ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಕೊಳ ಕಾಮಗಾರಿ ಅಪೂರ್ಣ

Last Updated 22 ನವೆಂಬರ್ 2017, 9:36 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈಜುಕೊಳ ಕಾಮಗಾರಿ ಆರಂಭಿಸಿ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. 2016ರ ಮೇ ತಿಂಗಳಿನಲ್ಲಿ ಈಜುಕೊಳ ಕಾಮಗಾರಿಗೆ  ಭೂಮಿಪೂಜೆ ನೆರವೇರಿದಾಗ ನಗರದ ಈಜುಪಟುಗಳು ಸಂತಸಗೊಂಡಿದ್ದರು. ಮಕ್ಕಳಿಗೆ ಭವಿಷ್ಯದಲ್ಲಿ ಈಜು ತರಬೇತಿ ಸಿಕ್ಕಷ್ಟು ಸಂಭ್ರಮವನ್ನು ನಾಗರಿಕರೂ ಅನುಭವಿಸಿದ್ದರು. ಆದರೆ, ವರ್ಷ ಕಳೆದರೂ ಈಜುಕೊಳ ಕಾಮಗಾರಿ ಪೂರ್ಣಗೊಳ್ಳದಿರುವುದು ನಾಗರಿಕರ ನಿರಾಶೆಗೆ ಕಾರಣವಾಗಿದೆ.

ಈಜುಕೊಳ ನಿರ್ಮಾಣಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಒಟ್ಟು ₹1.99 ಕೋಟಿ ಅನುದಾನದ ಕಾಮಗಾರಿಗೆ ಟೆಂಡರ್ ಆಹ್ವಾನಿಸಿತ್ತು. ಬೆಂಗಳೂರಿನ ಸಮ್‌ಸೇನ್ ಗುತ್ತಿಗೆ ಕಂಪೆನಿ ಟೆಂಡರ್‌ ಪಡೆದು ಕಾಮಗಾರಿ ಆರಂಭಿಸಿತು. ಬಾಲಕರ, ಬಾಲಕಿಯರ ಪ್ರತ್ಯೇಕ ಡ್ರೆಸ್‌ ಕೋಣೆ, ವಿಶ್ರಾಂತಿ ಕೋಣೆ, ಶೌಚಾಲಯ, ಕ್ಯಾಂಟೀನ್, ಕಚೇರಿ ಕೋಣೆಯ ಜತೆಗೆ 25X25 ಮೀಟರ್ ವಿಸ್ತೀರ್ಣದ ಈಜುಕೊಳ ನಿರ್ಮಾಣ ಕಾಮಗಾರಿ ನಡೆದಿದೆ. ಆದರೆ, ಈಜುಕೊಳ ಕಾಮಗಾರಿ ಮಾತ್ರ ಅಪೂರ್ಣಗೊಂಡಿದೆ. ಇದುವರೆಗೂ ಇಲಾಖೆ ಗುತ್ತಿಗೆ ಕಂಪೆನಿಗೆ ಒಟ್ಟು ₹86 ಲಕ್ಷ ಪಾವತಿಸಿರುವುದು ದಾಖಲೆಗಳಿಂದ ತಿಳಿದುಬಂದಿದೆ.

‘ಚಳಿಗಾಲ ಕಳೆಯಿತೆಂದರೆ ಹೆಚ್ಚುವ ಬಿಸಿಲ ಬೇಗೆಗೆ ಜನರಿಗೆ ಕೆರೆ, ಬಾವಿ, ನದಿ ಕಾಲುವೆಗಳೇ ಆಧಾರ. ಆದರೆ, ಶಿಸ್ತುಬದ್ಧವಾಗಿ ಈಜು ಕಲಿಯಲು ಈಜುಕೊಳದ ಅನಿವಾರ್ಯತೆ ಇದೆ. ನಗರದಲ್ಲಿ ಎರಡು ಖಾಸಗಿ ಈಜುಕೊಳಗಳಿವೆ. ಆದರೆ, ದಿನಕ್ಕೆ ಒಬ್ಬರಿಗೆ ₹100 ದರ ನಿಗದಿಪಡಿಸಿದ್ದಾರೆ. ಬೇಸಿಗೆಯಲ್ಲಿ ದರ ದುಪ್ಪಟ್ಟಾಗುತ್ತದೆ’ ಎನ್ನುತ್ತಾರೆ ನಾಗರಿಕರಾದ ದೇವಿಂದ್ರಪ್ಪ, ಅಂಬರೀಷ.

ಗುತ್ತಿಗೆ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸಿ: ‘ಅಧಿಕಾರಿಗಳ ನೋಟಿಸ್‌ಗೂ ಜಗ್ಗದೇ ಕಾಮಗಾರಿಯೂ ಮುಂದುವರಿಸದೇ ಇರುವ ಗುತ್ತಿಗೆ ಕಂಪೆನಿಯನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಒಂದೂ ಸರ್ಕಾರಿ ಈಜುಕೊಳ ಇಲ್ಲ. ಸರ್ಕಾರ ಮಂಜೂರು ಮಾಡಿರುವ ಈಜುಕೊಳವನ್ನು ಗುತ್ತಿಗೆ ಕಂಪೆನಿ ಪೂರ್ಣಗೊಳಿಸದೇ ನಾಗರಿಕರ ಸೇವೆಗೆ ದೊರೆಯದಂತೆ ಮಾಡಿದೆ. ಜಿಲ್ಲಾಧಿಕಾರಿ ಅವರು ತನಿಖೆ ನಡೆಸಬೇಕು’ ಎಂದು ನಗರದ ಹಿರಿಯ ಮುಖಂಡರಾದ ಎಸ್.ಎಸ್.ನಾಯಕ, ಭೀಮರಾಯ ಲಿಂಗೇರಿ, ಸ್ವಾಮಿನಾಥ ದಾಸನಕೇರಿ ಆಗ್ರಹಿಸಿದ್ದಾರೆ.

ಹಣ ಮುಟ್ಟುಗೋಲು: ಜಿಲ್ಲಾಧಿಕಾರಿ
‘ಕಂಪೆನಿ ಮುಂಗಡ ಹಣ ಕಟ್ಟಿದೆಯೇ? ಕಾಮಗಾರಿ ಪೂರ್ಣಗೊಳಿಸಲು ಟೆಂಡರ್ ಷರತ್ತು ಏನಿದೆ? ಪರಿಶೀಲಿಸಬೇಕು. ಅಧಿಕಾರಿಗಳು ಕಂಪೆನಿಗೆ ಎಷ್ಟು ನೋಟಿಸ್ ಜಾರಿಗೊಳಿಸಿದ್ದಾರೆ ಎಂಬುದನ್ನು ತಿಳಿದು ಶೀಘ್ರ ತನಿಖೆ ನಡೆಸಲಾಗುವುದು. ಕಂಪೆನಿ ಟೆಂಡರ್ ಷರತ್ತು ಉಲ್ಲಂಘಿಸಿದ್ದರೆ ಮುಂಗಡ ಹಣ ಮುಟ್ಟುಗೋಲು ಹಾಕಿಕೊಂಡು ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದರು.

ಟೆಂಡರ್ ಷರತ್ತು ಉಲ್ಲಂಘಿಸಿದ ಕಂಪೆನಿ: ಆಲ್ದಾಳ 
ಸಮಸೇನ್ ಹೆಸರಿನ ಕಂಪೆನಿ ಟೆಂಡರ್ ಷರತ್ತು ಉಲ್ಲಂಘಿಸಿರುವ ಕಾರಣ ಅದಕ್ಕೆ ಐದು ಬಾರಿ ನೋಟಿಸ್‌ ಜಾರಿ ಮಾಡಲಾಗಿದೆ. ಈ ಕುರಿತು ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತಕ್ಕೆ ನಾನು ವರದಿ ನೀಡಿದ್ದೇನೆ. ಇನ್ನೂ ₹1.12 ಕೋಟಿ ಅನುದಾನ ಉಳಿದಿದೆ. ಹಿರಿಯ ಅಧಿಕಾರಿಗಳ ಆದೇಶಾನುಸಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಸನಗೌಡ ಪಾಟೀಲ ಆಲ್ದಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT