ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಯಲ್ಲಿ ಅಧಿಕಾರಿಗಳ ತಾರತಮ್ಯ

Last Updated 22 ನವೆಂಬರ್ 2017, 8:55 IST
ಅಕ್ಷರ ಗಾತ್ರ

ಕೋಲಾರ: ನೀರು ಪೂರೈಕೆಯಲ್ಲಿ ನಗರಸಭೆ ಚುನಾಯಿತ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ವಾರ್ಡ್‌ಗಳ ನಿವಾಸಿಗಳು ಸದಸ್ಯರ ನೇತೃತ್ವದಲ್ಲಿ ಇಲ್ಲಿನ ನಗರಸಭೆ ಎದುರು ಮಂಗಳವಾರ ಧರಣಿ ನಡೆಸಿದರು.

ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿ ನಗರದ ಸುತ್ತಮುತ್ತಲಿನ ಕೆರೆಗಳು ತುಂಬಿವೆ. ಜತೆಗೆ ಕೊಳವೆ ಬಾವಿಗಳಲ್ಲೂ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಆದರೂ ಬಡಾವಣೆಗಳಿಗೆ ನೀರು ಕೊಡುವಲ್ಲಿ ನಗರಸಭೆ ಆಡಳಿತ ಯಂತ್ರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರಮುಖ ನೀರಿನ ಮೂಲವಾಗಿರುವ ಅಮ್ಮೇರಹಳ್ಳಿ, ಮಡೇರಹಳ್ಳಿ ಕೆರೆಗಳು ತುಂಬಿ ಕೋಡಿ ಹರಿದಿವೆ. ಕೋಲಾರಮ್ಮ ಕೆರೆಗೂ ಸಾಕಷ್ಟು ನೀರು ಬಂದಿದೆ. ಆದರೆ ಆಡಳಿತ ಪಕ್ಷದವರು ಹಾಗೂ ಅಧಿಕಾರಿಗಳು ಜೆಡಿಎಸ್‌ ಸದಸ್ಯರಿರುವ ವಾರ್ಡ್‌ಗಳಿಗೆ ನೀರಿನ ಸೌಲಭ್ಯ ಕಲ್ಪಿಸದೆ ನೀರಿನ ಕೃತಕ ಅಭಾವ ಸೃಷ್ಟಿಸಿದ್ದಾರೆ ಎಂದು ನಗರಸಭೆ ಸದಸ್ಯ ರವೀಂದ್ರ ಆರೋಪಿಸಿದರು.

ನಗರಸಭೆ ಅಧ್ಯಕ್ಷರಿಗೆ ಆಡಳಿತ ಯಂತ್ರದ ಮೇಲೆ ನಿಯಂತ್ರಣ ಇಲ್ಲವಾಗಿದೆ. ಅಧ್ಯಕ್ಷರ ಹೆಸರಿನಲ್ಲಿ ಬೇರೆ ವ್ಯಕ್ತಿಗಳು ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ದೂರಿದರು. ಅಧ್ಯಕ್ಷರ ಹಾಗೂ ಅವರ ಬೆಂಬಲಿಗ ಸದಸ್ಯರ ವಾರ್ಡ್‌ಗಳಿಗೆ ಮಾತ್ರ ಪೈಪ್‌ಲೈನ್ ಮೂಲಕ ಅಮ್ಮೇರಹಳ್ಳಿ ಕೆರೆಯಿಂದ ನೀರು ಪೂರೈಸಲಾಗುತ್ತಿದೆ. ಉಳಿದ ವಾರ್ಡ್‌ಗಳ ಸದಸ್ಯರು ಹಾಗೂ ಜನ ಏನು ಅನ್ಯಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ನಾಚಿಕೆಗೇಡು: ನಗರಕ್ಕೆ ನೀರಿನ ಸೌಕರ್ಯ ಕಲ್ಪಿಸಲು ಸಾಧ್ಯವಾಗದಿದ್ದರೆ ಅಧ್ಯಕ್ಷರು ಅಧಿಕಾರದಲ್ಲಿ ಮುಂದುವರಿಯುವುದು ನಿರರ್ಥಕ. ಆಡಳಿತ ಪಕ್ಷದವರು ನೀರಿನ ವಿಚಾರದಲ್ಲಿ ರಾಜಕೀಯ ಮಾಡುವಷ್ಟು ಕೀಳು ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡು. ಅಧಿಕಾರ ಎಂದಿಗೂ ಶಾಶ್ವತವಲ್ಲ ಎಂದು ಧರಣಿನಿರತರು ಹೇಳಿದರು.

ನಗರಸಭೆ ಆಡಳಿತ ಯಂತ್ರವು ರಾಜಕೀಯ ಲಾಭ ನಷ್ಟದ ಲೆಕ್ಕಚಾರ ಬಿಟ್ಟು ಜನಪರವಾಗಿ ಕೆಲಸ ಮಾಡಲಿ. ನೀರು ಲಭ್ಯವಿರುವ ಕೊಳವೆ ಬಾವಿಗಳಿಗೆ ಶೀಘ್ರವೇ ಪಂಪ್‌ ಮೋಟರ್‌ ಅಳವಡಿಸಬೇಕು. ಜತೆಗೆ ಎಲ್ಲಾ ಬಡಾವಣೆಗಳಲ್ಲೂ ಪೈಪ್‌ಲೈನ್‌ ಹಾಕಿ ನೀರಿನ ಸೌಕರ್ಯ ಕಲ್ಪಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಸದಸ್ಯೆ ಲಕ್ಷ್ಮಮ್ಮ, ವಿವಿಧ ಬಡಾವಣೆಗಳ ನಿವಾಸಿಗಳಾದ ಚಂದ್ರಮೌಳಿ, ಸಿರಾಜ್, ಮುಜಾಹಿದ್, ಶಿವ, ಗೌರಮ್ಮ, ಮಲ್ಲಿಕಾರ್ಜುನ್‌, ಮಂಜುಳಾ, ಪವನ್, ಅನಿತಾ ಇದ್ದರು.

* * 

ಬರ ಪರಿಸ್ಥಿತಿ ಇದ್ದ ಕಾರಣ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಪ್ರಸ್ತುತ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದ್ದರೂ ನೀರು ಬಿಡುತ್ತಿಲ್ಲ
ರವೀಂದ್ರ, ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT