ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿದಾರನಿಗೆ ‘ಕಾವು’ ತರಿಸಿದ ಮೊಟ್ಟೆ

ಅಕ್ಷರ ಗಾತ್ರ

ದಾವಣಗೆರೆ: ಮಾರುಕಟ್ಟೆಯಲ್ಲಿ ಕಳೆದ ತಿಂಗಳು ₹ 4ಕ್ಕೆ ಮಾರಾಟವಾಗುತ್ತಿದ್ದ ಒಂದು ಮೊಟ್ಟೆಯು ನವೆಂಬರ್‌ನಲ್ಲಿ ಏಕಾಏಕಿ ₹ 6ಕ್ಕೆ ಏರಿಕೆಯಾಗುವ ಮೂಲಕ ಖರೀದಿದಾರನಿಗೆ ಕಾವು ತರಿಸಿದೆ.

ಸಾಮಾನ್ಯವಾಗಿ ಮಳೆಗಾಲ ಹಾಗೂ ಚಳಿಗಾಲದ ಸಮಯದಲ್ಲಿ ಮೊಟ್ಟೆ ಬಳಕೆ ತುಸು ಹೆಚ್ಚಿರುತ್ತದೆ. ಬೆಲೆ ಕೂಡ ಸಾಧಾರಣ ಮಟ್ಟದಲ್ಲಿ ಏರಿಕೆ ಆಗುತ್ತದೆ. ಆದರೆ, ಈ ಬಾರಿ ತಿಂಗಳ ಅವಧಿಯಲ್ಲಿಯೇ ಮೊಟ್ಟೆಯ ಬೆಲೆಯು ದಿಢೀರನೆ ₹ 2 ಏರಿಕೆಯಾಗಿದ್ದು, ಗ್ರಾಹಕನಿಗೆ ಹೊರೆಯಾಗಿದೆ.

ಉತ್ಪಾದನೆ ಕುಂಠಿತ:
‘ಜಿಲ್ಲೆಯಲ್ಲಿ ಪ್ರಸ್ತುತ 29 ಲೇಯರ್‌ ಕೋಳಿ (ಮೊಟ್ಟೆ ಇಡುವ ಕೋಳಿ) ಫಾರಂಗಳಿವೆ. ಇವುಗಳಲ್ಲಿ 30 ಲಕ್ಷಕ್ಕೂ ಅಧಿಕ ಕೋಳಿಗಳನ್ನು ಸಾಕಲಾಗುತ್ತಿದೆ. ಈ ಫಾರಂಗಳಿಂದ ನಿತ್ಯ 25 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಇವುಗಳಲ್ಲಿ 20 ಲಕ್ಷ ಮೊಟ್ಟೆಗಳನ್ನು ಬೆಂಗಳೂರು, ಮಂಗಳೂರು, ಹೈದಾರಾಬಾದ್‌ ಹಾಗೂ ಮುಂಬೈ ನಗರಗಳಿಗೆ ರಫ್ತು ಮಾಡಲಾಗುತ್ತದೆ. ಉಳಿದಂತೆ 5 ಲಕ್ಷ ಮೊಟ್ಟೆಗಳು ನಗರದಲ್ಲಿ ಮಾರಾಟವಾಗುತ್ತಿವೆ. ಇದು ಸಾಲದು. ಬೆಳೆಯುತ್ತಿರುವ ನಗರದ ಜನಸಂಖ್ಯೆಗೆ ಕನಿಷ್ಠ 7 ಲಕ್ಷ ಮೊಟ್ಟೆ ಅಗತ್ಯವಿದೆ. ಬೇಡಿಕೆ ಹೆಚ್ಚಿದೆ. ಆದರೆ, ಉತ್ಪಾದನೆಯಲ್ಲಿ ಕುಂಠಿತವಾಗಿದೆ. ಇದರಿಂದಾಗಿ ಸಹಜವಾಗಿಯೇ ಮೊಟ್ಟೆ ಬೆಲೆಯಲ್ಲಿ ದಿಢೀರನೆ ಏರಿಕೆಯಾಗಿದೆ’ ಎಂದು ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ (ಪ್ರಭಾರ) ಕೆ.ಶಿವಪ್ರಸಾದ್‌ ಮಾಹಿತಿ ನೀಡುತ್ತಾರೆ.

‘ಕಳೆದ ವರ್ಷ ಮೊಟ್ಟೆಗೆ ಹೆಚ್ಚಿನ ದರ ಸಿಗದ ಕಾರಣ ಉತ್ಪಾದನೆ ಕುಂಠಿತವಾಗಿತ್ತು. ಪರಿಣಾಮ ಅಗತ್ಯಕ್ಕೆ ತಕ್ಕಂತೆ ಮೊಟ್ಟೆಗಳು ಮಾರುಕಟ್ಟೆಗೆ ಪೂರೈಕೆಯಾಗಲಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಶೇ 80ರಷ್ಟು ಮೊಟ್ಟೆ ಬೆಂಗಳೂರು, ಮಂಗಳೂರು ಹಾಗೂ ಮುಂಬೈ ನಗರಗಳಿಗೆ ಹೆಚ್ಚು ರಫ್ತಾಗುತ್ತಿದೆ’ ಎಂದು ಅವರು ವಿವರಿಸಿದರು.

ಉತ್ತಮ ಬೆಲೆ: ‘ಕೋಳಿ ಸಾಕಣೆಗೆ ಮೆಕ್ಕೆಜೋಳ ಹಾಗೂ ಹೆಚ್ಚು ನೀರಿನ ಅಗತ್ಯವಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಮಳೆಯಾಗಿಲ್ಲ. ಅಂತರ್ಜಲ ಕೂಡ ಕುಸಿದಿತ್ತು. ಕೋಳಿಗೆ ಆಹಾರ, ನೀರಿನ ಸಮಸ್ಯೆ ಉಂಟಾಗಿದ್ದರಿಂದ ಸಹಜವಾಗಿಯೇ ಮೊಟ್ಟೆಗಳ ಉತ್ಪಾದನೆ ಕುಸಿಯಿತು. ಹೀಗಾಗಿ ಬೆಲೆ ಕೂಡ ಏಕಾಏಕಿ ಏರಿಕೆಯಾಗಿದೆ. ಮೊಟ್ಟೆಗೆ ಉತ್ತಮ ಬೆಲೆ ಬಂದಿರುವುದು ಇದೇ ಮೊದಲು’ ಎಂದು ಹೇಳುತ್ತಾರೆ ಹೊಸಪೇಟೆ ವಲಯದ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ಉಪಾಧ್ಯಕ್ಷ ಡಾ.ಎಂ.ಎಸ್‌.ಮಲ್ಲಿಕಾರ್ಜುನ.

‘ಚಳಿಗಾಲ, ಉತ್ಪಾದನೆ ಕುಂಠಿತ ಹಾಗೂ ಬೆಂಗಳೂರು, ಚೆನ್ನೈ ಹಾಗೂ ಮಂಗಳೂರಿನಿಂದಲೂ ಹೆಚ್ಚಿದ ಬೇಡಿಕೆ. ಈ ಎಲ್ಲ ಕಾರಣಗಳಿಂದ ಮೊಟ್ಟೆಯ ಬೆಲೆ ಏರಿಕೆಯಾಗಿದೆ. ಜತೆಗೆ ಸರ್ಕಾರ ಈಚೆಗೆ ಜಾರಿಗೊಳಿಸಿದ ‘ಮಾತೃಪೂರ್ಣ’ ಯೋಜನೆಯಿಂದಲೂ ಮೊಟ್ಟೆಗೆ ತುಸು ಬೇಡಿಕೆ ಬಂದಿದೆ. ಹೀಗಾಗಿ ಗ್ರಾಹಕರಿಗೆ ಹೊರೆಯಾಗಿದೆ’ ಎಂದು ವಿಶ್ಲೇಷಿಸುತ್ತಾರೆ ಅವರು.

ಖರೀದಿಯಲ್ಲಿ ಇಳಿಕೆ: ನಿತ್ಯ 2 ಸಾವಿರ ಮೊಟ್ಟೆಗಳು ಮಾರಾಟವಾಗುತ್ತಿದ್ದವು. ಬೆಲೆ ಏರಿಕೆಯಿಂದ 1 ಸಾವಿರದಿಂದ 1,200 ಮೊಟ್ಟೆಗಳು ಮಾರಾಟವಾಗುತ್ತಿವೆ. ಪ್ರಸ್ತುತ ಡಜನ್‌ ಮೊಟ್ಟೆ ₹ 70ಕ್ಕೆ ಮಾರಾಟ ಮಾಡಲಾಗುತ್ತಿದೆ. ರಸ್ತೆ ಬದಿಯ ಗಾಡಿ ಹೋಟೆಲ್‌ಗಳಲ್ಲಿ ಎಗ್‌ರೈಸ್‌ ಮಾಡುವವರು ನಿತ್ಯ 4 ಟ್ರೇ ಮೊಟ್ಟೆಗಳನ್ನು ಖರೀದಿಸುತ್ತಿದ್ದರು. ಆದರೆ, ಬೆಲೆ ಏರಿಕೆಯಿಂದಾಗಿ 2 ಟ್ರೇ ಮೊಟ್ಟೆಗಳನ್ನು ಖರೀದಿಸುತ್ತಿದ್ದಾರೆ. ಗ್ರಾಹಕರ ಖರೀದಿಯಲ್ಲಿಯೂ ಇಳಿಕೆಯಾಗಿದೆ ಎನ್ನುತ್ತಾರೆ ನಿಟುವಳ್ಳಿ ರಸ್ತೆಯ ಎಸ್‌ಎಸ್‌ ಎಗ್‌ ಸೆಂಟರ್‌ನ ರವಿ.

ವ್ಯಾಪಾರ ಕುಂಠಿತ: ಮೊಟ್ಟೆ, ಈರುಳ್ಳಿ, ಟೊಮೆಟೊ ಬೆಲೆ ಏರಿಕೆಯಿಂದಾಗಿ ಎಗ್‌ ರೈಸ್‌ ಮಾಡುವುದನ್ನೇ ಕಡಿಮೆ ಮಾಡಿದ್ದೇವೆ. ಪ್ಲೇಟ್‌ ಎಗ್‌ ರೈಸ್‌ ಹಾಗೂ ಬೇಯಿಸಿದ ಮೊಟ್ಟೆ ಬೆಲೆಯನ್ನು ಸ್ವಲ್ಪ ಏರಿಸಿದರೆ ಜನರು ದುಡ್ಡು ಕೊಡಲ್ಲ. ವ್ಯಾಪಾರಕ್ಕೆ ತೊಂದರೆಯಾಗಿದೆ ಎನ್ನುತ್ತಾರೆ ಜಯದೇವ ವೃತ್ತದ ರಸ್ತೆ ಬದಿಯಲ್ಲಿ ಗಾಡಿ ಹೋಟೆಲ್‌ನಲ್ಲಿ ಎಗ್‌ ರೈಸ್‌ ಮಾಡುತ್ತಿದ್ದ ಹುನುಮಂತ.

ಅಂಕಿಅಂಶ..

ತಾಲ್ಲೂಕುವಾರು ಬಾಯ್ಲರ್‌ ಕೋಳಿ ಫಾರಂಗಳ ವಿವರ:
ದಾವಣಗೆರೆ– 37
ಚನ್ನಗಿರಿ– 20
ಹರಪನಹಳ್ಳಿ–22
ಹರಿಹರ– 33
ಹೊನ್ನಾಳಿ–6
ಜಗಳೂರು–92
ಒಟ್ಟು– 210

ಲೇಯರ್‌ ಕೋಳಿ ಫಾರಂಗಳ ವಿವರ
ದಾವಣಗೆರೆ– 26
ಹರಿಹರ–1
ಜಗಳೂರು– 2
ಒಟ್ಟು– 29

* * 

ಮೊಟ್ಟೆಯ ದರವು ನಿತ್ಯ ಬದಲಾವಣೆಯಾಗುತ್ತದೆ. ಎನ್‌ಇಸಿಸಿ ನಿಗದಿಪಡಿಸುವ ದರದ ಆಧಾರದಲ್ಲಿ ಮಾರಾಟ ಮಾಡಲಾಗುವುದು.
ಡಾ.ಎಂ.ಎಸ್‌.ಮಲ್ಲಿಕಾರ್ಜುನ,
ಉಪಾಧ್ಯಕ್ಷ, ಎನ್‌ಇಸಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT