ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದ್ಯತೆಯಾಗಲಿ ಗೃಹವಿಮೆ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮನೆ ಎಂದರೆ ಅದು ಕೇವಲ ಒಂದು ಆಸ್ತಿ ಅಥವಾ ಸಂಪತ್ತು ಅಲ್ಲ. ಅದು ನಮ್ಮ ಇಡೀ ಜೀವಮಾನದ ಸಾಧನೆ. ಯಾವುದೊ ದುರ್ಘಟನೆ, ಅನಾಹುತ, ಅವಘಡ, ಅಚಾತುರ್ಯದಿಂದ ಮನೆಗೆ ಹಾನಿಯುಂಟಾದರೆ ಅದು ಕೇವಲ ಮನೆಯನ್ನಲ್ಲ, ಮನಸ್ಸನ್ನೂ, ಬದುಕನ್ನೂ, ನೆಮ್ಮದಿಯನ್ನೂ ಛಿದ್ರಗೊಳಿಸುತ್ತದೆ.

ಹೀಗಿರುವಾಗ ಮನೆ ಕಟ್ಟಿದ ಅಥವಾ ಕೊಂಡುಕೊಂಡ ಕೂಡಲೇ ಅದಕ್ಕೊಂದು ವಿಮೆ ಮಾಡಿಸುವುದು ಒಳಿತು. ಆದರೆ ಅದೇಕೊ ನಮ್ಮಲ್ಲಿನ್ನೂ ಅನೇಕರು ಮನೆವಿಮೆ ಕೊಳ್ಳಲು ಹಿಂದೇಟು ಹಾಕುತ್ತಾರೆ ಎನ್ನುತ್ತದೆ ‘ಐಡಿಯಲ್ ಇನ್ಶುರೆನ್ಸ್ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್‌’ನ ವರದಿ.

‘ಮನೆವಿಮೆ ಕುರಿತು ಕೆಲವರಿಗೆ ಮಾಹಿತಿ ಇಲ್ಲ. ಕೆಲವರಿಗೆ ತಪ್ಪು ತಿಳಿವಳಿಕೆಗಳಿವೆ. ತಮಗೆ ಈ ಪಾಲಿಸಿಯ ಅಗತ್ಯವಿಲ್ಲ, ಇದು ಅನಗತ್ಯ ಖರ್ಚು, ಈ ಪ್ರಕ್ರಿಯೆ ಸಂಕೀರ್ಣವಾದುದು ಎನ್ನುವ ಗ್ರಹಿಕೆಯಿಂದ ಶೇ 93ಎಷ್ಟು ಜನ ದೂರ ಉಳಿಯುತ್ತಾರೆ’ ಎನ್ನುತ್ತದೆ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಲಿಮಿಟೆಡ್‌ನ ಸಮೀಕ್ಷೆ. ಹೀಗಾಗಿ ಶೇ 7ರಷ್ಟು ಜನ ಮಾತ್ರ ಪಾಲಿಸಿ ಪಡೆದಿದ್ದಾರೆ.

ಭಾರತೀಯ ವಿಮಾ ಕ್ಷೇತ್ರವನ್ನು ಜೀವವಿಮೆ ಮತ್ತು ಸಾಮಾನ್ಯವಿಮೆ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಸಾಮಾನ್ಯ ವಿಮೆಯಲ್ಲಿ ಆರೋಗ್ಯ, ಪ್ರಯಾಣ, ವಾಹನ, ಆಸ್ತಿ ಅಥವಾ ಮನೆ ವಿಮೆಗಳೂ ಸೇರುತ್ತವೆ. ಈ ಪೈಕಿ ಆರೋಗ್ಯ ಹಾಗೂ ವಾಹನ ವಿಮೆ ಮೊದಲೆರಡು ಸ್ಥಾನಗಳಲ್ಲಿವೆ. ಈಚೆಗೆ ಬೆಳೆವಿಮೆ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಆದರೆ ಗೃಹವಿಮೆ (ಆಸ್ತಿ) ಬಳಕೆ ಪ್ರಮಾಣ ಬಹಳ ಕಡಿಮೆ.

ಗೃಹವಿಮೆಯಲ್ಲಿ ಎರಡು ವಿಧ. ಅಗ್ನಿ ಇತ್ಯಾದಿ ಅವಘಡಗಳ ವಿಮಾ ಪಾಲಿಸಿ ಮತ್ತು ಹೌಸ್‌ಹೋಲ್ಡರ್‍ಸ್ ಪ್ಯಾಕೇಜ್ ಪಾಲಿಸಿ (ಎಚ್‌ಪಿಪಿ).
ಅವಘಡಗಳ ವಿಮಾ ಪಾಲಿಸಿಯು (ಬೆಂಕಿ ವಿಮೆ) ಬೆಂಕಿ ಮತ್ತಿತರ ಕಾರಣಗಳಿಂದ ಕಟ್ಟಡಕ್ಕೆ ಹಾನಿ ಒದಗಿದರೆ ನೆರವಿಗೆ ಬರುತ್ತದೆ. ಸಿಡಿಲು, ಚಂಡಮಾರುತ, ಪ್ರವಾಹ ಮತ್ತು ಗಲಭೆಗಳೂ ಇದರಲ್ಲಿ ಸೇರುತ್ತವೆ. ಕೆಲ ಪಾಲಿಸಿಗಳು ಭೂಕಂಪ ಮತ್ತು ಭೂ ಕುಸಿತವನ್ನೂ ಒಳಗೊಂಡಿರುತ್ತವೆ. ಇಲ್ಲದಿದ್ದರೆ ಅವುಗಳನ್ನು ಪ್ರತ್ಯೇಕವಾಗಿ ಸೇರಿಸಿಕೊಳ್ಳಬೇಕು.

ಎಚ್‌ಪಿಪಿ ಪಾಲಿಸಿಯು ಕಟ್ಟಡಕ್ಕೆ ಮತ್ತು ಅದರ ಒಳಗಿರುವ ವಸ್ತುಗಳಿಗೆ ಬೆಂಕಿ ವಿಮೆಯಂಥದ್ದೇ ರಕ್ಷಣೆ ನೀಡುತ್ತದೆ. ದರೋಡೆ, ಯಾಂತ್ರಿಕ ಹಾಗೂ ಎಲೆಕ್ಟ್ರಾನಿಕ್ ಅವಘಡಗಳಿಂದ ಆಗುವ ಹಾನಿಗೂ ಇದರಲ್ಲಿ ರಕ್ಷಣೆ ಸಿಗಲಿದೆ. ಭಯೋತ್ಪಾದನೆಯ ಕೃತ್ಯಗಳಿಂದ ರಕ್ಷಣೆಗಾಗಿ ಹೆಚ್ಚುವರಿಯಾಗಿ ವಿಮೆ ಪಡೆಯಲು ಅವಕಾಶವಿದೆ.

ಮಾರುಕಟ್ಟೆ ಮೌಲ್ಯ– ಮರುಸ್ಥಾಪನೆ
ಆಸ್ತಿ ಮತ್ತು ವಸ್ತುಗಳ ಮೌಲ್ಯವನ್ನು ಎರಡು ರೀತಿಯಲ್ಲಿ ನಿರ್ಧರಿಸಬಹುದು. ವಿಮೆ ಪಡೆದ ವಸ್ತುಗಳ ವೆಚ್ಚ ಆಧರಿಸಿ ಅಥವಾ ಮರುಸ್ಥಾಪನೆಯ ವೆಚ್ಚ ಆಧರಿಸಿ. ವಸ್ತುಗಳ ವೆಚ್ಚ ಆಧರಿಸಿ ಮೊತ್ತ ನಿರ್ಧರಿಸುವಾಗ ಉತ್ಪನ್ನ ಹಳೆಯದಾದಂತೆ ವಸ್ತುಗಳ ಮೌಲ್ಯ ಕಡಿಮೆಯಾಗುತ್ತದೆ.

‘ಕಟ್ಟಡದ ಮೌಲ್ಯವು ವಾರ್ಷಿಕ ಶೇ 2ರಷ್ಟು ಸವಕಳಿಯಾಗುತ್ತದೆ. ಈ ಆಧಾರದ ಮೇಲೆ ನೋಡಿದಾಗ ವಿಮೆಯ ಹಣದಲ್ಲಿ ವಸ್ತುಗಳನ್ನು ಬದಲಾಯಿಸಲು ಆಗುವುದಿಲ್ಲ. ಆದ್ದರಿಂದ ಮರುಸ್ಥಾಪನೆಯ ವೆಚ್ಚವನ್ನು ಆಧರಿಸಿ ವಿಮೆ ಮಾಡಿಸುವುದೇ ಸೂಕ್ತ’ ಎನ್ನುತ್ತಾರೆ ಭಾರತಿ ಎಎಕ್ಸ್ಎ ಜನರಲ್ ಇನ್ಶುರೆನ್ಸ್ ಕಂಪೆನಿಯ ಪರಾಗ್‌ ಗುಪ್ತಾ.

ರಿಯಾಯಿತಿಗಳೂ ಉಂಟು
ವಿಮಾ ಪಾಲಿಸಿಗಳಿಗೆ ಇಂತಿಷ್ಟು ಎಂದು ನಿರ್ದಿಷ್ಟ ಶುಲ್ಕಗಳು ಹಾಗೂ ಪಾಲಿಸಿ ಮೊತ್ತಗಳು ಇರುತ್ತವೆ. ಆದರೆ ಇಲ್ಲಿ ವಿಶೇಷ ರಿಯಾಯಿತಿಗಳನ್ನು ಕೇಳಲು ಅವಕಾಶವಿರುತ್ತದೆ. ಕೆಲವು ವಿಮಾ ಕಂಪೆನಿಗಳು ಹೆಚ್ಚುವರಿ ವಿಮಾ ಪಾಲಿಸಿಗಳನ್ನು ತೆಗೆದುಕೊಂಡರೆ ರಿಯಾಯಿತಿ ನೀಡುತ್ತವೆ. ಅಂದರೆ, ಗೃಹವಿಮೆಯೊಂದಿಗೆ ವಾಹನ ವಿಮೆ ಪಡೆದುಕೊಂಡರೆ, ಕಳವು ನಿರೋಧಕ ಸಾಧನಗಳು, ಡೆಡ್‌ಬೋಲ್ಟ್ ಲಾಕ್‌ಗಳ ಅಳವಡಿಕೆ ಕೊಂಡರೆ ಗೃಹವಿಮೆಯ ಕಂತು ಕಡಿಮೆಯಾಗುತ್ತದೆ.

ಕೆಲ ಕಂಪೆನಿಗಳು ಮಾರುಕಟ್ಟೆಯ ದರಕ್ಕಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ವಿಮೆ ಪಾಲಿಸಿ ನೀಡುವುದಾಗಿ ಹೇಳಿಕೊಳ್ಳಬಹುದು. ವಿಮಾಕಂಪೆನಿಗಳಲ್ಲಿ ಈಚೆಗೆ ಸಾಕಷ್ಟು ಸ್ಪರ್ಧೆ ಇರುವುದರಿಂದ ಒಂದಕ್ಕಿಂತ ಒಂದು ಕಡಿಮೆ ಬೆಲೆ ಹಾಗೂ ರಿಯಾಯಿತಿಗಳನ್ನು ಘೋಷಿಸಬಹುದು. ಆದರೆ ಇದನ್ನು ಆಧಾರವಿಲ್ಲದೇ ನಂಬುವ ಬದಲು ಕಂಪೆನಿಯ ಹೆಸರು ಹಾಗೂ ಸೇವೆಗಳ ಬಗ್ಗೆ ತಿಳಿದುಕೊಂಡು ಮುಂದುವರಿಯುವುದು ಸೂಕ್ತ.

*


ಮೊತ್ತದ ಮರು ಮೌಲ್ಯಮಾಪನ
ಮಾರುಕಟ್ಟೆಯ ದರಕ್ಕೆ ಹೋಲಿಸಿದರೆ ನೀವು ಪಡೆದ ವಿಮೆ ಮೊತ್ತ ಅತಿಯಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಪ್ರತಿ ಐದು ವರ್ಷಗಳಿಗೆ ಒಮ್ಮೆ ವಿಮಾಮೊತ್ತವನ್ನು ಮರು ಮೌಲ್ಯಮಾಪನ ಮಾಡಲು ಅವಕಾಶವಿರುತ್ತದೆ. ಹಣದುಬ್ಬರದ ಪರಿಣಾಮ ಕಟ್ಟಡದ ಮತ್ತು ವಸ್ತುಗಳ ವೆಚ್ಚಗಳು ಬದಲಾಗುತ್ತವೆ. ಪರ್ಯಾಯ ವಸತಿಗೆ ವಿಮೆ ಪಡೆಯುವುದು ಬಹಳ ಮುಖ್ಯ. ಕಟ್ಟಡ ಪುನರ್ ನಿರ್ಮಾಣ ಆಗುವವರೆಗೆ ಪರ್ಯಾಯ ವ್ಯವಸ್ಥೆ ಬೇಕಾಗುತ್ತದೆ. ಆಗ ಈ ಪಾಲಿಸಿ ನೆರವಿಗೆ ಬರುತ್ತದೆ.
–ಪರಾಗ್‌ ಗುಪ್ತಾ,
ಭಾರತಿ ಎಎಕ್ಸ್ಎ ಜನರಲ್ ಇನ್ಶುರೆನ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT