ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಯುಗದ ಚಾಲನಾಶಕ್ತಿ

‘ಆರ್‍ಎಫ್‍ಐಡಿ’ ರೇಡಿಯೊ ಕಂಪನಾಂಕದ ಅನಂತ ಬಳಕೆ
Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸಂಶೋಧನೆ ಸಾಗಬೇಕಾದ ಹಾದಿಯನ್ನು ಸಮಸ್ಯೆ ನಿರ್ಧರಿಸುತ್ತದೆ. ಬದುಕಿನ ಹಲವು ಕ್ಲಿಷ್ಟ ಸಮಸ್ಯೆಗಳನ್ನು ಸರಳ ರೀತಿಯಲ್ಲಿ ಬಗೆಹರಿಸಲು ತಂತ್ರಜ್ಞಾನ ಸಹಕಾರಿಯಾಗಿದೆ. ಸಮಸ್ಯೆಗಳಿಗೆ ಪರಿಹಾರದೊಂದಿಗೆ ನಮ್ಮ ಹಲವು ಕಾರ್ಯಗಳಿಗೆ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್(ಆರ್‍ಎಫ್‍ಐಡಿ) ವ್ಯವಸ್ಥೆ ವೇಗ ನೀಡಿದೆ.

ಡಿಸೆಂಬರ್ 1ರಿಂದ ಮಾರಾಟವಾಗುವ ಎಲ್ಲ ನಾಲ್ಕು ಚಕ್ರ ವಾಹನಗಳಿಗೆ ಫಾಸ್ಟ್ಯಾಗ್ (fastag) ಅಳವಡಿಸುವುದನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಡ್ಡಾಯಗೊಳಿಸಿ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಸುಂಕದ ಕಟ್ಟೆ (ಟೋಲ್ ಗೇಟ್)ಗಳಲ್ಲಿ ವಾಹನಗಳು ಸಾಲುಗಟ್ಟಿ ಕಾಯುವುದನ್ನು ಫಾಸ್ಟ್ಯಾಗ್‍ನಿಂದ ತಪ್ಪಿಸಬಹುದಾಗಿದೆ. ಇಲ್ಲಿ ಬಳಕೆಯಾಗುವುದು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‍ಎಫ್‍ಐಡಿ) ತಂತ್ರ. ಕಾರು ಅಥವಾ ಇನ್ನಾವುದೇ ವಾಹನದ ಗಾಜಿನ ಮೇಲೆ ಅಂಟಿಸುವ ಫಾಸ್ಟ್ಯಾಗ್ ಬಿಲ್ಲೆಗಳ ಮೂಲಕ ಎಲೆಕ್ಟ್ರಾನಿಕ್ ಟೋಲ್‍ಗಳಲ್ಲಿ ಕ್ಷಣ ಮಾತ್ರದಲ್ಲಿ ಟೋಲ್ ಶುಲ್ಕ ಪಾವತಿ ಸಾಧ್ಯವಾಗಿದೆ.

ದೇಶದ 350ಕ್ಕೂ ಹೆಚ್ಚು ಟೋಲ್‍ಗಳಲ್ಲಿ ಫಾಸ್ಟ್ಯಾಗ್ ಮೂಲಕ ಪಾವತಿಗೆ ಅವಕಾಶವಿದೆ. ಟೋಲ್ ಪ್ರವೇಶದಲ್ಲಿ ಅಳವಡಿಸಿರುವ ಆರ್‍ಎಫ್‍ಐಡಿ ಸಂಕೇತ ಸಂಗ್ರಾಹಕ ಯಂತ್ರ ವಾಹನದ ಗಾಜಿನ ಮೇಲಿನ ಫಾಸ್ಟ್ಯಾಗ್ ಬಿಲ್ಲೆಯಿಂದ ನಿರ್ದಿಷ್ಟ ಸಂಖ್ಯೆಯನ್ನು ಗ್ರಹಿಸಿಕೊಳ್ಳುತ್ತದೆ. ವಿಶಿಷ್ಟ ಗುರುತು ಸಂಖ್ಯೆ ರವಾನೆಯಾಗುತ್ತಿದ್ದಂತೆ ಗೇಟ್ ತಾನಾಗಿ ತೆರೆದುಕೊಳ್ಳುತ್ತದೆ. ಇಂಥ ಟೋಲ್‍ಗಳಲ್ಲಿ ಕಾರು ಸಾಗುತ್ತಿದ್ದಂತೆ ಸಾಲಿನಲ್ಲಿ ಕಾಯದೆ ವಿಐಪಿಗಳಂತೆ ಸಾಗುತ್ತಿರಬಹುದು.

ಪೇಟಿಂಎಂನಲ್ಲಿಯೂ ಟ್ಯಾಗ್ ಲಭ್ಯ

ಸಾಮಾನ್ಯ ಸ್ಟಿಕ್ಕರ್‌ನಂತೆ ಕಾಣುವ ಫಾಸ್ಟ್ಯಾಗ್‍ಗಳಲ್ಲಿ ಗೆರೆಗಳಂತೆ ಕಾಣುವ ಆಂಟೆನಾ ಹಾಗೂ ಪುಟ್ಟ ಚಿಪ್ ಇರುತ್ತದೆ. ಆರ್‍ಎಫ್‍ಐಡಿ ರೀಡರ್‌ನಿಂದ ಬರುವ ರೇಡಿಯೊ ತರಂಗಗಳಿಂದ ಟ್ಯಾಗ್‍ನ ಒಳಗೆ ಎಲೆಕ್ಟ್ರೋಮ್ಯಾಗ್ನೆಟಿಕ್ ವಲಯ ಸೃಷ್ಟಿಯಾಗಿ ನಿರ್ದಿಷ್ಟ ಕಂಪನಾಂಕ ಹೊಮ್ಮುವ ಮೂಲಕ ಮಾಹಿತಿ ರವಾನೆಯಾಗುತ್ತದೆ. ಟ್ಯಾಗ್‍ನ ವಿಶಿಷ್ಟ ಗುರುತು ಸಂಖ್ಯೆಯೊಂದಿಗೆ ಖಾತೆಯ ಮಾಹಿತಿ ಸಂಪರ್ಕಿಸುವುದರಿಂದ ಟೋಲ್‍ಗಳಲ್ಲಿ ತಾನಾಗಿಯೇ ನಿಗದಿತ ಮೊತ್ತ ಕಡಿತಗೊಂಡು ಸಂಚಾರಕ್ಕೆ ಅವಕಾಶ ಸಿಗುತ್ತದೆ. ಈ ಮೂಲಕ ಟೋಲ್ ಶುಲ್ಕ ಪಾವತಿಸಿದರೆ ಶೇ 7.5ರಷ್ಟು ಹಣ ಮರುಪಾವತಿ ಕೊಡುಗೆಯನ್ನೂ ನೀಡಲಾಗಿದೆ.

ಐಸಿಐಸಿಐ ಸೇರಿ ಹಲವು ಬ್ಯಾಂಕ್ ಹಾಗೂ ಪೇಟಿಎಂನಿಂದಲೂ ಫಾಸ್ಟ್ಯಾಗ್ ಪಡೆಯ ಬಹುದಾಗಿದೆ. ಈ ವಿಶೇಷ ಟ್ಯಾಗ್‍ಗಳಿಗೆ ₹ 100 ಬೆಲೆ ನಿಗದಿಯಾಗಿದ್ದು ಟೋಲ್ ಶುಲ್ಕ ಪಾವತಿಗೆ ನಿರ್ದಿಷ್ಟ ಮೊತ್ತ (₹ 500, ₹1000,..) ರೀಚಾರ್ಜ್ ಮಾಡಿಸಿಕೊಳ್ಳಬಹುದು. ದೇಶದ ಮೊದಲ ಎಲೆಕ್ಟ್ರಾನಿಕಲ್ ಟೋಲ್ ಸಂಗ್ರಹ ವ್ಯವಸ್ಥೆ ಅಹಮದಾಬಾದ್-ಮುಂಬೈ ಹೆದ್ದಾರಿಯಲ್ಲಿ 2013ರಲ್ಲಿ ಜಾರಿಯಾಗಿತ್ತು. ಎಲ್ಲ ಟೋಲ್ ಕೇಂದ್ರಗಳಲ್ಲಿ ಈ ವ್ಯವಸ್ಥೆ ಜಾರಿಯಾಗುವ ಜತೆಗೆ ಪಯಣಿಗರು ಫಾಸ್ಟ್ಯಾಗ್ ಬಳಕೆ ಮಾಡಿದರೆ ವಾರ್ಷಿಕ ₹60 ಸಾವಿರ ಕೋಟಿ ಮೊತ್ತದ ಇಂಧನ ಉಳಿತಾಯವಾಗಲಿದೆ ಎಂದು ಹೆದ್ದಾರಿ ಪ್ರಾಧಿಕಾರ ಅಂದಾಜಿಸಿದೆ.

ಬಳಕೆ ಅನಂತ

ಯಾವುದೇ ಶಾಪಿಂಗ್ ಮಾಲ್, ದೊಡ್ಡ ಮಳಿಗೆಗಳಲ್ಲಿ ಖರೀದಿಸುವ ಎಲ್ಲ ವಸ್ತುಗಳಿಗೂ ಆರ್‍ಎಫ್‍ಐಡಿ ಸ್ಟಿಕ್ಕರ್ ಅಂಟಿಸಲಾಗಿರುತ್ತದೆ. ಇದರಿಂದಾಗಿ ಸಾಮಗ್ರಿಗಳ ಸಂಗ್ರಹ, ಮಾರಾಟ, ಬೆಲೆ ಹಾಗೂ ಕಳ್ಳತನ ತಡೆ ನಿಗಾವಹಿಸುವುದು ಸುಲಭವಾಗಿದೆ. ಬಿಲ್ ಪಾವತಿಸದೆಯೇ ಅಥವಾ ಟ್ಯಾಗ್ ಇದ್ದಂತೆಯೇ ಅಂಗಡಿಯಿಂದ ಹೊರ ಬಂದರೆ ಪ್ರವೇಶ ದ್ವಾರದಲ್ಲಿ ಅಳವಡಿಸಿರುವ ಆರ್‍ಎಫ್‍ಐಡಿ ರೀಡರ್ ಗ್ರಹಿಸಿಕೊಂಡು ತುರ್ತು ಧ್ವನಿಯನ್ನು ಹೊರಡಿಸುತ್ತದೆ. ಇದೇ ಕಾರಣದಿಂದ ಗ್ರಾಹಕರು ಮುಜುಗರಕ್ಕೆ ಈಡಾಗುವ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ.

ಟ್ಯಾಗ್, ಕಾರ್ಡ್, ಲೇಬಲ್ ರೀತಿಯಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಆರ್‍ಎಫ್‍ಐಡಿ ವ್ಯವಸ್ಥೆಗೆ ತಗುಲುವ ವೆಚ್ಚವೂ ಕಡಿಮೆ. ಗ್ರಾಹಕರು ಬಳಸುವ ಟ್ಯಾಗ್‍ಗಳಿಗೆ ವಿದ್ಯುತ್ ಶಕ್ತಿ ಪೂರೈಕೆ ಅವಶ್ಯಕತೆ ಇಲ್ಲದ ಕಾರಣ ನಿರ್ವಹಣೆಯೂ ಸುಲಭ. ಗ್ರಂಥಾಲಯಗಳಲ್ಲಿ ಪುಸ್ತಕಗಳ ನಿರ್ವಹಣೆ, ಪ್ರಾಣಿ-ಪಕ್ಷಿಗಳ ಕಾಲುಗಳಿಗೆ ಟ್ಯಾಗ್ ಅಳವಡಿಸಿ ಅವುಗಳನ್ನು ಗುರುತಿಸುವುದು ಹಾಗೂ ಆ ಜೀವಿಗಳ ಜೀವನ ಕ್ರಮ ತಿಳಿಯುವುದೂ ಸಾಧ್ಯವಾಗಿದೆ.

ಅವಶ್ಯಕತೆಗೆ ತಕ್ಕಂತೆ ಭಿನ್ನ ಕಂಪನಾಂಕಗಳನ್ನು ಹೊಮ್ಮಿಸುವ ಟ್ಯಾಗ್‍ಗಳ ಬಳಕೆಯಿದೆ. ಸಮೀಪ ವಲಯ ತಂತ್ರಜ್ಞಾನ(ಎನ್‍ಎಫ್‍ಸಿ)ದ ಭಾಗವಾಗಿರುವ ಈ ವ್ಯವಸ್ಥೆಯು 10 ಸೆಂ.ಮೀ. ಅಂತರದಲ್ಲಿ ಸಂಪರ್ಕ ಸಾಧಿಸುವ ಟ್ಯಾಗ್ 125-134 ಕಿಲೋ ಹರ್ಟ್ಸ್ ಕಂಪನಾಂಕ ಹೊಮ್ಮಿಸುತ್ತದೆ. 1 ಮೀಟರ್ ಅಂತರಕ್ಕೆ 13.56 ಮೆಗಾ ಹಟ್ರ್ಸ್ ಕಂಪನಾಂಕ ಹಾಗೂ 10-15 ಮೀಟರ್ ಅಂತರದಲ್ಲಿ ಸಂವಹಿಸಲು 860-960 ಮೆಗಾ ಹರ್ಟ್ಸ್ ಕಂಪನಾಂಕ ಅವಶ್ಯವಾಗಿರುತ್ತದೆ.

ದೇಹದೊಳಗೇ ಚಿಪ್ಪು ಸೇರಿಸಿ...
ಮಾನವರ ದೇಹಕ್ಕೆ ಅಕ್ಕಿ ಕಾಳು ಗಾತ್ರದ ಮೈಕ್ರೋಚಿಪ್ ಸೇರಿಸುವ ಮೂಲಕ ಯಾವುದೇ ಕಾರ್ಡ್ ಬಳಸದೆಯೇ ಹಲವು ಕಾರ್ಯ ಸಾಧ್ಯವಾಗಲಿದೆ. ಈ ಸಂಬಂಧ ಅಮೆರಿಕ, ಆಸ್ಟ್ರೇಲಿಯಾ ಸೇರಿ ಕೆಲ ರಾಷ್ಟ್ರಗಳಲ್ಲಿ ಪ್ರಾಯೋಗಿಕವಾಗಿ ಮುಂಗೈ ಹೆಬ್ಬೆರಳ ಸಮೀಪ ಚಿಪ್ ಅಳವಡಿಸಿ ಗಮನಿಸಲಾಗಿದೆ. ಕೆಲ ಖಾಸಗಿ ಸಂಸ್ಥೆಗಳಲ್ಲಿಯೂ ಇದರ ಪ್ರಯೋಗ ನಡೆದಿದೆ.

2004ರಲ್ಲಿ ಬಾರ್ಸಿಲೋನಾದ ಕ್ಲಬ್‍ವೊಂದು ತನ್ನ ವಿಐಪಿ ಗ್ರಾಹಕರಿಗೆ ಈ ವಿಶೇಷ ಟ್ಯಾಗ್ ಅಳವಡಿಸಲು ಮುಂದಾಯಿತು. ಇದರಿಂದ ಸುಲಭವಾಗಿ ವಿಐಪಿ ಗ್ರಾಹಕರನ್ನು ಗುರುತಿಸುವುದು ಹಾಗೂ ಬಾರ್ ಟ್ಯಾಬ್‍ನಲ್ಲಿ ಮೊತ್ತವನ್ನು ಅವರ ಖಾತೆಯೊಂದಿಗೆ ಸಂಪರ್ಕಿಸಿ ಪಡೆಯುವುದು ಸುಲಭವಾಯಿತು.

ಕಚೇರಿ ಅಥವಾ ವಿಶೇಷ ಭದ್ರತೆ ಹೊಂದಿರುವ ದ್ವಾರದ ಮೂಲಕ ಪ್ರವೇಶ, ಗುರುತು ಪತ್ತೆ ಹಾಗೂ ವಿಶಿಷ್ಟ ಗುರುತು ಸಂಖ್ಯೆ ಗ್ರಹಿಕೆ ಮೂಲಕ ಆರೋಗ್ಯದ ಹಿನ್ನೆಲೆ ಮಾಹಿತಿ ಪಡೆಯುವುದು ಸಾಧ್ಯವಿದೆ. ಮಿದುಳಿನ ನರಮಂಡಲ ವ್ಯವಸ್ಥೆಯಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿ ಎಲ್ಲವನ್ನೂ ಮರೆಸುವಂತೆ ಮಾಡುವ ಅಲ್ಝೈಮರ್ ಆ ವ್ಯಕ್ತಿಯ ನೆನಪಿನಲ್ಲಿ ಇತಿಹಾಸವನ್ನೇ ಅಳಿಸಿ ಹಾಕಿರುತ್ತದೆ. ಇಂಥ ಸ್ಥಿತಿಯಲ್ಲಿ ತುರ್ತು ಸಂದರ್ಭಗಳಲ್ಲಿ ಅಂಥ ವ್ಯಕ್ತಿಯ ಗುರುತು ಪತ್ತೆ ಮಾಡಿ ವೈದ್ಯಕೀಯ ಹಿನ್ನೆಲೆ ತಿಳಿಯಲು ದೇಹದೊಳಗೆ ಇಳಿಸಲಾಗುವ ಪುಟ್ಟ ಚಿಪ್ ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT