4
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ರೈತ ಉತ್ಪಾದಕರ ಕಂಪೆನಿ ಸ್ಥಾಪನೆಗೆ ಒತ್ತು ನೀಡಿ

Published:
Updated:

ವಿಜಯಪುರ: ‘ಸಾವಯವ ಆಧಾರಿತ ಬೆಳೆಗಳ ಅನುಕೂಲಕ್ಕಾಗಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಗೆ ನೇರವಾಗಿ ಉತ್ತಮ ಬೆಲೆ ದೊರೆಯಲು ಹೆಚ್ಚೆಚ್ಚು ರೈತ ಉತ್ಪಾದಕರ ಕಂಪೆನಿ ಸ್ಥಾಪನೆಗೆ ಪ್ರೋತ್ಸಾಹಿಸಿ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಸಚಂದ್ರ ಖುಂಟಿಆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಮಂಗಳವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ರೈತರು ಬೆಳೆದ ಬೆಳೆಗಳು ಸಾವಯವ ಆಧಾರಿತವಾಗಿರಬೇಕು. ಸಕಾಲಕ್ಕೆ ಮಾರಾಟ ವ್ಯವಸ್ಥೆ, ಸಂಸ್ಕರಣ ಘಟಕಗಳೊಂದಿಗೆ ನಿಕಟ ಸಂಪರ್ಕ ಹೊಂದಲು, ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ನೇರವಾಗಿ ರೈತರಿಗೆ ಬೆಳೆಗೆ ತಕ್ಕಂತೆ ಸೂಕ್ತ ಲಾಭ ದೊರೆಯಲು ಅನುಕೂಲವಾಗುವಂತೆ, ಸಣ್ಣ ರೈತಾಪಿ ವರ್ಗದವರನ್ನು ಒಟ್ಟುಗೂಡಿಸಿ ರೈತ ಉತ್ಪಾದಕರ ಕಂಪೆನಿ ಸ್ಥಾಪಿಸಿ’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ದ್ರಾಕ್ಷಿಯನ್ನು ಹೆಚ್ಚಾಗಿ ಬೆಳೆಯುವುದರಿಂದ ಕ್ರಿಮಿನಾಶಕ ಮುಕ್ತ ಬೆಳೆ ಬರುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು. ‘ಜಿಲ್ಲೆಯಲ್ಲಿನ ವಸತಿ ನಿಲಯಗಳ ವ್ಯವಸ್ಥೆಯನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಇದಕ್ಕಾಗಿಯೇ ಸೂಕ್ತ ಅಧಿಕಾರಿಗಳನ್ನು ನಿಯೋಜಿಸಬೇಕು. ಜಿಲ್ಲಾಧಿಕಾರಿ ಕೂಡ ಕಾಲ-ಕಾಲಕ್ಕೆ ಪರಿಶೀಲನೆ ನಡೆಸಬೇಕು. ಜಿಲ್ಲೆಯಲ್ಲಿ ಭೂಮಾಪನ ಕಾರ್ಯ ಚುರುಕುಗೊಳಿಸಬೇಕು. ಕಡಿಮೆ ಸಾಧನೆ ತೋರುವವರ ಮೇಲೆ ನಿಗಾ ಇಟ್ಟು, ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಿಂದ ವಲಸೆ ಹೋಗುವ ಕುಟುಂಬಗಳ ಮೇಲೆ ನಿಗಾ ಇಡಬೇಕು. ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸುವಂತೆ’ ತಿಳಿಸಿದ ಅವರು, ‘ಸೂಕ್ತ ಸ್ಥಳಾವಕಾಶದೊಂದಿಗೆ ಅವರಿಗೆ ಶಿಕ್ಷಣ ಸೌಲಭ್ಯ ದೊರಕಿಸಿ’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಜಿಲ್ಲೆಯ ಪ್ರತಿ ಪಟ್ಟಣ, ಗ್ರಾಮ, ವಾರ್ಡ್‌ಗಳಲ್ಲಿ ಬಯಲು ಬಹಿರ್ದೆಸೆ ಮುಕ್ತಗೊಳಿಸಲು ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಜವಾಬ್ದಾರಿ ನೀಡಬೇಕು. ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ವಸತಿ ಸೌಲಭ್ಯ ಕಲ್ಪಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಶೌಚಾಲಯ ಹೊಂದುವ ಬಗ್ಗೆ ಸೂಕ್ತ ಜಾಗೃತಿ ಮೂಡಿಸಬೇಕು’ ಎಂದು ಆದೇಶಿಸಿದರು.

ನಗರದಲ್ಲಿರುವ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಕೊರತೆಗೆ ಸಂಬಂಧಪಟ್ಟಂತೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ಪೀರಾಪುರ, ತಿಕೋಟಾ ಬಹುಹಳ್ಳಿ ಕುಡಿಯುವ ನೀರಿನ ಅನುಮೋದನೆಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ಪಡೆದ ಕುಂಟಿಆ, ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ಸ್ಥಾಪನೆಗೆ ಸಕಲ ಕ್ರಮಗಳನ್ನು ಸರ್ಕಾರದ ಮಾರ್ಗಸೂಚಿಯನ್ವಯ ಕೈಗೊಳ್ಳಲು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಸಾಮಾಜಿಕ ಭದ್ರತಾ ಯೋಜನೆಗಳಡಿ ಸಾಧಿಸಿದ ಪ್ರಗತಿ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ, ಜಿಲ್ಲಾ ಆಸ್ಪತ್ರೆಗೆ ಅವಶ್ಯಕತೆ ಇರುವ ವೈದ್ಯರು, ಸಿಬ್ಬಂದಿಯ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು, ಐಎಎಸ್ ಪ್ರೊಬೇಷನರಿ ಅಧಿಕಾರಿ ಮೊಹ್ಮದ್ ಇಕ್ರಾಮುಲ್ಲಾ ಶರೀಫ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

* * 

ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಕ್ಷಣ ಸ್ಪಂದಿಸಬೇಕು

ಸುಭಾಸಚಂದ್ರ ಖುಂಟಿಆ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry