ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಕಾರು ತಯಾರಿಕೆಯಲ್ಲಿ ಪೈಪೋಟಿ

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇನ್ನು ಮುಂದೆ ಏನಿದ್ದರೂ ಎಲೆಕ್ಟ್ರಿಕಲ್‌ ವಾಹನಗಳ (ಇ–ಕಾರು, ಇ.ವಿ) ದುನಿಯಾ ಎಂಬುದನ್ನು ಚೆನ್ನಾಗಿ ಬಲ್ಲ ಜಗತ್ತಿನ ಎಲ್ಲ ಪ್ರಮುಖ ಕಾರು ತಯಾರಿಕಾ ಕಂಪನಿಗಳು, ಅವುಗಳ ತಯಾರಿಕೆಗಾಗಿ ಈಗ ಸಮರೋಪಾದಿಯಲ್ಲಿ ಸನ್ನದ್ಧವಾಗುತ್ತಿವೆ.

ಜರ್ಮನಿಯ ಫೋಕ್ಸ್‌ ವ್ಯಾಗನ್‌ ಕಂಪನಿಯ ಆಡಳಿತ ಮಂಡಳಿಯಂತೂ ಇ.ವಿ.ಗಳ ತಯಾರಿಕೆಗಾಗಿ ಸಿದ್ಧಪಡಿಸಿರುವ ಐದು ವರ್ಷಗಳ ಕ್ರಿಯಾ ಯೋಜನೆಗೆ ಮೂರು ದಿನಗಳ ಹಿಂದಷ್ಟೇ ಅಂಗೀಕಾರ ನೀಡಿದೆ. ಈ ಅವಧಿಯಲ್ಲಿ ಇ.ವಿ.ಗಳ ತಯಾರಿಕೆಗಾಗಿ ಫೋಕ್ಸ್‌ ವ್ಯಾಗನ್‌ 3,400 ಕೋಟಿ ಯುರೊ (₹ 25,971 ಕೋಟಿ) ವ್ಯಯಿಸಲಿದೆ. ಫೋಕ್ಸ್‌ ವ್ಯಾಗನ್‌ ಹಾದಿಯಲ್ಲೇ ಸಾಗಿರುವ ಇತರ ಕಾರು ತಯಾರಿಕಾ ಕಂಪನಿಗಳು ಇ–ಕಾರುಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಯೋಜನೆ ಹಾಕಿಕೊಂಡಿವೆ.

ಚೀನಾದಲ್ಲಿ 2019ರಿಂದ ಮಾರಾಟವಾಗಲಿರುವ ಕಾರುಗಳು ವಿದ್ಯುತ್‌ಚಾಲಿತ ವ್ಯವಸ್ಥೆ ಹೊಂದಿರಬೇಕಿರು ವುದು ಕಡ್ಡಾಯವಾಗಿದೆ. 2020ರಿಂದ ಆ ದೇಶದಲ್ಲಿ ಪ್ರತಿವರ್ಷ 20 ಲಕ್ಷ ನವ ಇಂಧನ ಕಾರುಗಳು (ಇ.ವಿ) ಮಾರಾಟವಾಗುವ ನಿರೀಕ್ಷೆ ಇದೆ. ಪೆಟ್ರೋಲ್‌ ಕಾರುಗಳ ಮಾರಾಟವನ್ನು ನಿಷೇಧಿಸುವ ಸಂಕೇತವನ್ನೂ ಆ ದೇಶ ನೀಡಿದೆ. ಭಾರತ ಸಹ ಇ–ಕಾರುಗಳ ಬಳಕೆಗೆ ಉತ್ತೇಜನ ನೀಡುವಂತಹ ಯೋಜನೆಗಳನ್ನು ಪ್ರಕಟಿಸಿದೆ.

ವಿದ್ಯುತ್‌ ಚಾಲಿತ ಕಾರುಗಳ ತಯಾರಿಕೆಯಲ್ಲಿ ಯಾವ ಕಂಪನಿಗಳು, ಎಂತಹ ಯೋಜನೆ ಹೊಂದಿವೆ ಎಂಬುದರ ಪರಿಚಯ ಇಲ್ಲಿದೆ:

ತೆಲ್ಸಾ ಮೋಟರ್ಸ್‌ ಇಂಕ್‌: ಕ್ಯಾಲಿಫೋರ್ನಿಯಾದ ಈ ಕಂಪನಿ ವಿದ್ಯುತ್‌ ಚಾಲಿತ ಕಾರು ‘ಮಾಡೆಲ್‌–3’ಯನ್ನು ಅಭಿವೃದ್ಧಿಪಡಿಸಿದೆ. ಇದುವರೆಗೆ 260 ‘ಮಾಡೆಲ್‌–3’ ಕಾರುಗಳನ್ನು ಅದು ತಯಾರು ಮಾಡಿದೆ. 2018ರ ಡಿಸೆಂಬರ್‌ನಿಂದ ದೊಡ್ಡ ಪ್ರಮಾಣದಲ್ಲಿ ಈ ಕಾರುಗಳನ್ನು ತಯಾರಿಸಲು ಕಂಪನಿ ಉದ್ದೇಶಿಸಿತ್ತು. ಆದರೆ, ಈಗ ಮುಂದಿನ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲೇ ತಯಾರಿಕೆ ಪ್ರಮಾಣವನ್ನು ಹೆಚ್ಚಿಸಲು ತೆಲ್ಸಾ ಮೋಟರ್ಸ್‌ ಇಂಕ್‌ನ ಆಡಳಿತ ಮಂಡಳಿ ನಿರ್ಧರಿಸಿದೆ. ಪ್ರತಿವಾರ ಐದು ಸಾವಿರ ಇ–ಕಾರುಗಳನ್ನು ತಯಾರಿಸಲು ಅದು ಸನ್ನದ್ಧವಾಗಿದೆ.

ಟೊಯೊಟಾ: 2050ರ ವೇಳೆಗೆ ತಾನು ತಯಾರಿಸುವ ಎಲ್ಲ ವಾಹನಗಳು ಹೊಗೆರಹಿತ ಆಗಿರಬೇಕು ಎನ್ನುವುದು ಟೊಯೊಟಾ ಕಂಪನಿ ಉದ್ದೇಶ. ಸದ್ಯ ಹೈಡ್ರೋಜನ್‌ ಕಾರುಗಳ ತಯಾರಿಕೆಯತ್ತ ಒಲವು ತೋರಿರುವ ಈ ಕಂಪನಿ, ಬ್ಯಾಟರಿಚಾಲಿತ ಕಾರುಗಳ ತಯಾರಿಕೆಗೂ ಉತ್ಸುಕವಾಗಿದೆ. 2020ರ ವೇಳೆಗೆ ಇ–ಕಾರುಗಳ ತಯಾರಿಕೆ ಆರಂಭಿಸಲು ಭರದಿಂದ ಸಿದ್ಧತೆ ನಡೆಸಿದೆ.

ರೆನೊ–ನಿಸ್ಸಾನ್‌: ಫ್ರಾನ್ಸ್‌ ಹಾಗೂ ಜಪಾನ್‌ ಸಹಭಾಗಿತ್ವದ ಈ ಕಂಪನಿ ಇದುವರೆಗೆ 4.90 ಲಕ್ಷ ಇ–ಕಾರು ಮಾರಾಟ ಮಾಡಿದ ಹೆಗ್ಗಳಿಕೆ ಹೊಂದಿದೆ. 2010ರಲ್ಲೇ ಬ್ಯಾಟರಿಚಾಲಿತ ಕಾರುಗಳ ತಯಾರಿಕೆ ಆರಂಭಿಸಿದ್ದು ಈ ಕಂಪನಿಯ ವಿಶೇಷ. 2022ರ ವೇಳೆಗೆ 12 ಹೊಸ ಮಾದರಿಯ ಬ್ಯಾಟರಿಚಾಲಿತ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅದು ನಿರ್ಧರಿಸಿದೆ.

ಜನರಲ್‌ ಮೋಟರ್ಸ್‌: ಅಮೆರಿಕದ ಈ ಕಂಪನಿ ಅಗ್ಗದ ವಿದ್ಯುತ್‌ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. 2021ರ ವೇಳೆಗೆ ಈ ಹೊಸ ಕಾರುಗಳು ರಸ್ತೆಗಿಳಿಯಲಿವೆ. 2026ರಿಂದ ಪ್ರತಿವರ್ಷ ಚೀನಾದಲ್ಲಿ ಹತ್ತು ಲಕ್ಷ ಬ್ಯಾಟರಿಚಾಲಿತ ಕಾರುಗಳನ್ನು ಮಾರಾಟ ಮಾಡಲು ಜಿ.ಎಂ ಕಂಪನಿ ಗುರಿ ಹಾಕಿಕೊಂಡಿದೆ.

ಫೋರ್ಡ್‌: ಅಮೆರಿಕದ ಈ ಕಂಪನಿ 2022ರ ವೇಳೆಗೆ 500 ಕೋಟಿ ಡಾಲರ್‌ ಬಂಡವಾಳವನ್ನು ಇ–ಕಾರುಗಳ ತಯಾರಿಕೆಗಾಗಿ ಹೂಡಲು ಉದ್ದೇಶಿಸಿದೆ. 13 ಮಾದರಿಯ ಹೈಬ್ರಿಡ್‌ ಕಾರುಗಳನ್ನು ಅದು ಅಭಿವೃದ್ಧಿಪಡಿಸಲಿದೆ.

ಡೈಮ್ಲರ್‌: ಯುರೋಪಿನ ಈ ಕಂಪನಿ ಬ್ಯಾಟರಿಚಾಲಿತ ಕಾರುಗಳ ತಯಾರಿಕೆಗಾಗಿ 10 ಸಾವಿರ ಕೋಟಿ ಯುರೊ ಹೂಡಿಕೆ ಮಾಡುತ್ತಿದೆ. 2020ರಿಂದ ಪ್ರತಿವರ್ಷ ಲಕ್ಷ ಇ–ಕಾರುಗಳನ್ನು ತಯಾರಿಸಲು ಅದು ಗುರಿ ಹಾಕಿಕೊಂಡಿದೆ. ಮರ್ಸಿಡೆಸ್‌ ಕಂಪನಿ ಸಹ ತಾನು ತಯಾರಿಸುವ ಎಲ್ಲ ಪ್ರಕಾರದ ಕಾರುಗಳಲ್ಲಿ ಬ್ಯಾಟರಿಚಾಲಿತ ಆವೃತ್ತಿ ಸಹ ಲಭ್ಯವಾಗುವಂತೆ ನೋಡಿಕೊಳ್ಳಲು ಉದ್ದೇಶಿಸಿದೆ.

ಬಿಎಂಡಬ್ಲ್ಯು: 2013ರಲ್ಲೇ ‘ಐ–3’ ವಿದ್ಯುತ್‌ ಚಾಲಿತ ಕಾರನ್ನು ತಯಾರಿಸಿದ್ದ ಈ ಕಂಪನಿ, ಪ್ರಸಕ್ತ ವರ್ಷ ಒಂದು ಲಕ್ಷ ಬ್ಯಾಟರಿಚಾಲಿತ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿಯನ್ನು ಹಾಕಿಕೊಂಡಿತ್ತು. 2025ರ ವೇಳೆಗೆ ತನ್ನ 12 ಮಾದರಿಗಳಲ್ಲಿ ಸಂಪೂರ್ಣವಾಗಿ ಬ್ಯಾಟರಿಚಾಲಿತ ವ್ಯವಸ್ಥೆ ಇರಲಿದೆ ಎಂದು ಅದು ಹೇಳಿಕೊಂಡಿದೆ.

ಫಿಯೆಟ್‌: ‘ನಾವು ತಯಾರಿಸಿದ 500 ಇ–ಕಾರುಗಳನ್ನು ಕೊಳ್ಳುವವರಿಲ್ಲ. ಹೀಗಾಗಿ ಹಾನಿ ಅನುಭವಿಸಬೇಕಿದೆ’ ಎಂದು ಒಂದೊಮ್ಮೆ ಅಳಲು ತೋಡಿಕೊಂಡಿದ್ದ ಕಂಪನಿ ಸಿಇಒ, ಈಗ ‘ಉಳಿದ ಕಾರು ತಯಾರಿಕಾ ಕಂಪನಿಗಳು ತುಳಿಯುತ್ತಿರುವ ಹಾದಿಯಲ್ಲೇ ನಾವೂ ನಡೆಯಲಿದ್ದೇವೆ. ಇ–ಕಾರುಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಿದ್ದೇವೆ’ ಎಂದು ಹೇಳುತ್ತಿದ್ದಾರೆ. ಬ್ಯಾಟರಿಚಾಲಿತ ಕಾರುಗಳಿಗೆ ಸಂಬಂಧಿಸಿದಂತೆ ಬದಲಾದ ಟ್ರೆಂಡ್‌ನ ದ್ಯೋತಕ ಇದಾಗಿದೆ. ವೋಲ್ವೊ ಕಾರು ಕಂಪನಿ ಕೂಡ 2019ರಿಂದ ಬ್ಯಾಟರಿಚಾಲಿತ ಕಾರುಗಳ ತಯಾರಿಕೆ ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT