3

ಬಿಲ್ಡರ್ ತಪ್ಪಿಗೆ ಗ್ರಾಹಕರಿಗೇಕೆ ಶಿಕ್ಷೆ

Published:
Updated:
ಬಿಲ್ಡರ್ ತಪ್ಪಿಗೆ ಗ್ರಾಹಕರಿಗೇಕೆ ಶಿಕ್ಷೆ

ರಿಯಲ್‌ ಎಸ್ಟೇಟ್ ಕ್ಷೇತ್ರದಲ್ಲಿ ಕಳೆದ ಕೆಲ ತಿಂಗಳುಗಳಿಂದ ಒಂದು ರೀತಿಯ ಹಿಂಜರಿತದ ವಾತಾವರಣ ಕಂಡುಬರುತ್ತಿದೆ. ಪ್ರಮುಖ ಬಿಲ್ಡರ್‌ಗಳು ನಿಗದಿತ ಸಮಯಕ್ಕೆ ವಸತಿ ಯೋಜನೆಗಳನ್ನು ಪೂರ್ಣಗೊಳಿಸಿ ತಮ್ಮ ಗ್ರಾಹಕರಿಗೆ ನೀಡುವಲ್ಲಿ ವಿಫಲರಾಗಿದ್ದಾರೆ. ಇದು ಗ್ರಾಹಕರನ್ನು ಇಕ್ಕಟ್ಟಿಗೆ ದೂಡಿದೆ.

ತಮ್ಮ ಕನಸಿನ ಮನೆಯು ನಿಗದಿತ ಸಮಯಕ್ಕೆ ಸಿಗದಿರುವ ಬೇಸರ ಒಂದೆಡೆಯಾದರೆ, ಮನೆ ಖರೀದಿಗೆ ಬ್ಯಾಂಕ್‍ನಿಂದ ಪಡೆದ ಸಾಲದ ತಿಂಗಳ ಸಮಾನ ಕಂತು (ಇಎಂಐ) ಕಟ್ಟಲೇಬೇಕಾದ ಅನಿವಾರ್ಯತೆ ಮತ್ತೊಂದೆಡೆ. ವಾಸವಿರುವ ಮನೆಬಾಡಿಗೆಯ ಜೊತೆಗೆ ಇಎಂಐ ಸಹ ಪಾವತಿಸಬೇಕಾದ ಸ್ಥಿತಿ ಅನೇಕ ಗ್ರಾಹಕರ ಆರ್ಥಿಕ ಆರೋಗ್ಯವನ್ನು ಹಾಳುಮಾಡಿದೆ.

ಗ್ರಾಹಕರು ಇಎಂಐ ಕಟ್ಟಲು ವಿಫಲರಾದರೆ ಬ್ಯಾಂಕ್‍ಗಳು ಸಾಲ ವಸೂಲಿಗೆ ಕ್ರಮ ಕೈಗೊಳ್ಳಬಹುದು. ಬಾಕಿ ಮರುಪಾವತಿಯ ಮೊತ್ತಕ್ಕೆ ಗ್ರಾಹಕರ ಇತರ ಆಸ್ತಿಯನ್ನು ಹೊಂದಿಸಿಕೊಳ್ಳಬಹುದು. ಇದಕ್ಕೆ ಕಾರಣವೂ ಇದೆ.

ಕೇವಿಯಟ್ ಎಂಪ್ಟರ್‍ನಲ್ಲಿ (ಖರೀದಿದಾರನು ಖರೀದಿಗೂ ಮುನ್ನ ಸೂಕ್ತವಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಂಡ ಬಳಿಕ ಆತನೇ ಜವಾಬ್ದಾರನಾಗಿರುತ್ತಾನೆ ಎಂದು ತಿಳಿಸುವ ನಿಯಮ) ಇಂಥ ನಿಯಮಗಳು ಉಲ್ಲೇಖವಾಗಿರುತ್ತವೆ. ಇದರ ಪ್ರಕಾರ ಗ್ರಾಹಕನು ತನ್ನ ನಿರ್ಧಾರಕ್ಕೆ ತಾನೇ ಹೊಣೆಗಾರನಾಗಿರುತ್ತಾನೆ. ಮನೆ ಖರೀದಿಗೆ ಮುನ್ನ ಕರಾರಿನಲ್ಲಿರುವ ಎಲ್ಲ ಅಂಶಗಳನ್ನೂ ತಿಳಿದುಕೊಂಡಿರುವುದು ಒಳಿತು. ‌

ಆದರೂ ಧುತ್ತನೆ ಎದುರಾಗುವ ಪರಿಸ್ಥಿತಿಗಳನ್ನು ನಿಭಾಯಿಸಲು ಗ್ರಾಹಕರ ಎದುರು ಕೆಲ ದಾರಿಗಳೂ ಇವೆ. ಅವುಗಳನ್ನೊಮ್ಮೆ ಪರಿಶೀಲಿಸೋಣ.

ಗ್ರಾಹಕ ನ್ಯಾಯಾಲಯ: ಬ್ಯಾಂಕು ಮತ್ತು ಬಿಲ್ಡರ್‌ಗಳ ನಡುವಣ ಅಡಕತ್ತರಿಯಲ್ಲಿ ಸಿಲುಕಿದ ಗ್ರಾಹಕರು ಇಂಥ ಪರಿಸ್ಥಿತಿಗಳಲ್ಲಿ ನ್ಯಾಯಾಲಯದ ಮೊರೆ ಹೋಗುವುದು ಸಾಮಾನ್ಯ. ನ್ಯಾಯಾಲಯದ ಮೂಲಕ ಬಿಲ್ಡರ್‍ಗೆ ಎಚ್ಚರಿಕೆ ಕೊಡಿಸಲು ಅನೇಕರು ಯತ್ನಿಸುತ್ತಾರೆ. ಅದರೆ ಇದು ಬಲು ದುಬಾರಿ, ದೀರ್ಘಕಾಲೀನ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಗ್ರಾಹಕರಿಗೆ ನೆಮ್ಮದಿ ಸಿಕ್ಕೇ ಬಿಡುತ್ತದೆ ಎಂದು ಖಚಿತವಾಗಿ ಹೇಳಲಾಗದು.

ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿರುವ ‘ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ’ (ಕಸ್ಟಮರ್ ಡಿಸ್‍ಪ್ಯೂಟ್ ರಿಡ್ರೆಸಲ್ ಕಮಿಷನ್- ಸಿಡಿಆರ್‍ಸಿ) ಇದಕ್ಕೊಂದು ಉತ್ತಮ ಪರ್ಯಾಯ ಮಾರ್ಗ ಎನ್ನಬಹುದು.

ಇತ್ತೀಚಿನ ಕೆಲವು ಪ್ರಕರಣಗಲ್ಲಿ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ನಿಗದಿತ ಸಮಯಕ್ಕೆ ಮನೆ ಹಸ್ತಾಂತರಿಸುವಲ್ಲಿ ವಿಫಲರಾದ ಪ್ರಮುಖ ಬಿಲ್ಡರ್‌ಗಳ ವಿರುದ್ಧ ಆದೇಶ ನೀಡಿ, ಅವರಿಗೆ ದಂಡ ವಿಧಿಸಿದೆ. ಬಿಲ್ಡರ್‌ಗಳಿಂದ ತೊಂದರೆಗೊಳಗಾದ ಗ್ರಾಹಕರು ರಾಷ್ಟ್ರೀಯ ಆಯೋಗದಲ್ಲಿ ಪ್ರಕರಣ ದಾಖಲಿಸಿ, ತಮ್ಮ ಅಮೂಲ್ಯ ಸಮಯ, ಹಣವನ್ನು ಉಳಿಸುತ್ತಿದ್ದಾರೆ. ಇದು ನ್ಯಾಯಾಲಯದಲ್ಲಿ ಹೂಡುವ ದಾವೆಯಷ್ಟೇ ಮೌಲ್ಯಯುತವಾದದು.

ಕ್ರಿಮಿನಲ್ ನ್ಯಾಯಾಲಯಗಳು: ಮಾತು ತಪ್ಪಿದ ಬಿಲ್ಡರ್ ವಿರುದ್ಧ ಪ್ರಕರಣ ದಾಖಲಿಸಲು ಕ್ರಿಮಿನಲ್ ನ್ಯಾಯಾಲಯ ಉತ್ತಮ ಆಯ್ಕೆ. ಮನೆ ಖರೀದಿದಾರರು ನೀಡಿದ ದೂರಿನ ಸಂಬಂಧ ಕೋರ್ಟ್‍ಗೆ ಹಾಜರಾಗಿ ವಿವರಣೆ ನೀಡಲು ವಿಫಲವಾದ ಬಿಲ್ಡರ್ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸುವ ಅಧಿಕಾರವನ್ನು ಕ್ರಿಮಿನಲ್‌ ನ್ಯಾಯಾಲಯಗಳು ಹೊಂದಿರುತ್ತವೆ.

ಭಾರತದಲ್ಲಿ ಕ್ರಿಮಿನಲ್ ನ್ಯಾಯಲಯಗಳ ಮುಂದೆ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ವಿಚಾರಣಾ ದಿನಾಂಕವೂ ಹಲವು ವಾರಗಳಿಗೊಮ್ಮೆ ನಿಗದಿಯಾಗುತ್ತದೆ. ವಿಚಾರಣೆ ನಡೆದಲ್ಲಿ, ತಪ್ಪಿತಸ್ಥ ಕಂಪೆನಿಯ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು.

ಎನ್‍ಸಿಎಲ್‍ಟಿ: ಬಿಲ್ಡರ್‌ಗಳಿಗೆ ತಮ್ಮ ತಪ್ಪಿನ ಅರಿವಾದಾಗ ಅವರು, ‘ದಿವಾಳಿಯಾಗಿದ್ದೇನೆ’ ಎಂದು ಘೋಷಿಸಿಕೊಳ್ಳಬಹುದು. ಆಗ ಅವರನ್ನು ‘ರಾಷ್ಟ್ರೀಯ ಕಂಪೆನಿಗಳ ಕಾನೂನು ನ್ಯಾಯಾಧಿಕರಣ’ದ (ನ್ಯಾಷನಲ್ ಕಂಪನೀಸ್ ಲಾ ಟ್ರಿಬ್ಯುನಲ್-ಎನ್‍ಸಿಎಲ್‍ಟಿ) ಎದುರು ನಿಲ್ಲಿಸಬಹುದು. ಮನೆ ಖರೀದಿದಾರರು ನ್ಯಾಯಾಧಿಕರಣದ ಮೂಲಕ ತಮಗಾಗಿರುವ ನಷ್ಟಕ್ಕೆ ಪರಿಹಾರವನ್ನು ಪಡೆಯಲು ಅವಕಾಶವಿದೆ.

ರೇರಾ ಕಾಯ್ದೆ: ಕಳೆದ ವರ್ಷ ಜಾರಿಗೊಂಡಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯು (ರೇರಾ) ಮನೆ ಖರೀದಿದಾರರ ಹಿತರಕ್ಷಣೆಗೆ ಬದ್ಧವಾಗಿದೆ. ಭವಿಷ್ಯದ ಎಲ್ಲ ವಸತಿ ಯೋಜನೆಗಳನ್ನು ರೇರಾ ಕಾಯ್ದೆಯಡಿ ನೋಂದಾಯಿಸಬೇಕು. ಪ್ರತಿ ಯೋಜನೆಗೂ ಇಂತಿಷ್ಟು ಕನಿಷ್ಟ ಹಣವನ್ನು ಖಾತ್ರಿ ಠೇವಣಿ ಇಡಬೇಕು. ಒಂದು ವೇಳೆ ಮನೆ ಖರೀದಿಸುವವರಿಗೆ ಬಿಲ್ಡರ್‍ಗಳಿಂದ ವಂಚನೆಯಾದಲ್ಲಿ, ಈ ಹಣವನ್ನು ಪರಿಹಾರದ ರೂಪದಲ್ಲಿ ನೀಡುವ ಸೌಲಭ್ಯವಿದೆ.

ಬ್ಯಾಂಕ್: ವಸತಿ ಯೋಜನೆಯ ಕಾಮಗಾರಿಯನ್ನು ಅನುಮೋದಿಸಿ, ಹಣಕಾಸು ನೆರವು ನೀಡಿದ ಬ್ಯಾಂಕ್ ಅನ್ನೂ ಪ್ರಕರಣದಲ್ಲಿ ಕಕ್ಷಿದಾರನನ್ನಾಗಿಸಬಹುದು. ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ ಬ್ಯಾಂಕ್ ಕೂಡಾ ಬಿಲ್ಡರ್‌ನಿಂದ ಬರಬೇಕಾದ ಸಾಲ ಮರುಪಾವತಿಗೆ ಬೇಡಿಕೆ ಇಡುವ ಅವಕಾಶವಿರುತ್ತದೆ. ಒಂದೇ ಪ್ರಕರಣದಲ್ಲಿ ಎರಡು ಸಾಲಗಳನ್ನು ವಸೂಲು ಮಾಡುವ ಅವಕಾಶ ಬ್ಯಾಂಕ್‌ಗೆ ಸಿಗುತ್ತದೆ. ಬ್ಯಾಂಕ್‍ನಿಂದ ಸಾಲ ಪಡೆದ ಬಿಲ್ಡರ್ ಹಾಗೂ ಅದೇ ಯೋಜನೆಯಲ್ಲಿ ಮನೆ ಖರೀದಿಗೆ ಸಾಲ ಮಾಡಿದ ಗ್ರಾಹಕ-ಇಬ್ಬರೂ ಅಲ್ಲೇ ಸಿಗುತ್ತಾರೆ.

ಒಂದು ವೇಳೆ ಯೋಜನೆಗೆ ಅನುಮೋದನೆ ನೀಡುವಲ್ಲಿ ಬ್ಯಾಂಕ್‍ನಿಂದ ಲೋಪವಾಗಿದ್ದಲ್ಲಿ, ಕ್ರೆಡಿಟ್ ಇನ್‍ಫರ್ಮೇಷನ್ ಬ್ಯೂರೊ ಆಫ್ ಇಂಡಿಯಾ ಲಿಮಿಟೆಡ್ (ಸಿಐಬಿಐಎಲ್) ಅಥವಾ ಕೋರ್ಟ್ ಸಂಪರ್ಕಿಸಿ ಕ್ರೆಡಿಟ್ ಸ್ಕೋರ್‌ನಲ್ಲಿ ನಮೂದಾಗಿರುವ ‘ಸುಸ್ತಿದಾರ’ ಎಂಬ ಹಣೆಪಟ್ಟಿಯನ್ನು ತೆಗೆದುಹಾಕುವಂತೆ ಮನವಿ ಮಾಡಬಹುದು.

ಸರ್ಕಾರ: ಎಲ್ಲ ದಾರಿಗಳೂ ಮುಚ್ಚಿಹೋದಾಗ, ಸಂತ್ರಸ್ತ ಗ್ರಾಹಕರು ಅಂತಿಮ ಆಯ್ಕೆಯಾಗಿ ಸರ್ಕಾರದ ಮೊರೆ ಹೋಗಬಹುದು. ಉತ್ತರಪ್ರದೇಶ ಸರ್ಕಾರವು ‘ಆಮ್ರಪಾಲಿ’ ಪ್ರಕರಣದಲ್ಲಿ ಸಂತ್ರಸ್ತರ ನೆರವಿಗೆ ಬಂದಿತ್ತು. ಇಂಥ ಸಂದರ್ಭಗಳಲ್ಲಿ ಸರ್ಕಾರಗಳು ಸಂತ್ರಸ್ತರನ್ನು ಕಾಪಾಡಬಹುದು ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ.

–ಅಂಶುಮಾನ್ ಮಿಶ್ರಾ, (ಲೇಖಕರು LoanAdda.comನ ಸಹ ಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry