ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಗಾರಪ್ಪ ವಿರುದ್ಧ ಪಿತೂರಿ ನಡೆಸಿದ್ದ ಕಾಗೋಡು’

Last Updated 22 ನವೆಂಬರ್ 2017, 9:05 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಿದ ಸಚಿವ ಕಾಗೋಡು ತಿಮ್ಮಪ್ಪ ದೊಡ್ಡ ದ್ರೋಹಿ. ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಶಿಕಾರಿಪುರದಲ್ಲಿ ಬಂಗಾರಪ್ಪ ಅವರನ್ನು ಸ್ಪರ್ಧಿಸುವಂತೆ ಪ್ರೇರೇಪಿಸಿ ಸೇಡು ತೀರಿಸಿಕೊಂಡಿದ್ದರು’ ಎಂದು ಬಿಜೆಪಿ ಮುಖಂಡ ಕುಮಾರ್‌ ಬಂಗಾರಪ್ಪ ಆರೋಪಿಸಿದರು.

ತಾಲ್ಲೂಕಿನ ಬೆಜ್ಜವಳ್ಳಿಯಲ್ಲಿ ಸೋಮವಾರ ನಡೆದ ಮಂಡಗದ್ದೆ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಬಗರ್‌ಹುಕುಂ ಹೆಸರಿನಲ್ಲಿ ಸರ್ಕಾರವನ್ನು ಹೆದರಿಸಿ ಕಾಗೋಡು ಸಚಿವ ಸ್ಥಾನ ಪಡೆದರು. ಕಂದಾಯ ಭೂ ಒತ್ತುವರಿ ಪ್ರಕರಣ ದಾಖಲಿಸುವ 192(ಎ) ಸೆಕ್ಷನ್‌ ನಿಯಮವನ್ನು ಕಂದಾಯ ಸಚಿವರಾದ ಬಳಿಕ ಏಕೆ ರದ್ದು ಮಾಡಲಿಲ್ಲ' ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಬಿಜೆಪಿ ಸುಭದ್ರವಾಗಿದೆ. ಆರಗ ಜ್ಞಾನೇಂದ್ರ ಹಿರಿಯ ಮುತ್ಸದ್ದಿಯಾಗಿದ್ದು, ಬಡವರ ಪರವಾದ ಕಾಳಜಿ ಹೊಂದಿದ್ದಾರೆ. ಅಹಂಕಾರದಿಂದ ಬೀಗುತ್ತಿರುವ ಶಾಸಕ ಕಿಮ್ಮನೆ ರತ್ನಾಕರರಿಗೆ ಈ ಬಾರಿ ಸೋಲಿನ ರುಚಿ ತೋರಿಸಬೇಕು’ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಮುಖಂಡ ಆರಗ ಜ್ಞಾನೇಂದ್ರ ಮಾತನಾಡಿ, ‘ರಾಜಕಾರಣಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಬಾರದು. ನನ್ನ 40 ವರ್ಷಗಳ ಹೋರಾಟದಲ್ಲಿ 5 ಬಾರಿ ಚುನಾವಣೆಯಲ್ಲಿ ಸೋತರೂ ಎದೆಗುಂದಲಿಲ್ಲ. ಆತ್ಮವಿಶ್ವಾಸ ಕುಂದಿಸಿಕೊಳ್ಳಲಿಲ್ಲ. ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸುವ ಮುನ್ನ ಜನರ ಅಭಿಪ್ರಾಯ ಕೇಳುತ್ತಿದ್ದೇನೆ’ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಬೆಜ್ಜವಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷ ಮಹಿಷಿ ಜಯಂತ್‌ ವಹಿಸಿದ್ದರು. ಅಶೋಕಮೂರ್ತಿ, ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್‌, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಮೇಲಿನಕೊಪ್ಪ ಮಹೇಶ್‌ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಾಸರವಳ್ಳಿ ಶ್ರೀನಿವಾಸ್‌, ಅಪೂರ್ವ ಶರಧಿ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಬೇಗುವಳ್ಳಿ ಕವಿರಾಜ್‌, ಪ್ರಶಾಂತ್‌ ಕುಕ್ಕೆ, ಅಯ್ಯಪ್ಪಸ್ವಾಮಿ ದೇವಾಲಯದ ಕೃಷ್ಣಯ್ಯಶೆಟ್ಟಿ ಹಾಜರಿದ್ದರು.

ಹೋರಾಟ ನಿಲ್ಲಿಸುವುದಿಲ್ಲ: ಆರಗ ‘ಚುನಾವಣೆಯಲ್ಲಿ 5 ಬಾರಿ ಸೋತು, 3 ಬಾರಿ ಶಾಸಕನಾಗಿದ್ದೇನೆ. ಚುನಾವಣೆಯಲ್ಲಿ ಹಣ ಖರ್ಚು ಮಾಡುವ ಸಾಮರ್ಥ್ಯ ನನಗಿಲ್ಲ. ಹಣದ ಕಾರಣಕ್ಕೆ ಈ ಬಾರಿಯೂ ಜನ ಚುನಾವಣೆಯಲ್ಲಿ ಸೋಲಿಸಿದರೆ ದುಃಖ ಪಡುವುದಿಲ್ಲ. ನನ್ನ ಬಳಿ ಹಣವಿಲ್ಲ ಎಂದು ಹೇಳುತ್ತಿರುವ ಕಿಮ್ಮನೆ ರತ್ನಾಕರ ಅವರು ಈಗ ಯಥೇಚ್ಚವಾಗಿ ದಾನ ನೀಡುತ್ತಿದ್ದಾರೆ. ಈ ಹಣ ಅವರಿಗೆ ಎಲ್ಲಿಂದ ಬರುತ್ತದೆ? ಡಿಸಿಸಿ ಬ್ಯಾಂಕಿನಲ್ಲಿ ಸಾಲದ ಮೇಲೆ ಶೇ 12ರಷ್ಟು ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಬಡವರಿಗೆ ಮೋಸ ಆಗಲು ಬಿಡುವುದಿಲ್ಲ. ಹೋರಾಟದ ಕೆಚ್ಚು ಇನ್ನೂ ಆರಿಲ್ಲ’ ಎಂದು ಆರಗ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT