವಿಧೆಡೆ ಕೃಷಿ ಉತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಕೃಷಿ ಕ್ಷೇತ್ರದ ಸುಧಾರಣಾ ಕ್ರಮಗಳ ಬಗ್ಗೆ ವಿಚಾರ ಗೋಷ್ಠಿ, ಹೊಸ ಹೊಸ ಕೃಷಿ ಮಾದರಿಗಳು, ಬೀಜ, ಗೊಬ್ಬರ, ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ಕೃಷಿ ಉತ್ಪನ್ನ, ಜಾನುವಾರು ಪ್ರದರ್ಶನ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೃಷಿ ಜಾತ್ರೆಯನ್ನು ಏರ್ಪಡಿಸಿ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ’ ಎಂದರು.

ಜಿಲ್ಲಾ ನಿರ್ದೇಶಕಿ ಗೀತಾ ಮಾತನಾಡಿ, ‘ಮೂರು ದಿನಗಳ ಕೃಷಿ ಉತ್ಸವಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಹೊರೆಕಾಣಿಕೆ ಸಮರ್ಪಣೆ ಇದೇ 30ರಂದು ನಡೆಯಲಿದೆ. ಡಿಸೆಂಬರ್ 1ರ ಮಧ್ಯಾಹ್ನ 3ಕ್ಕೆ ಪುರಸಭಾ ಕ್ರೀಡಾಂಗಣದಿಂದ ಪ್ರಥಮದರ್ಜೆ ಕಾಲೇಜು ಕ್ರೀಡಾಂಗಣದವರೆಗೆ ವರ್ಣ ರಂಜಿತ ರೈತ ಶೋಭಾಯಾತ್ರೆ ನಡೆಯಲಿದೆ. ಸಂಜೆ 4.30ಕ್ಕೆ ಶಾಸಕ ಡಿ.ಎನ್. ಜೀವರಾಜ್ ಅಧ್ಯಕ್ಷತೆಯಲ್ಲಿ ಹರಿಹರಪುರ ಮಠದ ಪೂಜ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕೃಷಿ ಉತ್ಸವವನ್ನು ಉದ್ಘಾಟಿಸುವರು. ಸಂಜೆ 6ಕ್ಕೆ ಸ್ಥಳೀಯ ಆಯುರ್ವೇದ ಕಾಲೇಜು, ಡೆಸ್ಟಿನಿ ನೃತ್ಯಕೇಂದ್ರದ ವಿದ್ಯಾರ್ಥಿಗಳು ಹಾಗೂ ಕರ್ನಾಟಕ ಜಾನಪದ ಪರಿಷತ್ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದರು.

2ರಂದು ಬೆಳಿಗ್ಗೆ 10ಕ್ಕೆ ಆಕರ್ಷಕ ಜಾನುವಾರು ಪ್ರದರ್ಶನವನ್ನು ಡಿ.ವೀರೇಂದ್ರ ಹೆಗ್ಗಡೆ, 10.30ಕ್ಕೆ ಮಹಿಳಾ ಗೋಷ್ಠಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಉದ್ಘಾಟಿಸುವರು. ಬಳಿಕ ಐದು ಕೃಷಿ ಸಂವಾದ ಗೋಷ್ಠಿಗಳು ನಡೆಯಲಿವೆ. ಸಂಜೆ ಪುತ್ತೂರಿನ ಅಶೋಕ್ ಪೊಳಲಿ ನೇತೃತ್ವದ ‘ಮಜಾಭಾರತ’ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ. 3ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ ಎರಡು ಕೃಷಿ ಸಂವಾದ ಗೋಷ್ಠಿಗಳು ನಡೆಯಲಿವೆ. ಸಂಜೆ 4ಕ್ಕೆ ಕೃಷಿ ಉತ್ಸವ ಸಮಿತಿ ಅಧ್ಯಕ್ಷ ಎಲ್.ಎಂ. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಚಿವ ಆರ್. ರೋಷನ್ ಬೇಗ್ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸುವರು. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಸಮಾರೋಪ ಭಾಷಣ ಮಾಡುವರು. ಸಂಜೆ ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ನಗೆಹಬ್ಬ ನಡೆಯಲಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕೃಷಿ ಉತ್ಸವ ಸಮಿತಿ ಅಧ್ಯಕ್ಷ ಎಲ್.ಎಂ. ಪ್ರಕಾಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಸ್.ಎನ್. ರಾಮಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಣಿ ಸತೀಶ್, ಮುಖಂಡರಾದ ಅನಂತಪದ್ಮನಾಭ ರಾವ್, ನವೀನ್ ಜೈನ್, ಅರವಿಂದ ಸೋಮಯಾಜಿ, ಓಣಿತೋಟ ರತ್ನಾಕರ್, ಸುಬ್ರಹ್ಮಣ್ಯ ಶೆಟ್ಟಿ, ಈ.ಎಸ್. ಧರ್ಮಪ್ಪ, ಬಿ.ಎಂ. ಕೃಷ್ಣಪ್ಪ, ಜಿ.ಆರ್. ವಿಶ್ವನಾಥ್, ರಾಘವೇಂದ್ರ ಭಟ್, ಎನ್.ಎಂ. ಕಾಂತರಾಜ್ ಇದ್ದರು. ಕೊಪ್ಪ ಯೋಜನಾಧಿಕಾರಿ ಡಿ. ದಿನೇಶ್, ಕೃಷಿ ಅಧಿಕಾರಿ ಪ್ರೇಮ್‍ಕುಮಾರ್ ಮುಂತಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry