7

ಕೆರೆಗಳಿಗೆ ನೀರು ತುಂಬಿಸುವ ಯೋಜನೆ: ಮಂಜೂರು ನೀಡಲು ಸಿ.ಎಂ.ಗೆ ಮನವಿ

Published:
Updated:
ಕೆರೆಗಳಿಗೆ ನೀರು ತುಂಬಿಸುವ ಯೋಜನೆ: ಮಂಜೂರು ನೀಡಲು ಸಿ.ಎಂ.ಗೆ ಮನವಿ

ಮುಂಡಗೋಡ: ತಾಲ್ಲೂಕಿನ ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ತುಂಬಿಸುವ ಯೋಜನೆಗೆ ತ್ವರಿತ ಮಂಜೂರಾತಿ ನೀಡಬೇಕೆಂದು ಒತ್ತಾಯಿಸಿ ಶಾಸಕ ಶಿವರಾಮ ಹೆಬ್ಬಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಮನವಿ ನೀಡಿದರು.

ಬೆಳಗಾವಿ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ ಶಾಸಕರು, ಮೂರು ವರ್ಷಗಳಿಂದ ತಾಲ್ಲೂಕಿನ ರೈತರು ಎದುರಿಸುತ್ತಿರುವ ಬರಗಾಲದ ಸ್ಥಿತಿಯನ್ನು ಮನವರಿಕೆ ಮಾಡುತ್ತ, ತಾಲ್ಲೂಕು ಅರೆಮಲೆನಾಡು ಪ್ರದೇಶವಾದರೂ ಸಹಿತ ಬಯಲುಸೀಮೆಯಂತೆ ಗೋಚರಿಸುತ್ತಿದೆ.

ಮಳೆ ಕೊರತೆಯಿಂದ ಕೃಷಿ, ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತಿದೆ. 3–4 ವರ್ಷಗಳಿಂದ ಬರಗಾಲದ ಛಾಯೆ ಆವರಿಸಿದ್ದು, ಸರ್ಕಾರ ಸಹ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸಿದೆ. ತಾಲ್ಲೂಕಿನಲ್ಲಿ ಹರಿಯುವ ಬೇಡ್ತಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸಿದಲ್ಲಿ, ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ನೀರು ತುಂಬಿಸುವ ಯೋಜನೆಗೆ ಸರ್ಕಾರ ತ್ವರಿತವಾಗಿ ಮಂಜೂರಾತಿ ನೀಡುವಂತೆ ಮನವಿ ಮಾಡಿಕೊಂಡರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರಿಗೂ ಸಹ ನೀರು ತುಂಬಿಸುವ ಯೋಜನೆ ಕುರಿತು ಮನವಿಯನ್ನು ನೀಡಲಾಗಿದೆ. ಜಿಲ್ಲಾ ಪಂಚಾಯ್ತಿ ಸದಸ್ಯ ರವಿಗೌಡ ಪಾಟೀಲ, ಎಚ್‌.ಎಂ.ನಾಯ್ಕ, ಕೃಷ್ಣ ಹಿರೇಹಳ್ಳಿ, ದೇವು ಪಾಟೀಲ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ದಾಕ್ಷಾಯಿಣಿ ಸುರಗಿಮಠ ನಿಯೋಗದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry