ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯ ಸಾವು: ‘ಕಸದ ಸಂಸ್ಕೃತಿ’ಗೆ ಸಾಕ್ಷಿ!

ವರ್ತಮಾನದಲ್ಲಿ ಭಾಷೆಯ ಸ್ವರೂಪದಲ್ಲಾಗುತ್ತಿರುವ ಪಲ್ಲಟವನ್ನು ಕಸ ಮತ್ತು ಸಾವು ಎಂಬ ರೂಪಕಗಳ ಮೂಲಕ ಗ್ರಹಿಸುವ ಪ್ರಯತ್ನ
Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಮನುಷ್ಯ ’ ಎಂದರೇನು? ಈ ಪರಿಕಲ್ಪನೆಯೇ ಮುಂದಿನ ದಿನಗಳಲ್ಲಿ ಬದಲಾಗಬಹುದು. ಅಂಥದ್ದರಲ್ಲಿ ಭಾಷೆಯೆಂಬ ಪರಿಕಲ್ಪನೆಯೂ ಬದಲಾಗುವುದು ಆಶ್ಚರ್ಯವೇನಲ್ಲ! ಅಂತಹ ಒಂದು ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿರುವುದರಿಂದ ಇಂದು ಜಗತ್ತಿನಲ್ಲಿರುವ ಸಾವಿರಾರು ಭಾಷೆಗಳಿಗೆ ಏನಾಗುತ್ತಿದೆ ಎಂಬುದರ ಜೊತೆಗೆ ಒಟ್ಟಾರೆಯಾಗಿ ‘ಮನುಷ್ಯ ಭಾಷೆ’ಗೆ ಏನಾಗುತ್ತಿದೆ ಎಂಬುದನ್ನು ತಿಳಿಯುವುದು ಕೂಡ ಕುತೂಹಲಕಾರಿಯಾಗಿದೆ.

ಪ್ರಪಂಚದ ಎಷ್ಟೋ ಭಾಷೆಗಳು ಸಾಯುತ್ತಿರುವ ಬಗ್ಗೆ ಈಗ ಸಾಮಾಜಿಕ– ಭಾಷಾ ವಿಜ್ಞಾನಿಗಳು ನಡೆಸುತ್ತಿರುವ ಚಿಂತನೆಯು ‘ಭಾಷೆಗಳ ಸಾವು’ (ಲ್ಯಾಂಗ್ವೇಜ್ ಡೆತ್) ಎಂಬ ಹೊಸ ಜ್ಞಾನ ಶಾಖೆಯಾಗುವಷ್ಟು ಬೆಳೆಯುತ್ತಿದೆ. ಈ ಸಾವಿನ ಸಂಕಥನಗಳು ಸದ್ಯ ಕೊಲ್ಲುವ ಭಾಷೆಯೆಂದು ಇಂಗ್ಲಿಷನ್ನು ಮತ್ತು ಜಗತ್ತಿನಲ್ಲಿ ಅತೀ ಶೀಘ್ರವಾಗಿ ಸಾಯುತ್ತಿರುವ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ಗುರುತಿಸಿವೆ. ಅದೇನೆ ಇರಲಿ, ಭಾಷೆಗಳು ಸತ್ತರೆ ಸಂಸ್ಕೃತಿಗಳು ಸಾಯುವುದು ನಿಜ. ಆದರೆ ಅದೇ ಕಾಲಕ್ಕೆ, ಮನುಷ್ಯ ಇತಿಹಾಸದಲ್ಲಿ ಎಷ್ಟೋ ಭಾಷೆಗಳು ಮತ್ತು ಅನೇಕ ನಾಗರಿಕತೆಗಳು ಹುಟ್ಟಿ, ಬೆಳೆದು ಹೇಳಹೆಸರಿಲ್ಲದೇ ಕಾಣೆಯಾಗಿವೆ ಎಂಬುದನ್ನೂ ಗಮನಿಸಬೇಕು!

ಶೆಲ್ಡನ್ ಪೋಲಾಕ್‌ರ ‘ದ ಲ್ಯಾಂಗ್ವೇಜ್ ಆಫ್ ದ ಗಾಡ್ಸ್ ಇನ್ ದ ವರ್ಲ್ಡ್ ಆಫ್ ಮೆನ್ ’(2006) ಪುಸ್ತಕ ಹೇಗೆ ಅಭಿಜಾತ ಭಾಷೆಗಳಾದ ಸಂಸ್ಕೃತ, ಲ್ಯಾಟಿನ್‌ಗಳು ಅಧಿಕಾರ-ಶಕ್ತಿ ಪಡೆದು ತಮ್ಮ ಭಾಷಾ ಸಾಮ್ರಾಜ್ಯಶಾಹಿಯನ್ನು ಮೆರೆದಿವೆ ಮತ್ತು ಅವುಗಳ ಒಡನಾಟದೊಂದಿಗೆ, ಮುಖಾಮುಖಿಯಾಗಿ ದೇಶಭಾಷೆಗಳು ಹೇಗೆ ತಮ್ಮ ಅಸ್ಮಿತೆಯನ್ನು ಕಟ್ಟಿಕೊಂಡವು ಎನ್ನುವುದನ್ನು ವಿಶದೀಕರಿಸುತ್ತವೆ. ಹಾಗಾಗಿ ಭಾಷೆಗಳ ಹುಟ್ಟು, ಸಾವು, ಅವುಗಳ ಅಧಿಕಾರ-ಶಕ್ತಿ, ಯಜಮಾನ್ಯ ಮನುಷ್ಯ ಕುಲದ ಇತಿಹಾಸದಲ್ಲಿ ಸರ್ವೇಸಾಮಾನ್ಯ. ಮನುಷ್ಯ ಎಂದರೇನು? ಎಂಬುದನ್ನು ವ್ಯಾಖ್ಯಾನಿಸುವಲ್ಲಿ ಭಾಷೆಯು ಮಹತ್ವದ ಪಾತ್ರ ವಹಿಸುವುದರಿಂದ ಮನುಷ್ಯರಿಗೆ ಇಂದು ಏನಾಗುತ್ತಿದೆ ಎಂದು ಅರಿಯಲು, ಯಾವ ಭಾಷೆಗೆ ಯಾವ ಸ್ಥಾನಮಾನ, ಯಾವ ಭಾಷೆಗೆ ಏನಾಗಿದೆ ಎನ್ನುವುದರ ಜೊತೆಗೆ, ಇಂದು ಒಟ್ಟಾರೆ ಮನುಷ್ಯ ಭಾಷೆ ಯಾವ ಪರಿಸ್ಥಿತಿಯನ್ನು ತಲುಪಿದೆ? ಎಂಬುದನ್ನು ಅವಲೋಕನ ಮಾಡುವುದೂ ಅಪೇಕ್ಷಣೀಯ.

ಈ ಮೇಲಿನ ಪ್ರಶ್ನೆಗೆ ನೇರವಾಗಿ, ಸರಳವಾಗಿ ಉತ್ತರಿಸಬೇಕೆಂದರೆ ಸಮಕಾಲೀನ ಹೋರಾಟಗಾರ, ಗಾಂಧಿವಾದಿ ಪ್ರಸನ್ನರ ನುಡಿಗಟ್ಟನ್ನು ಬಳಸಿ ಹೇಳುವುದು ಉಚಿತ. ಪ್ರಸನ್ನರ ಭಾಷೆಯಲ್ಲಿ ಹೇಳುವುದಾದರೆ ‘ಇಂದು ಭಾಷೆ ಕಸವಾಗುತ್ತಿದೆ’. ಕಸವೇ ಒಂದು ಸಂಸ್ಕೃತಿಯಾಗಿ ಸೃಷ್ಟಿಯಾಗುತ್ತಿರುವ ಸಂದರ್ಭವಿದು. ನಮ್ಮ ಊರುಗಳಲ್ಲಿ ಕಸ ವಿಲೇವಾರಿ ಮಾಡುವ ಸಮಸ್ಯೆ, ಪರಿಸರ ಮಾಲಿನ್ಯ, ಭಾರತವನ್ನು ಸ್ವಚ್ಛ ಮಾಡುವ ಅಭಿಯಾನ, ಇ-ವೇಸ್ಟ್ ಮ್ಯಾನೇಜಮೆಂಟ್ ಮುಂತಾದವುಗಳು ನಾವು ಸೃಷ್ಟಿಸುತ್ತಿರುವ ‘ಕಸ ಸಂಸ್ಕೃತಿ’ಯ (culture of waste) ಸೂಚಕಗಳಾಗಿವೆ. ಹಿಂದೆಂದಿಗಿಂತಲೂ ಈಗ ನಮ್ಮ ನಡುವೆ ತ್ಯಾಜ್ಯದ ವಸ್ತುಗಳು ಹೆಚ್ಚಾಗಿವೆ. ಈಗ ಭಾಷೆಯೂ ಕೂಡ ‘ಕಸ ಸಂಸ್ಕೃತಿ’ಗೆ ಸಾಕ್ಷಿಯಾಗುತ್ತಿದೆ. ಅತಿಯಾದ ಮತ್ತು ಬೇಕಾಬಿಟ್ಟಿ ಬಳಕೆಯಿಂದ ಅದು ತನ್ನ ಎಲ್ಲ ಸಂಪನ್ಮೂಲಗಳನ್ನು ಕಳೆದುಕೊಂಡು ನಮ್ಮ ಅನುಭವದಿಂದ ಬೇರ್ಪಡುತ್ತಿದೆ. ಹೇಗೆ ಬೇಕೋ ಹಾಗೆ ನಿರ್ಲಕ್ಷ್ಯದಿಂದ ಒಂದು ವಸ್ತುವನ್ನು ಉಪಯೋಗಿಸುವುದರಿಂದ ಆ ವಸ್ತುವಿಗೆ ಯಾವ ಸ್ಥಿತಿ ಬರುತ್ತದೆಯೋ ಅದೇ ಸ್ಥಿತಿ ಭಾಷೆಗೆ ಬರುತ್ತಿದೆ. ಮನುಷ್ಯ ಭಾಷೆ ಸವೆದು, ನಾವು ಭಾಷಾ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಇಂದಿನ ಈ ಭಾಷಾ ಸ್ಥಿತಿ ಒಂದು ಐತಿಹಾಸಿಕ ಪ್ರಕ್ರಿಯೆಯಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ಒಂದೆರಡು ಅಂಶಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.

ಜಗತ್ತಿನ ಭಾಷಾ ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳು ಭಾಷೆಯ ಬಗ್ಗೆ ನಮಗಿರುವ ಸಾಮಾನ್ಯ ಜ್ಞಾನವನ್ನು ಅಲುಗಾಡಿಸಿಬಿಟ್ಟಿದ್ದಾರೆ. ಅವುಗಳ ಗೊಡವಿಗೆ ಹೋಗದೇ ಸುಮ್ಮನೆ ಒಟ್ಟಾರೆಯಾಗಿ ಮನುಷ್ಯ ಭಾಷೆಯು ನಡೆದು ಬಂದ ದಾರಿಯನ್ನು ಐತಿಹಾಸಿಕವಾಗಿ ಅವಲೋಕಿಸಿದಾಗ ಅದರ ಸ್ವರೂಪದಲ್ಲಾದ ಕೆಲವು ಪಲ್ಲಟಗಳನ್ನು ಗುರುತಿಸಬಹುದು. ಅವುಗಳಲ್ಲಿ ಮನುಷ್ಯ ಭಾಷೆಯ ಎರಡು ಆಯಾಮಗಳಾದ ‘ಮಾತು’ ಮತ್ತು ‘ಬರವಣಿಗೆ’ಗಳಲ್ಲಾದ ಒಂದು ‘ಯುಗ ಪಲ್ಲಟ’. ಆ ಯುಗ ಪಲ್ಲಟವೇನೆಂದರೆ ‘ಮಾತು’ ‘ಬರವಣಿಗೆ’ಗೆ ಸೋತಿದ್ದು. ಒಂದು ಕಾಲವಿತ್ತು. ಮನುಷ್ಯರ ವ್ಯವಹಾರಗಳೆಲ್ಲವೂ ಮಾತಿನ ಮೂಲಕವೇ ನಡೆಯುತಿದ್ದ ಕಾಲವದು. ಯಾವ ದಾಖಲೆಗಳ ಅವಶ್ಯಕತೆಯೂ ಅಲ್ಲಿರಲಿಲ್ಲ. ಆಗ ‘ನಾನು ಮಾತು ಕೊಟ್ಟಿದ್ದೇನೆ’, ‘ಮಾತು ಅಂದ್ರ ಮಾತರಿ’ ಎನ್ನುವುದಕ್ಕೆ ಸಾರ್ವಕಾಲಿಕ ಮನ್ನಣೆಯಿತ್ತು. ಆಣೆ ಪ್ರಮಾಣ ಮಾಡುವ ರೂಢಿಯೂ ಮಾತಿಗಿರುವ ಶಕ್ತಿಯನ್ನು ತೋರಿಸುತ್ತಿತ್ತು. ಈಗ ಅದು ನ್ಯಾಯಾಲಯದಲ್ಲಿ ಕೇವಲ ರಿಚುವಲ್ ಅಷ್ಟೇ. ಈಗ ನಮ್ಮ ಎಲ್ಲ ವ್ಯವಹಾರದ ಸತ್ಯಾಸತ್ಯತೆ ಬರವಣಿಗೆಯ ದಾಖಲೆಯನ್ನು ಅವಲಂಬಿಸಿದೆ. ನಮ್ಮ ಸಾಮಾಜಿಕ ಕೊಡುಕೊಳ್ಳುವಿಕೆಗಳು ಲಿಖಿತ ದಾಖಲೆಗಳಿಗೆ ಮೊರೆಹೋದ ಪ್ರಕ್ರಿಯೆಯ ಇತಿಹಾಸವನ್ನೇ ಬರೆಯಬಹುದು. ಆದರೆ ಈ ಪಲ್ಲಟ ಸೂಚಿಸುವ ಸಾಧ್ಯತೆಗಳೆಂದರೆ ನಾವು ಮಾತಿಗಿರುವ ಶಕ್ತಿಯನ್ನು ಕಳೆದುಕೊಂಡಂತೆ ಬರವಣಿಗೆಯ ಶಕ್ತಿಯನ್ನು ಕಳೆದುಕೊಳ್ಳಬಹುದು. ಕಾಲ ಕಳೆಯ ಬೇಕಷ್ಟೇ. ಮುಂದುವರೆದು ಹೇಳುವುದಾದರೆ ಇತರ ಸಂತತಿಗಳು, ಮನುಷ್ಯ ಸೃಷ್ಟಿಗಳು ಮಾಯವಾಗುವಂತೆ ಒಂದು ಕಾಲಘಟ್ಟದಲ್ಲಿ ಘಟಿಸಿದ ಭಾಷೆಯು ಕೂಡಾ ಮರೆಯಾಗಬಹುದಲ್ಲವೇ? ಈಗ ಮನುಷ್ಯ ಭಾಷೆಯೆನ್ನುವುದು ಇಂತಹ ಸಂಕಷ್ಟದ ಘಟ್ಟ ತಲುಪಿದಂತೆ ಕಾಣುತ್ತದೆ.

ಮತ್ತೇ ಭಾಷೆ ಕಸವಾಗುತ್ತಿರುವ ವಿಷಯಕ್ಕೆ ಒತ್ತುಕೊಟ್ಟು ಮುಂದುವರೆಯುವುದಾದರೆ, ಮನುಷ್ಯ ಭಾಷೆ ತನ್ನ ಔಚಿತ್ಯವನ್ನು ಕಳೆದುಕೊಳ್ಳುತ್ತಿರುವುದು ದಿಢೀರ್ ಆದ ಇತ್ತೀಚಿನ ಬೆಳವಣಿಗೆ ಅಲ್ಲ. ಈಗ ಮಿತಿ ಮೀರುತ್ತಿರುವ ಭಾಷೆಯ ಅಪಮೌಲ್ಯೀಕರಣ ಐತಿಹಾಸಿಕವಾಗಿ ರೂಪುಗೊಂಡು, ನಮ್ಮ ಸಾಮಾಜಿಕ ಮತ್ತು ಆರ್ಥಿಕ ರಚನೆಗಳಲ್ಲಾದ ಬೆಳವಣಿಗೆಯ ಫಲಿತಾಂಶವಾಗಿದೆ. ಬಹುಶಃ ಕೈಗಾರಿಕಾ ಬಂಡವಾಳಶಾಹಿ ಸಂಸ್ಕೃತಿಯಿಂದ ಹೆಚ್ಚಾದ ಈ ವಿದ್ಯಮಾನ ಸಮಕಾಲೀನ ನವಬಂಡವಾಳಶಾಹಿಯ ಗ್ರಾಹಕೀಕರಣದ ಪ್ರಪಾತದಲ್ಲಿ ತನ್ನ ಅತಿರೇಕವನ್ನು ಮುಟ್ಟಿದಂತೆ ಕಾಣುತ್ತದೆ. ಬಂಡವಾಳಶಾಹಿಯ ವಿವಿಧ ಹಂತಗಳಲ್ಲಿ ಉಪಭೋಗಿ ಸಮಾಜಗಳು ನಿರ್ಮಾಣವಾದಂತೆ ಕೇವಲ ಲಾಭಗಳಿಸುವ ಮನೋವೃತ್ತಿ ಹೊಂದಿದ ಅಧಿಕಾರ-ಶಕ್ತಿಗಳು ಭಾಷೆಯನ್ನು ತಮ್ಮ ಸ್ವಹಿತಕ್ಕಾಗಿ ಬಳಸಿಕೊಂಡಿವೆ. ಇದರ ಪರಿಣಾಮಕಾರಿ ನಿದರ್ಶನ ಕಾಣುಸಿಗುವುದು ಜಾಹೀರಾತು ಸಂಸ್ಕೃತಿಯಲ್ಲಿ. ಆಧುನಿಕ ಕಾಲದ ಜಾಹೀರಾತು ಉದ್ಯಮ ಬೆಳೆದೆಂತೆಲ್ಲ, ಭಾಷೆಯ ಮೌಲ್ಯ ಕ್ಷೀಣಿಸುತ್ತಾ ಹೋಗಿದ್ದನ್ನು ಗುರುತಿಸಬಹುದು. ಒಟ್ಟಾರೆಯಾಗಿ, ಭಾಷೆ ಸಾಧವಾಗಿಸುವ ‘ಸುಳ್ಳು ’ ಮತ್ತು ಭಾಷಿಕ ಮೋಸವನ್ನು ಸ್ವಾಭಾವೀಕರಿಸಿದ ಈ ಸಂಸ್ಕೃತಿ, ಭಾಷೆಯನ್ನು ದುರುಪಯೋಗ ಮಾಡುತ್ತ, ಅದರ ಎಲ್ಲ ಸಾಧ್ಯತೆಗಳನ್ನು ವ್ಯಯಮಾಡಿ, ಭಾಷೆಯ ಅಪಮೌಲ್ಯಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಜಾಹೀರಾತು ಪ್ರಪಂಚವು ಭಾಷೆಯನ್ನು ಕೇವಲ ಲಾಭಕ್ಕೋಸ್ಕರ ಎರ್ರಾಬಿರ್ರಿಯಾಗಿ ಬಳಸಿಕೊಂಡಿದ್ದು ಭಾಷೆಯ ಅಧಃಪತನಕ್ಕೆ ಕಾರಣ. ಅದು ತನ್ನ ಉತ್ಪನ್ನಗಳನ್ನು ಮಾರುವ ಒಂದೇ ಒಂದು ಉದ್ದೇಶವನ್ನು ಹೊರತುಪಡಿಸಿ, ಸಂವಹನದ ಯಾವ ನೈತಿಕತೆಗೂ ಕ್ಯಾರೆ ಎನ್ನಲಿಲ್ಲ. ಇದನ್ನು ನಾವೆಂದೂ ಟೀಕಿಸಲೇ ಇಲ್ಲ!

ಅರ್ಥ ಮನುಷ್ಯರಿಂದ ಹುಟ್ಟುತ್ತದೆ. ಈ ಜಗತ್ತಿನಲ್ಲಿರುವ ವಸ್ತು-ವೈವಿಧ್ಯಗಳಿಗೆ ತಮ್ಮಷ್ಟಕ್ಕೆ ತಾವೇಅರ್ಥವನ್ನು ಹೊರಹೊಮ್ಮಿಸುವುದಿಲ್ಲ (ಹಾಗಂತ ಅವು ಎಲ್ಲವು ಸುಳ್ಳಲ್ಲ). ಆದರೆ ಅವುಗಳನ್ನು ವಿವರಿಸುವ ಭಾಷೆಗೆ ಅರ್ಥವೆಂಬ ಮೌಲ್ಯವಿರುತ್ತದೆ. ಈ ಜಗತ್ತು ನಮ್ಮ ತೆಕ್ಕೆಗೆ ಸಿಗುವುದೇ ಈ ಮೌಲ್ಯದಿಂದ. ಹಾಗಾಗಿ ಭಾಷೆ ಕೇವಲ ಮಾಧ್ಯಮವಲ್ಲ. ಅದರ ಆಯಾಮ ಕತ್ತಿಯ ಎರಡೂ ಅಲುಗಿನಂತೆ. ಅಲಂಕೃತ ಶಕ್ತಿಯಿಂದ ರೂಪಕಗಳನ್ನು ಬಳಸಿ, ಪರಿಕಲ್ಪನೆಗಳ ಮೂಲಕ ಸತ್ಯ ಹೇಳುವ ಭಾಷೆಗೆ ಮೋಸ ಮಾಡುವ ಶಕ್ತಿಯೂ ಇದೆ. ನವಬಂಡವಾಳಶಾಹಿಯ ಸಾಮ್ರಾಜ್ಯ ನಮ್ಮ ಈ ಭಾಷಾ ಶಕ್ತಿಗೆ ಕೈಹಾಕಿ, ಭಾಷಾ ವಿಜೃಂಭಣೆಯು ನಮ್ಮನ್ನು ರೂಪಿಸುವಂತೆ ಮಾಡಿದೆ. ಸದ್ಯ ಭಾಷೆಯು ಹೊರಹೊಮ್ಮಿಸುವ ಭ್ರಮೆಯನ್ನು ನಾವು ಕೊಂಡು ಕೊಳ್ಳುತ್ತಿದ್ದೇವೆಯೇ ಹೊರತು ನಮಗೆ ಬೇಕಾದ ವಸ್ತುಗಳನ್ನಲ್ಲ. ಬ್ರ್ಯಾಂಡ್ ಅಂದರೆ ಭಾಷೆಯ, ಸಂಕೇತಗಳ ವಿಜೃಂಭಣೆ. ಬಹುಶಃ ಇದೇ ಕಾರಣಕ್ಕೆ ಪ್ಲೇಟೊ ಸೊಫಿಸ್ಟ್ರಿಯನ್ನು, ಭ್ರಮೆ ಸೃಷ್ಟಿಸುವ ಭಾಷೆಯನ್ನು ವಿರೋಧಿಸಿದ್ದು ಎಂದು ತೋರುತ್ತದೆ. ಸೊಫಿಸ್ಟರು ಯಾವುದೇ ಸತ್ಯಾಂಶವಿಲ್ಲದೆ, ಕೇವಲ ಭಾಷೆಯ ಚಮತ್ಕಾರದಿಂದ ಮೋಡಿ ಮಾಡುವ ಚಾಣಾಕ್ಷರಾಗಿದ್ದರು. ಪ್ಲೇಟೊಗೆ ಭಾವನೆ ಕೆರಳಿಸುವ ಗೀತೆಗಳ ಭಾಷೆ ವಿವೇಕದಿಂದ ಕಟ್ಟಬೇಕಾದ ರಾಜ್ಯಕ್ಕೆ ಅಡ್ಡಿಯಾಗಿದ್ದವು. ಭಾಷಾಂತರಕ್ಕಿರುವ ಮಿತಿ ಮತ್ತು ವಿದ್ವತ್ತಿನ ಕೊರತೆಯಿಂದ ನಾವು ಪ್ಲೇಟೊನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಅವನು ವಿರೋಧಿಸಿದ್ದು ಕಾವ್ಯವನ್ನಲ್ಲ. ವಿವೇಕರಹಿತ ಢೋಂಗಿ ಭಾಷೆಯನ್ನು.

ಮುಂದೆ ಬಂಡವಾಳಶಾಹಿ, ಜಾಹೀರಾತು ಸಂಸ್ಕೃತಿಗಳ ಜೊತೆ ಕೈಜೋಡಿಸಿದ ವಿವಿಧ ಬಗೆಯ ಮಾಧ್ಯಮಗಳೂ ಭಾಷೆಯನ್ನು ಕಸವಾಗಿಸಿವೆ. ಸಮಕಾಲೀನ ಮಾಧ್ಯಮಗಳು ಕೂಡಾ ಲಾಭದ ತಾಣಗಳೇ. ಜೀವನ ರೂಪಿಸುವ ವಿಮರ್ಶೆ, ಚಿಂತನೆಗಳನ್ನು ಬಿತ್ತುವ ವಾಹಕಗಳಾಗಿರದೆ ಇರುವುದರಿಂದ ಅವು ಭಾಷಾ ಚಮತ್ಕಾರ, ಭಾಷಾ ಬೇಜವಾಬ್ದಾರಿಗಳನ್ನು ಮೈಗೂಡಿಸಿಕೊಂಡಿವೆ. ಒಂದು ಕಡೆ ಸಾಹಿತ್ಯ ಭಾಷೆಯ ಶಕ್ತಿಯನ್ನು ಬೆಳೆಸುತ್ತಿದ್ದರೆ, ಇನ್ನೊಂದು ಕಡೆ (ಕೆಟ್ಟ) ಮಾಧ್ಯಮ ಭಾಷೆಯನ್ನು ಕಸವಾಗಿಸತೊಡಗಿತು. ಉದಾಹರಣೆಗೆ ಟಿವಿ ಮಾಧಮದಲ್ಲಿ ಸತತವಾಗಿ ಬರುವ ‘ಬ್ರೇಕಿಂಗ್ ನ್ಯೂಜ್ ’ ಎನ್ನುವುದನ್ನೇ ತೆಗೆದುಕೊಳ್ಳಿ. ಎಲ್ಲ ಸುದ್ದಿಯೂ ಬ್ರೇಕಿಂಗೇ ಆದರೆ, ಯಾವುದು ಸಾದಾ ಸುದ್ದಿ? ಎಲ್ಲವೂ ಬ್ರೇಕಿಂಗ್ ನ್ಯೂಜ್ ಆದರೆ ಯಾವುದು ಬ್ರೇಕಿಂಗ್ ನ್ಯೂಜ್ ಅಲ್ಲ! ಇಲ್ಲಿ ‘ಬ್ರೇಕಿಂಗ್’ ಪದ ತನಗಿರುವ ಸೂಚಕ ಶಕ್ತಿಯನ್ನು ಕಳೆದು ಕೊಂಡಂತಲ್ಲವೇ? ಇಂತಹ ಎಷ್ಟೋ ಪದ, ನುಡಿಗಟ್ಟು ಮತ್ತು ಸಾಲುಗಳು ತಮ್ಮ ಸೂಚಕ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ. ಟೀವಿ ಕಾರ್ಯಕ್ರಮಗಳ ನಿರೂಪಕರ ಭಾಷೆಯನ್ನು ಗಮನಿಸಿದರೆ, ಅವರು ಬಳಸುವ ಶಬ್ದಗಳು, ಅವುಗಳ ಅರ್ಥ, ಔಚಿತ್ಯಗಳೆಲ್ಲವೂ ನಮ್ಮ ಭಾಷಾ ಪ್ರಜ್ಞೆ ದಡ್ಡು ಬೀಳುವಂತೆ ಮಾಡುತ್ತವೆ. ಮಾಧ್ಯಮಗಳ ಸಂರಚನೆಯೇ ಹಾಗೆ; ಭಾಷೆಯಿಂದ ಉಂಟಾಗುವ ಆಲೋಚನೆಯನ್ನು ಭಾಷೆ ಮತ್ತು ಇನ್ನಿತರ ಸಂಕೇತಗಳ ಮೂಲಕವೇ ತಡೆಗಟ್ಟುವುದಾಗಿದೆ. ಮಾಧ್ಯಮವು ಮಾಡುವ ಭಾಷಿಕ ಶೋಷಣೆ ನಮ್ಮ ಸ್ಮೃತಿಯನ್ನು ಮಂದಮಾಡುವ ದಿಕ್ಕಿನಲ್ಲಿ ಸಾಗುತ್ತದೆ. ಮತ್ತೆ ಒಂದು ಕಾಲದಲ್ಲಿದ್ದ ‘ಸಂಭಾಷಣೆಯ ಶಕ್ತಿ’ಯನ್ನು ಸಿನಿಮಾ ಮಾದ್ಯಮವೂ ಕೂಡ ಕಳೆದುಕೊಂಡು, ದೃಶ್ಯರಂಜನೀಯತೆ ಕಡೆಗೆ ಅದು ವಾಲುತ್ತಿದೆ.

ಇನ್ನೂ ಶೈಕ್ಷಣಿಕ ಕ್ಷೇತ್ರವನ್ನು ಪರಿಶೀಲಿಸಿದರೆ, ಭಾಷೆ ಕಸವಾಗುತ್ತಿರುವ ಇನ್ನೊಂದು ಮುಖ ಗೋಚರವಾಗುತ್ತದೆ. ವಿದ್ವತ್ ಲೋಕದಲ್ಲಿ ಭಾಷೆಯ ಬಳಕೆ ಔಚಿತ್ಯ ಪೂರ್ಣವಾಗಿ, ಸೂಕ್ಷ್ಮತೆಯಿಂದ ಕೂಡಿರಬೇಕೆಂಬುದು ಅಪೇಕ್ಷಣೀಯ. ಆದರೆ ಸಮಕಾಲಿನ ಶೈಕ್ಷಣಿಕ ಬರಹ, ಭಾಷಣಗಳನ್ನು ಗಮನಿಸಿದರೆ ಅಲ್ಲಿಯೂ ಕೂಡಾ ಭಾಷೆಯನ್ನು ಬೇಕಾ ಬಿಟ್ಟಿಯಾಗಿ, ಅವಿವೇಕದಿಂದಲೇ ಬಳಸುವ ರೂಢಿ ಹೆಚ್ಚಾಗುತ್ತಿದೆ. ಶೈಕ್ಷಣಿಕ ವಿಚಾರ ಸಂಕಿರಣದ ದಿಕ್ಸೂಚಿ ಭಾಷಣದಿಂದ ಹಿಡಿದು, ಪ್ರಬಂಧ ಮಂಡಿಸುವವರ ಮತ್ತು ವಂದನಾರ್ಪಣೆ ಮಾಡುವವರ ಭಾಷೆಯು ಕೂಡಾ ರಿಚುವಲಿಸ್ಟಿಕ್ ಆಗಿ, ಗ್ರಹಿಕೆ ಸಾಧ್ಯವಾಗಿಸುವ, ವಾಸ್ತವವನ್ನು ವಿವರಿಸುವ ಉಪಕರಣವಾಗಿ ಸೋಲುತ್ತಿದೆ. ಪರೀಕ್ಷೆಯಲ್ಲಿ ಅಥವಾ ಇತರ ಬರವಣಿಗೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಪ್ರಾರಂಭ ಮಾಡುವ ಮೊದಲ ವಾಕ್ಯಗಳನ್ನು ಗಮನಿಸಿದರೆ ಸಾಕು ನಾವು ಎಂತಹ ಭಾಷಾ ಬಡತನವನ್ನು ಎದುರಿಸುತ್ತಿದ್ದೇವೆಂದು ಅರಿವಾಗುತ್ತದೆ. ಸಂಶೋಧನಾ ಬರಹಗಳನ್ನು ನೋಡಿದರೆ ಸಾಮಾನ್ಯವಾಗಿ ಅಲ್ಲಿ ಬಳಸಲಾಗುವ ಭಾಷೆ ಯಾಂತ್ರಿಕವಾಗಿ, ವಿವೇಚನೆಯನ್ನು ಅಭಿವ್ಯಕ್ತಿಸುವಲ್ಲಿ ಹಿಂಜರಿಯುತ್ತಿರುವುದು ಒಟ್ಟಾರೆಯಾಗಿ ಭಾಷೆಗೆ ಬರುತ್ತಿರುವ ಕುತ್ತಾಗಿದೆ. ಯಾವ ತಿರಳನ್ನೂ, ಮಹತ್ವವಾದುದ್ದನ್ನೂ ಹೇಳದೇ, ವಿಷಯವನ್ನು ಜೀರ್ಣಿಸಿಕೊಳ್ಳದೇ ಪುಟಗಟ್ಟಲೆ ಬರೆಯಬಹುದು ಎನ್ನುವುದು ಶೈಕ್ಷಣಿಕ ಭಾಷೆ ಕಸವಾಗುತ್ತಿರುವ ಸೂಚನೆಯಾಗಿದೆ. ಇನ್ನೊಂದು ಅಂಶವೇನೆಂದರೆ ಶೈಕ್ಷಣಿಕ ಕ್ಷೇತ್ರದ ಯಾವದೇ ಜ್ಞಾನಶಾಖೆಯ ಅಳಿವು ಉಳಿವು ಮಾರಕಟ್ಟೆಯಲ್ಲಿ ಅದು ಹೇಗೆ ಓಡುತ್ತದೆಂಬ ಅಂಶವನ್ನು ಅವಲಂಬಿಸಿದೆ. ಹಾಗಾಗಿ ಸಂಸ್ಕೃತವಾಗಲಿ ಅಥವಾ ಶೇಕ್‌ಸ್ಪಿಯರ್‌ಯಾಗಲಿ ಅದು ‘ಸಾಫ್ಟ್ ಸ್ಕಿಲ್’ ಆದರೆ ಮಾತ್ರ ಉಳಿಯುವಂತಾಗಿದೆ. ಇಲ್ಲಿ ಭಾಷೆ ಕೇವಲ ಸರಕು.

ಹೀಗೆ ಭಾಷೆ ನಮ್ಮ ವಾಸ್ತವವನ್ನು ಸೂಚಿಸುವ ಶಕ್ತಿ ಕಳಿದುಕೊಂಡಿದ್ದನ್ನು ಇನ್ನೊಂದು ರೀತಿಯಲ್ಲಿ ಸತ್ಯೋತ್ತರದ (post truth) ಬೆಳವಣಿಗೆಯೆಂದು ಕರೆಯುವುದುಂಟು. ಇಲ್ಲಿ ನಮ್ಮ ಚರ್ಚೆ, ರಾಜಕೀಯ ಸಂವಹನ ಮತ್ತು ಮಾದ್ಯಮಗಳು ಸತ್ಯಾಂಶ, ನಿಖರ ಆಧಾರಗಳನ್ನು ಕಡೆಗಣಿಸಿ, ಕೇವಲ ನಮ್ಮ ಭಾವನೆಗಳನ್ನು ಕೆರಳಿಸಿವುದರ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುತ್ತವೆ. ಅರ್ದ ಸತ್ಯ, ಸುಳ್ಳು ಮಾಯೆಗಳನ್ನು ಸೃಷ್ಟಿಸಲು ಸತ್ಯೋತ್ತರದ ರಾಜಕಾರಣ ಭಾಷೆಯನ್ನು ಅನುಚಿತವಾಗಿ ಬಳಿಕೆ ಮಾಡುತ್ತದೆ. ೨೦೧೬ರಲ್ಲಿ ಆಕ್ಸಫರ್ಡ ನಿಘಂಟು ಈ ಶಬ್ದವನ್ನು ಆ ವರ್ಷದ ಶಬ್ದವೆಂದು ಕರೆದಿದೆ. ಶಬ್ದ ಬದಲಾದರೆ ಜಗತ್ತು ಬದಲಾದಂತೆ ಅಲ್ಲವೇ?

ಧಿಡೀರನೆ ಭಾಷೆ ತನ್ನ ಸೃಜನಶೀಲತೆ ಕಳೆದುಕೊಂಡು, ಅಧೋಗತಿ ಮುಟ್ಟಿ, ನಾವ್ಯಾರು ಭಾಷೆಯನ್ನು ಅರ್ಥಪೂರ್ಣವಾಗಿ ಬಳಸುತ್ತಿಲ್ಲ, ಭಾಷೆ ಸತ್ತು ಬಿಟ್ಟಿದೆ ಎಂಬ ಭ್ರಮನಿರಸನದ ನಿಲುವು ಈ ಮೇಲಿನ ನಿರೂಪಣೆಯದಲ್ಲ. ಭಾಷೆಯ ಅಪಮೌಲ್ಯೀಕರಣ ಎಲ್ಲ ಕಾಲಗಳಲ್ಲಿಯೂ ಇದ್ದಿರಬಹುದು. ಆಧುನಿಕ ಪೂರ್ವ ಕಾಲದಲ್ಲಿ ಭಾಷಾ-ರಾಜಕಾರಣ ಸಂಸ್ಕೃತಿಯ ಅಧಿಕಾರ-ಶಕ್ತಿಯ ಭಾಗವಾಗಿತ್ತು. ಆಧುನಿಕ ಕಾಲದಲ್ಲಿ ಬಂಡವಾಳಶಾಹಿಯ ಕಪಿಮುಷ್ಟಿಯಲ್ಲಿ ಸಿಲುಕಿ ಭಾಷೆ ಅಪಮೌಲ್ಯೀಕರಣದ ಅತಿರೇಕವನ್ನು ಮುಟ್ಟಿದೆ. ಈ ವಿದ್ಯಮಾನವನ್ನು ಗುರುತಿಸುವುದು ಮನುಷ್ಯ ಜಾತಿಗೆ ಇಂದು ಏನಾಗುತ್ತಿದೆಂದು ಅರಿತುಕೊಳ್ಳುವಲ್ಲಿ ಸಹಾಯಕವಾಗಬಲ್ಲದು. ಆದ್ದರಿಂದ ವರ್ತಮಾನದಲ್ಲಿ ಭಾಷೆಯ ಸ್ವರೂಪದಲ್ಲಾಗುತ್ತಿರುವ ಪಲ್ಲಟವನ್ನು ಕಸ ಮತ್ತು ಸಾವು ಎಂಬ ರೂಪಕಗಳ ಮೂಲಕ ಗ್ರಹಿಸುವ ಪ್ರಯತ್ನ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT