7

ಮತ್ತೆ ಬಾಲ್ಯಕ್ಕೆ ಜಾರೋಣ

Published:
Updated:
ಮತ್ತೆ ಬಾಲ್ಯಕ್ಕೆ ಜಾರೋಣ

ನಿರಾಳತೆಯ ಮಧುರಾನುಭವ

ಬಯಲು ಸೀಮೆಯ ಒಂದು ಹಳ್ಳಿ ನಮ್ಮೂರು. ಬಾಲ್ಯದಲ್ಲಿ ನಮ್ಮೂರ ಕೆರೆ ಬಾವಿಗಳಿಗೂ ನಮಗೂ ಅವಿನಾಭಾವ ಸಂಬಂಧ. ಗೌಡರ ಬಾವಿ, ಅಗಸರ ಬಾವಿ, ಕಪಿಲೆ ಬಾವಿ ಇವೆಲ್ಲಾ ನಮ್ಮ ಒಡನಾಡಿಗಳು. ಸೂರ್ಯ ನೆತ್ತಿಗೇರಿದನೆಂದರೆ ನಮ್ಮೂರ ಹೈಕಳೆಲ್ಲ ಬಾವಿಯಲ್ಲಿರುತ್ತಿದ್ದೆವು.

ಈಜುವುದೊಂದೇ ನಮ್ಮ ನಿತ್ಯ ಕಾಯಕ. ಒಣಗಿದ ಸೋರೆಕಾಯಿ ಬುರುಡೆ ಇಲ್ಲವೆ ನುಗ್ಗೆ ಮರದ ತುಂಡಿಗೆ ಹಗ್ಗ ಬಿಗಿದು ಮಾಡಿದ ಈಜು ಬುರುಡೆಯೇ ಈಜು ಕಲಿಸುವ ಸಾಧನ. ಅದಾವುದೂ ಇಲ್ಲವೆಂದರೆ ಸೊಂಟಕ್ಕೆ ಬಟ್ಟೆ ಕಟ್ಟಿಯೋ ಅಥವಾ ಉಡುದಾರ ಹಿಡಿದುಕೊಂಡೋ ಅಣ್ಣಂದಿರು ಈಜು ಕಲಿಸುತ್ತಿದ್ದರು. ನಮ್ಮನ್ನು ಪಳಗಿಸುವುದು ಅವರಿಗೆ ಸವಾಲಿನ ಕೆಲಸ. ಅಂತೂ ಇಂತೂ ಅದೇನಾಗುತ್ತೆ ನೋಡೇ ಬಿಡುವಾ ಎಂದು ನೀರಿಗಿಳಿದು ಈಜು ಕಲಿಯುತ್ತಿದ್ದೆವು. ಆಮೇಲಾಮೇಲೆ ನಮ್ಮ ಕೋತಿ ವಿದ್ಯೆಗಳೆಲ್ಲಾ ಪ್ರದರ್ಶನವಾಗುತ್ತಿದ್ದವು. ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಕೇರೆಹಾವುಗಳಿಗೂ ಕ್ಯಾರೇ ಅನ್ನುತ್ತಿರಲಿಲ್ಲ. ಅಂದು ನಮ್ಮ ಒಡನಾಡಿಗಳಾಗಿದ್ದ ಆ ಬಾವಿಗಳೆಲ್ಲವೂ ಬೋರ್‌ವೆಲ್‌ಗಳ ಭರಾಟೆಗೆ ನಲುಗಿ ಪಾಳುಬಿದ್ದ ಸ್ಮಾರಕಗಳಾಗಿವೆ.

ಕೆರೆಯಲ್ಲಿ ನೀರಿದ್ದರಂತೂ ಹಳೆಯ ಸೀರೆ-ಲುಂಗಿಗಳೆಲ್ಲಾ ಬಲೆಗಳಾಗಿಬಿಡುತ್ತಿದ್ದವು. ಮಳ್ಳೆ ಮೀನು, ಮೊಟ್ಟೆಕೊರಮ, ಕೆರೆಯ ದಡದ ಜೇಡಿ ಮಣ್ಣಿನ ಸಂದುಗಳಲ್ಲಿನ ಏಡಿಗಳೆಲ್ಲ ನಮ್ಮ ಬುಟ್ಟಿ ಸೇರುತ್ತಿದ್ದವು. ಒಮ್ಮೊಮ್ಮೆ ಏಡಿಯ ಬದಲು ಕೇರೆಹಾವು ಹಿಡಿದು ಬೆಚ್ಚಿಬಿದ್ದು ಕಾಲಿಗೆ ಬುದ್ಧಿ ಹೇಳಿದ್ದೂ ಉಂಟು. ಜೇನು ಕೀಳುವ ‘ಎಕ್ಸ್‌ಪರ್ಟ್ ಗೆಳೆಯ’ನನ್ನು ಜೊತೆಗಿಟ್ಟುಕೊಂಡು ಬೇಲಿಸಾಲಿನತ್ತ ನಮ್ಮ ಗುಂಪು ಜೇನು ಸವಿಯಲು ಹೊರಡುತ್ತಿತ್ತು. ಮುಳ್ಳುಬೇಲಿಸಾಲುಗಳ ನಡುವೆ ಜೇನುಗೂಡು ಕಂಡರಂತೂ ಖುಷಿಯೋ ಖುಷಿ. ಜೇನು ಕೀಳುವ ಭರದಲ್ಲಿ ಮುಖಕ್ಕೇನಾದರೂ ಜೇನು ಹುಳು ಕಚ್ಚಿದರೆ ಒಂದೆರಡು ದಿನಗಳ ಮಟ್ಟಿಗೆ ಹನುಮಂತನ ಅಪರಾವತಾರ ತಾಳಬೇಕಿತ್ತು.

ಊರಿನ ತೇರುಬಯಲಲ್ಲಿ ಆಗಾಗ್ಗೆ ನೋಡಿದ ಪೌರಾಣಿಕ ನಾಟಕಗಳು, ಮೈ ಜುಂ ಎನಿಸುತ್ತಿದ್ದ ಸರ್ಕಸ್‍ಗಳು ಇವೆಲ್ಲವೂ ಅದ್ಭುತ ಖುಷಿ ಕೊಟ್ಟ ಕ್ಷಣಗಳು. ನಡುರಾತ್ರಿಯಲ್ಲಿ ಕತ್ತೆಯ ಬಾಲಕ್ಕೆ ಡಬ್ಬ ಕಟ್ಟಿ, ಊರಿನ ಮಧ್ಯೆ ಓಡಿಸಿ, ಮಲಗಿದ್ದ ಜನಗಳಿಗೆ ನಿದ್ದೆಗೆಡಿಸಿದ್ದನ್ನು ನೆನೆಸಿಕೊಂಡರೆ ನಗು ಉಕ್ಕಿ ಬರುತ್ತದೆ. ವಾರಾನುಗಟ್ಟಲೆ ನಡೆಯುತ್ತಿದ್ದ ನಮ್ಮೂರ ಜಾತ್ರೆಯಲ್ಲಿ ಕಣ್ಣರಳಿಸಿಕೊಂಡು ಓಡಾಡಿದ ಕೌತುಕದ ಕ್ಷಣಗಳನ್ನು ಮರೆಯಲಾದೀತೆ? ಇವೆಲ್ಲವೂ ನಮ್ಮ ಬಾಲ್ಯದ ಜೀವಂತಿಕೆಯನ್ನು ಕಾಪಾಡಿದ ಸಂಗತಿಗಳು.

–ಡಿ.ಜಿ.ನಾಗರಾಜ ಹರ್ತಿಕೋಟೆ ಚಿತ್ರದುರ್ಗ

***

ಪೆಪ್ಪರಮೆಂಟೆಂಬ ಜೀರಜಿಂಬೆ ಮೊಟ್ಟೆ!ಬಹುಶಃ ನಾನಾಗ ಏಳನೇ ತರಗತಿ ಇರಬೇಕು. ಓದು ಬರಹದ ಕಡೆಗಿಂತ ಹೆಚ್ಚು ಗಮನ ಸ್ನೇಹಿತರೊಂದಿಗೆ ತಿರುಗಾಟ ಹಾಗೂ ಮಾತಿನ ಕಡೆಯೇ ಇರುತ್ತಿತ್ತು. ಎಂಟತ್ತು ಮಂದಿ ಆಪ್ತ ಮಿತ್ರರು. ರಜೆ ಸಿಗಲಿ ಅಂತಾನೇ ಕಾಯ್ತಾ ಇರ್ತಿದ್ದ ಗ್ಯಾಂಗ್ ನಮ್ಮದು. ಯಾವ್ಯಾವ ಸೀಸನ್ನಿನಲ್ಲಿ ಯಾವ್ಯಾವ ಹಣ್ಣು ಸಿಗುತ್ತೆ ಅಂತ ಲೆಕ್ಕ ಹಾಕಿ ಹುಡುಕ್ಕೊಂಡು ಹೋಗಿ ಪತ್ತೆ ಹಚ್ಚಿ ತಿಂದು ಬರ್ತಿದ್ದ ವಾನರ ಸೇನೆ. ಮುಳ್ಳಿನ ಮರೆಯಲ್ಲಿ ಸೇರಿಕೊಂಡ ಕಾರೇಹಣ್ಣಾಗಲೀ, ಎತ್ತರದ ಮರಗಳಲ್ಲಿ ನೇತುಬಿದ್ದ ಬ್ಯಾಲದ ಹಣ್ಣು ಮತ್ತು ನೇರಲೆ ಹಣ್ಣಾಗಲೀ, ಕೊನೆಗೆ ಹುಳುಕಾದ ಬೋರೇಹಣ್ಣುಗಳೂ ನಮ್ಮಿಂದ ಬಚಾವಾಗಲು ಸಾಧ್ಯವಾಗುತ್ತಿರಲಿಲ್ಲ.

ಮಳೆಗಾಲದಲ್ಲಿ ಉದುರುತ್ತವೆಯೆಂದು ನಂಬಲಾಗಿರುವ ಜೀರಜಿಂಬೆ ಹಾಗೂ ಎಮ್ಮೆತಪ್ಪಣ್ಣಗಳನ್ನು ಹಿಡಿದು ತರುವುದರಲ್ಲಿಯೂ ನಮ್ಮ ತಂಡ ನಿಸ್ಸೀಮ. ಬೆಂಕಿಪೊಟ್ಟಣಗಳನ್ನು ಖಾಲಿ ಮಾಡಿ ಅದರ ತುಂಬಾ ಜಾಲಿ ಸೊಪ್ಪು ತುಂಬಿ ಜೀರಜಿಂಬೆಗಳನ್ನು ಬಿಟ್ಟು ಚೆನ್ನಾಗಿ ಮೇಯಿಸುತ್ತಿದ್ದೆವು.

ಅವುಗಳ ಕತ್ತಿಗೆ ದಾರಕಟ್ಟಿ ವಾಕಿಂಗ್ ನೆಪದಲ್ಲಿ ಹಾರಾಟವನ್ನೂ ಮಾಡಿಸಿದ್ದಿದೆ. ಚೆನ್ನಾಗಿ ತಿಂದುಂಡ ಜೀರಜಿಂಬೆಗಳು ಹಳದಿ ಹಾಗೂ ಬಿಳೀ ಬಣ್ಣದ ತತ್ತಿಗಳನ್ನೂ ಇಡುತ್ತಿದ್ದವು. ಅವುಗಳೋ ನೋಡಲು ಥೇಟು ಸಂಕ್ರಾಂತಿಯ ಜೀರಿಗೆ ಪೆಪ್ಪರುಮೆಂಟುಗಳಂತೆಯೇ ಕಾಣುತ್ತಿದ್ದವು.

ಒಮ್ಮೆ ತಂಡದವರೆಲ್ಲಾ ಒಂದೆಡೆ ಸೇರಿ ಹರಟುತ್ತಿರುವಾಗ ನಮ್ಮ ಹುಡುಗ ಟಿಂಗ ಎಗರಾಡುತ್ತಿದ್ದುದನ್ನು ಗಮನಿಸಿದ ನಾವುಗಳು ಸ್ನೇಹಿತನೊಬ್ಬ ತಂದಿದ್ದ ಜೀರಿಗೆ ಪೆಪ್ಪರುಮೆಂಟನ್ನು ತಿನ್ನುವಾಗ ಅದರೊಂದಿಗೆ ನಾಲ್ಕಾರು ಜೀರಜಿಂಬೆಯ ಮೊಟ್ಟೆಗಳನ್ನೂ ಸೇರಿಸಿ ಕೊಡಲಾಗಿ ಟಿಂಗ ಅವುಗಳನ್ನು ಮನಸೋ ಇಚ್ಚೆ ತಿಂದು ತೇಗಿದನು. ತಿಂದು ಮುಗಿದ ಮೇಲೆ ಸತ್ಯಾಂಶ ಹೇಳಿದಾಗ ನೋಡಬೇಕಿತ್ತು ಅವನ ಪಾಡು. ಹೇಗಾದರೂ ಸರಿಯೇ ತಿಂದದ್ದನ್ನು ಕಕ್ಕಬೇಕೆಂದು ಪ್ರಯತ್ನಿಸಿ ಹೈರಾಣಾಗಿ ಹೋಗಿದ್ದ.

ಮರುದಿನ ಭೇಟಿಯಾದಾಗ ಜೀರಿಗೆ ಪೆಪ್ಪರುಮೆಂಟನ್ನು ತಿನ್ನುತ್ತಿದ್ದ ನನ್ನನ್ನು ನೋಡಿ ಅವನು ವಾಕರಿಸಿ ವಾಂತಿ ಮಾಡಿಕೊಂಡಿದ್ದು ಈಗಲೂ ನೆನಪಿನಲ್ಲಿದೆ...–ಪ.ನಾ.ಹಳ್ಳಿ.ಹರೀಶ್ ಕುಮಾರ್, ತುಮಕೂರು

***

ಹೆಣದ ಕಾಸು ಹೆಕ್ಕಿದ್ದು...

ನಾವು ಆಗ ಇದ್ದದ್ದು ಓಣಿ ಮನೆಯಲ್ಲಿ, ಊರಲ್ಲಿ ಸತ್ತವರನ್ನು ಹೂಳಲು ಅಥವಾ ಸುಡಲು ಸ್ಮಶಾನಕ್ಕೆ ನಮ್ಮ ಮನೆ ಮುಂದಿನ ರಸ್ತೆಯಲ್ಲೇ ತಗೊಂಡು ಹೋಗ್ತಾ ಇದ್ದರು, ಎಷ್ಟೋ ಸಲ ನಮ್ಮ ಮನೆ ಬಾಗಿಲಲ್ಲೇ ನಿಂತು ರಾತ್ರಿ ಕತ್ತಲಲ್ಲಿ ಹೆಣ ಸುಡ್ತಾ ಇದ್ದದ್ದನ್ನು ನೋಡಿದ್ದೇನೆ.

ಒಂದಿನ ಶಾಲೆಗೆ ರಜೆ ಇತ್ತು. ಸಂಜೆ ಆರು ಗಂಟೆ. ರಸ್ತೇಲಿ ಆಡ್ತಾ ಇದ್ದ ನನ್ನನ್ನು ಅಮ್ಮ ಕರೆದು ಐದು ಕೆ.ಜಿ. ರಾಗಿಯಿದ್ದ ಡಬ್ಬ ಮತ್ತು ಕಾಸು ಕೊಟ್ಟು ಮಿಲ್‌ನಲ್ಲಿ ಹಿಟ್ಟು ಮಾಡಿಸಿಕೊಂಡು ಬರಲು ಹೇಳಿದಳು.

ರಾಗಿ ಡಬ್ಬದ ಸಮೇತ ರಸ್ತೆಗೆ ಬಂದಾಗ ಶವ ಸಂಸ್ಕಾರಕ್ಕೆ ಅಂತ ಹೆಣ ಹೊತ್ಕೊಂಡು ಹೋಗ್ತಾ ಇದ್ದರು. ದಾರೀಲಿ ಹೆಣ ಬಂದರೆ ಕೈ ಮುಗಿದರೆ ಒಳ್ಳೇದಾಗುತ್ತೆ ಅಂತ ಯಾರೋ ಹೇಳಿದ್ದು ನೆನಪಾಗಿ, ಅಲ್ಲೇ ರಸ್ತೆ ಬದೀಲಿ ಮನೆ ಕಟ್ಟಲು ಹಾಕಿದ್ದ ಮರಳ ರಾಶಿ ಮೇಲೆ ಡಬ್ಬ ಇಟ್ಟು ಕೈ ಮುಗೀತಾ ನಿಂತಿದ್ದೆ, ಹೆಣದ ಮೇಲಿಂದ ಮಂಡಕ್ಕಿ, ಚಿಲ್ಲರೆ ಕಾಸು, ಹೂವಿನ ಎಸಳುಗಳನ್ನು ತೂರ‍್ತಾ ಇದ್ದರು. ಮೂರು, ಐದು, ಹತ್ತು ಪೈಸೆಗಳ ಕೆಲವು ಕಾಸುಗಳು, ನನ್ಮುಂದೆ ಬಿತ್ತು.

ಅಚಾನಕ್ಕಾಗಿ ಸಿಕ್ಕ ಕಾಸು, ಬಾಡಿಗೆ ಸೈಕಲ್ಲು ಹೊಡೆಯಲು, ಅಂಗಡೀಲಿ ಉಂಡೆ, ಬೆಲ್ಲ ಕೊಳ್ಳಲು ಆಗುತ್ತೇಂತ ತಕ್ಷಣ ಎತ್ಕೊಂಡೆ, ರಾಗಿ ಡಬ್ಬ ಅಲ್ಲೇ ಬಿಟ್ಟು ಹೆಣದ ಜೊತೇಲೇ ಸುಮಾರು ದೂರ ಬಿದ್ದ ಕಾಸು ಹೆಕ್ಕುತ್ತಾ ಹೋದೆ.

ಎಷ್ಟೋ ನಿಮಿಷದ ನಂತರ ರಾಗಿ ನೆನಪಾಗಿ ವಾಪಸ್ಸು ಓಡೋಡಿ ಬಂದು ನೋಡಿದರೆ ಡಬ್ಬ ಪಲ್ಟಿ, ರಾಗಿಯೆಲ್ಲ ಮರಳಲ್ಲಿ ಸೇರಿತ್ತು. ಅಮ್ಮನ ಹೊಡೆತ ನೆನೆದು ಕಣ್ಣಲ್ಲಿ ಜಳ ಜಳ ನೀರು, ಖಾಲಿ ಡಬ್ಬ ಕೈಲಿಡಿದು ಶವ ಹೋದ ದಾರೀಲೆ ಸುಮಾರು ದೂರ ಹೋದೆ, ಆಗ್ಲೇ ಕತ್ತಲಾಗ್ತಾ ಇತ್ತು, ಹೆದರಿ ಅಳ್ತಾ ಮನೆಗೆ ಬಂದೆ, ಮನೇಲಿ ಅಮ್ಮ ಇಲ್ಲ, ತಂಗೀರೆಲ್ಲ ‘ಅಮ್ಮ ನಿನ್ನ ಹುಡುಕ್ತಾ ಆಗಲೇ ಹೋದರು, ನೀನು ಎಲ್ಲಿಗ್ಹೋಗಿದ್ದೆ? ರಾಗಿ ಹಿಟ್ಟೆಲ್ಲಿ? ಇರು ಐತೆ ನಿನಗೆ ಗೂಸಾ ಅಂತ ಮತ್ತೂ ಹೆದರಿಸಿದರು. ಅರ್ಧ ಗಂಟೆ ನಂತರ ಯಾರೋ ಅಮ್ಮನಿಗೆ ನಿನ್ಮಗ ಬಂದಿದ್ದಾನೆ ಅಂತ ಕೂಗ್ತಾ ಇದ್ದದ್ದು ಕೇಳಸ್ತು. ಅಮ್ಮ ಹಸಿಕಡ್ಡಿ ಸಮೇತ ಬಂದು ಬಯ್ಯುತ್ತ, ಕೈ ಕಾಲಿಗೆ ಹಾಕಿದ ಬಾಸುಂಡೆಗಳು ಈಗಲೂ ಶವ ಸಂಸ್ಕಾರಕ್ಕೆ ಹೂವು, ಮಂಡಕ್ಕಿ, ಚಿಲ್ಲರೆ ಕಾಸು, ಎರಚುವುದು ನೋಡಿದಾಗ ಚುರುಗುಟ್ಟಿದ ಹಾಗೆ ಆಗುತ್ತದೆ.

ಆ ಮರಳ ರಾಶಿಯನ್ನು ನಾವಿದ್ದ ಓಣಿ ಪಕ್ಕದ ಬಾವಿ ಹತ್ತಿರ ತಂದು ಹಾಕಿದ್ದರು. ಇಡೀ ರಾಶಿಯೆಲ್ಲ ರಾಗಿ ಸಸಿಗಳು ಹಸಿರಿನಿಂದ ಕಂಗೊಳಿಸ್ತಾ ಇತ್ತು, ಓಣಿ ಜನರೆಲ್ಲ ವಿಜಿ ರಾಗಿ ಬಿತ್ತವ್ನೆ ಅಂತ ತಮಾಷೆ ಮಾಡ್ತಾ ಇದ್ದರು. ಹೆಣದ ಕಾಸು, ಬಾಸುಂಡೆ, ರಾಗಿ ಪೈರು ಏನದ್ಭುತ ಆ ನೆನಪು!

–ವಿಜಯಕಾಂತ್‌. ಟಿ. ಶಿವಮೊಗ್ಗ

***

ಶಾಲೆ ‘ದಾರಿ’ಯ ಪಯಣ

ನಾಲ್ಕು ಮಕ್ಕಳಿದ್ದ ಚಿಕ್ಕ ಸಂಸಾರದಲ್ಲಿ ಮೂರನೆಯವಳು ನಾನು. ನನ್ನೊಟ್ಟಿಗೆ ಅವಳಿಯಾಗಿ ನನ್ನಣ್ಣ, ನಮ್ಮಿಬ್ಬರಿಗಿಂತ ನಾಲ್ಕು ವರ್ಷ ಚಿಕ್ಕ ತಂಗಿ, ಎರಡು ವರ್ಷ ದೊಡ್ಡವ ದೊಡ್ಡಣ್ಣ.

ತಂಗಿ ಮಾತ್ರ ಮನೆ ಬಳಿಯಿದ್ದ ಶಾಲೆಗೆ ಹೋಗುತ್ತಿದ್ದಳು. ನಾವೆಲ್ಲಾ ಮೂರ್ನಾಲ್ಕು ಕಿಲೋಮೀಟರ್‌ ನಡೆದು ಶಾಲೆಗೆ ನಡೆದು ಹೋಗುತ್ತಿದ್ದೆವು.

ಸ್ನೇಹಿತ, ಸ್ನೇಹಿತೆಯರ 8–10 ಹುಡುಗರ ನಮ್ಮ ಗುಂಪು ಒಟ್ಟಿಗೆ ಶಾಲೆಗೆ ಹೊರಡುತ್ತಿತ್ತು. ಆ ‘ಮೆರವಣಿಗೆ’ ಮೇಲಿನ ಬೀದಿಯಿಂದ ಒಬ್ಬರು, ಮತ್ತೊಬ್ಬರು ಹೀಗೆ ಊರು ಬಿಡುವ ಹೊತ್ತಿಗೆ 10 ಜನರ ಒಂದು ಗುಂಪು 2 ರಿಂದ 3 ಭಾಗಗಳಾಗಿ ಸಾಗುತ್ತಿತ್ತು. ಮನೆಯಿಂದ 20 ಹೆಜ್ಜೆ ಇಟ್ಟರೆ ಓಣಿ ಎಂದೇ ಹೆಸರುವಾಸಿಯಾಗಿದ್ದ ಈಗಿನ ‘ರಾಜಕಾಲುವೆ’ಯಲ್ಲಿ ಹೊಕ್ಕು ನಾಲ್ಕು ನಿಮಿಷಗಳು ಕ್ರಯಿಸಿ ಹೊರಬರುತ್ತಿದ್ದ ಮೆರವಣಿಗೆಯ ನಂತರದ ಹಾದಿ ರೈಲ್ವೆಹಳಿ.

ಸುಮಾರು ಒಂದು ಕಿಲೋ ಮೀಟರ್‌ ಇರುವ ಹಳಿ ಮೇಲೆ ಅಮ್ಮಕೊಟ್ಟ ಬುತ್ತಿಯಲ್ಲಿ ಅರ್ಧ ಖಾಲಿ ಮತ್ತು ಎರಡು ನಿಮಿಷ ವಿಶ್ರಾಂತಿ. ನಂತರ ಮಧ್ಯದಲ್ಲಿ ಸ್ನೇಹಿತೆಯೊಬ್ಬಳನ್ನು ಮೆರವಣಿಗೆಯಲ್ಲಿ ಸೇರಿಸಿಕೊಂಡು ಮುಂದೆ ಹೊರಟರೆ ನೀಲಗಿರಿ ಮರಗಳ ದಟ್ಟ ತೋಪು. ಆ ತೋಪೇ ‘ಸ್ವರ್ಗ’. ಹಳ್ಳಿ ಹುಡುಗರಾದ ನಮ್ಮನ್ನು ಆ ತೋಪು ‘ಕಾಡು ಹುಡುಗ’ರನ್ನಾಗಿ ಮಾಡುತ್ತಿತ್ತು. ಅಲ್ಲಿ ಚಿಟ್ಟೆಗಳನ್ನು ಹಿಡಿಯುವುದು, ಹಣ್ಣು ಕೀಳುವುದು ಇವೇ ನಮ್ಮ ತರಲೆಗಳು ನಡೆಯುತ್ತಿದ್ದವು. ತೋಪು ದಾಟಿದ ಮೇಲೆ ನಗರ ಪ್ರದೇಶ. ಮುಂದೆ, ಶಾಲೆ ಸಮೀಪಿಸುತ್ತಿದೆ ಎಂಬ ಆತಂಕ. ಅರ್ಧ ಕಿ.ಮೀ ಇರುವಂತೆ ಶಾಲೆಯ ಗಂಟೆ ಸದ್ದು ಕೇಳಿ ಎದ್ದೆವೋ ಬಿದ್ದೆವೋ ಎಂಬಂತೆ ಎಲ್ಲರ ಓಟ.

ಶಾಲೆಯಲ್ಲಿಯ ಓಟ–ಪಾಠಗಳ ನಂತರ ಬಂದ ‘ದಾರಿ’ಯಲ್ಲಿ ಮನೆಗೆ ಪಯಣ. ಶಾಲೆ ಮತ್ತು ಮನೆಗಳ ನಡುವಿನ ‘ದಾರಿ’ಯಲ್ಲಿ ಸಂಭ್ರಮಗಳ ಸರಮಾಲೆ.ಆ ದಿನಗಳ, ಆ ಶಾಲೆಯ ಆ ದಾರಿಯ ಆ ಸಂಭ್ರಮದ ಪಯಣಕ್ಕೆ ಕೊನೆಯೆಲ್ಲುಂಟು?

–ಆಶಾ ನಾಗರಾಜ್‌ ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry