ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಉತ್ಸವಕ್ಕೆ ‘ಪೇಂಟ್‌ ಬಾಲ್‌’ ಆಕರ್ಷಣೆ

Last Updated 22 ನವೆಂಬರ್ 2017, 8:40 IST
ಅಕ್ಷರ ಗಾತ್ರ

ಕಾರವಾರ: ಈ ಬಾರಿಯ ಕರಾವಳಿ ಉತ್ಸವಕ್ಕೆ ವೈವಿಧ್ಯಮಯ ಸ್ಪರ್ಧೆಗಳ ಜತೆಗೆ ‘ಪೇಂಟ್‌ ಬಾಲ್‌’ ಎಂಬ ರೋಮಾಂಚನಕಾರಿ ಆಟವನ್ನು ಜಿಲ್ಲಾಡಳಿತ ಮೊದಲ ಬಾರಿಗೆ ಪರಿಚಯಿಸುತ್ತಿದ್ದು, ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಮೂರು ದಿನಗಳು ನಡೆಯಲಿದೆ.

ಡಿಸೆಂಬರ್‌ 8ರಿಂದ 10ರವರೆಗೆ ಕರಾವಳಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈಗಾಗಲೇ ವಿವಿಧ ಉತ್ಸವ ಸಮಿತಿಗಳನ್ನು ರಚಿಸಿದ್ದು, ಅವುಗಳು ಉತ್ಸವದ ಯಶಸ್ವಿಗೆ ಶ್ರಮಿಸುತ್ತಿವೆ. ಪ್ರತಿ ವರ್ಷ ಉತ್ಸವಕ್ಕೆ ದೋಣಿ ಸ್ಪರ್ಧೆ, ಕಬಡ್ಡಿ, ಶ್ವಾನ ಪ್ರದರ್ಶನ, ದೇಹದಾರ್ಡ್ಯ, ಅಡುಗೆ ಸ್ಪರ್ಧೆ ಸೇರಿದಂತೆ ಹಲವು ರೀತಿಯ ಸ್ಪರ್ಧೆಗಳು ಇರುತ್ತಿದ್ದವು. ಇವುಗಳ ಸಾಲಿಗೆ ಈ ಬಾರಿ ಹೊಸದಾಗಿ ‘ಪೇಂಟ್‌ಬಾಲ್‌’ ಆಟ ಸೇರಿದೆ.

ಗೋವಾದ ಮಿಲ್ಸಿಮ್‌ (milsim) ಎಂಬ ವೃತ್ತಿಪರ ಸಂಸ್ಥೆಯು ಈ ಆಟವನ್ನು ಆಯೋಜಿಸುತ್ತಿದೆ. ರೋಮಾಂಚನಕಾರಿ ಹಾಗೂ ಸಂಕೀರ್ಣವಾದ ಕ್ರೀಡಾ ಚಟುವಟಿಕೆಯನ್ನು ಈ ಸಂಸ್ಥೆ ನಡೆಸುತ್ತದೆ. ಆಟಗಾರರಲ್ಲಿ ಸಕಾರಾತ್ಮಕ ಮನೋಭಾವ, ಸಂವಹನ ಹಾಗೂ ನಾಯಕತ್ವ ಕೌಶಲಗಳನ್ನು ಬೆಳೆಸಲು ಇದು ಪೂರಕವಾಗಿದೆ.

ರಣರಂಗ ನೆನಪಿಸುವ ಆಟ: ‘ಪೇಂಟ್‌ ಬಾಲ್‌ ಆಟ ರಣರಂಗವನ್ನು ನೆನಪಿಸುತ್ತದೆ. ಈ ಆಟದಲ್ಲಿ ನಿರ್ದಿಷ್ಟ ಸಂಖ್ಯೆಯ ಎರಡು ಗಂಪುಗಳಿರುತ್ತವೆ. ವಿಶಾಲವಾದ ಮೈದಾನದಲ್ಲಿ 80 ಮೀಟರ್‌ ಅಂತರದಲ್ಲಿ ಅವಿತುಕೊಳ್ಳಲು ನೆರವಾಗುವಂತೆ ಟೈರ್‌, ಬ್ಯಾರಿಕೇಡ್‌ ರೀತಿ ಅಡೆತಡೆಯನ್ನು ಇಡಲಾಗಿರುತ್ತದೆ. 

ಆಟಗಾರರು ಎದುರಾಳಿ ಗುಂಪಿನ ಮೇಲೆ ಗುರಿಯಿಟ್ಟು ರೈಫಲ್‌/ ಗನ್‌ನಿಂದ ಗುಂಡು ಹಾರಿಸಬೇಕು. ಇದರಲ್ಲಿ ನಿಜವಾದ ಗುಂಡು ಇರುವುದಿಲ್ಲ. ಬದಲಿಗೆ ಬಣ್ಣದ ಗುಂಡು ನೀಡಲಾಗಿರುತ್ತದೆ. ಇದು ಆಟಗಾರನ ಉಡುಪಿಗೆ ತಗುಲಿದ ತಕ್ಷಣ ಅದರೊಳಗಿನ ಬಣ್ಣ ಚದುರುತ್ತದೆ. ಹೀಗೆ ಈ ಆಟವು ಪಾಯಿಂಟ್‌ ಲೆಕ್ಕದಲ್ಲಿ ನಡೆಯುತ್ತದೆ. ಹೆಚ್ಚು ಪಾಯಿಂಟ್‌ ಪಡೆದವರು ಗೆಲುವು ಸಾಧಿಸಿದಂತೆ’ ಎನ್ನುತ್ತಾರೆ ಮಿಲ್ಸಿಮ್‌ ಸಂಸ್ಥೆ ಲ್ಯಾನ್ಸ್‌ ಡಿಮೆಲೋ.

‘ಆಟಗಾರರಿಗೆ ಸಮವಸ್ತ್ರದ ಜತೆಗೆ ಸುರಕ್ಷತೆಗಾಗಿ ಜಾಕೆಟ್‌, ಹೆಲ್ಮೆಟ್‌ ಇನ್ನಿತರ ರಕ್ಷಣಾ ಸಾಮಗ್ರಿಯನ್ನು ನೀಡಲಾಗುತ್ತದೆ. ಜತೆಗೆ ತಲಾ ಒಬ್ಬ ಆಟಗಾರನಿಗೆ ಸುಮಾರು 45 ಬುಲೆಟ್‌ ನೀಡಲಾಗುತ್ತದೆ. ಎದುರಾಳಿ ತಂಡದ ಆಟಗಾರರಿಗೆ ಗುರಿಯಿಟ್ಟು ಗುಂಡನ್ನು ಹಾರಿಸಬೇಕು’ ಎಂದು ವಿವರಿಸಿದರು.

‘ಪೇಂಟ್‌ಬಾಲ್‌ ಎನ್ನುವ ಆಟ ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ಪ್ರಸಿದ್ಧಿಯಾಗಿವೆ. ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಇಂಥ ಆಟಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತಾರೆ. ಕರಾವಳಿ ಉತ್ಸವದಲ್ಲಿ ಈ ಆಟವನ್ನು ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎಸ್‌.ಯೋಗೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಪೇಂಟ್‌ಬಾಲ್‌’ನ ಮೊದಲ ಆಟವು ನೌಕಾಪಡೆ ಹಾಗೂ ಪೊಲೀಸ್‌ ತಂಡಗಳ ನಡುವೆ ನಡೆಯಲಿದೆ.
ಎಚ್‌.ಪ್ರಸನ್ನ
ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT